Friday, August 22, 2008

ಆರು ಹಾರ್ರರ್ ಸ್ಟೋರೀಸ್


1.

ಊರಿಗೆ ಆರು ತಿಂಗಳಾದ ಮೇಲೆ ಹೊರಟಿರ್ತೀರಿ. ಇರೋದೊಂದೇ ಬಸ್ ಆ ರೂಟ್ನಲ್ಲಿ. ಹೋಗಲೋ ಬೇಡವೋ ಅಂತ ಯೋಚಿಸಿ, ಸರಿ ಯಾರಾದ್ರೂ ಊರಿನವರು ಸಿಗಬಹುದು ಅಂತ ಬಸ್ ಹತ್ತುತ್ತೀರಿ. ಆದ್ರೆ ಇಳಿಯುವಾಗ ನಿಮ್ಮನ್ನು ಬಿಟ್ಟು ಯಾರೊಬ್ಬರೂ ಬಸ್ನಿಂದ ಇಳಿಯುವುದಿಲ್ಲ. ಆಗಲೇ ಎದೆಯಲ್ಲಿ ನಡುಕ ಶುರುವಾಗುತ್ತದೆ. ಮುಖ್ಯ ದಾರಿಯಿಂದ ಒಂದು ಕಿಲೋಮೀಟರ್ ಒಳಕ್ಕೆ ಹೋದ್ರೆ ಮಾತ್ರ ನಿಮ್ಮ ಊರು ಸಿಗೋದು. ನೋ ಸ್ಟ್ರೀಟ್ ಲೈಟ್. ಎರಡೂ ಕಡೆ ಕರಿ ಕಂಬಳಿ ಹೊದ್ದುಕೊಂಡು ಅವಿತು ಕುಳಿತಂಥ ಜಾಜಿ ಮುಳ್ಳಿನ ಪೊದೆಗಳು. ಅದನ್ನಾವರಿಸಿಕೊಂಡ ಕಗ್ಗತ್ತಲು. ಜೀರುಂಡೆಯ ಗುಂಯ್ ಗುಂಯ್. ಮೈ ಸೋಕುವ ತಣ್ಣನೆಯ ಗಾಳಿ. ಯಾರಾದ್ರೂ ಸಿಕ್ಕಾರೇನೋ ಅಂತ ಎರಡು ನಿಮಿಷ ಕಾದು ಕಾಲೆಳೆದುಕೊಂಡು ಒಬ್ಬರೇ ಹೊರಡ್ತೀರಿ. ಅಜ್ಜಿ ಹೇಳಿದ್ದ ಕೊಳ್ಳಿ ದೆವ್ವ ನೆನಪಾಗುತ್ತೆ. ಹುಣಸೇ ಮರದಲ್ಲಿ ಉಲ್ಟಾ ನೇತಾಡೋ ದೆವ್ವಗಳು ನೆನಪಾಗ್ತವೆ. ಗೊಬ್ಬರ ಸಿಗಲಿಲ್ಲ ಅಂತ ಆರು ತಿಂಗಳ ಹಿಂದೆ ನೇಣುಹಾಕಿಕೊಂಡ ಶಾಂತಪ್ಪ ನೆನಪಾಗ್ತಾನೆ. ದೇವರೇ ಹೇಗಪ್ಪಾ ಹೋಗೋದು? ಅಂದುಕೊಳ್ಳುವ ಹೊತ್ತಿಗೆ ಯಾರೋ ಹಿಂದಿನಿಂದ ನಿಮ್ಮ ಹೆಸರಿಡಿದು ಕರೆದಂತಾಗುತ್ತದೆ. ಗಾಬರಿಯಿಂದ ತಿರುಗಿ ನೋಡಿದರೆ ಶ್ರೀನಿವಾಸ. ಹಳೇ ಫ್ರೆಂಡ್. ಅರೇ ನೀನೇನೋ? ಎಷ್ಟು ದಿನ ಆಯ್ತು ನಿನ್ನನ್ನ ನೋಡಿ. ಬಸ್ ಲೇಟ್ ಆಯ್ತಾ? ಒಬ್ಬನೇ ಹೋಗೋದಕ್ಕೆ ಭಯ ಅನಿಸಿರಬೇಕಲ್ವಾ? ನಾನಿದೀನಲ್ಲ ಜೊತೆಗೆ, ಬಾ ಬಾ. ಹೇಗಿದೀಯಾ? ಸಿಟಿಗೆ ಹೋದವ್ನು ನಮ್ಮೂರ್ಗೆ ಬರೋದೆ ಬಿಟ್ಟಬಿಟ್ಟಲ್ಲಪ್ಪ! ನಾನೂ ಪಕ್ಕದೂರಿಗೆ ಹೋಗಿದ್ದೆ ಹೊರಡೋದು ಲೇಟಾಗೋಯ್ತು. ಆಮೇಲೆ ಏನ್ ಸಮಾಚಾರ? ಅಂತ ನಿಮ್ಮ ಪಕ್ಕದಲ್ಲೇ ಭುಜಕ್ಕೆ ಭುಜ ತಾಕಿಸಿಕೊಂಡು ನಡೆಯತೊಡಗುತ್ತಾನೆ. ನಿಮಗೆ ಹೋದ ಜೀವ ಬಂದಂತಾಗುತ್ತದೆ. ಕೊನೆಗೂ ಒಬ್ಬ ಗೆಳೆಯನನ್ನ ಕಷ್ಟ ಕಾಲಕ್ಕೆ ಕಳಿಸ್ದಲ್ಲ ಥ್ಯಾಂಕ್ ಗಾಡ್ ಅಂದ್ಕೊಳ್ತೀರಿ.ಹಾಗೆ ಮಾತಾಡ್ತಾ ಮಾತಾಡ್ತಾ ಮಾತಾಡ್ತಾ ಊರು ಸಮೀಪಿಸುತ್ತದೆ. ನಿಮ್ಮ ಮನೆಯಿಂದ ಎರಡು ಗಲ್ಲಿ ದಾಟಿದರೆ ಶ್ರೀನಿವಾಸನ ಮನೆ, ಹೌದಾ? ನಿಮ್ಮ ಮನೆ ಹತ್ತಿರ ಆಗ್ತಿದ್ದ ಹಾಗೇ ನಿಮ್ಮನ್ನು ದಾಟಿ ಆಯ್ತಪ್ಪ ಸಿಕ್ತೀನಿ. ನೆಕ್ಸ್ಟ್ ಟೈಮ್ ಬಂದಾಗ ಅದೇ ದಾರಿಯಲ್ಲಿ ಕಾಯ್ತಾ ಇರ್ತೀನಿ. ಮರೀಬೇಡ ಅಂತ ಕೈ ಬೀಸಿ ಹೊರಟುಬಿಡ್ತಾನೆ. ನೀವು ಗುಗ್ಗು ಥರ ಓಕೆ ಬಾಯ್ ಅಂತೀರಿ.ಮನೆಗೆ ಹೋದ್ರೆ ಅಮ್ಮ, ಇಷ್ಟೊತ್ತಲ್ಲಿ ಯಾಕೋ ಬರೋದಕ್ಕೆ ಹೋದೆ. ಜನ ಸಂಜೆ ಆದಮೇಲೆ ತಿರುಗಾಡೋದಕ್ಕೆ ಹೆದರ್ತಾರೆ. ಬೆಳಿಗ್ಗೆ ಬಂದಿದ್ರೂ ಆಗ್ತಿತ್ತಪ್ಪ. ಏನು ಅಂತ ಕೆಲಸ ಇಲ್ಲಿ ಕಡಿದುಗುಡ್ಡೆ ಹಾಕೋದಿತ್ತು ಅಂತಾರೆ.ಇಲ್ಲಮ್ಮ ಒಬ್ಬನೇ ಬರಲಿಲ್ಲ. ಜೊತೇಲಿ ನನ್ನ ಹಳೇ ಗೆಳೆಯ ಶ್ರೀನಿವಾಸ ಇದ್ನಲ್ಲ ಅವನು ಸಿಕ್ಕಿದ್ದ. ಜೊತೇಲೇ ಬಂದ್ವಿ!ಶ್ರೀನಿವಾಸಾನಾ?ಯಾಕಮ್ಮ?ಅವನು ಸತ್ತು ಎರಡು ತಿಂಗಳಾಯ್ತಲ್ಲೋ?ಈ ಮಾತು ಕೇಳಿದ ಮೇಲಿನ ನಿಮ್ಮ ಸ್ಥಿತಿ ನನ್ನ ಊಹೆಗೂ ನಿಲುಕುತ್ತಿಲ್ಲ.

2.

