
ನನಗೆ ಇನ್ನೂ ಚೆನ್ನಾಗಿ ನೆನಪಿದೆ.
ದೇವನೂರು ಮಹಾದೇವರನ್ನ ನಾನು ಮೊದಲ ಸಲ ನೋಡಿದ್ದು. ಮಹಾರಾಜ ಕಾಲೇಜಿನಲ್ಲಿ ಓದುವಾಗ ನನ್ನ ಗುರುಗಳೂ ಆತ್ಮೀಯರೂ ಆದ ಮೈಸೂರು ಲತಾ ಮೇಡಮ್ ಇದ್ದರು. ನನ್ನಲ್ಲೇನಾದ್ರೂ ಚೂರು ಪಾರು ಕವಿತೆಯ ಗಂಧ ಇದೆ ಅಂತ ಆದರೆ ಅದಕ್ಕೆ ಕಾರಣ ಲತಾ ಅವರೆ. 'ಬರೀತಾ ಇರು. ನಿಲ್ಲಿಸಬೇಡ' ಅಂತ ಬೆನ್ನುತಟ್ಟಿದವರೂ ಅವರೇ. ಒಮ್ಮೆ ದೆಹಲಿಯ ಪೊಯಿಟ್ರಿ ಸೊಸೈಟಿ ಆಫ್ ಇಂಡಿಯಾದವರು ಪೊಯಿಟ್ರಿ ವಕರ್್ ಶಾಪ್ ಅಂತ ಮಾಡಿದ್ರು. ಐದು ದಿನಾನೋ ಏನೋ ಇರಬೇಕು ನೆನಪಿಲ್ಲ. ಎನ್ಸಿಇಆರ್ಟಿ ಕ್ಯಾಂಪಸ್ನಲ್ಲಿ. ಅಲ್ಲಿನ ಮಲಯಾಳಂ ಹುಡುಗೀರ ಸೌಂದರ್ಯಕ್ಕೆ ಫಿದಾ ಆಗಿದ್ದು ಆವಾಗಲೇ. ಎನ್ಸಿಇಆರ್ಟಿಯಲ್ಲಿ ಇಂಗ್ಲೀಷ್ ರೀಡರ್ ಆಗಿದ್ದ ಎನ್ ಎಸ್ ರಘುನಾಥ್ ಆ ಶಿಬಿರದ ಸಂಚಾಲಕರಾಗಿದ್ರು. ಅದೊಂದು ಮರೆಯಲಾರದ ವಕರ್್ಶಾಪ್. ಅಲ್ಲಿ ಭಾಗವಹಿಸಿದ್ದ ತುಂಬಾ ಜನ ಗೆಳೆಯ ಗೆಳತಿಯರು ಇವತ್ತಿಗೂ ಸಂಪರ್ಕದಲ್ಲಿದ್ದಾರೆ. ಬಹುತೇಕರು ಜರ್ನಲಿಸ್ಟ್ಗಳೆ.
ಆ ವಕರ್್ಶಾಪ್ನಿಂದ ಬಂದ ಮೇಲೆ ನನ್ನ ಕವನದ ಖದರೇ ಬದಲಾಗಿ ಹೋಯಿತು. ಅದನ್ನು ಗಮನಿಸಿದ ಲತಾ ಅವರು 'ಪರವಾಗಿಲ್ಲ ಕಣೋ ವಕರ್್ಶಾಪ್ಗೆ ಹೋಗಿದ್ದೂ ಸಾರ್ಥಕ ಆಯ್ತು. ನಿನ್ನ ಕವಿತೆಯಲ್ಲಿ ಬದಲಾವಣೆ ಆಗಿದೆ' ಅಂದಿದ್ದರು. ಚಂಪಾ, ಎಲ್ ಬಸವರಾಜು, ಜಿ ಹೆಚ್ ನಾಯಕ್, ಪ್ರಭುಶಂಕರ್, ವಿಜಯಾ ದಬ್ಬೆ ಮುಂತಾದವರನ್ನೆಲ್ಲ ನೋಡಿದ್ದೂ ಅಲ್ಲೆ. ಅಲ್ಲಿಂದ ಬಂದ ಮೇಲೆ ಕಾಲೇಜಿನ ಕಾವ್ಯವಾಚನ ಸ್ಪಧರ್ೆಯಲ್ಲಿ ನನಗೆ ಮೊದಲ ಬಹುಮಾನ ಬಂತು.
ಹೀಗಿರುವಾಗಲೇ ಒಂದಿನ ಲತಾ ಮೇಡಮ್ ಹೇಳಿದ್ರು. 'ನೀನು ದೇವನೂರರನ್ನ ನೋಡಬೇಕು ಅಂದಿದ್ಯಲ್ಲ. ಸಂಜೆ ಹೋಗೋಣ. ಅವರು ಗಾಂಧಿಭವನಕ್ಕೆ ಬರುತ್ತಾರೆ. ಅಲ್ಲಿ ರಾಮ್ದಾಸ್ ಒಂದು ಇಂಟರ್ಕ್ಯಾಸ್ಟ್ ಮದುವೆ ಮಾಡಸ್ತಿದಾರೆ' ಅಂದ್ರು. ನನಗೆ ಖುಷಿ. ದೇವನೂರರನ್ನು ನೋಡಬಹುದಲ್ಲ ಅಂತ.
ಅಲ್ಲಿ ಹೋದ್ರೆ ಸಣ್ಣದೊಂದು ಸಮಾರಂಭ ಅದು. ರಾಮ್ದಾಸ್ ಇದ್ದರು. ದೇವನೂರು ಬಂದ್ರು. ನೋಡಿ ಅವಾಕ್ಕಾಗಿ ಹೋದೆ ನಾನು. ಒಡಲಾಳದಂತಹ, ಕುಸುಮಬಾಲೆಯಂತಹ ಮೌಲಿಕ ಕೃತಿ ಬರೆದದ್ದು ಈ ಮನುಷ್ಯನಾ?
ಅದೇ ಕಾಡ್ರಾಯ್ ಪ್ಯಾಂಟ್, ಇಸ್ತ್ರೀ ಇಲ್ಲದ ಕಾಟನ್ ಶಟರ್್, ಹಳೇ ಚಪ್ಲಿ. ಬಾಚದ ತಲೆ, ಅಥವಾ ಆ ತಲೆ ಬಾಚಿದರೂ ಹಾಗೇ ಇರುತ್ತೆ ಅನ್ನುವುದು ನನ್ನ ಅನಿಸಿಕೆ. ಟಿಪಿಕಲ್ ದೇವನೂರ ಮಹಾದೇವ. 'ಮೇಡಮ್ ಇವರಾ?' ಅಂದೆ. 'ಎಷ್ಟು ಸಿಂಪಲ್ ಆಗಿದಾರೆ ನೋಡು' ಅಂದ್ರು.
ಆಮೇಲೆ ಅವರನ್ನು ನಾನು ಅವಾಗವಾಗ ನೋಡತೊಡಗಿದೆ. ಕೆಲವು ಸಲ ಲೂನಾದಲ್ಲಿ ನಮ್ಮ ಕಾಲೇಜಿನ ಮುಂದೇನೆ ಹಾದು ಹೋಗ್ತಿದ್ರು.
ಅದಾಗಿ ಎಷ್ಟೋ ದಿನಗಳ ನಂತರ ನಾನು ಒಂದು ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದೆ. ಬಡತನ ಕೆಲಸ ಮಾಡುವುದನ್ನು ಕಲಿಸಿತ್ತು. ಪ್ರೆಸ್ನಲ್ಲಿ ದೇವನೂರರ ಒಡಲಾಳ ಪ್ರಿಂಟಾಗುತ್ತಿತ್ತು. ಬಹುಶಃ ಅದು ಯಾವುದೋ ವಿಶ್ವವಿದ್ಯಾನಿಲಯಕ್ಕೆ ಟೆಕ್ಸ್ಟ್ಬುಕ್ ಆಗಿತ್ತು ಅನಿಸುತ್ತೆ. ನಾನಾಗಲೇ ಅವರನ್ನು ಓದಿಕೊಂಡಿದ್ದೆ. ಮೆಚ್ಚಿಕೊಂಡಿದ್ದೆ.
