Sunday, February 24, 2008

ಲಾಲ್ ಬಾಗ್ ನಲ್ಲಿ ಸೆರೆ ಸಿಕ್ಕ surya


ತುಂಬಾ ಸಲ ಎಲ್ಲಿಗಾದ್ರೂ ಹೋಗಬೇಕೆಂದಾಗ ನಂಗೊಂದು ಪ್ರೀಪ್ಲಾನ್ ಅಂತಾನೆ ಇರೊಲ್ಲ. ಹೇಳ್ದೆ ಕೇಳ್ದೆ ಅವಾಗಿಂದವಾಗಲೇ ಹೊರಟುಬಿಡ್ತೀನಿ. ಮೊನ್ನೆ ಭಾನುವಾರ ಕೂಡ ಹಾಗೆ ಆಯ್ತು. ಪತ್ರಕರ್ತ ಗೆಳೆಯ ಗಾಣಧಾಳು ಶ್ರೀಕಂಠ ಬೆಳಿಗ್ಗೆ ನಾಲ್ಕೂವರೆ ಗಂಟೆಗೆ ಫೋನ್ ಮಾಡಿದ್ರು. ನಾನು ಏನಯ್ಯ ಇದು ಬೆಳಿಗ್ಗೆ ಬೆಳಿಗ್ಗೇನೆ ಅಂದ್ರೆ, ಬೇಗ ರೆಡಿಯಾಗಿ ಲಾಲ್ಬಾಗ್ಗೆ ಹೋಗೋಣ ಅಂತ ಖ್ಯಾತೆ ತೆಗೆದ್ರು. ನನಗೋ ಬಾಚಿ ತಬ್ಬಿಕೊಂಡ ನಿದ್ರೆ. ರೀ ಗಾಣಧಾಳು ಅವರೇ ಇಷ್ಟು ಬೇಗ ನಾನು ಬರೋಲ್ಲ. ನೀವು ಹೋಗಿಬನ್ನಿ ಅಂದ ನನ್ನ ಉತ್ತರಕ್ಕೂ ಕಾಯದೆ ಇನ್ನರ್ಧ ಗಂಟೇಲಿ ಬರ್ತೀನಿ ರೆಡಿಯಾಗಿರಿ. ನನಗೆ ನೋ ಸಬೂಬು ಅಂತ ಹೇಳಿ ಫೋನ್ ಕುಕ್ಕಿದ್ರು. ಹಾಗೆ ಕುಕ್ಕಿದ ಅರ್ಧ ಗಂಟೇಗೆ ನನ್ನ ಮನೇಲಿದ್ರು.ಬೀದಿಗಿಳಿದ್ರೆ ಬೆಂಗಳೂರಿನ ರಸ್ತೆಗಳ ತುಂಬಾ ಆಗಲೇ ಎರಡು, ಮೂರು, ನಾಲ್ಕು ಚಕ್ರಗಳು ಪೈಪೋಟಿಗಿಳಿದಿದ್ವು ಲಾಲ್ಬಾಗ್ನ ಹೊಸ್ತಿಲು ತುಳಿದಿಲ್ಲ ಆಗಲೇ ನಮಗೂ ಮೊದಲೇ ಪಕ್ಷಿಪ್ರಿಯ ಗೆಳೆಯ ನವೀನ್ ಮತ್ತು ಪತ್ರಕರ್ತ ಪ್ರಕಾಶ್ ಹೆಬ್ಬಾರ್ ಕೆಮೆರಾ, ಬೈನಾಕ್ಯುಲರ್ ಭುಜಕ್ಕೆ ತಗಲಿಸಿಕೊಂಡು ನಿಂತಿದ್ದಾರೆ.ವಾಟ್ ಅ ಸರ್ಪರೈಸ್ ಅಂತ ಅಂದುಕೊಂಡ್ವಿ.ಕೆಲವೊಮ್ಮೆ ಅನಿರೀಕ್ಷಿತವಾಗಿ ಹೀಗೆ ಗೆಳೆಯರು ಸಿಕ್ಕಾಗ ಎಂಥ ಖುಷಿ ಆಗುತ್ತೆ ಗೊತ್ತಾ!ಸುತ್ತಾಟ ಶುರುವಾಯಿತು. ರೀ ಗಾಣಧಾಳ ಇಲ್ಲಿ ವಾಕಿಂಗ್ ಮಾಡೋದಕ್ಕೆ ಬರ್ತಾರಲ್ಲ ಅವರಲ್ಲಿ ತುಂಬಾ ಜನ ಚೆನ್ನಾಗಿ ವಾಕಿಂಗ್ ಮಾಡ್ತಾರೆ ನಿಜ್ಜ. ಆಮೇಲೆ ಅಲ್ಲೇ ಪಕ್ಕದಲ್ಲಿರೋ ಎಂಟಿಆರ್ಗೋಗಿ ಚೆನ್ನಾಗಿ ತಿಂದು ಹೊಗ್ತಾರೆ ಕಣ್ರಿ. ಸಣ್ಣ ಆಗು ಅಂದ್ರೆ ಎಲ್ಲಿ ಆಗ್ತಾರೆ? ಅಂದೆ. ಅವರು ಹೌದೌದು ಅಂತ ತಲೆಯಾಡಿಸಿ ಅಲ್ಲೇನೋ ಕಾಣಿಸ್ತು ಅಂತ ಚಂಗನೆ ಜಿಗಿದು ಕೆರೆಯ ಪಕ್ಕದ ಬುಷ್ ಕಡೆ ಓಡಿದ್ರು.