Friday, May 10, 2019


ಬೇಸಿಕಲಿ ನಾನೊಬ್ಬ ಬರಹಗಾರ. ಹಲ್ಲುಮುಡಿ ಕಚ್ಚಿ ಕುಳಿತರೆ ಭರಪೂರ ಬರೆದುಬಿಡಬಲ್ಲೆ.ಅಂಥದ್ದೊಂದು ಆತ್ಮವಿಶ್ವಾಸ ನನ್ನಲ್ಲಿದೆ. ಹತ್ತು ವರ್ಷ ಎಲೆಕ್ರ್ಟಾನಿಕ್ ಮೀಡಿಯಾದಲ್ಲಿ ಕೆಲಸ ಮಾಡುವಾಗ ಬರಹ ನನ್ನನ್ನ ಇನ್ನಿಲ್ಲದೆ ಕಾಡಿತ್ತು.ಅಲ್ಲೇನಾದ್ರೂ ಸಮ್ ಥಿಂಗ್ ಮಾಡಲೇಬೇಕು ಅಂತಲೇ ನಾನು ಹೋದವನು. ಅಲ್ಲಿನ ರಾಜಕೀಯ ಮತ್ತು ಕೆಲಸದ ಒತ್ತಡ ನನ್ನನ್ನ ಕಟ್ಟಿಹಾಕತ್ತು.ನನ್ನೊಳಗಿನ ಬರಹಗಾರನನ್ನ ಉಸಿರುಗಟ್ಟಿಸಿತ್ತು. ಎಷ್ಟೋ ಸಲ ಥೋ ಇದೆಂಥ ಕೆಲಸ. ಬಿಟ್ಟು ಹೋಗೋಣ ಅಂತ ಬಾಗಿಲು ತನಕ ಬಂದು ಒಳಗೋಗಿದ್ದೆ.ಕಾರಣ ಒಂದಿಷ್ಟು ಕಮಿಟ್ ಮೆಂಟ್. ಫೈನಲಿ ಐಯಾಮ್ ಫ್ರೀ ಟು ರೈಟ್ ಅಂಡ್ ರೀಡ್. ಬರೋಬ್ಬರಿ ಹತ್ತು ವರ್ಷ ಹಸಿದಿದ್ದ ಕಣ್ಣಿಗೆ ಪುಸ್ತಕ ಓದುವ ಪುಳಕ. ಬೆರಳ ತುದಿಗೆ‌ ಮತ್ತೆ ಬರಹದ ಪಸೆ.ಇದಕ್ಕಿಂತ ಖುಷಿ ಇನ್ನೇನಿದೆ. ಇನ್ನೊಂದು ಖುಷಿ ನಾನೀಗ ಓ ಮನಸೇ ಸಂಪಾದಕ. ಎಂದಿನಂತೆ ನಿಮ್ಮ ಪ್ರೀತಿ ಇರಲಿ.

ಎಷ್ಟು ಕಾಲ ಆಯ್ತಲ್ಲಾ ನದಿಗಿಳಿದು? ಅಲ್ಮೋಸ್ಟ್ ಹತ್ತು ವರ್ಷಗಳೇ ಕಳೆದುಹೋದವು. ಈ ಅವಧಿಯಲ್ಲಿ ಎಷ್ಟು ಮಳೆ ಬಂದಿಲ್ಲ. ಎಷ್ಟು ನೀರು ಹರಿದಿಲ್ಲ. ನಾನು ನಿಜ್ಜ ಕಳೆದುಹೋಗಿದ್ದೆ. ಇವತ್ತು ಇದ್ದಕ್ಕಿದ್ದಂತೆ ಯಾಕೋ ನನ್ನ ನದಿ ಕೈ ಹಿಡಿದು ಎಳೆಯಿತು. ಇಳಿದಿದ್ದೇನೆ. ಇನ್ನು ನದಿ ನಿರಂತರ.

Monday, February 7, 2011

ನನ್ನ ಪುಸ್ತಕ ಬಿಡುಗಡೆಗೆ ಬನ್ನಿಆತ್ಮೀಯರೆ
ಎಲ್ಲಿಂದ ಶುರು ಮಾಡಬೇಕೋ ಗೊತ್ತಾಗ್ತಿಲ್ಲ. 1998ರಲ್ಲಿ ಅನಿಸುತ್ತೆ. ಮೆಜೆಸ್ಟಿಕ್ ನ ಅಂಗಳದಲ್ಲಿ ಇಳಿದವನಿಗೆ ದಿಕ್ಕೇ ತೋಚದಾಗಿತ್ತು. ಯಾರು ಗೆಳೆಯರು ನನಗೆ ಇಲ್ಲಿ? ಬೆಂಗಳೂರು ನನ್ನನ್ನ ಒಪ್ಪಿಕೊಳ್ಳುತ್ತಾ? ಇಲ್ಲಿ ನಾನು ಬದುಕು ಕಂಡುಕೊಳ್ಳುತ್ತೇನಾ ಅನ್ನೋ ಪ್ರಶ್ನೆ ಬೊಗಸೆಯಲ್ಲಿದ್ದವು. ಗೆಳೆಯ ಶ್ರೀನಿವಾಸ ಮಾಸ್ ಕಮ್ಯೂನಿಕೇಷನ್ ಓದುತ್ತಾ ಸಂಟ್ರಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದ. ಅಲ್ಲಿಗೆ ಹೋದೆ. ನನ್ನ ಬಳಿ ಇದ್ದದ್ದು ಒಂದು ಟವಲ್. ಒಂದು ಬ್ಯಾಗು ಅಷ್ಟೆ. ಆ ಬ್ಯಾಗಿನಲ್ಲಿದ್ದದ್ದು ನಾನು ಬರೆದ ಕವಿತೆಗಳು. ಚಿತ್ರಗಳು. ಗೆಳೆಯನೊಬ್ಬ ಸಿಕ್ಕಿದಾಗ ಎಲ್ಲಾದ್ರೂ ಒಂದು ಕೆಲಸ ಕೊಡಿಸು ಮಾರಾಯ ಅಂದಿದ್ದೆ. ಏನು ಕೆಲಸ ಮಾಡ್ತೀಯ ಅಂದ. ಕವಿತೆ ಬರಿತೀನಿ ಅಂದಿದ್ದಕ್ಕೆ, ಅಲ್ಲಪ್ಪ ಹೊಟ್ಟೆಪಾಡಿಗೆ ಏನು ಕೆಲಸ ಮಾಡ್ತೀ ಹೇಳು ಅಂದ್ದಿದ್ದ. ಹಾಗಾದ್ರೆ ಕವಿತೆ ಬರೆಯೋದ್ರಿಂದ ಅನ್ನ ಹುಟ್ಟಲಾರದಾ? ಅನ್ನೋ ನನ್ನ ಪ್ರಶ್ನೆಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ.
