Saturday, November 8, 2008

ಬಬ್ಬಲ್ಗಮ್ಮು, ಪ್ಯಾಂಟು ಮತ್ತು ಜಿಪ್ ಹಾಕದ ಗೊರಿಲ್ಲಾ ಮಾಸ್ತರ್...

ನನಗೆ ಹಿಂದಿನಿಂದಲೂ ಒಂದು ಅಭ್ಯಾಸವಿತ್ತು.
ಎಗ್ಗಾಮಗ್ಗಾ ಚ್ಯೂಯಿಂಗ್ಗಮ್ ಅಗಿಯುವುದು. ಅದನ್ನ ಇತ್ತೀಚೆಗೆ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ ಮಾಡಿಕೊಂಡಿದ್ದೇನೆ ಬಿಡಿ.
ಇದು ಎಂಟತ್ತು ವರ್ಷಗಳ ಹಿಂದಿನ ಮಾತು. ಆಗೆಲ್ಲ ಚ್ಯೂಯಿಂಗ್ಗಮ್ ತಿನ್ನುವ ಆಸೆಯ ಜೊತೆಜೊತೆಗೆ ಒಂದು ಥರದ ಭಯವೂ ಇತ್ತು. ಅದಕ್ಕೆ ಕಾರಣ ಚ್ಯೂಯಿಂಗ್ಗಮ್ ಅಗಿಯುವಾಗ ಅದನ್ನೇನಾದ್ರೂ ಅಕಸ್ಮಾತ್ ನುಂಗಿಬಿಟ್ಟರೆ ಸತ್ತೇಹೋಗುತ್ತಾರೆ ಅನ್ನುವುದು. ನಾವೆಲ್ಲ ಯಾವ ಪರಿ ಹೆದರಿದ್ದೆವು ಅಂದ್ರೆ ನಾನಂತೂ ಕೆಲ ಕಾಲ ಚ್ಯೂಯಿಂಗ್ಗಮ್ ತಿನ್ನುವುದನ್ನೇ ಬಿಟ್ಟುಬಿಟ್ಟಿದ್ದೆ. ಮನೆಯಲ್ಲಿ ಚ್ಯೂಯಿಂಗ್ಗಮ್ ಕಂಡ್ರೆ ಸಾಕು ಹಾವು ಮೆಟ್ಟಿದಂಗಾಡ್ತಿದ್ರು. ಇದು ಇನ್ನೂ ಎಷ್ಟು ಎಕ್ಸ್ಟ್ರೀಮ್ ಹಂತಕ್ಕೆ ಹೋಯ್ತು ಅಂದ್ರೆ ಯಾರೋ ಒಬ್ಬ ಹುಡುಗ ಚ್ಯೂಯಿಂಗ್ಮ್ ತಿಂದು ಸತ್ತೇ ಹೋದನಂತೆ. ಚ್ಯೂಯಿಂಗ್ಗಮ್ನ ಬ್ಯಾನ್ ಮಾಡ್ತಾರಂತೆ ಅನ್ನುವ ಸುದ್ದಿ ಹರಡಿ ನಮ್ಮೆಲ್ಲರ ಜಂಗಾಬಲವೇ ಉಡುಗಿಹೋಗಿತ್ತು. ಅವತ್ತಿಂದ ಬಾಯಿಗೆ ಚ್ಯೂಯಿಂಗ್ಗಮ್ ಬಿದ್ರೆ ಸಾಕು ಎಲ್ಲಿ ನುಂಗಿಬಿಡುತ್ತೇನೋ ಅನ್ನುವ ಭಯ ಫೋಬಿಯಾ ಥರ ಇನ್ನಿಲ್ಲದೆ ಕಾಡತೊಡಗಿದ್ದು ಮಾತ್ರ ಸುಳ್ಳಲ್ಲ.
ಇಂಥ ಚ್ಯೂಯಿಂಗ್ಗಮ್ ನನ್ನದೊಂದು ಹೊಚ್ಚ ಹೊಸ ಪ್ಯಾಂಟನ್ನು ಹಾಳು ಮಾಡಿತ್ತು. ತೀರಾ ಮೊಲದ ಬಿಳುಪಿನದ್ದು ಅದು. ಅದನ್ನು ಎಷ್ಟು ಪ್ರೀತಿಯಿಂದ ಹೊಲಿಸಿಕೊಂಡಿದ್ದೆ ಅಂದ್ರೆ ಎಲ್ಲಿ ಹಾಕಿಕೊಂಡ್ರೆ ಕೊಳೆ ಆಗುತ್ತೋ ಅಂತ ಹೆಚ್ಚಾಗಿ ಹಾಕಿಕೊಳ್ತಾನೆ ಇರಲಿಲ್ಲ. ಮನೆಯಲ್ಲಿ ಹಾಕ್ಕೊಂಡುಹೋಗೋ. ಅದನ್ನೇನು ಹೊಲಿಸಿ ಇಟ್ಕೊಂಡು ಪೂಜೆ ಮಾಡ್ತೀಯ ಅಂತ ಸಣ್ಣಗೆ ಗದರಿದ್ದೂ ಉಂಟು.
