Wednesday, December 24, 2008

ಗೊತ್ತಾ ... ಸತ್ತುಹೋಗೋ ಅಷ್ಟು ನಿನ್ನ ಪ್ರೀತಿಸ್ತಿದೀನಿ ಕಣೇ...




ಹಾಯ್ ಕಣೇ
ಬೆಣ್ಣೆ ಬಣ್ಣದ ಕಾಲವಳೇ.
ಹೇಗೆ ಶುರುಮಾಡಬೇಕೋ ತೋಚುತ್ತಿಲ್ಲ. ಹೋದ ವರ್ಷವೆಲ್ಲ ನನ್ನನ್ನ ಪ್ರೀತಿಸೋ ಅಂತ ನೀನು ಬೆನ್ನು ಬಿದ್ದಿದ್ದೆ. ನೆನಪಿದೆಯಾ... ಐಯಾಮ್ ಇನ್ ಲವ್ ವಿಥ್ ಯೂ ಅಂತ ಬೋಡರ್ು ಹಿಡಿದುಕೊಂಡು ಒಂದಿನ ರೂಮಿನ ತನಕ ಬಂದುಬಿಟ್ಟಿದ್ಯಲ್ಲ! ನನಗೋ ನನ್ನ ಮನಸ್ಸಿನಲ್ಲಿರುವವಳು ನೀನಲ್ಲ ಕಣೇ ಅಂತ ಹೇಗೆ ಹೇಳಲಿ ಅನ್ನುವುದು ತೋಚದೆ ಪೆಕರು ಪೆಕರಾಗಿ ನಿಂತಿದ್ದೆ. ನೀನು ಅತ್ತೆ, ಗೋಗರದೆ, ಬೆನ್ನಿಗೆ ಗುದ್ದು ಮಾಡಿ ಪ್ಲೀಸ್ ಕಣೋ ನನಗೇನು ಕಡಿಮೆಯಾಗಿದೆ ಹೇಳು? ನಾನು ಚೆನ್ನಾಗಿಲ್ವಾ? ಓದಿಲ್ವಾ? ಅಥವಾ ನಿನ್ನ ಟೇಸ್ಟ್ಗೆ ಒಗ್ಗೊಲ್ವಾ? ಹೈಟೂ ನಿನಗಂತ ಎರಡಿಂಚು ಕಮ್ಮಿ ಇದೀನಿ ಅಷ್ಟೆ. ನಿನಗೆ ಬೇಕಂದ್ರೆ ಚೂರು ದಪ್ಪ ಆಗ್ತೀನಿ. ಸತ್ಯ ಹೇಳ್ತೀನಿ ಕೇಳು, ನೀನು ನನ್ನನ್ನ ಪ್ರೀತಿ ಮಾಡ್ತೀನಿ ಅಂತ ಹೇಳು. ಅಲ್ಲಿ ನನ್ನದೂ ಅಂತ ಏನೂ ಇರೋಲ್ಲ. ಎಲ್ಲಾ ನಿನ್ನ ಆಣತಿಯಂತೆಯೇ ನಡೆಯುತ್ತದೆ. ನಿನ್ನ ಟೇಸ್ಟ್ ನಾನೂ ಕಲಿತುಕೊಳ್ಳುತ್ತೇನೆ. ನಿನ್ನ ಬೈಗುಳ, ನಿನ್ನ ಹುಚ್ಚಾಟ, ನಿನ್ನ ಅಸಹ್ಯ ಮೌನ ಸಹಿಸಿಕೊಳ್ಳುತ್ತೇನೆ. ನಿನ್ನ ದಿನಕ್ಕೊಂದು ಫಿಲ್ಮ್ ನೋಡೋ ಹುಚ್ಚಿಗೆ ನಾನೂ ಬಲಿಯಾಗುತ್ತೇನೆ, ಆದ್ರೆ ಅದೊಂದನ್ನು ಬಿಟ್ಟು. ನಿಮಿಷಕ್ಕೆ ಹದಿನೆಂಟು ಸಲ ಎಳೆಯುತ್ತೀಯಲ್ಲ ಸಿಗರೇಟು ಅದು. ಇಲ್ಲ ಅನ್ನಬೇಡ, ನನಗೆ ನಿನ್ನ ಮುಖ ನೋಡದೇ ಇರೋದಕ್ಕೆ ಆಗ್ತಾ ಇಲ್ಲ ಕಣೋ. ನೀನು ಹೇಗೇ ಇದ್ದರೂ, ಏನೇ ಕೊರತೆ ಇದ್ದರೂ ಸಹಿಸಿಕೊಂಡು ಜೀವನ ಮಾಡ್ತೀನಿ ಅಂತೆಲ್ಲ ಅವಲತ್ತುಕೊಂಡಿದ್ದೆಯಲ್ಲ ಸೌಪಣರ್ಿಕಾ, ಕೇಳು ಈಗೀಗ ನಿನ್ನ ಮೇಲೆ ಮನಸ್ಸಾಗಿದೆ ಕಣೆ.
