Saturday, July 26, 2008

ಮಾರ್ನಿಂಗ್ ದುನಿಯಾದಲ್ಲಿ ಸಿಕ್ಕ ಗೆಳೆಯನೂ ಮತ್ತವನ ಪ್ರೀತಿಯೂ


ಅವತ್ತು ಇಡೀ ರಾತ್ರಿ ಕಣ್ಣು ಮುಚ್ಚಿಲ್ಲ. ಸೀನಣ್ಣ ಸ್ವಲ್ಪ ಸಮಯ ಜೊತೆಲಿದ್ದು ಆಮೇಲೆ ಹಾಯ್ ಬೆಂಗಳೂರ್ ಪ್ರಿಂಟ್ ಇದ್ದದ್ದರಿಂದ ಅದರ ಉಸ್ತುವಾರಿಗೆ ಹೋದ. ಎದುರಿಗಿದ್ದ ಮೆಷೀನ್ ಸೆಕೆಂಡಿಗೆ ಮೂರು ಕಲರ್ ಷೀಟ್ ಉಗುಳುತಿತ್ತು. ಮಧ್ಯೆ ಮಧ್ಯೆ ಪ್ರಿಂಟರ್ಗೆ ನಂಗೊಂದು ಷೀಟ್ ಕೊಡಿ ಅಂತ ತೆಗೆದುಕೊಂಡು ಕಲರ್ ಸರಿಯಾಗಿದೆಯಾ ಅಂತ ನೋಡ ನೋಡುತ್ತಲೇ ಬೆಳಕು ಹರಿದಿತ್ತು. ಪ್ರಿಂಟರ್ ತಮಿಳುನಾಡಿನವನು. ಕನ್ನಡ ಮಾತಾಡಿದರೆ ಅದು ತಮಿಳೇ ಇದ್ದಂಗಿತ್ತು. ಸಾರ್ ಣೀವು ಹೋಗಿ ಮಳಗಿ. ನಣ್ಣ ಮೇಲೇ ಣಂಬಿಗೆ ಇಳ್ಳವಾ? ಅಂತ ಅವನು. ಇಲ್ಲಪ್ಪ ನನಗೆ ಅಭ್ಯಾಸ ಆಗಿಹೋಗಿದೆ. ಪರವಾಗಿಲ್ಲ ಇರ್ತೇನೆ ಅಂತ ಪಟ್ಟಾಗಿ ಅಲ್ಲೇ ಒಂದು ಚೇರ್ ಎಳೆದುಕೊಂಡು ಕುಳಿತುಬಿಟ್ಟೆ. ನನಗೆ ಹೀಗೆ ನಿದ್ರೆಗೆಡುವುದೆಲ್ಲ ಹೊಸದಲ್ಲ. ಮೈಸೂರಿನಲ್ಲಿದ್ದಾಗ ಒಂದು ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿದ್ದ ಎಲ್ಲರೂ ತಮಿಳರೇ. ಹಾಗಾಗಿ ತಮಿಳಿನ ಗಂಧ ನನಗೆ ಸ್ವಲ್ಪ ಗೊತ್ತು. ಅವರು ಕೆಟ್ಟಕೆಟ್ಟದಾಗಿ ಬೈದಾಡಿಕೊಳ್ಳುತ್ತಿದ್ರೆ (ಅಥವಾ ನಮಗೆ ಬೈದ್ರೆ) ನಾನು ಮೊದಮೊದಲು ಪೆಕರುಪೆಕರಾಗಿ ನೋಡುತ್ತಿದ್ದೆ. ಆಮೇಲೆ ಸ್ವಲ್ಪ ಹುಷಾರಾಗಿ ಆ ಬೈಗುಳದ ಅರ್ಥ ತಿಳಿದುಕೊಂಡೆ. ಆಗ ಗೊತ್ತಾಯ್ತು ಅವರು ಏನೆಲ್ಲ ಬೈದಾಡಿಕೊಳ್ಳುತ್ತಿದ್ದರೂ ಅಂತ. ಆಮೇಲಾಮೇಲೆ ನಾನೂ ಅವರನ್ನು ಅದೇ ಭಾಷೆಯಲ್ಲಿ ಬೈದಾಗ ಇವನಿಗೆ ತಮಿಳು ಕಲಿಸಿಕೊಟ್ಟಿದ್ದೇ ತಪ್ಪಾಯ್ತು ಅಂತ ಅವರು ಪೇಚಾಡಿಕೊಂಡಿದ್ದರು.