ಒಂದಿನ ಇದ್ದಕ್ಕಿದ್ದಂತೆ ನಮ್ಮ ಪ್ರೆಸ್ಸಿಗೆ ಬಂದರು. ಅದದೇ ಗೆಟಪ್. ಕೈಯಲ್ಲೊಂದು ಸಿಗರೇಟ್. ಕಡುಗಪ್ಪಿನ ಗಡ್ಡ.
ಬಂದವರೇ ಪುಸ್ತಕ ಕೊಡಿ ಅಂತ ದೊಡ್ಡ ಟೇಬಲ್ ಮೇಲೇನೆ ಕೂತರು. ಕೊಟ್ಟೆ. ನಮ್ಮ ಓನರ್ ಇರಲಿಲ್ಲ. ಚೆನ್ನಾಗಿ ಮಾಡ್ತಿದೀರಿ ಕಣ್ರಯ್ಯಾ. ಅಂದರು. ನಾನು ನನ್ನ ಪರಿಚಯ ಹೇಳಿಕೊಂಡೆ. ಖುಷಿಯಾಯ್ತು ಅವರಿಗೆ. ಸರ್ ನಿಮ್ಮ ಕುಸುಮಬಾಲೆ ಒಂದು ಕಾಪಿ ಇದ್ರೆ ಕೊಡಿ. ಹುಡುಕಿ ಹುಡುಕಿ ಸಾಕಾಯ್ತು ಅಂದೆ. ಮುಂದಿನ ಸಲ ತರ್ತೀನಿ ಅಂದ್ರು. ಹಾಗನ್ನುತ್ತಲೇ ಮತ್ತೊಂದು ಸಿಗರೇಟು ಹಚ್ಚಿ ಕೂತರು. ಹಣ ಕೊಡಲು ಬಂದರು. ನಾನು ಬೇಡ ಸಾರ್ ಅಂದೆ. ಚೆನ್ನಾಗಿ ಮಾಡ್ತಿದೀರಿ. ಏನಾದರೂ ತಿಂಡಿ ತರಿಸ್ಕೊಂಡು ತಿನ್ನಿ ಅಂದರು. ಎಷ್ಟೇ ಬೇಡವೆಂದರೂ ಬಿಡಲಿಲ್ಲ. ಅವರ ಒತ್ತಾಯಕ್ಕೆ ಮಣಿದು ಪಡೆದುಕೊಂಡೆ. ವಿಷಯ ಏನಂದ್ರೆ ನನ್ನನ್ನ ಬಿಟ್ಟರೆ ಅಲ್ಲಿದ್ದ ಉಳಿದ ಇಬ್ಬರೂ ತಮಿಳರು. ಅವರಿಗೆ ದೇವನೂರರ ಬಗ್ಗೆ ಏನೆಂದರೆ ಏನೂ ಗೊತ್ತಿಲ್ಲ. ಅಷ್ಟರಲ್ಲಿ ನಮ್ಮ ಓನರ್ ಮಹಾಶಯ ಬಂದ. ದೇವನೂರರು ಸ್ವಲ್ಪ ಹೊತ್ತು ಕುಳಿತಿದ್ದು ಹೊರಟರು.
ಅವರು ಹೋದ ಮೇಲೆ ನಮ್ಮ ಓನರ್ ಕೇಳಿದ.
'ನೀನಾದರೂ ಹೇಳಬಾರದೇನಯ್ಯಾ ಸಿಗರೇಟ್ ಸೇದಬೇಡಿ ಅಂತ'.