ನಾವ್ ಐ ಯಾಮ್ ಇನ್ ಲವ್ ವಿಥ್ ಯು.
ನಿಂಗೆ ಗೊತ್ತಾ, ಬಡ್ಡೀ ಮಗಂದು ಈ ಪ್ರೀತೀನೆ ಹಾಗೆ. ಯಾರೋ ನಿನ್ನನ್ನ ಪ್ರೀತಿಸ್ತಿದೀನಿ ಅಂದಾಗ ಇವಳಿಗೆ ಮಾಡೋದಕ್ಕೆ ಕೆಲಸ ಇಲ್ಲ ಅನಿಸಿಬಿಡುತ್ತೆ. ಅದೇ ಅವಳು ದೂರ ಆದಾಗ ಛೇ ಅವಳನ್ನ ತುಂಬಾ ಮಿಸ್ ಮಾಡ್ಕೋತಿದೀನಿ ಅನ್ನಿಸಿಬಿಡುತ್ತೆ. ರಿಯಲಿ ಐ ಮಿಸ್ ಯೂ ಕಣೆ. ಮನಸ್ಸು ನೀನಿಲ್ಲದೆ ಬಿಕೋ ಅಂತಿದೆ. ನೀನು ಬಿಸಾಕಿ ಹೋದ ಆ ಪ್ರೀತಿಯ ಬೋರ್ಡನ್ನ ಹುಡುಕಿ ಎತ್ತಿಟ್ಟುಕೊಂಡಿದ್ದೇನೆ. ಅವತ್ತೇಕೋ ಸುಮ್ಮನೆ ಕುಳಿತವನಿಗೆ ನೀನು ಯಾವ ಪರಿ ಕಾಡಿಬಿಟ್ಟೆ ಅಂದ್ರೆ ಸತ್ತು ಹೋಗೋ ಅಷ್ಟು ನಿನ್ನನ್ನ ಆಗಲೇ ನೋಡಬೇಕು ಅನಿಸಿಬಿಡ್ತ್ತು. ನಿನ್ನ ಹಾಸ್ಟೆಲ್ ಹತ್ರ ಹೋದ್ರೆ ಅವಳು ಊರಿಗೋಗಿ ತಿಂಗಳಾಯ್ತು ಅಂದ್ರು. ಯಾವತ್ತೂ ಅಳದವನು ಅಲ್ಲೇ ಒಂಟಿ ಕಲ್ಲಿನ ಮೇಲೆ ಕುಳಿತು ಅತ್ತುಬಿಟ್ಟೆ ಗೊತ್ತಾ! ಕಲ್ಲಿಗೂ ಕನಿಕರ ಬಂತೆನೋ. ಗೊತ್ತಿಲ್ಲ. ನನಗೆ ಗೊತ್ತು ನಿನಗೆ ಸಿಟ್ಟು ಬಂದಿದೆ ಅಂತ. ಆದರೇನು ಮಾಡಲಿ ಮನಸ್ಸು ನೀನೇ ಬೇಕು ಅಂತ ಹಟ ಹಿಡಿದಿರುವಾಗ. ಅವಾಗೆಲ್ಲ ನಿನ್ನ ಮುಖ ನೋಡಲಿಕ್ಕೂ ನನಗೆ ಬೇಜಾರಾಗುತ್ತಿತ್ತು ನಿಜ್ಜ, ಈಗ ಅದೇ ಮುಖದ ತಲಾಶೆಯಲ್ಲಿದ್ದೇನೆ. ನಿನ್ನ ನಗು ನೋಡಬೇಕೆನಿಸಿದೆ, ಮಾತು ಕೇಳಬೇಕೆನಿಸಿದೆ, ಮೌನಕ್ಕೆ ಸಾಥಿಯಾಗಬೇಕೆನಿಸಿದೆ, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನಿನ್ನಿಷ್ಟದ ಹಾಡನ್ನ ನನ್ನೆದೆಯೊಳಗೆ ಗುನುಗಿಕೊಳ್ಳಬೇಕೆನಿಸಿದೆ. ಎಲ್ಲಿಹೋದೆ ಸೌಪಣರ್ಿಕಾ?
ನಿಜ್ಜ ಹೇಳು ಅಷ್ಟು ಹೇಟ್ ಮಾಡ್ತೀಯ ನನ್ನ?
ಹೊಸ ವರ್ಷದ ಬೆಳ್ಳಂಬೆಳಿಗ್ಗೆ ನಿನಗೆ ಐ ಲವ್ ಯೂ ಅಂತ ಹೇಳಲಿಕ್ಕೆ ಕಾದು ಕುಳಿತಿದೀನಿ. ಎದೆಯಲ್ಲಿ ಅದೆಂಥದೋ ಪುಳಕವಿದೆ. ಆಸೆ ಇದೆ. ಅದಮ್ಯ ಉತ್ಸಾಹವಿದೆ. ಮೂರು ಜನ್ಮಕ್ಕಾಗುವಷ್ಟು ಪ್ರೀತಿ ಇದೆ. ಜೊತೆಗೆ ಭಯವೂ ಇದೆ. ಅವತ್ತು ಕೂತು ಮಾತಾಡಿಕೊಳ್ಳೋದೆ ಬೇಡ. ಜಸ್ಟ್ ಸಿಗು ಸಾಕು. ತಾಳಿಕಟ್ಟಿಬಿಡ್ತೀನಿ. ಅವತ್ತಿಂದ ನೀನು ಸಿಫರ್್ ನನ್ನವಳು. ಪಟ್ಟದ ರಾಣಿ ಅಂತಾರಲ್ಲ ಹಾಗೆ ನೋಡಿಕೊಳ್ತೀನಿ . ನಿನ್ನ ರವಿಕೆಗೆ ಹುಕ್ ಹಾಕುವುದರಿಂದ ಹಿಡಿದು ಮುಡಿಗೆ ಮಲ್ಲಿಗೆ ಮುಡಿಸುವುದರ ತನಕ ಜವಾಬ್ದಾರಿ ನನ್ನದು. ತಪ್ಪು ನನ್ನಿಂದಾಗಿದೆ ನಿಜ್ಜ. ಹಾಗಂತ ಕಾಡಬೇಡ, ಸತಾಯಿಸಬೇಡ, ಕೊಲ್ಲಬೇಡ. ಜಸ್ಟ್ ಕ್ಷಮಿಸಿಬಿಡೆ ನನ್ನ.
ಒಂದನೇ ತಾರೀಖು ಬೆಳಿಗ್ಗೆ ಲಾಲ್ ಬಾಗ್ನ ಎಡ ತಿರುವಿನಲ್ಲಿರುವ ಪುಟ್ಟ ಹೂವಿನ ಗಿಡದ ಹತ್ತಿರ ಕಾಯುತ್ತಾ ನಿಂತಿರುತ್ತೇನೆ. ಅವತ್ತಿಂದ ಇಬ್ಬರೂ ಬದುಕೋದಾದರೆ ಒಟ್ಟಿಗೆ ಸತ್ತರೂ ಒಟ್ಟಿಗೆ.