ಇಂತಿಪ್ಪ ಪ್ರೆಸ್ನಲ್ಲಿ ನಾವು ಹೆಣ ಬಿದ್ದೋಗೋ ಹಂಗೆ ದುಡಿಯುತ್ತಿದ್ದೆವು. ನಿಜ ಹೇಳ್ತೀನಿ ಆ ಎರಡು ವರ್ಷದಲ್ಲಿ ನಾನು ದಿನಕ್ಕೆ ನಿದ್ರೆ ಅಂತ ಮಾಡುತ್ತಿದ್ದದ್ದು ಕೇವಲ ಮೂರೋ ನಾಲ್ಕೋ ಗಂಟೆ ಮಾತ್ರ. ರಾತ್ರಿ ಎಲ್ಲಾ ದುಡಿದು ಬೆಳಗಿನ ಮೂರೋ ನಾಲ್ಕೋ ಗಂಟೆಗೆ ಅವರು ಸೈಕಲ್ ಹತ್ತಿ ಹೊರಟುಬಿಡುತ್ತಿದ್ದರು. ನಾನು ಅಲ್ಲೇ ಡಬ್ಬಲ್ ಡೆಮಿ ಪೇಪರ್ ಒಂದನ್ನು ಹಾಸಿಕೊಂಡು ಅಂತದೇ ಇನ್ನೊಂದನ್ನು ಹೊದ್ದುಕೊಂಡು ಮಲಗಿಕೊಳ್ಳುತ್ತಿದ್ದೆ. ಬೆಳಿಗ್ಗೆ ಹೋದ್ರೆ ಮನೆ, ಇಲ್ಲ ಅಂದ್ರೆ ಡ್ಯೂಟಿ ಕಂಟಿನ್ಯೂ ಆಗ್ತಿತ್ತು. ಆ ರಾತ್ರಿಗಳಲ್ಲೆ ನಾನು ಗೆಳೆಯ ಗೆಳತಿಯರಿಗೆ ಒಬ್ಬಂಟಿಯಾಗಿ ಕುಳಿತು ಪತ್ರ ಬರೆಯುತ್ತಿದ್ದದ್ದು. ಆಗ ನನಗಿದ್ದ ಬರವಣಿಗೆ ಅಂದ್ರೆ ಅದೊಂದೇ. ಪುಟಗಟ್ಟಲೇ ಪತ್ರ ಬರೆಯುವುದು ಅಭ್ಯಾಸವಾಗಿ ಹೋಗಿತ್ತು. ಯಾವುದಾವುದೋ ವಿಷಯ... ಏನೇನೋ ಚಚರ್ೆ, ಜೊತೆಗೊಂದಿಷ್ಟು ಗೆರೆಗಳು. ನಾನು ಬರೆವ ಪ್ರತಿ ಲೆಟರ್ನಲ್ಲೂ ಚಿತ್ರ ಇದ್ದೇ ಇರುತ್ತಿತ್ತು. ಅವನ್ನೆಲ್ಲ ಈಗಲೂ ನೆನೆದು ಪುಳಕಗೊಳ್ಳುತ್ತೇನೆ.ನಾವಿದ್ದ ಪ್ರೆಸ್ನಿಂದ ಕೂಗಳತೆ ದೂರದಲ್ಲಿ ದಾಸ್ಪ್ರಕಾಶ್ ಪ್ಯಾರಡೈಸ್ನವರದೊಂದು ಬೇಕರಿ ಇತ್ತು. ಅಲ್ಲಿ ದಿಲ್ಪಸಂದ್ ನೆನಸಿಕೊಂಡ್ರೆ ಈಗಲೂ ಬಾಯಲ್ಲಿ ನೀರೂರುತ್ತೆ. ಅಷ್ಟು ಚೆನ್ನಾಗಿರುತ್ತಿತ್ತು. ಅದನ್ನ ತಂದು ಮೇಯ್ತಿದ್ವಿ. ಹೆಚ್ಚು ಕಡಿಮೆ ವಾರದಲ್ಲಿ ಮೂರ್ನಾಲ್ಕು ದಿನ ಇರ್ತಿತ್ತು. ಹಣದ್ದೇನು ಕೊರತೆ ಇರ್ತಿರಲಿಲ್ಲ. ಓಟಿ ಕೊಡ್ತಿದ್ರು. ತಿಂಡಿಗೂ ಕಾಸು ಕೊಡ್ತಿದ್ರಲ್ಲ! ಆಮೇಲೆ ರಾತ್ರಿಗೆ ಊಟಕ್ಕೆ ಅಂತ ಪರೋಟ ತಿಂತಿದ್ವಿ. ಅದೂ ಒಂಥರಾ ಮಜ್ಜಾ ಇರ್ತಿತ್ತು. ಪರೋಟ ತಂದು ಅದಕ್ಕೆ ಸಾಗು ಹಾಕ್ಕೊಂಡು ತಿನ್ನೋದು ಓಕೆ. ಆದ್ರೆ ಈ ತಮಿಳ್ನೋರು ನನಗೊಂದು ಹೊಸ ರುಚಿ ಹೇಳ್ಕೊಟ್ರು. ಪರೋಟಾನೆಲ್ಲ ಪೀಸ್ ಪೀಸ್ ಮಾಡಿ ಅದಕ್ಕೆ ಸಾಗು ಹಾಕಿ ಕಲಸಿ... ಜೊತೆಗೆ ಎರಡೋ ಮೂರೋ ಬಾಳೆ ಹಣ್ಣು ಹಾಕಿ ಕಲಸಿಕೊಳ್ಳೋದು. ಏನೋ ಒಂಥರ ರುಚಿ ಸಿಗ್ತಿತ್ತು. ಹಾಗೆ ಕಲಸಿಕೊಂಡು ಎರಡು ಪರೋಟ ತಿಂದುಬಿಟ್ರೆ ರಾತ್ರಿ ಇಡೀ ಹಸಿವು ಅನ್ನೋದು ಹತ್ತಿರಕ್ಕು ಸುಳಿಯುತ್ತಿರಲಿಲ್ಲ. ಆದ್ರ್ರೆ ಬೆಳಗಿನ ಜಾವ ಮೂರು ಗಂಟೆ ಆಗ್ತಾ ಇದ್ದ ಹಾಗೆ ಒಂದು ನಿದ್ರೆ ಬರ್ತಿತ್ತು ನೋಡಿ, ತಡೆಯೋದಕ್ಕೆ ಸಾಧ್ಯಾನೆ ಇಲ್ಲ ಅನ್ನೋ ನಿದ್ರೆ ಅದು. ಒಮ್ಮೆ ತೂಕಡಿಸುತ್ತಲೇ ಪೇಪರ್ ಎಲ್ಲಾ ಸ್ಟೋರ್ ಆಗುತ್ತಲ್ಲ ಟ್ರೇ ಅದರೊಳಕ್ಕೇ ಕೈ ಹಾಕ್ಕೊಂಡು ಮಲಗಿಬಿಟ್ಟಿದ್ದೆ. ಪುಣ್ಯಕ್ಕೆ ಅಲ್ಲಿರುವವರು ಎಚ್ಚರಿಸಿದ್ದರು.ಇಂಥ ಪ್ರೆಸ್ನಿಂದ ಒಂದಿನ ಒಂದು ಮಾತೂ ಆಡದೇ ಎದ್ದು ಬಂದಿದ್ದೆ. ಆಗ ನಾನು ಅನುಭವಿಸಿದ ಡಿಪ್ರೆಷನ್ ಇದೆಯಲ್ಲ ಅದರಿಂದ ಪಾರಾಗಲು ನನಗೊಂದು ದಾರಿ ಬೇಕಿತ್ತು. ನನ್ನ ಬದುಕು ಕಟ್ಟಿಕೊಳ್ಳಲು ಒಂದು ಕನಸು ಬೇಕಿತ್ತು. ಅಂಥದ್ದೊಂದು ಕನಸಿನ ಬೆನ್ನು ಹತ್ತಿ ಬಂದವನಿಗೆ ಬೆಂಗಳೂರು ಬೇಡ ಅನ್ನಲಿಲ್ಲ.ಬದುಕು ನಿಧಾನಕ್ಕೆ ಬದಲಾಗತೊಡಗಿತು.ಯಾಕೋ ಹೋದ ವಾರ ಫಸ್ಟ್ ಹಾಫ್ ಮುದ್ರಣಕ್ಕೆ ಅಂತ ಪ್ರೆಸ್ಗೆ ಹೋದಾಗ ಇದೆಲ್ಲ ನೆನಪಾಗತೊಡಗಿತು.ಹಾಗೆ ರಾತ್ರಿ ಎಲ್ಲ ನಿದ್ರೆ ಗೆಟ್ಟು ಬೆಳಿಗ್ಗೆ ಮನೆಗೆ ಹೋಗಿ ಸ್ನಾನ ಮಾಡಿಬರೋಣ ಅಂತ ಹೊರಟೆ. ಕಾರು ಪ್ರೆಸ್ಸಲ್ಲೇ ಬಿಟ್ಟು ಹೋಗಿದ್ದೆನಾದ್ದರಿಂದ ಇಸ್ಕಾನ್ ಹತ್ತಿರ ಬಂದ ಆಟೋ ಒಂದಕ್ಕೆ ಕೈ ಅಡ್ಡ ಹಾಕಿದೆ.