ಇಡೀ ಜಗತ್ತು ನಿನರ್ಾಮವಾಗಿಹೋಗಿರುತ್ತೆ. ಆದ್ರೆ ಅದು ಹೇಗೋ ಒಬ್ಬನೇ ಒಬ್ಬ ತಪ್ಪಿಸಿಕೊಂಡು ಕದವಿಕ್ಕಿಕೊಂಡು ಕುಳಿತುಬಿಡುತ್ತಾನೆ. ಅವನಿಗೂ ಗೊತ್ತು ಈ ಜಗತ್ತಿನಲ್ಲಿ ನನ್ನೊಬ್ಬನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಅಂತ. ಅಂತ ಸಮಯದಲ್ಲಿ ನಡುರಾತ್ರಿಯಲ್ಲಿ ಯಾರೋ ಬಾಗಿಲು ತಟ್ಟಿದರೇ?ಇದಕ್ಕಿಂತ ಹಾರ್ರರ್ ಸ್ಟೋರಿ ಇದೆಯಾ?

3.

ಯಾವುದೋ ತಮಿಳು ಫಿಲ್ಮ್ನಲ್ಲಿ ನೋಡಿದ್ದು.ಒಬ್ಬ ರಾತ್ರಿ ಕಾಡಿನಲ್ಲಿ ಹೋಗ್ತಿರ್ತಾನೆ. ಇದ್ದಕ್ಕಿದ್ದಂತೆ ಬೀಡಿ ಸೇದಬೇಕು ಅನ್ನೋ ಆಸೆಯಾಗುತ್ತೆ. ಆದ್ರೆ ಬೀಡಿ ಇದೆ ಬೆಂಕಿಪೊಟ್ಟಣ ಇಲ್ಲ. ಕೊರೆವ ಚಳಿ ಬೇರೆ. ಏನ್ ಮಾಡೋದು?ಹಾಗಂದುಕೊಂಡು ಎರಡು ಹೆಜ್ಜೆ ಇಟ್ಟಿಲ್ಲ ಎದುರುಗಡೆಯಿಂದ ಒಬ್ಬ ಬರ್ತಿದ್ದಾನೆ. ಆಹಾ ಒಳ್ಳೇದೇ ಆಯ್ತು ಅಂದುಕೊಂಡು.ಅಣ್ಣ ಬೆಂಕಿಪೊಟ್ಟಣ ಇದೆಯಾ?ಇದೆ. ಈತ ಅವನ ಹತ್ತಿರಕ್ಕೆ ಹೋಗಿ ನಿಲ್ಲುತ್ತಾನೆ. ಆ ವ್ಯಕ್ತಿಯೇ ಬೀಡಿಗೆ ಬೆಂಕಿ ಹಚ್ಚುತ್ತದೆ. ಹಾಗೆ ಹಚ್ಚುವಾಗ ಕೈ ಜಾರಿ ಬೆಂಕಿಪೊಟ್ಟಣ ವ್ಯಕ್ತಿಯ ಕಾಲ ಕೆಳಕ್ಕೆ ಬಿದ್ದುಹೋಗುತ್ತದೆ.ಈತ ಬೆಂಕಿಪೊಟ್ಟಣ ಎತ್ತಿಕೊಳ್ಳೋದಕ್ಕೆ ಅಂತ ಬಗ್ಗುತ್ತಾನೆ ಅಷ್ಟೆ.ಎದುರಿಗೆ ನಿಂತ ವ್ಯಕ್ತಿಯ ಕಾಲೇ ಇರುವುದಿಲ್ಲ.

4.