ಬರ್ತೀಯಲ್ಲ ...
ಬಾರದಿದ್ದರೆ ನಾ ಬದುಕೊಲ್ಲ ಅನ್ನೋದು ನಿನಗೆ ಗೊತ್ತಿರಲಿ.

Sunday, December 21, 2008

ಗುಡ್ morning ಲಾಲ್ಬಾಗ್











ಒನ್ಸ್ ಎಗೇನ್ ಲಾಲ್ಬಾಗ್ನ ಕದ ತಟ್ಟಿ ಬಂದಿದ್ದೇನೆ. ಅದೂ ಬೆಳ್ಳಂಬೆಳಿಗ್ಗೇನೆ!
ಅದೇಕೋ ಗೊತ್ತಿಲ್ಲ ಈ ಲಾಲ್ಬಾಗ್ಗೂ ನನಗೂ ಒಂಥರಾ ಬಿಟ್ಟೂ ಬಿಡದ ಸಂಬಂಧ. ನಾನು ಬೆಂಗಳೂರಿಗೆ ಕಾಲಿಟ್ಟ ಗಳಿಗೆಯಿಂದಲೂ ಅದರ ಹೊಸ್ತಿಲು ತುಳಿಯುತ್ತಲೇ ಬಂದಿದ್ದೇನೆ. ಅದರ ಅಂಗಳದಲ್ಲಿ ಒಬ್ಬಂಟಿಯಾಗಿ ಅಲೆದಾಡಿದ್ದೇನೆ. ಅವಳ ಮಾತಿಗೆ ಕಿವಿ ಕೊಟ್ಟು ಸುಮ್ಮನೇ ಮೌನಕ್ಕೆ ಬಿದ್ದವನಂತೆ ನಡೆದಿದ್ದೇನೆ. ಸಂಜೆಗಳಿಗೆ ಸಾಕ್ಷಿಯಾಗಿದ್ದೇನೆ. ಲಾಲ್ ಬಾಗ್ ನನ್ನ ಭಾನುವಾರದ ಪ್ರೀತಿಯ ಡೆಸ್ಟಿನೇಷನ್.
ಇಂಥ ತಾಣಕ್ಕೆ ಭಾನುವಾರ ಬೆಳಿಗ್ಗೆ ಐದುಕಾಲಿಗೆಲ್ಲ ತಲಪಿಬಿಟ್ಟಿದ್ದೆ. ಇನ್ನೂ ಮಸುಕು ಮಸುಕು ಕತ್ತಲು. ಇಡೀ ಲಾಲ್ ಬಾಗ್ ಫೇರ್ ಅಂಡ್ ಲವ್ಲಿ ಹಚ್ಚಿಕೊಂಡ ಹುಡುಗಿ ಅದರ ಮೇಲೆ ತುಸು ಜಾಸ್ತೀನೆ ಪಾಂಡ್ಸ್ ಪೌಡರ್ ಹಚ್ಚಿಕೊಳ್ತಾಳಲ್ಲ ಹಂಗಿತ್ತು. ಎದುರಿಗಿದ್ದರೂ ಯಾರೂ ಕಾಣರು. ಥಂಡ ಥಂಡ ಕೂಲ್ ಕೂಲ್. ಸುಂಯ್ ಅನ್ನುವ ಗಾಳಿ. ಅರೆ ಲಾಲ್ ಬಾಗ್ ಎಂಬ ಬ್ಯೂಟಿ ಬೆಳಿಗ್ಗೆ ಬೆಳಿಗ್ಗೆ ಇಷ್ಟು ಚಂದಕ್ಕೆ ಕಾಣಿಸುತ್ತಾಳಾ? ನೋಡೇ ಇರಲಿಲ್ಲವಲ್ಲ ಅನ್ನಿಸಿಬಿಟ್ಟಿತು. ಎಷ್ಟೋ ಸಲ ನಾನು ಗೆಳೆಯರು ಸೂರ್ಯ ಹುಟ್ಟುವ ಮೊದಲೇ ಅಲ್ಲಿಗೆ ಹೋಗಿದ್ದಿದೆ. ಆದ್ರೆ ಇವತ್ಯಾಕೋ ಲಾಲ್ಬಾಗ್ ಥರ ಥರ ಹೊಸ ಥರ...
