
ನಾನು ಸುಮ್ಮನಿದ್ದವ
ಅಂದ್ರೆ, ಕೇವಲ ಸುಮ್ಮನೇ!
ಆ ಎತ್ತರದ ಬೆಟ್ಟಗಳಲ್ಲಿ
ಅದ ಸುತ್ತುವ ನದಿಗಳಲ್ಲಿ
ಗಿರಗಿರನೆ ಸುತ್ತಾಡಿಕೊಂಡು
ಸುಖಾ ಸುಮ್ಮನೆ ಬದುಕಿದ್ದವ
ಮಗನಿಗೆ ಮೀಸೆ ಬಂತು ಅಂತ
ಹೆಮ್ಮೆ ಪಡ್ತಿದ್ದ ಅವ್ವ
ಮೊಲೆ ಬಂದ ಹೆಣ್ಣು ಮಕ್ಕಳು ಮಾತಾಡಿಸಿದ್ರೆ
ಉರಿದು ಬೀಳುತ್ತಿದ್ದಳು
ಹುಡುಗ ಚೆನ್ನಾಗವನೇ ಕಣ್ರೆ ಬಿನ್ನಾಣಗಿತ್ತೀರಾ
ಹಾರಿಸ್ಕೊಂಡು ಹೋಗ್ಗೀಗ್ ಬಿಟ್ಟಿರಾ?
ಊರ ಬಾಗಿಲಿಗೆ ತೋರಣ ಕಟ್ಟುಬಿಟ್ಟೇನು ಅಂತಿದ್ಳು.
ನಾನೋ ಮಹಾ ಯಬರ
ಹುಡುಗೀರ ಮೊಲೆ
ಕಂಡೋರ ಮನೆ ತೊಲೆ
ಯಾವುದಕ್ಕೂ ಕಣ್ಣಾಕದವ
***
***
ನಾನು ಸುಮ್ಮನಿದ್ದವ
ಅಂದ್ರೆ, ಕೇವಲ ಸುಮ್ಮನೇ!
ಅಂತ ಸುಮ್ಮನಿದ್ದ ಒಂದಿನ
ಯಾರೋ ಸುಳಿದಂಗಾಯ್ತು
ಕೂಗಿದಂಗಾಯ್ತು
ಕೈ ಹಿಡಿದು ಜಗ್ಗಿದಂಗಾಯ್ತು
ಕಣ್ಣ ಕದ ತೆರೆದು ಬಂದು ಕುಳಿತಂಗಾಯ್ತು
ಎದೆಯ ಮಿದುವಿಗೆ
ಬೆರಳ ತಾಕಿಸಿ ಮೀಟಿದಂಗಾಯ್ತು
ಮನಸು ನನ್ನ ಮಾತೇ ಕೇಳಲಿಲ್ಲ
ಬಂದ ಕನಸುಗಳಿಗೆ ಲೆಕ್ಕವಿಲ್ಲ
ಹರವಿಕೊಂಡ ಆಕಾಶದ ತುಂಬಾ
ನಿನ್ನದೇ ಬಿಂಬ
ಹಾಡಬೇಕೆಂದು ಕುಳಿತವನ ಕೊರಳಲ್ಲಿ
ನಿನ್ನದೇ ಹೆಸರು
ಪ್ರಿಯೆ ಪ್ರಿಯೆ ಪ್ರಿಯಂವದಾ
ಅರೆ ಅಷ್ಟು ಹುಡುಗಿಯರಲ್ಲಿ
ಇಷ್ಟವಾಗಲಿಲ್ಲವಲ್ಲ ಒಬ್ಬಳೂ
ಇವಳಲ್ಲೇನಿದೆ ಸೆಳೆತ
ನನ್ನ ಈ ಪರಿ ಸೆಳೆಯಲು
ಕಾರಣ ಹುಡುಕಿದೆ
ಕಾರಣ ನೀನೇ ಆಗಿರುವಾಗಲೂ!
ಇಷ್ಟಾಗುವ ಹೊತ್ತಿಗೆ
ನೀನು ಇಷ್ಟವಾಗಿದ್ದೆ
ಮತ್ತು...