ನಮ್ಮೂರಿನಲ್ಲಿ ಕೋಟೆ ಮೈದಾನ ಅಂತ ವಿಶಾಲವಾದ ದಿಬ್ಬ ಇತ್ತು. ಅಲ್ಲಿ ಹಳೇ ಬಾವಿ, ಹಳೇ ಕೋಟೆ, ಹಳೇ ಹಳೇ ಅನ್ನಬಹುದಾದ ಎಂಥೆಂತದೋ ಕಲ್ಲುಗಳು. ಇನ್ನೂ ಏನೇನೋ ಇದ್ದವು. ಜೊತೆಗೆ ಅಲ್ಲೇ ಅದರ ಪಕ್ಕದಲ್ಲೇ ಊರಿನ ಸ್ಮಶಾನ.ನಮ್ಮೂರಿನಲ್ಲಿ ಕುಖ್ಯಾತ ಕಳ್ಳ ಎಂದೇ ಪ್ರಖ್ಯಾತವಾಗಿದ್ದ ಬಸವ ಅನ್ನೋನು ರಾತ್ರಿ ಕೆಲಸ ಮುಗಿಸಿ ಸರಿಹೊತ್ತಿನಲ್ಲಿ ಹಿಂತಿರುಗ್ತಿದ್ದದ್ದು ಎಲ್ಲರಿಗೂ ಗೊತ್ತಿತ್ತು.ಅವತ್ತೂ ಹಾಗೇ ಬರ್ತಾ ಇದ್ದನಂತೆ.ಇನ್ನೇನು ತನ್ನ ಮನೆ ಹೊಕ್ಕಬೇಕು ಅನ್ನುವಷ್ಟರಲ್ಲಿ ಯಾರೋ ಶಿಳ್ಳೆ ಹಾಕಿ ಕರೆದಿದ್ದಾರೆ. ತಿರುಗಿ ನೋಡಿದ್ರೆ ಪೊಲೀಸು.ಅಯ್ಯಯ್ಯಪ್ಪೋ ಅಂತ ಮನೆಗೂ ಹೋಗದೇ ಎದ್ದೆನೋ ಬಿದ್ದೆನೋ ಅಂತ ಓಡಿದ್ದಾನೆ.ಹಾಗೆ ಓಡಿ ಓಡಿ ಸುಸ್ತಾಗಿ ಊರ ಹೊರಗಿನ ಅದೇ ಕೋಟೆ ಬಾವಿಯ ಹತ್ತಿರಕ್ಕೆ ಬಂದು ಬಾವಿ ಹಿಂದೆ ಬಚ್ಚಿಟ್ಟುಕೊಂಡಿದ್ದಾನೆ. ಆಮೇಲೆ ಎರಡು ನಿಮಿಷ ಬಿಟ್ಟು ಮೆಲ್ಲಗೆ ಎದ್ದು ನೋಡಿದ್ರೆ ಯಾರೂ ಇಲ್ಲ.ನನ್ನ ಜೊತೆ ಓಡೋದಕ್ಕೆ ಅವನಿಗೆಲ್ಲಿ ಸಾಧ್ಯ ಅಂತಂದುಕೊಂಡು ಮೆಲ್ಲಗೆ ಮತ್ತೆ ಮನೆ ಕಡೆ ಹೆಜ್ಜೆ ಹಾಕಿದ್ದಾನೆ.ಅಲ್ಲಿ ನೋಡಿದ್ರೆ ಮನೆಯ ಜಗಲಿಯ ಮೇಲೆ ಪೊಲೀಸ್ ಬೀಡಿ ಸೇದ್ತಾ ಕುಳಿತಿದ್ದಾನೆ. ಯಾಕೋ ಟೈಮ್ ಸರಿಗಿಲ್ಲ ಅಂದುಕೊಂಡು ಇವತ್ತು ಆ ಕೋಟೆ ಮೈದಾನದಲ್ಲೇ ಬೆಳಗಿನ ಜಾವದ ತನಕ ಕಾಲ ಕಳೆದರಾಯ್ತು ಅಂತ ವಾಪಸ್ ಹೋಗಿದ್ದಾನೆ.ಅಲ್ಲಿ ಹೋಗಿ ಇನ್ನೂ ಐದು ನಿಮಿಷ ಆಗಲಿಲ್ಲ ಯಾರೋ ಭುಜದ ಮೇಲೆ ಹಿಂದಿನಿಂದ ಕೈ ಇಟ್ಟಿದ್ದಾರೆ.ಅದೇ ಪೊಲೀಸು. ಅಣ್ಣ ತಪ್ಪಾಯ್ತು ಬಿಟ್ಟುಬಿಡು. ಇನ್ನೊಂದ್ ಸಾರಿ ಕಳ್ಳತನ ಮಾಡೋಲ್ಲ ಅಂತ ಗೋಗರೆದಿದ್ದಾನೆ ಬಸವ. ಪೊಲೀಸ್ದು ಮಾತೇ ಇಲ್ಲ.ಇನ್ನೇನು ಇವನು ಅಲ್ಲಿಂದ ಕದಲಬೇಕು.ಅಷ್ಟರಲ್ಲಿ ಹೆದರ್ಕೊಂಡ್ ಬಿಟ್ಯಾ. ನಾನು ನಿಜವಾದ ಪೊಲೀಸ್ ಅಲ್ಲ. ನಾಟಕ ಮಾಡ್ತಿದ್ದನಲ್ಲ ರುದ್ರಣ್ಣ ಅವನು. ನನಗೆ ಪೊಲೀಸ್ ಆಗಬೇಕು ಅಂತ ಬಹಳ ಆಸೆ ಇತ್ತು. ಆದ್ರೆ ಏನ್ ಮಾಡೋದು ಅದೆಂಥದೋ ಜ್ವರ ಬಂದು ಸತ್ತೋಗ್ಬಿಟ್ಟೆ ಅಂದಿದ್ದಾನೆ.ಬಸವ ಆಮೇಲೆ ಒಂದು ವಾರ ಹಾಸಿಗೆ ಬಿಟ್ಟು ಮೇಲೇಳಲೇ ಇಲ್ಲ.