ಬೆಂಗಳೂರು ನನ್ನಂತಹವರ ಪಾಲಿಗೆ ಯಾವತ್ತೂ ಅಮ್ಮನ ಹಾಗೆ. ಯಾರನ್ನೂ ಅದು ದೂರ ತಳ್ಳುವುದಿಲ್ಲ. ಸೆಂಟ್ರಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಮೂರ್ನಾಲ್ಕು ದಿನ ಉಳಿದುಕೊಂಡಿದ್ದೆ. ಎಲ್ಲಿ ಇದ್ದ ಹಣವೂ ಖರ್ಚಾಗುತ್ತೋ ಅಂತ ಸಂಜೆ ಆದ್ರೆ ಎರಡೇ ಎರಡು ಇಡ್ಲಿ ತಿಂದುಕೊಂಡು ರಾತ್ರಿ ಇಡೀ ನಿದ್ರೆ ಮಾಡದೆ ಒದ್ದಾಡುತ್ತಿದ್ದೆ. ನನ್ನವ್ವ ಬಡತನವಿದ್ದರೂ ಎಂದೂ ಮಕ್ಕಳನ್ನ ಹಸಿವಿಗೆ ಕೆಡವಿದವಳಲ್ಲ. ತಾನು ತಿನ್ನದೆಯೇ ನಮಗೆ ತಿನ್ನಿಸಿದ ಜೀವ ಅದು. ಹಾಗಂತ ಹಸಿವಿಗೆ ಹೆದರಿ ಬೆಂಗಳೂರು ಬಿಟ್ಟು ಹೋಗುವುದಾ? ಏನೇ ಆದ್ರೂ ಸರಿ ಬೆಂಗಳೂರು ಬಿಟ್ಟು ಬರಕೂಡದು ಅಂತ ತೀರ್ಮಾನ ಮಾಡಿಕೊಂಡೇ ಬಂದಿದ್ದೆನಾದ್ದರಿಂದ ಕೆಲಸ ಹುಡುಕಿಕೊಂಡು ಅಲೆಯತೊಡಗಿದೆ. ಆದ್ರೆ ತುಂಬಾ ದಿನ ಸೆಂಟ್ರಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಇರುವಹಾಗಿರಲಿಲ್ಲ. ಹಾಗಾಗಿ ನನ್ನ ಸಂಬಂಧಿಕರೊಬ್ಬರ ಮನೆಗೆ ಹೋದೆ. ಅದೂ ಅವ್ವ ಹೇಳಿದಳು ಅಂತ. ಆದ್ರೆ ಅವರು ಅನ್ನ ಹಾಕಿ ಹೀಯಾಳಿಸತೊಡಗಿದರು. ಅವತ್ತೊಂದಿನ ಅದೆ ತಟ್ಟೆಯ ಮುಂದೆ ಕುಳಿತು ಗಳಗಳನೆ ಅತ್ತುಬಿಟ್ಟಿದ್ದೆ. ಹಸಿವು ತಡೆದುಕೊಳ್ಳಬಹುದು...ಅಪಮಾನ ತಡೆದುಕೊಳ್ಳೋದಕ್ಕೆ ಆಗುವುದಿಲ್ಲ. ಅವತ್ತು ಬೆಳಿಗ್ಗೆ ಎದ್ದು ಅವರ ಮನೆಯಿಂದ ಹೊರಟವನು ಆ ಕಡೆ ತಿರುಗಿ ಕೂಡ ನೋಡಲಿಲ್ಲ.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸುತ್ತಿದೆನೋ ನೆನಪಿಲ್ಲ. ಅಲೆದು ಅಲೆದು ಚಪ್ಪಲಿ ಸವೆದವು. ನಿರಾಶೆ ಆವರಿಸಿಕೊಳ್ಳತೊಡಗಿತು. ಹೀಗಿದ್ದಾಗಲೆ ಗೆಳೆಯ ವೀರಣ್ಣ ಕಮ್ಮಾರ ಒಂದ್ಸಲ ನವಕರ್ನಾಟಕಕ್ಕೆ ಹೋಗಿ ಕೇಳಿ ನೋಡು ಅಂದ. ಆಯ್ತು ಅಂತ ಹೋದೆ. ಅಲ್ಲಿ ನನ್ನ ಪಾಲಿಗೆ ದೇವರಂತೆ ಸಿಕ್ಕಿದವರು ಆರ್ ಎಸ್ ರಾಜಾರಾಮ್. ನನ್ನ ಕವಿತೆಗಳನ್ನ ನೋಡಿ... ಚಿತ್ರಗಳನ್ನ ನೋಡಿ... ನಾಳೆಯಿಂದಲೇ ಕೆಲಸಕ್ಕೆ ಬನ್ನಿ ಅಂದ್ರು. ಹೋದೆ. ಕೆಲಸ ಕಲಿಸಿದರು...ಬರೀ ಕೆಲಸವಲ್ಲ ಕೆಲಸದಲ್ಲಿರಬೇಕಾದ ಡಿಸಿಪ್ಲೀನ್ ಕಲಿಸಿದವರೂ ಅವರೆ. ಅವರ ಪ್ರೀತಿಗೆ ನಾನು ಋಣಿ.
