Saturday, January 26, 2008

ಕತೆ: ನಿನ್ನ ಆಸೆ... ನನ್ನ ಪ್ರೀತಿ.

ಸ್ವೆಟರ್ ಅಂದ್ರೆ ಅದು ಅನಿಸುತ್ತೆ.
ಕಡುಗೆಂಪು ಬಣ್ಣಕ್ಕಿತ್ತು.
ಬಡ್ಡೀಮಗಂದು ಎಷ್ಟು ಚೆನ್ನಾಗಿತ್ತು ಅಂದ್ರೆ, ನಾನು ಈ ಮೊದಲು ಆ ಥರದ್ದನ್ನು ಎಲ್ಲೂ ನೋಡಿಯೇ ಇರಲಿಲ್ಲ. ಮನಸ್ಸು ಪಕಪಕ ಕುಣಿಯತೊಡಗಿತು. ತಗೋ ತಗೋ ಅಂತ ಪೀಡಿಸಿತು. ಆದರೆ ದುಡ್ಡೆಲ್ಲಿದೆ? ಮೊದಲು ಸ್ವೆಟರ್ ನೋಡಿ ಖುಷಿಯಾದೆ ಆಮೇಲೆ ಬೆಲೆ ನೋಡಿ ಬೇಜಾರು ಮಾಡಿಕೊಂಡೆ.
ಒಂದು ಸಂಜೆ ಸೂರ್ಯ ಇಳಿಯುವಾಗ ಅವಳಿಗೆ ಹೇಳಿದೆ. ಆ ಸ್ವೆಟರ್ ಎಷ್ಟು ಚೆನ್ನಾಗಿದೆ ಗೊತ್ತಾ?ಹೌದಾ? ಎಷ್ಟು? ಕಣ್ಣರಳಿಸಿದಳು.ಬಾ ತೋರಿಸುತ್ತೇನೆ ಅಂತ ಕೈ ಹಿಡಿದು ಕರೆದೋಯ್ದು ತೋರಿಸಿದೆ. ಅವಳ ಕಣ್ಣಿನ ತುಂಬಾನೂ ಕೆಂಪು ಸ್ವೆಟರಿನದೇ ಬಿಂಬ. ನನ್ನನ್ನೊಮ್ಮೆ ನೋಡಿ ನಿನಗದು ಒಪ್ಪುತ್ತೆ ಕಣೋ ತಗೋ ಅಂದಳು.ಆದರೆ ದುಡ್ಡೆಲ್ಲಿದೆ?ಆಸೆ ನಿಲ್ಲಲಿಲ್ಲ. ಹೇಗಾದರೂ ಮಾಡಿ ಆ ಸ್ವೆಟರ್ ತಗೊಂಡು, ಹಾಕ್ಕೊಂಡು ಅವಳ ಮುಂದೆ ನಿಂತು ಹೇಗಿದೆ ಅಂತ ಕೇಳಬೇಕು. ಅವಳು ಹತ್ತಿರ ಬಂದು ನೈಸ್ ಸೆಲೆಕ್ಷನ್ ಅನ್ನಬೇಕು. ಆಗ ನನ್ನ ಮನಸ್ಸು ಆಕಾಶದಲ್ಲಿ ಜುಮ್ಮಂತ ತೇಲಬೇಕು... ಆಸೆಗೊಂದು ಆಸೆ ಅಂದರೆ ಇದೇ ಇರಬೇಕು!
ಈ ಆಸೆಗಾಗಿ ನಾನು ಒಂದು ತಿಂಗಳು ಹಣ ಕೂಡಿಡುತ್ತಾ ಹೋದೆ. ಮಧ್ಯೆ ಮಧ್ಯೆ ಅಂಗಡಿಗೆ ಹೋಗಿ ನೋಡಿಕೊಂಡೂ ಬರುತ್ತಿದ್ದೆ, ಯಾರಾದರೂ ತೆಗೆದುಕೊಂಡು ಹೋಗಿಬಿಟ್ಟರೇನು ಅಂತ.