'ನಾನೇಗೆ ಹೇಳಲಿ ಸಾರ್, ಅಷ್ಟು ದೊಡ್ಡವರಿಗೆ. ನೀವೇ ಹೇಳಬಹುದಿತ್ತಲ್ಲ. ನೀವು ಬಂದಮೇಲೂ ಸಿಗರೇಟ್ ಸೇದುತ್ತಿದ್ರಲ್ಲ' ಅಂದೆ.
'ಹೋಗಲಿ ಬಿಡು. ಇನ್ನೊಮ್ಮೆ ಬಂದಾಗ ಸರ್ ಪ್ರೆಸ್ನಲ್ಲಿ ಸಿಗರೇಟ್ ಸೇದೋ ಹಾಗಿಲ್ಲ ಅನ್ನು. ಪೇಪರ್ ಜಾಸ್ತಿ ಇರುತ್ತಲ್ಲ. ಬೆಂಕಿ ಬಿದ್ರೆ ಕಷ್ಟ ಅಂತ ಹೇಳು' ಅಂದ್ರು.
ಆಯ್ತು ಅಂದೆ.
ಅವರು ಮತ್ತೆ ಬರಲಿಲ್ಲ. ನಾನೋ ಬದುಕು ಅರಸಿಕೊಂಡು ಬೆಂಗಳೂರಿನ ಹಾದಿ ಹಿಡಿದೆ.
ಇದೆಲ್ಲ ಯಾಕೆ ನೆನಪಾಯ್ತು ಅಂದ್ರೆ ನಿನ್ನೆ ಅವರ ಒಡಲಾಳ ನಾಟಕ ನೋಡಿ ಬಂದೆ. ತುಂಬಾ ಖುಷಿ ಆಯ್ತು. ಉಮಾಶ್ರೀ ಸಾಕವ್ವನ ಪಾತ್ರಕ್ಕೆ ಜೀವ ತುಂಬಿದ್ದರು. ಬೆಳಕೂ ನೈಜವಾಗಿತ್ತು. ಎಲ್ಲಾ ಓಕೆ. ಆದರೆ ಇಡೀ ನಾಟಕದಲ್ಲೇನೋ ಕೊರತೆ ಇದೆ ಅನಿಸ್ತು. ಅದು ಭಾಷೆಯದ್ದು. ಸಾಮಾನ್ಯವಾಗಿ ದೇವನೂರರ ಭಾಷೆ ಸ್ವಲ್ಪ ಕಷ್ಟಾನೆ. ಆದರೆ ನನ್ನಂಥವರಿಗೆ ಅದು ತುಂಬಾನೆ ಇಷ್ಟ. ಆ ಭಾಷೆಯ ಸೊಗಡೇ ಅಂಥದ್ದು. ಪ್ರಾದೇಶಿಕವಾದ ಆ ಭಾಷೆಗೆ ಅದರದೇ ಆದ ಒಂದು ಗುಣವಿದೆ. ಲಾಲಿತ್ಯವಿದೆ. ಅದನ್ನು ಸರಿಯಾಗಿ ಬಳಸಿಕೊಂಡಿದ್ರೆ ನಾಟಕ ಇನ್ನಷ್ಟು ಪ್ರಬುದ್ಧವಾಗ್ತಿತ್ತೇನೋ ಅನಿಸ್ತು.
ಇವತ್ತಿಗೂ ನನ್ನ ಅಚ್ಚುಮೆಚ್ಚಿನ ಲೇಖಕ ದೇವನೂರು. ಮೈಸೂರು ಕಡೆ ಹೋದಾಗ ಒಮ್ಮೆ ಅವರ ತೋಟದ ಕಡೆಗೆ ಹೋಗಿಬರೋಣ ಅಂದುಕೊಂಡಿದ್ದೇನೆ.
ನೋಡೋಣ.