ಅದಾದ ಮೇಲೆ ವಿಜಯಕರ್ನಾಟಕಕ್ಕೆ ಹೋದೆ... ಉಷಾಕಿರಣಕ್ಕೆ ಬಂದೆ. ಅಲ್ಲಿಂದ ಸಿದಾ ಹೋಗಿದ್ದು ಓ ಮನಸೇಗೆ. ಅಲ್ಲಿಗೆ ನನ್ನ ಬೆಂಗಳೂರಿನ ಬದುಕು ಹದಕ್ಕೆ ಬಂದಿತ್ತು. ಬದುಕಬಲ್ಲೆ ಅನ್ನೋ ಕಾನ್ಫಿಡೆನ್ಸ್ ಬಗಲಲ್ಲಿತ್ತು.
ಈಗ ನನ್ನದೇ ಅಜ್ಜೀಪುರ ಪ್ರಕಾಶನ ಶುರು ಮಾಡುತ್ತಿದ್ದೇನೆ. ಅದರಲ್ಲಿ ನನ್ನ ಮೊದಲ ಪುಸ್ತಕ ಬಿಡುಗಡೆಗೆ ಸಿದ್ಧವಾಗ್ತಿದೆ. ಪುಸ್ತಕದ ಹೆಸರು 'ನೆನಪಿರಲಿ, ಪ್ರೀತಿ ಕಾಮವಲ್ಲ'.
ದಿನಾಂಕ 12-2-2011ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನೆನಪಿರಲಿ ಪ್ರೀತಿ ಕಾಮವಲ್ಲ ಪುಸ್ತಕ ಬಿಡುಗಡೆ. ರವಿ ಬೆಳಗೆರೆ, ಗುರುಪ್ರಸಾದ್, ಶಶಿಕಲಾ ವೀರಯ್ಯಸ್ವಾಮಿ ಇರ್ತಾರೆ. ನೀವು ಬನ್ನಿ.
ಪುಸ್ತಕ ಬಹಳ ಮುದ್ದಾಗಿದೆ. ನನ್ನ ಪುಸ್ತಕ ಬಿಡುಗಡೆಯಾದ ಒಂದೇ ಒಂದು ದಿನಕ್ಕೆ ಪ್ರೇಮಿಗಳ ದಿನಾಚರಣೆ. ಈ ಪುಸ್ತಕ ಖಂಡಿತಾ ನಿಮ್ಮ ಸಂಗಾತಿಗೆ ಬೆಸ್ಟ್ ಉಡುಗೊರೆ ಆದೀತು.
ಶನಿವಾರ ಬೆಳಗ್ಗೆ 10.30 ಕ್ಕೆ ನಯನ ಸಭಾಗಂಣದಲ್ಲಿ ಭೇಟಿ ಆಗೋಣ.
ತಪ್ಪದೆ ಬನ್ನಿ.

Sunday, October 24, 2010

ಅದಕ್ಕಿಂತ ಅಮಾನವೀಯತೆ ಇನ್ನೊಂದಿದೆಯೇ?


ಇತ್ತೀಚೆಗೆ ಒಂದು ಡಾಕ್ಯುಮೆಂಟರಿ ನೋಡುತ್ತಿದ್ದೆ. ಅದರಲ್ಲಿ ಕಾಡೆಮ್ಮೆಯೊಂದು ಕೆಸರಿನಲ್ಲಿ ಹೂತು ಹೋಗಿ ಕೇವಲ ತಲೆ ಮಾತ್ರ ಮೇಲಿರುತ್ತದೆ. ಕೆಸರಿನಿಂದ ಬಚಾವ್ ಆಗಿ ಬದುಕುವ ಎಲ್ಲಾ ಆಸೆಗಳೂ ಅದರ ಪಾಲಿಗೆ ಕಮರಿಹೋಗಿರುತ್ತದೆ. ಅದು ಅಂಥ ಡೆಡ್ಲಿ ಕೆಸರು.ಇದನ್ನ ಕ್ಯಾಮೆರಾ ಸೆರೆಹಿಡಿಯುತ್ತಲೇ ಇರುತ್ತದೆ. ಅದೇ ಸಮಯಕ್ಕೆ ಮೂರ್ನಾಲ್ಕು ಸಿಂಹದ ಮರಿಗಳು ಒಣಗಿದ ಕೆಸರಿನ ಮೇಲೆ ಮೆಲ್ಲ ಮೆಲ್ಲ ಹೆಜ್ಜೆ ಇಡುತ್ತಾ ಬಂದು ಕಾಡೆಮ್ಮೆಯ ಮೂತಿಗೆ ಬಾಯಿ ಹಾಕಿ ತಿನ್ನೋದಕ್ಕೆ ಶುರು ಮಾಡುತ್ತವೆ. ಕಾಡೆಮ್ಮೆ ಸಣ್ಣದೊಂದು ಚೀತ್ಕಾರ ಮಾಡಲೂ ಆಗದೆ ಸತ್ತುಹೋಗುತ್ತದೆ. ಸಾವು ಕೆಮೆರಾದಲ್ಲಿ ದಾಖಲಾಗುತ್ತದೆ.