ಆದರೆ ಅದು ನನಗೋಸ್ಕರಾನೆ ಇದ್ದಂತೆ ಅಲ್ಲೊಂದು ಕಡುಗಪ್ಪು ಹ್ಯಾಂಗರಿನಲ್ಲಿ ನೇತಾಡುತ್ತಿತ್ತು.ಕೊನೆಗೂ ಆ ದಿನ ಬಂತು.ಜೇಬಲ್ಲಿ ಹಣ ಇಟ್ಟುಕೊಂಡು, ಅವಳ ಕೈ ಹಿಡಿದುಕೊಂಡು ಓಡಿಹೋಗಿ ನೋಡಿದರೆ ಎಲ್ಲಿದೆ ಸ್ವೆಟರ್?ಯಾರೋ ಒಬ್ಬರು ಈಗ ಅರ್ಧ ಗಂಟೆ ಮೊದಲು ತೆಗೆದುಕೊಂಡು ಹೋದ್ರೂ ಅಂದ ಅಂಗಡಿಯವ.ನನ್ನ ಆಸೆ ಅಲ್ಲೇ ನೆಗೆದುಬಿತ್ತು. ಇವಳು ಅಲ್ಲೇ ಅತ್ತುಬಿಟ್ಟಳು.ಕೈ ಹಿಡಿದು ಮೆಲ್ಲಗೆ ಅದುಮಿ ಸಾಂತ್ವನ ಹೇಳಿದಳು. ನಿರಾಶೆಗೊಳ್ಳಬೇಡ ಕಣೋ? ನಾನಿದೀನಿ.
ಅದಾಗಿ ಒಂದು ತಿಂಗಳಾಗಿತ್ತು. ನಾನು ಕ್ರಮೇಣ ಆ ಸ್ವೆಟರ್ರೂ ಮರೆತೂ ಬಿಟ್ಟಿದ್ದೆ. ಆದ್ರೆ ಇವಳು ಮಾತ್ರ ನನ್ನನ್ನು ಅಷ್ಟಾಗಿ ಈಗ ಭೇಟಿ ಆಗುತ್ತಿರಲಿಲ್ಲ. ಯಾಕೆ ಅಂದ್ರೆ ಸಿಕ್ಕಾಬಟ್ಟೆ ಕೆಲಸ ಅಂದಿದ್ದಳು. ರಾತ್ರಿಯೆಲ್ಲ ನಿದಿರೆ ಎಲ್ಲ ಅಂತ ಕನವರಿಸಿದ್ದಳು.
ಇದೆಲ್ಲ ಆಗಿ ಒಂದು ತಿಂಗಳಾಗಿತ್ತು ಅನಿಸುತ್ತೆ...ಒಂದಿನ ಬಂದವಳೆ ನನ್ನ ಕೈಗೊಂದು ತಿಳಿ ನೀಲಿ ಬಣ್ಣದ ರಿಬ್ಬನ್ ಕಟ್ಟಿದ್ದ ಪುಟ್ಟ ಗಿಫ್ಟ್ ಪ್ಯಾಕ್ ಇಟ್ಟಳು.
ಏನೇ ಇದು?
ನಿನ್ನ ಆಸೆ... ನನ್ನ ಪ್ರೀತಿ.
ಒಡೆದು ನೋಡಿದೆ.
ಒಳಗೆ ಅದೇ ಕೆಂಪು ಕೆಂಪಿನ ಸ್ವೆಟರ್ ಮುದುಡಿಕೊಂಡು ಕುಳಿತಿತ್ತು.
ಎಲ್ಲಿತ್ತೇ?
ಸುಮ್ಮನೆ ನಕ್ಕಳು.

2 comments:

naasomeswara said...

ಪ್ರೀತಿಯ ನದಿ ನಿರಂತರವಾಗಿ ಹರಿಯುತ್ತಿರಲಿ.....

ಬಾನಾಡಿ said...

ಚಳಿ ನಿಂತಾಗ ಸ್ವೆಟರ್ ಯಾಕೆ ಅಲ್ವಾ?
ಆದ್ರೆ ಚಳಿಗೊಂದು ಸ್ವೆಟರ್ ಬೇಕಿತ್ತು.
ಅಲ್ವಾ?

ಒಲವಿನಿಂದ
ಬಾನಾಡಿ