ನನ್ನ ಏರಿಯಾಗೆ ಬರ್ತೀಯಾ ಅಂದೆ.ನಾನಿದ್ದ ಡ್ರೆಸ್ ನೋಡಿಯೋ ಏನೋ, ಏನ್ ಸಾರ್ ಇಲ್ಲಿಗಂಟ. ಜಾಗಿಂಗ್ ಬಂದುಬಿಟ್ರಾ ಅಂತ ಆತ್ಮಿಯವಾಗಿ ಕೇಳಿದ. ಇಲ್ಲ ಇಲ್ಲ. ಪ್ರೆಸ್ಗೆ ಬಂದಿದ್ದೆ. ಈಗ ಮನೆಗೆ ಹೋಗತಾ ಇದೀನಿ ಅಂದೆ.ಪ್ರೆಸ್ನವರ ಸಾರ್. ಯಾವ ಪ್ರೆಸ್ಸು? ಅಂದ.ಹಾಯ್ ಬೆಂಗಳೂರ್ ಅಂದೆ.ಸಾರ್ ನಿಮ್ಮೆಸರು ಅಂದ.ರವಿ ಅಜ್ಜೀಪುರ ಅಂದೆ.ನಾನು ನಿಮ್ಮ ಫ್ಯಾನ್ ಸಾರ್. ನೀವು ಓ ಮನಸೇನಲ್ಲಿ ಬರೀತೀರಲ್ವಾ. ಸೂಪೆರ್ಬ್ ಅಂದ. ನನಗೆ ಇನ್ ಬಾಕ್ಸ್ ಅಂದ್ರೆ ಪ್ರಾಣ ಅಂದ. ನಾನು ನನ್ನ ಹುಡುಗಿಗೇ ಈ ಮೆಸ್ಸೇಜ್ಗಳನ್ನೇ ಕಳಿಸೋದು ಸಾರ್. ಅವಳಿಗೆ ತುಂಬಾ ಇಷ್ಟ ಅಂದ.ಹಾಗೆ ಮಾತಾಡ್ತಾ ಮಾತಾಡ್ತ ಮನೆ ಬಂದಿದ್ದೇ ಗೊತ್ತಾಗಲಿಲ್ಲ. ಹಣ ಕೊಡಲು ಹೋದ್ರೆ ಸರ್ ನಿಮ್ಮತ್ರ ಹಣಾನ, ಬೇಡ ಸಾರ್ ಅಂತ ಹಿಂಜರಿಯತೊಡಗಿದ.ಬಲವಂತ ಮಾಡಿ ಹಣ ಕೊಟ್ಟೆ.ಓ ಮನಸೇ ತುಂಬಾ ಲೇಟ್ ಮಾಡಬೇಡಿ ಸಾರ್. ನಮ್ಮಂತೋರು ಕಾಯ್ತಾ ಇರ್ತೀವಿ. ಮನೇಲಿ ಅದಿದ್ರೆ ದಾರಿ ದೀಪ ಇದ್ದಂಗೆ ಅಂದವನ ಕಣ್ಣಲ್ಲಿದ್ದ ಪ್ರೀತಿಗೆ ಏನು ಹೇಳಲಿ. ಎಲ್ಲಿಯವರೋ, ಯಾರೊ? ವಿನಾಕಾರಣ ನಮ್ಮನ್ನು ಪ್ರೀತಿಸಿಬಿಡುತ್ತಾರೆ. ಒಮ್ಮೊಮ್ಮೆ ಅಂಥ ಪ್ರೀತಿಗೆ ನಾವು ಅರ್ಹರೇ ಅನ್ನುವ ಪ್ರಶ್ನೆಯೂ ಎದ್ದು ದಿಗಿಲಾಗುತ್ತದೆ. ಇವೆಲ್ಲದರ ನಡುವೆ ಒಂದು ಒಳ್ಳೆ ಕೆಲಸ ಮಾಡಿದಾಗ ಆಗುವ ಖುಷಿ ಇದೆಯಲ್ಲ ಅದಕ್ಕೆ ಪಾರವೇ ಇಲ್ಲ. ಈಗ ಫಸ್ಟ್ ಹಾಫ್ ಕೈಯಲ್ಲಿದೆ. ಅದನ್ನು ನೋಡುತ್ತಾ ಕೂರುವುದರ ಸಂಭ್ರಮವೇ ಬೇರೆ ಬಿಡಿ.