***
ಕೆವಿನ್ ಕಾರ್ಟರ್ ಅನ್ನೋ ಒಬ್ಬ ಹೆಸರಾಂತ ಫೋಟೋ ಜರ್ನಲಿಸ್ಟ್ ಇದ್ದ. ಜೊಹಾನಸ್ ಬರ್ಗ್ ಅವನ ಊರು. ಕೆವಿನ್ ಹೆಸರು ನೀವೂ ಕೇಳಿರಬಹುದು. ಯಾಕೆಂದ್ರೆ ಅವನ ಬದುಕು ಬಲಿಯಾಗಿದ್ದು ಕೇವಲ ಒಂದು ಫೋಟೋಗಾಗಿ. 1994 ರಲ್ಲಿ ಸೂಡಾನಿಗೆ ಹೋದ ಕೆವಿನ್ ಅಲ್ಲಿನ ಬಡತನದ ಬೇಗೆಯನ್ನ ಸೆರೆಹಿಡಿಯುತ್ತಲೇ ಅದ್ಭುತ(?)ವಾದ್ದೊಂದು ಫೋಟೋ ತೆಗೆದುಬಿಡುತ್ತಾನೆ. ಆ ಫೋಟೋ ಅವನಿಗೆ ಪುಲಿಟ್ಜರ್ ಬಹುಮಾನವನ್ನೂ ತಂದುಕೊಡುತ್ತದೆ. ದುರಂತ ಅಂದ್ರೆ ಅದೇ ಫೋಟೊ ಅವನ ಸಾವಿಗೂ ಕಾರಣವಾಗಿಹೋಗುತ್ತದೆ.
ಹಸಿವಿನಿಂದ ಬಳಲಿದ ಮಗುವೊಂದು ಸಾಯುವ ಸ್ಥಿತಿಯಲ್ಲಿ ಕುಳಿತಿರುತ್ತದೆ. ಅದರ ಹಿಂದೇನೆ ಆ ಮಗುವಿನ ಸಾವಿಗಾಗಿ ರಣ ಹದ್ದೊಂದು ಕಾಯುತ್ತಾ ಕುಳಿತಿರುತ್ತದೆ. ಈ ಫೋಟೋ ತೆಗೆದ ಕೆವಿನ್ ಆ ಕ್ಷಣಕ್ಕೆ ಥ್ರಿಲ್ ಆಗಿ ಹೋಗಿದ್ದ. ಯಾಕೆಂದ್ರೆ ಅಂಥ ಕರುಣಾಜನಕವಾದ ಫೋಟೋವನ್ನ ಅದುವರೆಗೂ ಯಾರೂ ತೆಗೆದಿರಲಿಲ್ಲ. ತೆಗೆಯೋದಕ್ಕೂ ಅಂಥ ಸಂದರ್ಭ ಸಿಗಬೇಕಲ್ಲ. ಹಾಗಾಗಿ ಗ್ರೇಟ್ ಫೋಟೋ ಅಂತ ಪರಿಗಣಿಸಿ ಕೆವಿನ್ ಗೆ ಪುಲಿಟ್ಜರ್ ಪ್ರಶಸ್ತಿಯೂ ಬಂತು.
ಪ್ರಶಸ್ತಿ ಪಡೆದ ಕೆವಿನ್ನನ ಖುಷಿ ಅವನ ಕಾಲ ಬುಡದಲ್ಲೆ ಸತ್ತುಬಿದ್ದಿತ್ತು. ಕೆವಿನ್ನನನ್ನ ನಿಲ್ಲಿಸಿ, ಅಲ್ಲಯ್ಯ ನೀನು 20 ನಿಮಿಷ ಕೂತು ಅಡ್ಜೆಸ್ಟ್ ಮಾಡಿ ನಿನಗೆ ಬೇಕಾದ ಥರ ಆ ಫೋಟೋ ತೆಗೆದೆಯಲ್ಲ. ಅಷ್ಟು ನಿಮಿಷದಲ್ಲಿ ಆ ಮಗುವಿಗೊಂದು ಬ್ರೆಡ್ ಪೀಸ್ ಕೊಡೋದಕ್ಕೆ ಆಗಲಿಲ್ಲವಾ... ಕೈ ಹಿಡಿದು ಎತ್ತಿ ಸಾಂತ್ವನ ಮಾಡೋದಕ್ಕೆ ಆಗಲಿಲ್ಲವಾ... ಹಚಾ ಹಚಾ ಅಂತ ರಣಹದ್ದನ್ನು ಓಡಿಸಿ ಮಗುವನ್ನ ಬದುಕಿಸೋದಕ್ಕೆ ಆಗಲಿಲ್ಲವಾ? ದೊಡ್ಡ ಈಡಿಯಟ್ ನೀನು. ನಿನಗೆ ಬೇಕಾದ ಫೋಟೋ ಆ ಮಗುವಿನ ಪ್ರಾಣಕ್ಕಿಂತ ದೊಡ್ಡದಾಗಿಹೋಯ್ತಾ ಅಂತ ಯಾರು ಕೇಳಿದರೋ ಗೊತ್ತಿಲ್ಲ. ಪ್ರಶ್ನೆ ಕೇಳಿ ಕೆವಿನ್ ವಿಲವಿಲನೆ ಒದ್ದಾಡಿಹೋಗಿದ್ದ. ಮನಸ್ಸು ಹೌದಲ್ಲವಾ ಅಂತ ಪರಿತಪಿಸಿಬಿಟ್ಟಿತ್ತು. ತಪ್ಪು ಮಾಡಿಬಿಟ್ಟೆ ಅಂತೆನಿಸಿ ಒಳಗೊಳಗೆ ಕೊರಗಿದ್ದ ಕೆವಿನ್. ಮಾಡಿದ ತಪ್ಪು ಮನಸ್ಸನ್ನು ಕ್ಷಣಕ್ಷಣವೂ ಕಿತ್ತು ತಿನ್ನುತ್ತಿತ್ತು. ಆ ಶಾಕ್ನಿಂದ ಹೊರಬರಲಾರದೆ ಕೆವಿನ್ ಮೂರು ತಿಂಗಳಲ್ಲಿ ಮಾನಸಿಕವಾಗಿ ಬಳಲಿ ಬಳಲಿ ಸತ್ತು ಹೋದ.
