
...'ಯಾರದೋ ಕೈಯಿಂದ ಜಾಮು ಬಿದ್ದಿರಬೇಕು... ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ ಹಾಗಂತ ಬರೆಯುತ್ತಾನೆ ಫಿರಾಖ್ ಗೋರಖ್ಪುರಿ. ಭಗ್ನ ಹೃದಯವೊಂದರ ಚಿತ್ರಣವನ್ನು ಇದಕ್ಕಿಂತ ಚೆನ್ನಾಗಿ ಕಟ್ಟಿಕೊಡಲು ಸಾಧ್ಯವೇ? ಉಫ್ ....... ನಾನಂತೂ ಫಿದಾ ಆಗೋಗಿಬಿಟ್ಟೆ. ನಿಮಗೆ ಗೊತ್ತಿದೆ, ಈ ಪ್ರೀತಿಗೂ ಮದ್ಯಕ್ಕೂ ಅದೆಂಥದೋ ಸಂಬಂಧವಿದೆ. ಅದೂ ಅಮಲೇ ಇದೂ ಅಮಲೇ! ಹೇಳಬೇಕೆಂದ್ರೆ ಪ್ರೀತಿ ಮದ್ಯಕ್ಕಿಂತ ಅಮಲಮಲು. ಪ್ರೀತಿಯಲ್ಲಿ ಸೋತವನು ಮದ್ಯಕ್ಕೆ ದಾಸನಾಗುತ್ತಾನೆ. ಮದ್ಯಕ್ಕೆ ದಾಸನಾದವನು ಬದುಕನ್ನೇ ಗಂಟುಕಟ್ಟಿ ಗಟಾರಕ್ಕೆ ಎಸೆದುಬಿಡುತ್ತಾನೆ. ಅಲ್ಲಿ ನೋ ಮುಜುಗರ, ನೋ ಹೋಪ್ಸ್, ನೋ ಲೈಫ್. ಪ್ರೀತಿ ಎದೆಯೊಳಗಿನ ದಾವಾಗ್ನಿ. ಯಾವ ಪ್ರೀತಿ ತನ್ನ ಬದುಕನ್ನು ಬಂಗಾರಮಾಡಬಲ್ಲದು ಅಂದುಕೊಂಡಿದ್ದನೋ ಅದೇ ಪ್ರೀತಿ ಅವನ ಬದುಕನ್ನ ಮುಕ್ಕಳಿಸಿ ಎಸೆದುಬಿಡುತ್ತದೆ. ಇನ್ನೆಲ್ಲಿ ಪ್ರೀತಿ?
ಕವಿ ಶಾಂತರಸ ಅವರು ಸೊಗಸಾದ, ಮನತಬ್ಬುವ ಇಂಥ ಎಷ್ಟೋ ದ್ವಿಪದಿಗಳನ್ನ ಉದರ್ುವಿನಿಂದ ಕನ್ನಡಕ್ಕೆ ತಂದಿದ್ದಾರೆ. ಉದರ್ುಕಾವ್ಯದಲ್ಲಿ ಮದ್ಯ ಮತ್ತು ಮದಿರೆ ಅನ್ನುವ ಹೆಸರಿನಲ್ಲಿ.
ಮೊನ್ನೆ ಶಶಿಕಲಾ ವೀರಯ್ಯಸ್ವಾಮಿಯವರು ತಂದುಕೊಟ್ಟು ಓದಿ ನೋಡಿ ನಿಮಗಿಷ್ಟ ಆಗುತ್ತೆ ಅಂದ್ರು. ಓದಿದೆ. ನೀವು ನೆನಪಾದೀರಿ. ಅದಕ್ಕೇ ಕೆಲವನ್ನ ಇಲ್ಲಿ ಕೊಡುತ್ತಿದ್ದೇನೆ.
ನಿನ್ನ ಕೇಶಗಳ ನೆರಳಲ್ಲಿ ಕೆಲ ನಿಮಿಷ ಕಳೆದವಗೆ
ಬೆಳುದಿಂಗಳಿಂದಲೂ ಹಿಂಸೆಯಾಗುವುದವಗೆ
- ನಾಷಾದ್
ಜೀವನವು ಏನೆಂದು ನಾನು ಕೇಳಿದೆನು
ಕೈ ಜಾರಿ ಬಿದ್ದು ಜಾಮು ಒಡೆದುಹೋಯ್ತು
- ಜಗನ್ನಾಥ ಆಜಾದ್
ಯಾರದೋ ಕೈಯಿಂದ ಜಾಮು ಬಿದ್ದಿರಬೇಕು
ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ
- ಫಿರಾಖ್ ಗೋರಖ್ಪುರಿ
ನೂರು ನೋವುಗಳನ್ನು ಹಿಚುಕಿ ಹಿಂಡಿದರೆ
ಒಂದೇ ಒಂದು ಹನಿ ಮದ್ಯವಾಗುವುದು
-ಸಾಹಿರ್ ಹೊಷಿಯಾರ್ ಪೂರಿ
ಯಾರು ಎಬ್ಬಿಸಬೇಕು ಉದ್ಯಾನದಂಗಳದ ಮೊಗ್ಗುಗಳನು
ಮಲಗಿಹುದು ನಿನ್ನ ಕೇಶಗಳ ನೆರಳಲ್ಲಿ ಮುಂಜಾವಿನೆಲರು
-ಕೈಫ್ ಅಹಮದ್ ಸಿದ್ದೀಖಿ
ಏನಾದರೂ ಸಿಗಲಿ ಈ ಮಧುರ ತುಟಿಯಿಂದ
ವಿಷ ಕುಡಿವ ಆದೇಶವಾದರೂ ಸರಿಯೆ
-ಆಜರ್ೂ ಲಖ್ನವಿ
ಹೊಳೆವ ಕೆನ್ನೆಯ ಮುಂದೆ ಸಮೆಯಿಟ್ಟು ಹೇಳುವರು:
ಯಾವ ಕಡೆ ಹೋಗುವುದೋ ಪತಂಗ ನೋಡೋಣ
-ದಾಗ್
ಎಷ್ಟು ಎದೆಗಳ ದೀಪ ನಂದಿಸಿ ನಿನ್ನ ನೋಟ
ಚುಕ್ಕೆ ಬಳಗಕೆ ಬೆಳಕನೀವುದು ತಿಳಿಯದಲ್ಲ
-ಆನಂದನರಾಯನ ಮುಲ್ಲಾ
ನೀಡು ಒಪ್ಪಿಗೆ ನಿನ್ನ ಕೆನ್ನೆಗಳ ನನ್ನೆದೆಗೆ ಅಪ್ಪಿಕೊಳ್ಳಲು
ಕಾವು ಕೊಡುವೆನೀ ಕೆಂಡಗಳಿಂದೆನ್ನ ಎದೆಯ ಗಾಯಗಳಿಗೆ
-ಖಿಜಲ್ ಬಾಷ್