5.

ಹನ್ನೆರಡು ಗಂಟೆ ರಾತ್ರಿ.ನಾನು ಮತ್ತು ನೀನು ಇಬ್ಬರೂ ಒಂದು ರೂಮಿನಲ್ಲಿ ಮಾತಾಡ್ತಾ ಕುಳಿತಿರ್ತೀವಿ.ಸಡನ್ನಾಗಿ ಲ್ಯಾಂಡ್ಲೈನ್ ಬಡಕೊಳ್ಳುತ್ತೆ. ನೀನು ಒಂದ್ ನಿಮಿಷ ಇರು ಬಂದೆ ಅಂತ ಎದ್ದು ಹೋಗಿ ಫೋನ್ ಅಟೆಂಡ್ ಮಾಡ್ತೀಯ.ಆದ್ರೆ ಆ ಕಡೆಯಿಂದ ಫೋನ್ ಮಾಡಿದೋನು ನಾನು ಕಳೆದ ರಾತ್ರಿಯೇ ಸತ್ತುಹೋಗಿದೀನಿ ಅಂತ ನಿನಗೆ ತಿಳಿಸ್ತಾನೆ.

ನೀನು ಮತ್ತೆ ರೂಮಿಗೆ ಬರ್ತೀಯಾ?

6.

ಅವತ್ತು ಕರೆಂಟ್ ಹೋಗಿರುತ್ತೆ. ರೂಮಿನ ತುಂಬಾ ಬರೀ ಕತ್ತಲು. ಬರೀಬೇಕು ಅಂತ ಪೆನ್ನು ಹಿಡಿದು ಕುಳಿತಿದ್ದ ನೀವು ಛೇ ಅಂತ ಕೆಇಬಿಯವರನ್ನ ಬೈಯ್ಕೊಂಡ್ ಬೆಂಕಿ ಪೊಟ್ಟಣ ಹುಡುಕೋದಕ್ಕೆ ಶುರು ಮಾಡ್ತೀರಾ.ಹಾಗೆ ಹುಡುಕ್ತಾ ಇರುವಾಗಲೇ ಬೆಂಕಿ ಪೊಟ್ಟಣವೊಂದನ್ನ ನಿಮ್ಮ ಕೈಗೆ ಯಾರೋ ಕೊಟ್ಟಂಗಾಗುತ್ತೆ.ಮನೆಯಲ್ಲಿ ಇದ್ದೋರು ನೀವೊಬ್ರೇ ಅಲ್ವಾ?ಹಾಗಾದ್ರೆ ಬೆಂಕಿ ಪೊಟ್ಟಣ ಕೊಟ್ಟೋರು?

Thursday, August 21, 2008

ಒಮ್ಮೆ ಬಂದು ಹೋಗೆ!ನಾನು ಸುಮ್ಮನಿದ್ದವ

ಅಂದ್ರೆ, ಕೇವಲ ಸುಮ್ಮನೇ!


ಆ ಎತ್ತರದ ಬೆಟ್ಟಗಳಲ್ಲಿ

ಅದ ಸುತ್ತುವ ನದಿಗಳಲ್ಲಿ

ಗಿರಗಿರನೆ ಸುತ್ತಾಡಿಕೊಂಡು

ಸುಖಾ ಸುಮ್ಮನೆ ಬದುಕಿದ್ದವ


ಮಗನಿಗೆ ಮೀಸೆ ಬಂತು ಅಂತ

ಹೆಮ್ಮೆ ಪಡ್ತಿದ್ದ ಅವ್ವ

ಮೊಲೆ ಬಂದ ಹೆಣ್ಣು ಮಕ್ಕಳು ಮಾತಾಡಿಸಿದ್ರೆ

ಉರಿದು ಬೀಳುತ್ತಿದ್ದಳು

ಹುಡುಗ ಚೆನ್ನಾಗವನೇ ಕಣ್ರೆ ಬಿನ್ನಾಣಗಿತ್ತೀರಾ

ಹಾರಿಸ್ಕೊಂಡು ಹೋಗ್ಗೀಗ್ ಬಿಟ್ಟಿರಾ?