***
ಮತ್ತೆ ಮಳೆ ಹುಯ್ಯುತಿದೆ
ನೆನಪು ಜೀಕುತ್ತಿದೆ
ಮೊದಲ ಮಾತು
ಮೊದಲ ಸ್ಪರ್ಶ
ಮೊದಲ ಗಿಫ್ಟು
ಮೊದಮೊದಲ ಕಚಗುಳಿ
ಮೊದಲು ಕೊಟ್ಟ ಮುತ್ತು
ಮತ್ತು ಮುತ್ತು
ನೆನಪಿದೆಯಾ ನಿನಗೆ
ತಡವಾಗಿ ಬಂದಿದ್ದು
ನೀನು ಬೈದಿದ್ದು
ಬರ್ತಡೇಗೆ ವಿಷ್ ಮಾಡಿಲ್ಲ ಅಂತ
ಮುನಿಸಿಕೊಂಡಿದ್ದು
ಕೊಟ್ಟ ಗಿಫ್ಟ್ ಗಿಫ್ಟೇ ಅಲ್ಲ
ಅಂತ ವಾದಿಸಿದ್ದು
ನಾಳೆ ಕಡುಗೆಂಪು ಬಣ್ಣದ ಸೀರೆ ಉಟ್ಕೊಂಡ್ ಬಾರೆ ಅಂದ್ರೆ
ಮುಗಿಲು ಬಣ್ಣದ ಜೀನ್ಟ್ ತೊಟ್ಟು
ಪೇಚಾಡಿದ್ದು
ಪರಮ ಪೋಲೀ ಜೋಕಿಗೆ ನಕ್ಕಿದ್ದು
ಕಾನರ್ೆಟ್ಟೋ ಐಸ್ಕ್ರೀಮ್ ನೆಕ್ಕಿದ್ದು
ಸಂಜೆ ಸಿಗುತ್ತೀನಿ ಅಂತ ಅಣ್ಣಮ್ಮನ ದೇವಸ್ಥಾನದ ಬಳಿ
ಕಾಯಿಸಿದ್ದು
ಪ್ರೀತಿ ಕಾಯಿಸುತ್ತದೆ
ಮತ್ತು ಸತಾಯಿಸುತ್ತದೆ
ಪ್ರೀತಿ ಸಾಯಿಸುತ್ತದಾ?
***
ನಾನು ಸುಮ್ಮನಿದ್ದವ
ಅಂದ್ರೆ, ಕೇವಲ ಸುಮ್ಮನೇ!
ಒಮ್ಮೆ ನಾ ಕೇಳಿದ್ದೆ
ನನ್ನದು ನದಿ ಪ್ರೀತಿ ಕಣೆ
ನಿನ್ನದು?
ಮುಗಿಲ ಪ್ರೀತೀನಾ? ಅಂತ.
ನೀನು ಉತ್ತರ ಹುಡುಕುತ್ತಲೇ ಹೋದೆ
ನಾನು ಪ್ರಶ್ನೆ ಹಾಕುತ್ತಲೇ ಹೋದೆ
ಕಾಲ ಬಡ್ಡೀಮಗಂದು
ಗೀಚಿ ಹೋದ ಭಾಷೆಗೆ ಅರ್ಥವೇ ಇರಲಿಲ್ಲ
ಜಗತ್ತು ಎಷ್ಟು ಕ್ರೂರಿ ಅಲ್ವಾ?
ಬದುಕು ಇನ್ನೇನು ಬಿಚ್ಚಿಕೊಳ್ತು ಅನ್ನುವಾಗಲೇ
ಮುಚ್ಚಿಹೋಗುತ್ತದೆ
ಮುಕ್ತ ಮುಗಿಲಿಗೂ
ಮೋಡ ಆವರಿಸಿಕೊಳ್ಳುತ್ತದೆ
ನಿಜ್ಜ ಹೇಳ್ತೀನಿ
ನಾನು ನಿನ್ನನ್ಯಾವತ್ತೂ ಕಾಮಿಸಿಲ್ಲ
ಕೇವಲ ಪ್ರೇಮಿಸಿದೆ
ಆರಾಧಿಸಿದೆ
ಎದೆಯಲ್ಲಿಟ್ಟುಕೊಂಡೆ
ಬೊಗಸೆಯಲ್ಲಿಟ್ಟರೆ ಕಳೆದುಹೋಗುತ್ತಿಯ ಅಂತ
ಪ್ರಿಯ ಪ್ರಿಯಂವದಾ
ಗೊತ್ತಾ
ಪ್ರೀತಿಗೆ ಸೋಲಬಹುದು ಕಣೆ
ಕಾಮಕ್ಕೆ ಸೋಲಬಾರದು
***
ಹಚ್ಚಿಟ್ಟ ಹಣತೆಗೆ ಎಣ್ಣೆಯಿಲ್ಲ
ಕಣ್ಣಲ್ಲಿ ಕಾಂತಿಯಿಲ್ಲ
ಎದೆಯ ಮಗ್ಗುಲಲ್ಲಿ ಮುಳ್ಳುಕಂಟಿ
ಬಾಗಿಲು ತೆರೆದೇ ಇದೆ
ಹೋಗಿದ್ದು ಯಾಕೆ ಅಂತ ಕೇಳೊಲ್ಲ
ನಾನೋ ಈಡಿಯಟ್ ಕಾಯುತ್ತಿದ್ದೇನೆ
ಒಮ್ಮೆ ಬಂದು ಹೋಗೆ.
2 comments:
adbhuta
Sowmya
sir
nadipreeti andrenu?, sheershike chennagide
sowmya
Post a Comment