ಸುಮ್ಮನೆ ಕೆಮೆರಾ ಹಿಡಿದುಕೊಂಡು ಸುತ್ತಿಬಿಟ್ಟೆ. ಎಂಥದೋ ಖುಷಿ. ಗಂಟೆ ಆರಾಯ್ತು, ಏಳಾಯ್ತು, ಎಂಟಾಯ್ತು ಸೂರ್ಯನ ದರ್ಶನವೇ ಇಲ್ಲ. ಅರೆ ಎಲ್ಲಿ ಹೋದ ಈ ಬಿಸ್ಸಿ ಬಿಸ್ಸಿ ಸೂರ್ಯ?
ಜಾಗಿಂಗ್ಗೆ ಬಂದವರು ಫ್ರೆಶ್ ಉಸಿರಿಗಾಗಿ ಏದುಸಿರು ಬಿಡುತ್ತಾ ಓಡುತ್ತಿದ್ರು, ಕೆಲವರು ಅಲ್ಲೇ ಮರದ ಅಡಿಯಲ್ಲಿ ತಪಸ್ಸಿಗೆ ಕುಳಿತಂತೆ ಏಕಾಗ್ರಚಿತ್ತದಿಂದ ಕುಳಿತಿದ್ರು, ಮಕ್ಕಳು ಮೀನು ಗುಳಂ ಮಾಡುತ್ತಿದ್ದ ಪೆಲಿಕಾನ್ ಪಕ್ಷಿಗಳನ್ನು ಕಂಡು ಹುರ್ರೇ ಅಂತಿದ್ವು, ಸೊಂಟದ ಕಿವಿಗೆ ಐಪಾಡ್ ಸಿಕ್ಕಿಸಿಕೊಂಡು ಕ್ಯಾಟ್ವಾಕ್ ಪ್ರಾಕ್ಟೀಸ್ ಮಾಡುತ್ತಿದ್ದಂತಿದ್ದ ಲಲನೆಯರು, ತಿಂದೂ ತಿಂದೂ ಮೈ ಬೆಳೆಸಿಕೊಂಡು ಅದನ್ನ ಕರಗಿಸಿಲು ಕಷ್ಟ ಪಡುತ್ತಿದ್ದವರು, ದಪ್ಪ ಆಗಿಬಿಡುತ್ತಿನೇನೋ ಅನ್ನುವ ಆತಂಕ್ಕಕೆ ಬಿದ್ದು ಇನ್ನೂ ನಾಲ್ಕು ಹೆಜ್ಜೆ ಹೆಚ್ಚಿಗೆ ಓಡೋಣ ಅಂತ ಓಡುತ್ತಿದ್ದ ಹುಡುಗರು... ಪಕ್ಷಿ ಹುಡುಕುತ್ತ ಕೆಮೆರಾ ಕಣ್ಣಿಗೆ ಕಣ್ಣು ಕೀಲಿಸಿ ಕುಳಿತಿದ್ದ ಫೋಟೋಗ್ರಾಫರ್ಗಳು, ಯಾವ ಕಡೆಯಿಂದ ನೋಡಿದರೂ ಲಾಲ್ ಬಾಗ್ ಮಾಯಾಲೋಕದಂತಿತ್ತು. ಮಂಜು ಮುಸುಕಿದ ಮುಂಜಾವಿನಲ್ಲಿ ಲಾಲ್ ಬಾಗ್ ಎಂಬ ಸ್ನಿಗ್ಧ ಸುಂದರಿಗೆ ಜಸ್ಟ್ ಮನ ಸೋತುಬಿಟ್ಟಿದ್ದೆ.