ಊರ ಬಾಗಿಲಿಗೆ ತೋರಣ ಕಟ್ಟುಬಿಟ್ಟೇನು ಅಂತಿದ್ಳು.


ನಾನೋ ಮಹಾ ಯಬರ

ಹುಡುಗೀರ ಮೊಲೆ

ಕಂಡೋರ ಮನೆ ತೊಲೆ

ಯಾವುದಕ್ಕೂ ಕಣ್ಣಾಕದವ
***


ನಾನು ಸುಮ್ಮನಿದ್ದವ

ಅಂದ್ರೆ, ಕೇವಲ ಸುಮ್ಮನೇ!


ಅಂತ ಸುಮ್ಮನಿದ್ದ ಒಂದಿನ

ಯಾರೋ ಸುಳಿದಂಗಾಯ್ತು

ಕೂಗಿದಂಗಾಯ್ತು

ಕೈ ಹಿಡಿದು ಜಗ್ಗಿದಂಗಾಯ್ತು

ಕಣ್ಣ ಕದ ತೆರೆದು ಬಂದು ಕುಳಿತಂಗಾಯ್ತು

ಎದೆಯ ಮಿದುವಿಗೆ

ಬೆರಳ ತಾಕಿಸಿ ಮೀಟಿದಂಗಾಯ್ತು

ಮನಸು ನನ್ನ ಮಾತೇ ಕೇಳಲಿಲ್ಲ

ಬಂದ ಕನಸುಗಳಿಗೆ ಲೆಕ್ಕವಿಲ್ಲ

ಹರವಿಕೊಂಡ ಆಕಾಶದ ತುಂಬಾ

ನಿನ್ನದೇ ಬಿಂಬ

ಹಾಡಬೇಕೆಂದು ಕುಳಿತವನ ಕೊರಳಲ್ಲಿ

ನಿನ್ನದೇ ಹೆಸರು

ಪ್ರಿಯೆ ಪ್ರಿಯೆ ಪ್ರಿಯಂವದಾ


ಅರೆ ಅಷ್ಟು ಹುಡುಗಿಯರಲ್ಲಿ

ಇಷ್ಟವಾಗಲಿಲ್ಲವಲ್ಲ ಒಬ್ಬಳೂ

ಇವಳಲ್ಲೇನಿದೆ ಸೆಳೆತ

ನನ್ನ ಈ ಪರಿ ಸೆಳೆಯಲು


ಕಾರಣ ಹುಡುಕಿದೆ

ಕಾರಣ ನೀನೇ ಆಗಿರುವಾಗಲೂ!


ಇಷ್ಟಾಗುವ ಹೊತ್ತಿಗೆ

ನೀನು ಇಷ್ಟವಾಗಿದ್ದೆ

ಮತ್ತು...