ಏನ್ರಿ ಅಂತ ನಾನೂ ಕುತೂಹಲದಿಂದ ಹೋದ್ರೆ, ಇಲ್ಲೊಂದು ಹಕ್ಕಿ ಹೋಯ್ತು ಕಣ್ರಿ ಅಂದ್ರು. ಕರ್ಮಕಾಂಡ... ನೀನ್ಯಾವತ್ತೂ ಹಕ್ಕೀನೆ ನೋಡಿಲ್ವಾ? ಅಂದುಕೊಂಡವನೆ ನಾನು ನನ್ನ ಸೋನಿ(ಕೆಮೆರಾ) ಇಬ್ಬರೂ ಅತ್ತ ಹೊರಟ್ವಿ.ಹಾಗೆ ಹೋಗ್ತಾ, ಕಣ್ಣಿಗೆ ಬಿದ್ದದ್ದನ್ನೆಲ್ಲ ಕ್ಲಿಕ್ಕಿಸುತ್ತಾ ಹೋದೆ. ಬೆಳಗಿನ ಬದುಕು ಎಂಥ ಫ್ರೆಷ್ ಆಗಿರುತ್ತಲ್ಲ ಅನಿಸ್ತು.ಜನ ವಿವಿಧ ಭಂಗಿಯಲ್ಲಿ ನಿಂತು ಕುಂತು ಓಡಿ ಕಸರತ್ತು ನಡೆಸ್ತಿದ್ರು. ಕೆಲವರು ಸುಮ್ಮನೆ ಗರಬಡಿದವರಂತೆ ಓಡ್ತಾ ಇದ್ರು. ಇನ್ನೂ ಕೆಲವರು ಇನ್ನಾತಕ್ಕೋ ಹುಡುಕ್ತಾ ಇದ್ರು. ಕಾಯ್ತಾ ಇದ್ರು. ಕೆಲವರಿಗೆ ಮನೇಲಿ ಎಂಥ ಕಾಟವೋ ಗೊತ್ತಿಲ್ಲ ಕಲ್ಲುಬೆಂಚಿನ ಮೇಲೆ ಕುಳಿತೆ ಗೊರಕೆ ಹೊಡೀತಿದ್ರು.ನಾನು ಮಾತ್ರ ಸೂರ್ಯ ಇನ್ನೂ ಯಾಕೆ ಹುಟ್ಟಿಲ್ಲ ಅಂತ ಚಡಪಡಿಸ್ತಾ ಇದ್ದೆ.ಅವನ ಮೊದಲ ಕಿರಣ ಭೂಮಿಗೆ ಬಿತ್ತೋ ಇಲ್ವೋ ಬಾಚಿ ಹಿಡಿದುಕೊಳ್ಳುವವನಂತೆ ಲಾಲ್ ಬಾಗ್ನ ದೊಡ್ಡ ಬಂಡೆಯ ಆ ಕಡೆ ಇರುವ ಈಚಲು ಮರದ ಕಡೆಗೆ ಓಡಿದೆ. ಗಾಣಧಾಳು ನೀವೇನ್ರಿ ಸೂರ್ಯನ್ನೇ ನೋಡಿಲ್ವಾ ಅಂತ ಗೊಣಗಿಕೊಂಡ್ರು.ಹುಟ್ಟಿದಾಗಿನಿಂದ ಸೂರ್ಯನ್ನ ನೋಡ್ತಾನೆ ಇದೀನಿ. ಆದ್ರೂ ನನಗೆ ಈ ಸೂರ್ಯ ಪ್ರತಿ ಸಲ ನೋಡಿದಾಗಲೂ ಹೊಸಬಾನೆ. ಹೊಸ ಥರಾನೆ.

ಈ ನಡುವೆ ಗೆಳೆಯ ನವೀನ್ ಮತ್ತು ಪ್ರಕಾಶ್ ಹೆಬ್ಬಾರ್ ಎಲ್ಲಿ ಕಳೆದು ಹೊದ್ರೋ ಗೊತ್ತಾಗಲೇ ಇಲ್ಲ.

ಅಲ್ಲಿ ಸಿಕ್ಕಿದ ಸೂರ್ಯನನ್ನ ಸೆರೆ ಹಿಡಿದು ತಂದು ನಿಮ್ಮ ಮುಂದೆ ಇಡುತ್ತಿದ್ದೇನೆ.

ಕಣ್ತುಂಬಿಕೊಳ್ಳಿ.