ಯಾರೂ ಕೊಡದಿದ್ದನ್ನ ನಾನು ಜಗತ್ತಿಗೆ ಮೊದಲು ಕೊಡಬೇಕು....ಮೊದಲು ತೋರಿಸಬೇಕು...ನನ್ನ ಹೆಸರು ರಾರಾಜಿಸಬೇಕು ಅನ್ನೋ ಪತ್ರಕರ್ತರ ಹಪಾಹಪಿಗೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಎಲ್ಲಿ ತಪ್ಪು ಮಾಡುತ್ತಿದ್ದೇನೆ ಅನ್ನೋದ್ರ ಅರಿವೂ ಇಲ್ಲದಂತೆ ಕೆಲವೊಮ್ಮೆ ಪತ್ರಕರ್ತ ಬ್ಲೈಂಡ್ ಆಗಿ ಕೆಲಸ ಮಾಡಿಬಿಟ್ಟಿರುತ್ತಾನೆ. ಹೆಸರು ಮಾಡಬೇಕೆನ್ನುವ ಪತ್ರಕರ್ತನ ಹಪಾಹಪಿ ಒಂದು ಜೀವದ ಬೆಲೆಯನ್ನ ಒಂದು ಪೋಟೋದ ಬೆಲೆಗೆ ತಂದು ನಿಲ್ಲಿಸಿಬಿಡುತ್ತದೆ? ಕೆವಿನ್ ಫೋಟೋ ತೆಗೆದುಕೊಂಡು ಬಂದ... ಅಲ್ಲಿ ಮಗು ಬದುಕ್ತಾ... ರಣ ಹದ್ದಿಗೆ ಆಹಾರವಾಗಿಹೋಯ್ತಾ? ಅವನಿಗೇನಾಗಬೇಕಿದೆ. ಇಲ್ಲಿ ಅದೇ ಮಗುವಿನ ಹಸಿವಿನ ನರಳಿಕೆಯ ಮೇಲೆ ಹೊಗಳಿಕೆಯ ಸೌಧ ಕಟ್ಟುತ್ತಿರುತ್ತಾರಲ್ಲ. ಸಾಕವನಿಗೆ.
***
ಕಲಹರಿ ಮರುಭೂಮಿಯಲ್ಲಿ ಮೀರ್ ಕ್ಯಾಟ್ ಅನ್ನೋ ಚುರುಕಾದ ಅಪರೂಪದ ಪುಟ್ಟ ಪ್ರಾಣಿಗಳಿವೆ.ಅವು ರಸ್ತೆ ದಾಟಬೇಕಾದರೆ ಕ್ಷಣ ನಿಂತು ಅತ್ತ ಇತ್ತ ನೋಡಿ ಯಾವುದೇ ವೆಹಿಕಲ್ ಬರ್ತಾ ಇಲ್ಲ ಅಂದಾಗ ಮಾತ್ರ ರಸ್ತೆ ದಾಟುವುದಕ್ಕೆ ಮುಂದಾಗುತ್ತವೆ. ಅದು ಅವುಗಳ ಬುದ್ಧಿವಂತಿಕೆಗೆ ಹಿಡಿದ ಕನ್ನಡಿ. ಆದ್ರೆ ಎಲ್ಲಾ ಸಲ ಅವುಗಳ ಲೆಕ್ಕಾಚಾರ ಸರಿ ಇರುವುದಿಲ್ಲ. ಮನುಷ್ಯರಾದ ನಮ್ಮದೇ ಗೆಸ್ ಎಷ್ಟೋ ಸಲ ಹಳ್ಳ ಹಿಡಿದಿರುತ್ತೆ ಅಂದ ಮೇಲೆ ಪಾಪ ಪ್ರಾಣಿಗಳ ಲೆಕ್ಕಾಚಾರ ಹೇಗೆ ಸರಿ ಇರಲು ಸಾಧ್ಯ. ಮೀರ್ ಕ್ಯಾಟ್ ಒಂದು ರಸ್ತೆ ಮಧ್ಯದಲ್ಲಿ ಹಾಗೆ ಲೆಕ್ಕಾಚಾರದಲ್ಲಿ ನಿಂತಿದ್ದಾಗಲೇ ಟ್ರಕ್ ಒಂದು ಹೊಡೆದು ದಾರುಣವಾಗಿ ಸತ್ತುಹೋಗುವುದನ್ನ ತೋರಿಸಿ ನೋಡಿ ಅವುಗಳ ಲೆಕ್ಕಾ ಚಾರ ಹೇಗೆ ತಪ್ಪಾಗಿ ಹೋಯ್ತು ಅನ್ನುತ್ತಾನೆ ಡಾಕ್ಯುಮೆಂಟರಿ ಮಾಡಿದಾತ. ಟ್ರಕ್ ಕೆಳಗಿನಿಂದ ಕೆಮೆರಾ ಇಟ್ಟು ಅದು ಸಾಯುವುದನ್ನ ಚಿತ್ರೀಕರಿಸಿದವನಿಗೆ ಪುಟ್ಟ ಮೀರ್ ಕ್ಯಾಟ್ ನ್ನ ಬಚಾವ್ ಮಾಡಲು ಆಗಲಿಲ್ಲವೇ? ಜಸ್ಟ್ ಥಿಂಕ್.
***
ಪ್ರಪಂಚದ ಇನ್ನೊಂದು ಮುಖ ಹೇಗೆಲ್ಲ ಇದೆ ಅನ್ನೋದನ್ನ ಒಂದೊಂದು ಮೂಲೆಯಿಂದಲೂ ಹೆಕ್ಕಿ ತಂದು ಇನ್ನೊಂದು ಮೂಲೆಗೆ ತಿಳಿಯಪಡಿಸುವ ಜವಾಬ್ದಾರಿ ಖಂಡಿತಾ ಪತ್ರಕರ್ತರ ಮೇಲಿದೆ. ಆದ್ರೆ ಆ ತರಾತುರಿಯಲ್ಲಿ ಮಾನವೀಯತೆಯನ್ನ ಕಳೆದುಕೊಳ್ಳಬಾರದು. ಸತ್ತುಹೋದ ಮಗುವಿನ ದಃಖದಲ್ಲಿರುವ ತಾಯಿಯನ್ನ ನಿಮ್ಮ ಮಗ ಸತ್ತುಹೋದ ಹೇಗನಿಸ್ತಾ ಇದೆ ಅಂತ ಕೇಳಿದ್ರೆ ಅದಕ್ಕಿಂತ ಅಮಾನವೀಯವಾದ್ದು ಇನ್ನೊಂದಿದೆಯಾ? ಐ ಡೋಂಟ್ ನೋ.