ಇರಲಿ. ನಮ್ಮ ಕ್ಲಾಸ್ ಒಂಥರ ಪುಂಡರ ಸಂತೆ. ಏನೋ ತರಲೆ ಮಾಡ್ತೀಯ ಅಂತ ಹೊಡೆಯಲು ಹೋದ್ರೆ ಪಿಲ್ಟು ಅನ್ನುವ ಫ್ರೆಂಡ್ ಒಬ್ಬ ಮಾಸ್ತರನ ಕೈಲಿದ್ದ ಕೋಲನ್ನೇ ಬಿಗಿಯಾಗಿ ಕಿತ್ತುಕೊಂಡು ಅಬ್ಬರಿಸಿದ್ದ. ಹೊಡಿ ನೋಡ್ತೀನಿ ಅಂತ. ಅವನಿಗೆ ಅಷ್ಟು ಪೊಗರು ಹೇಗೆ ಬಂದಿತ್ತು ಅಂದ್ರೆ ಅವನು ಅಣ್ಣ ಆಗಲೇ ರೌಡಿ ಅಂತ ಹೆಸರು ಮಾಡಿದ್ದ. ಅವನೂ ಅದೇ ಸ್ಕೂಲ್ನ ಸೀನಿಯರ್ ಸ್ಟೂಡೆಂಟ್. ಅವನದೋ ಇನ್ನೂ ಅದ್ವಾನ. ಶನಿವಾರ ಬಿಳಿ ಡ್ರೆಸ್ ಹಾಕ್ಕೊಂಡು ಹೋಗೋದು ಕಂಪಲ್ಸರಿ ತಾನೆ. ಆದ್ರೆ ಈ ಮಹಾನುಭಾವ ಒಂದಿನ ಬಿಳಿ ಪಂಚೆ ಶಟರ್ು ಹಾಕ್ಕೊಂಡು ಬಂದು ಪ್ರೇಯರ್ನಲ್ಲಿ ನಿಂತಿದ್ದ. ನೋಡಿದ ಟೀಚರ್ರು ಏನಯ್ಯಾ ಇದು ಅಪದ್ಧ ಅಂದ್ರೆ, ಸರ್ ನಿಮಗೆ ಏನು ಬೇಕು. ಬಿಳಿ ಬಟ್ಟೆ ತಾನೆ ಅಂತ ದಬಾಯಿಸಿದ್ದ. ಅವತ್ತಿಡೀ ಅವನನ್ನ ಊರ ಬಾಗಿಲಿಗೆ ಕಾವಲು ನಿಲ್ಲಿಸಿದಂತೆ ಕ್ಲಾಸಿನ ಹೊರಗೆ ಬಿಸಿಲಿನಲ್ಲಿ ನಿಲಿಸಿದ್ದರು.
ಅಂತ ಶುದ್ಧಾನುಶುದ್ಧ ತರಲೆಗಳ ಕೈಗೆ ಸಿಕ್ಕು ನಾನೂ ನಜ್ಜುಗುಜ್ಜಾಗಿದ್ದೆ. ಒಂದಾ ಎರಡಾ ಚೇಷ್ಟೆ. ಕೂರುವಾಗ ಕೆಳಕ್ಕೆ ಪೆನ್ ಇಡುವುದು, ಬಬ್ಬಲ್ಗಮ್ ಅಂಟಿಸುವುದು, ಇಂಕ್ ಪೆನ್ನಿಂದ ಇಂಕ್ ಹಾರಿಸುವುದು ಇತ್ಯಾದಿಗಳೆಲ್ಲ ಒಂಥರ ಎಂಟಟರ್ೈನ್ ಮೆಂಟ್ ಥರ ಆಗಿಬಿಟ್ಟಿತ್ತು. ಎಕ್ಸ್ಟ್ರಾ ಕರಿಕಲರ್ ಆ್ಯಕ್ಟಿವಿಟೀಸ್ ಅನ್ನಿ ಬೇಕಾದ್ರೆ. ಇಂಥ ತರಲೆಗಳು ಒಂದಿನ ಮಾಡಬಾರದ ಕೆಲಸ ಮಾಡಿಬಿಟ್ಟಿದ್ದರು. ನನ್ನ ಹೊಸ ಪ್ಯಾಂಟ್ ಹಾಕಿಕೊಂಡು ಹೋದನಲ್ಲ ಆ ದಿನ ಕೂತು ಏಳುವಷ್ಟರಲ್ಲಿ ಬಬ್ಬಲ್ಗಮ್ ಅಂಟಿಸಿಬಿಟ್ಟಿದ್ದರು. ಏಳಲು ಹೋದ್ರೆ ಡೆಸ್ಕ್ಗೂ ನನ್ನ ಹಿಂಬದಿಗೂ ನಡುವೆ ಬಬ್ಬಲ್ಗಮ್ನ ಅಂಟು ಅಂಟು. ನಿಜಕ್ಕೂ ನನ್ನ ಕಣ್ಣಲ್ಲಿ ನೀರಿತ್ತು. ಕಣ್ಣೆದುರೇ ನನ್ನ ಕನಸಿನ ಪ್ಯಾಂಟನ್ನು ಈ ಸ್ಥಿತಿಗೆ ತಂದವರನ್ನು ಸುಮ್ಮನೆ ಬಿಡಬಾರದು ಅಂತ ಹಲಬುತ್ತಿದ್ದೆ. ಆದ್ರೆ ಅವಾಗ ನಾನು ಒಣಗಿದ ಅಂಚಿಕಡ್ಡಿಯಂತಿದ್ದವ. ಹೇಗೆ ತೂಕ ಹಾಕಿದರೂ ಐವತ್ತು ಕೇಜಿ ತೂಗುತ್ತಿರಲಿಲ್ಲ. ನನ್ನನ್ನು ಯಾರು ಕೇರ್ ಮಾಡಿಯಾರು? ಮನೆಗೋಗಿ ಅವ್ವನ ಹತ್ತಿರ ಚೆನ್ನಾಗಿ ತಿಕ್ಕಿಸಿದೆ. ಆದ್ರೂ ಅದು ಹೋಗಲೇ ಇಲ್ಲ. ಕೊನೆಗೆ ಉಜ್ಜೀ ಉಜ್ಜೀ ಪ್ಯಾಂಟಿನ ಹಿಂಬದಿಯಲ್ಲಿ ಸಣ್ಣಗೆ ಇಲಿ ಕೊರೆದಂತಹ ತೂತು ಕಾಣಿಸತೊಡಗಿತು. ತೂತು ಕಂಡ ಮೇಲೆ ಹಾಕಿಕೊಳ್ಳುವುದು ಎಂತು. ಅದನ್ನು ಮೂಲೆಗೆಸೆದದ್ದಾಯಿತು.
ಇನ್ನೊಂದೇ ಒಂದು ಇನ್ಸಿಡೆಂಟ್ ಹೇಳಲೇ ಬೇಕು ನಿಮಗೆ. ನಮ್ಮಲ್ಲಿ ಒಬ್ಬರು ಪೀಟಿ ಮಾಸ್ತರು ಇದ್ದರು. ಅವರ ಹೆಸರೇನೋ ನೆನಪಾಗುತ್ತಿಲ್ಲ. ಆದ್ರೆ ನಮ್ಮ ಶಾಲೆಯಲ್ಲಿ ಅವರಿಗೆ ಗೊರಿಲ್ಲಾ ಅಂತ ಕರೀತಿದ್ರು. ದೈತ್ಯ ದೇಹಿ. ಯಾವಾಗಲೂ ಹಾಕುತ್ತಿದ್ದದ್ದು ಗ್ರೇ ಕಲರ್ ಸಫಾರಿ ಮಾತ್ರ. ಅದನ್ನ ಬಿಟ್ಟು ಅವರು ಬೇರೆ ಬಟ್ಟೆ ಹಾಕಿದ್ದು ನಾ ಕಾಣೆ. ಆಗಲೇ ರಿಟೈಡರ್್ಮೆಂಟ್ ವಯಸ್ಸು. ಅವರು ರೂಮಿನಲ್ಲಿ ಕೂತಿದ್ರೆ ಈ ಹುಡುಗರು ಕಿಟಕಿಯಲ್ಲಿ ಹೋಗಿ ಗೊರಿಲ್ಲಾ ಅಂತ ಕಿರುಚಿಬಿಡ್ತಿದ್ರು. ಪಾಪ ಆವಯ್ಯಾ ತಬ್ಬಿಬ್ಬು. ಇಂಥ ಗೊರಿಲ್ಲಾ ಒಂದಿನ ಒಂದು ಎಡವಟ್ಟು ಮಾಡಿಕೊಂಡಿತ್ತು.
ಅವತ್ತು ಎಲ್ಲಾ ಪ್ರೇಯರ್ಗೆ ಅಂತ ನಿಂತಿದ್ದರು. ಸಾಮಾನ್ಯವಾಗಿ ಮಾಸ್ತರರೆಲ್ಲ ನಮಗಿಂತ ಎತ್ತರದ ಒಂದು ಸ್ಟೇಜ್ಮೇಲೆ ನಿಂತುಕೊಳ್ಳುತ್ತಿದ್ರು,. ಅವತ್ತೂ ಹಾಗೆ ನಿಂತಿದ್ರು. ಪೀಟಿ ಮಾಸ್ತರಲ್ವ ಗೊರಿಲ್ಲಾ ಯಾವಾಗಲೂ ಮುಂದೇನೆ ನಿಂತಿರೋದು. ಇನ್ನೇನು ರಾಷ್ಟ್ರಗೀತ್ ಶುರುಕರ್ ಅನ್ನಬೇಕು. ಯಾರೋ ಒಬ್ಬ ನಮ್ಮ ನಡುವಿನಿಂದಲೇ ಸಾರ್ ನೀವು ಪ್ಯಾಂಟ್ಗೆ ಜಿಪ್ಪೆ ಹಾಕಿಲ್ಲ ಅಂತ ಕಿರುಚಿಬಿಟ್ಟ.
ಪಾಪ ಗೊರಿಲ್ಲಾ ಮುಖ ಇಷ್ಟು ಚಿಕ್ಕದಾಯಿತು. ತಕ್ಷಣ ಸರಿ ಮಾಡಿಕೊಂಡರು. ನಮಗೆಲ್ಲ ನಗುವೋ ನಗು. ಉಳಿದ ಮೇಸ್ಟ್ರುಗಳಿಗೂ ಏನುಮಾಡಬೇಕೋ ಅಂತ ತೋಚದೆ ತಕ್ಷಣ ನಮ್ಮನ್ನೆಲ್ಲ ಗದರಿಸಿ ಪ್ರೇಯರ್ ಮಾಡಿಸಿದ್ರು.