ಒಂಬತ್ತರ ತನಕ ಅಲ್ಲೇ ಸುತ್ತಾಡಿದ್ರು ಸೂರ್ಯ ಬರುವ ಸೂಚನೆಗಳೇ ಇರಲಿಲ್ಲ. ಭಯೋತ್ಪಾದನೆ ವಿರುದ್ಧ ಒಂದು ಸಣ್ಣ ತಂಡ ಘೋಷಣೆ ಕೂಗುತ್ತಾ ಸಾಗುತ್ತಿತ್ತು. ಪಕದಲ್ಲೇ ಕಿವಿಗಿಂಪಾದ ಸಂಗೀತ. ಜೈ ಭಾರತ ಜನನಿಯ ತನುಜಾತೆ ಜಯಹೇ ಕನರ್ಾಟಕ ಮಾತೆ... ಗುಲಾಬಿ ಪಾಕರ್್ಗೆ ಹೋದ್ರೆ ಅಲ್ಲಿ ಗುಲಾಬಿ ಗಿಡಗಳು ಇನ್ನೂ ಕಸಿ ಮಾಡಿಸಿಕೊಂಡು ಕುಳಿತಿದ್ದವು. ಯಾರೋ ಒಬ್ಬರು ಪುಣ್ಯಾತ್ಮರು ಚೀಲದ ತುಂಬ ಸಕ್ಕರೆ,ರವೆ, ಅಕ್ಕಿ ತುಂಬಿಕೊಂಡು ಇರುವೆಗಳಿಗೆ, ಪಾರಿವಾಳಗಳಿಗೆ ಹಾಕುತ್ತಾ ಸಾಗುತ್ತಿದ್ದರು. ಬದುಕನ್ನು ಸಾರ್ಥಕ್ಯಗೊಳಿಸಿಕೊಳ್ಳಲಿಕ್ಕೆ ಎಷ್ಟೊಂದು ಮಾರ್ಗಗಳು ಅಲ್ಲವೇ! ಎದುರಿಗೆ ಸಿಕ್ಕ ಹುಡುಗಿ ಯಾಕೋ ನೋಡಿ ನಕ್ಕಳು. ಪದೇ ಪದೇ ತಿರುಗಿ ತಿರುಗಿ ನೋಡುತ್ತಿದ್ದಳು. ಅವಳನ್ನು ಎಲ್ಲಿಯಾದರೂ ನೋಡಿದ್ದೇನಾ? ಅಥವಾ ಅವಳು ನನ್ನನ್ನ ನೋಡಿದ್ದಳಾ? ಗೊತ್ತಿಲ್ಲ.
ಹೊಟ್ಟೆ ಚುರುಗುಟ್ಟುತ್ತಿತ್ತು. ಅಲ್ಲಿಂದ ವಿದ್ಯಾಥರ್ಿ ಭವನಕ್ಕೆ ಹೋಗಿ ದೋಸೆ ತಿಂದು ಮನೆಗೆ ಹೋದ್ರೆ ಫುಲ್ ನಿದ್ರೆ.
ಮಧ್ಯಾಹ್ನ ಎದ್ದವನ ಮನದ ತುಂಬ ಮುಂಜಾವಿನದೇ ಫ್ರೆಶ್ನೆಸ್.
ಬಿಡುವಿದ್ರೆ ಡಿಸೆಂಬರ್ ಮುಗಿಯೋ ಮುನ್ನ ಬೆಳಿಗ್ಗೆ ಎದ್ದು ಒಂದಿನ ಲಾಲ್ಬಾಗ್ ಕದ ತಟ್ಟಿಬನ್ನಿ.
ಅದರ ಮಜಾನೇ ಬೇರೆ.