ಒಂದು ಜೀವವನ್ನ ಬದುಕಿಸುವ ಸಾಧ್ಯತೆಯಿದ್ದಾಗ ಯಾರೇ ಆಗಲಿ ಮೊದಲು ಅದಕ್ಕೆ ಪ್ರಾಧಾನ್ಯತೆ ಕೊಡಬೇಕು. ಉಳಿದಿದ್ದು ನೆಕ್ಸ್ಟ್.
ಏನಂತೀರಿ?

Thursday, October 7, 2010

ಹೇಗೆ ಮರೆಯೋದು ಹೇಳು ಬದುಕಿಗೆ ಕೊಳ್ಳಿ ಇಟ್ಟವನನ್ನ

ಇಷ್ಟಕ್ಕೂ ಪ್ರೀತಿ ಸೋತು ಹೋಗುವುದು ಯಾವಾಗ?
ಯಾವ ಪ್ರಿತಿಯನ್ನ.. ಯಾರ ಪ್ರೀತಿಯನ್ನ ಎದೆಗಪ್ಪಿಕೊಂಡು... ಕೈ ಕೈ ಹಿಡಿದುಕೊಂಡು ತಿರುಗಾಡುತ್ತೇವೆಯೋ ಅದೇ ಪ್ರೀತಿ ಒಂದೊಂದ್ಸಲ ಥತ್ ತೇರಿಕೆ ಅನ್ನಿಸಿಬಿಡುತ್ತದೆ. ಇಷ್ಟೇನಾ ಈ ಪ್ರೀತಿಯ ಅರ್ಥ ಅನಿಸಿಬಿಡುತ್ತದೆ. ಹಾಗಂತ ಪ್ರೀತಿ ಸೋತಿತು ಅಂತಲ್ಲ. ಕೆಲವು ಸಲ ನಾವೇ ಪ್ರಿತಿಗೆ ಅರ್ಹರಾಗಿರೋಲ್ಲ ಅಷ್ಟೆ.
ಹೇಳಬೇಕೆಂದೆರೆ, ನಾನು ನೀನು ಜನ್ಮ ಇರೋ ತನಕ ಪ್ರೀತಿಸೋಣ ಅನ್ನೋದು ಆ ಕ್ಷಣದ ಭಾವುಕತೆಯಾಗಿರುತ್ತದೆ.ಇಂಥ ಮಾತುಗಳು ಕೆಲವೊಮ್ಮೆ ಇಷ್ಟಪಟ್ಟವರನ್ನ ಒಲಿಸಿಕೊಳ್ಳಲು ಒಂದು ಅಸ್ತ್ರವಾಗಬಹುದು. ಇದು ಪ್ರೀತಿಯಲ್ಲ... ಯಾವಾಗ ಪ್ರ್ರೀತಿ ನಾಟಕವಾಗುತ್ತದೋ... ಒಂದು ಅಸ್ತ್ರವಾಗುತ್ತದೋ ಅಲ್ಲಿ ಪ್ರೀತಿಗೆ ಬೆಲೆ ಇರೋದಿಲ್ಲ. ಆಡಿದ ನಾಟಕಕ್ಕೆ ಅರ್ಥ ಇರೋದಿಲ್ಲ.
ಇತ್ತೀಚೆಗೆ ನನಗೊಂದು ಹುಡುಗಿ ಪೋನ್ ಮಾಡಿದ್ದಳು. ಹೆಸರು ಲಕ್ಷ್ಮೀ. ಆಕೆ ಹುಡುಗನೊಬ್ಬನನ್ನು ಇಷ್ಟ ಪಟ್ಟು ಪ್ರೀತಿಸುತ್ತಿದ್ದಳಂತೆ. ಪ್ರೀತಿ ಒಂದು ಹಂತಕ್ಕೆ ಬಂದಾಗ ಮನೆಯವರನ್ನೆಲ್ಲ ದಿಕ್ಕರಿಸಿ ಮದುವೆ ಆಗಿದ್ದರು. ಇಷ್ಟು ಸಾಕು ನಮ್ಮ ಪ್ರೀತಿ ಗೆದ್ದಿತು ಅಂತ ಬೆಂಗಳೂರಿಗೆ ಬಂದು ಸಂಸಾರ ಹೂಡುವಷ್ಟರಲಿ ಪ್ರೀತಿಗೆ ಹುಳು ಬಿದ್ದಿತ್ತು. ಬದುಕಿನ ರಿಯಾಲಿಟಿ ಎದ್ದು ಕುಳಿತಿತ್ತು. ಪರಸ್ಫರ ಈಗೊ ಇಬ್ಬರ ಕಣ್ಣಲ್ಲಿ ಕುಣಿಯುತ್ತಿತ್ತು. ನಾವಿಬ್ರೂ ತುಂಬಾನೆ ಪ್ರೀತಿಸುತ್ತಿದ್ವಿ. ಎರಡು ಕುಟುಂಬವನ್ನ ಎದುರುಹಾಕಿಕೊಂಡು ಹೊರಗೆ ಬಂದು ಮದುವೆ ಕೂಡ ಆದ್ವಿ. ಇನ್ನೂ ಒಂದು ವರ್ಷ ತುಂಬಿಲ್ಲ. ಆಗಲೇ ಈಗ ಅದರ ಕಷ್ಟ ಗೊತ್ತಾಗ್ತಿದೆ. ನನ್ನ ಪತಿ ಅನಿಸಿಕೊಂಡ ಭೂಪ ಕೆಲಸ ಬಿಟ್ಟು ಮನೇಲಿ ಕುಳಿತಿದ್ದಾನೆ. ಅವನಿಗೆ ವಿಪರೀತ ಇನ್ಫೀರಿಯಾರಿಟಿ. ಡೌಟು. ಯಾರೊ ನಿನ್ನನ್ನ ಹಿಂಬಾಲಿಸ್ತಿದಾನೆ ಅಂತ ನನ್ನ ಕೈಲಿದ್ದ ಕೆಲಸವನ್ನೂ ಬಿಡಿಸಿಬಿಟ್ಟ.ಇಬ್ಬರೂ ಮನೆಯಲ್ಲಿ ಕುಳಿತಿದ್ದೇವೆ. ನನ್ನ ಮಾತನ್ನ ಅವನು ಕೇಳುತ್ತಿಲ್ಲ... ಅವನ ಮಾತನ್ನೂ ನಾನು ಕೇಳುತ್ತಿಲ್ಲ. ಏನು ಮಾಡೋದು ಅಂತ ಗೊತ್ತಾಗುತ್ತಿಲ್ಲ. ಬದುಕು ಇಲ್ಲಿಗೆ ಸಾಕು ಅನಿಸಿಬಿಟ್ಟಿದೆ. ಈ ಕೆಟ್ಟ ಪ್ರೀತೀನ ನಂಬಿಕೊಂಡು ನನ್ನೆಲ್ಲ ಸಂಬಂಧಗಳನ್ನ ಕಳೆದುಕೊಂಡು ಬಿಟ್ಟೆ ಅಂತ ಕಣ್ಣೀರಾದಳು ಲಕ್ಷ್ಮಿ.