ಇಂಥವು ಎಷ್ಟೋ!
ಮತ್ತೊಮ್ಮೆ ಬರೆದೇನು.

2 comments:

Basavaraj.S.Pushpakanda said...

I too had the same experience while studying in my high school.We had a p t master from kerala and he had a problem to pronounce 'haa' aslo we had a beautiful and fantastic volleyball player, his name was "M.C.Mohan".In our zonal level sports we won so many medals and shields that our Rev.Ft.G.Joseph. had a doubt that we had robbed the awards from the committee.
let me come to the matter.PT master had to announce the names who had won the award.Master called the vooleyball winners including me.he announced the team captain as M.C.Mogaan.as soon as he announcedas mogaan whole school started to laugh loudly.Stage turned to comedian artists play-ground.but still now i remeber how my master thought us to become a sportsperson.I whole heartedly thank him and those training periods.
you have given my memories back and remebered my school days. thanks for those words and i hope few more may come out from u like this..continue writing and chew ..chewing gum...!

Harisha - ಹರೀಶ said...

ನನಗೂ ಶಾಲೆಯಲ್ಲಿ ನಡೆಯುತ್ತಿದ್ದ ಕಿತಾಪತಿಗಳನ್ನೆಲ್ಲ ನೆನ್ನಪಿಸಿಕೊಲ್ಲುವಂತಾಯಿತು.. ಧನ್ಯವಾದಗಳು :)