***


ಮತ್ತೆ ಮಳೆ ಹುಯ್ಯುತಿದೆ

ನೆನಪು ಜೀಕುತ್ತಿದೆ


ಮೊದಲ ಮಾತು

ಮೊದಲ ಸ್ಪರ್ಶ

ಮೊದಲ ಗಿಫ್ಟು

ಮೊದಮೊದಲ ಕಚಗುಳಿ

ಮೊದಲು ಕೊಟ್ಟ ಮುತ್ತು

ಮತ್ತು ಮುತ್ತು

ನೆನಪಿದೆಯಾ ನಿನಗೆ


ತಡವಾಗಿ ಬಂದಿದ್ದು

ನೀನು ಬೈದಿದ್ದು

ಬರ್ತಡೇಗೆ ವಿಷ್ ಮಾಡಿಲ್ಲ ಅಂತ

ಮುನಿಸಿಕೊಂಡಿದ್ದು

ಕೊಟ್ಟ ಗಿಫ್ಟ್ ಗಿಫ್ಟೇ ಅಲ್ಲ

ಅಂತ ವಾದಿಸಿದ್ದು

ನಾಳೆ ಕಡುಗೆಂಪು ಬಣ್ಣದ ಸೀರೆ ಉಟ್ಕೊಂಡ್ ಬಾರೆ ಅಂದ್ರೆ

ಮುಗಿಲು ಬಣ್ಣದ ಜೀನ್ಟ್ ತೊಟ್ಟು

ಪೇಚಾಡಿದ್ದು

ಪರಮ ಪೋಲೀ ಜೋಕಿಗೆ ನಕ್ಕಿದ್ದು

ಕಾನರ್ೆಟ್ಟೋ ಐಸ್ಕ್ರೀಮ್ ನೆಕ್ಕಿದ್ದು

ಸಂಜೆ ಸಿಗುತ್ತೀನಿ ಅಂತ ಅಣ್ಣಮ್ಮನ ದೇವಸ್ಥಾನದ ಬಳಿ

ಕಾಯಿಸಿದ್ದು


ಪ್ರೀತಿ ಕಾಯಿಸುತ್ತದೆ

ಮತ್ತು ಸತಾಯಿಸುತ್ತದೆ

ಪ್ರೀತಿ ಸಾಯಿಸುತ್ತದಾ?

***

ನಾನು ಸುಮ್ಮನಿದ್ದವ

ಅಂದ್ರೆ, ಕೇವಲ ಸುಮ್ಮನೇ!


ಒಮ್ಮೆ ನಾ ಕೇಳಿದ್ದೆ

ನನ್ನದು ನದಿ ಪ್ರೀತಿ ಕಣೆ

ನಿನ್ನದು?

ಮುಗಿಲ ಪ್ರೀತೀನಾ? ಅಂತ.


ನೀನು ಉತ್ತರ ಹುಡುಕುತ್ತಲೇ ಹೋದೆ

ನಾನು ಪ್ರಶ್ನೆ ಹಾಕುತ್ತಲೇ ಹೋದೆ

ಕಾಲ ಬಡ್ಡೀಮಗಂದು

ಗೀಚಿ ಹೋದ ಭಾಷೆಗೆ ಅರ್ಥವೇ ಇರಲಿಲ್ಲ


ಜಗತ್ತು ಎಷ್ಟು ಕ್ರೂರಿ ಅಲ್ವಾ?

ಬದುಕು ಇನ್ನೇನು ಬಿಚ್ಚಿಕೊಳ್ತು ಅನ್ನುವಾಗಲೇ

ಮುಚ್ಚಿಹೋಗುತ್ತದೆ

ಮುಕ್ತ ಮುಗಿಲಿಗೂ

ಮೋಡ ಆವರಿಸಿಕೊಳ್ಳುತ್ತದೆ


ನಿಜ್ಜ ಹೇಳ್ತೀನಿ

ನಾನು ನಿನ್ನನ್ಯಾವತ್ತೂ ಕಾಮಿಸಿಲ್ಲ

ಕೇವಲ ಪ್ರೇಮಿಸಿದೆ

ಆರಾಧಿಸಿದೆ

ಎದೆಯಲ್ಲಿಟ್ಟುಕೊಂಡೆ

ಬೊಗಸೆಯಲ್ಲಿಟ್ಟರೆ ಕಳೆದುಹೋಗುತ್ತಿಯ ಅಂತ


ಪ್ರಿಯ ಪ್ರಿಯಂವದಾ


ಗೊತ್ತಾ

ಪ್ರೀತಿಗೆ ಸೋಲಬಹುದು ಕಣೆ

ಕಾಮಕ್ಕೆ ಸೋಲಬಾರದು


***

ಹಚ್ಚಿಟ್ಟ ಹಣತೆಗೆ ಎಣ್ಣೆಯಿಲ್ಲ

ಕಣ್ಣಲ್ಲಿ ಕಾಂತಿಯಿಲ್ಲ

ಎದೆಯ ಮಗ್ಗುಲಲ್ಲಿ ಮುಳ್ಳುಕಂಟಿ


ಬಾಗಿಲು ತೆರೆದೇ ಇದೆ

ಹೋಗಿದ್ದು ಯಾಕೆ ಅಂತ ಕೇಳೊಲ್ಲ

ನಾನೋ ಈಡಿಯಟ್ ಕಾಯುತ್ತಿದ್ದೇನೆ

ಒಮ್ಮೆ ಬಂದು ಹೋಗೆ.