ಇಂಥ ಸೋತ ಪ್ರೀತಿಗಳೆಷ್ಟೋ.... ಒಡೆದು ಹೋದ ಮನಸುಗಳೆಷ್ಟೋ... ಹಾಗಂತ ಪ್ರೀತಿಸುವುದು ನಿಂತುಹೋಯ್ತಾ? ನೋ. ಆದ್ರೆ ಜನ ಯಾಕೋ ಪ್ರೀತಿಯನ್ನ ನಂಬಿಕೊಂಡಷ್ಟು ಸಂಖ್ಯೆಯಲ್ಲಿ ಬದುಕಿನ ಸತ್ಯವನ್ನ ನಂಬಿಕೊಳ್ಳುವುದಿಲ್ಲ. ಹಸಿವು ಪ್ರೀತಿಗಿಂತ ದೊಡ್ಡದಾಗಿ ಕಂಡಾಗ ಪ್ರೀತಿ ಸತ್ತು ಹೋಗುತ್ತದೆ. ಅವಮಾನಗಳು ಹೆಡೆ ಎತ್ತುತ್ತವೆ. ನಂಬಿಕೆ ಗೋತಾ ಹೊಡೆಯುತ್ತದೆ. ಅವನು ಕೆಲಸಕ್ಕೆ ಹೋಗುತ್ತಿಲ್ಲ... ಇವಳನ್ನೂ ಅನುಮಾನದಿಂದ ಬಿಡಿಸಿದ. ಹೊಟ್ಟೆಗೇನು ತಣ್ಣೀರು ಬಟ್ಟೆ ಹಾಕಿಕೊಂಡು ಇರಲಿಕ್ಕಾಗುತ್ತದಾ? ನಿಜ್ಜ ಹೇಳ್ತೀನಿ, ಹಸಿವಿನ ಗರ್ಭದಲ್ಲಿ ಪ್ರೀತಿ ಹುಟ್ಟಲಾರದು. ಆದ್ರೆ ಇಂತ ಮನೆಬಿಟ್ಟು ಓಡಿ ಬರುವ ಪ್ರೇಮಿಗಳಿಗೆ ಬದುಕಿನ ಕಟು ಸತ್ಯ ಗೊತ್ತಾಗುವುದು ಯಾವಾಗ?
ಇಲ್ಲಿ ಗಮನಿಸಬೇಕಾದ್ದು ಪ್ರೀತಿಸುತ್ತೇವೆ ಅಂತ ಹೊರಟವರ ಜಿದ್ದು. ಪ್ರೀತಿ ಸಿಕ್ತಲ್ಲ ಇನ್ನೆಲ್ಲ ಸಿಕ್ಕಿತು ಬಿಡು ಅಂತ ಅಂದುಕೊಂಡುಬಿಡುವ ಮೂರ್ಖತನ. ಯಾವ ಪ್ರೀತಿಯೂ ಹಸಿವಿಗೆ ಮದ್ದಲ್ಲ ಅನ್ನುವುದು ಗೊತ್ತಿದ್ದರೆ ಚೆನ್ನ. ಬದುಕಿನ ರಿಯಾಲಿಟಿ ಅರಿತುಕೊಳ್ಳದ ಹೊರತು ಎಷ್ಟೇ ಪ್ರೀತಿ ಇದ್ದರೂ ವೇಸ್ಟ್.
ನನ್ನ ಗೆಳೆಯನೊಬ್ಬನಿದ್ದ ಜಗ್ಗಿ ಅಂತ. ಊರಿನಲ್ಲಿ ಆತ ಲೇಡಿಸ್ ಟೈಲರ್. ಪಕ್ಕಾ ಹುಂಬ ಮನಸ್ಸಿನವ. ಪ್ರೀತಿ ಮಾಡೊದು ಅವನಿಗೊಂದು ಖಯಾಲಿ. ಬಟ್ಟೆ ಹೊಲಿಸಿಕೊಳ್ಳಲು ಬರುವ ಬಹುತೇಕ ಹುಡುಗೀರ ಜೊತೆ ಅವರಿಗೆ ಇಷ್ಟವಾಗುವ ಹಾಗೆ ಮಾತಾಡುತ್ತಿದ್ದ. ಜೋಕ್ ಮಾಡುತ್ತಿದ್ದ. ನಗಿಸುತ್ತಿದ್ದ. ಕೀಟಲೇ ಮಾಡುತ್ತಿದ್ದ. ಕೆಲವು ಚೆಲುವೆಯರಿಗೆ ಜಗ್ಗಿ ಪಕ್ಕನೆ ಇಷ್ಟ ಕೂಡ ಆಗಿಬಿಡುತ್ತಿದ್ದ. ನಾವೆಲ್ಲ ಅವನ ಹೀರೋಯಿಸಂ ನೋಡಿ ಬೆಕ್ಕಸ ಬೆರಗಾಗುತ್ತಿದ್ದೆವು. ಹುಡುಗೀರ ಮುಂದೆ ಅಷ್ಟೆಲ್ಲ ಶಾಣ್ಯಾತನ ತೋರಿಸಿ ಅವರನ್ನ ಬುಟ್ಟಿಗೆ ಹಾಕಿಕೊಳ್ಳುವ ಅವನ ಕಲೆ ನಮಗೆ ಮಿರಾಕಲ್ ಥರ ಕಾಣಿಸುತ್ತಿತ್ತು. ಅವನಿಗೋ ಊರ ತುಂಬಾ ಪ್ರೇಯಸಿಯರಿದ್ದರು.ವಾರದಲ್ಲಿ ಒಂದೆರಡು ದಿನ ಒಬ್ಬೊಬ್ಬರ ಜೊತೆ ಹೊರಗೆಲ್ಲೋ ಹೋಗಿ ಸುತ್ತಾಡಿಕೊಂಡು ಬರುತ್ತಿದ್ದ. ನಮಗೋ ಒಳಗೊಳಗೇ ಹೊಟ್ಟೆಕಿಚ್ಚು.
ಮೇಲಿಂದ ಮೇಲೆ ಅವನ ಹುಡಗೀರ ಆಪಾದನೆಗಳು ಕೇಳಿಬಂದವು. ಅದನ್ನೆಲ್ಲ ಹೇಗೋ ಮ್ಯಾನೇಜ್ ಮಾಡಿಕೊಳ್ಳುತ್ತಿದ್ದ ಜಗ್ಗಿ, ಒಂದ್ಸಲ ವಿಪರೀತ ಯಡವಟ್ಟು ಮಾಡಿಕೊಂಡುಬಿಟ್ಟಿದ್ದ. ಹುಡುಗಿಯೊಬ್ಬಳನ್ನು ಪ್ರೀತಿಸುವ ಅವನ ಇನ್ನೊಂದು ನಾಟಕ ಆರಂಭವಾಗಿತ್ತು. ಆ ಪ್ರೀತಿ ಕೂಡ ಹುಟ್ಟಿಕೊಂಡಿದ್ದೇ ವಿಚಿತ್ರ. ಜಗ್ಗಿಯ ಅಣ್ಣನಿಗೆ ಹೆಣ್ಣು ನೋಡಲು ಹೋದಾಗ ಆ ಮದುವೆ ಕುದುರಿರಲಿಲ್ಲ. ಆದ್ರೆ ಜಗ್ಗಿ ಹುಡುಗಿಯ ತಂಗಿಯನ್ನ ಒಲಿಸಿಕೊಂಡುಬಿಟ್ಟಿದ್ದ. ನೋಡ ನೋಡುತ್ತಿದ್ದಂತೆ ಅವನ ಓಡಾಟ ಜೋರಾಗತೊಡಗಿತು. ಟೈಲರ್ ಅಂಗಡಿ ಬಾಗಿಲು ತೆಗೆಯುವುದೇ ಅಪರೂಪವಾಗಿತ್ತು. ಬಟ್ಟೆ ಹೊಲಿಯಲು ಕೊಟ್ಟಿದ್ದ ಮಹಿಳೆಯರು ಬೈದುಕೊಂಡು ತಿರುಗಾಡತೊಡಗಿದರು. ನಾವು ಕೂಡ ಆ ಅಡ್ಡ ಬದಲಾಯಿಸಿದೆವು.
ಹೀಗಿರುವಾಗಲೇ ಜಗ್ಗಿ ಒಂದಿನ ಎಲ್ಲಿಂದಲೋ ಫೋನ್ ಮಾಡಿದ್ದ. ನನಗೊಂದು ಹೆಲ್ಪ್ ಆಗಬೇಕು ರವೀ ಅಂತ. ಏನು ಅಂದಿದ್ದೆ. ನಾನು ಒಂದು ಹುಡುಗಿಯನ್ನ ಕರೆದುಕೊಂಡು ಬಂದುಬಿಟ್ಟಿದ್ದೇನೆ. ಏನು ಮಾಡುವುದೋ ಗೊತ್ತಾಗುತ್ತಿಲ್ಲ ಅಂದ.
ಯಾರು ಆ ಹುಡುಗಿ? ಅಂದೆ.
ಅದೇ ನಾನು ಇತ್ತೀಚೆಗೆ ಪ್ರೀತಿಸುತ್ತಿದ್ದೆನಲ್ಲ ಅದೇ ಹುಡುಗಿ ಅಂದ.
ಇನ್ನಾರಾದ್ರೂ ಹೊಸಬರು ಸಿಕ್ಕಿರಬೇಕು ಅಂದುಕೊಂಡ ನಾನು ಯಾರು ಗೊತ್ತಾಗ್ತಿಲ್ಲ ಕಣೋ ಅಂದೆ.
ಪ್ರಣತಿ ಕಣೋ ಅಂದ.
ನನಗೆ ನಿಜಕ್ಕೂ ಶಾಕ್ ಆಗಿದ್ದು ಆಗಲೇ... ಯಾಕೆಂದ್ರೆ ಆ ಹುಡುಗಿ ಸೌಮ್ಯ ಸ್ವಭಾವದವಳು. ಮರ್ಯಾದಸ್ತ ಮನೆತನದವಳು. ಅಂಥವಳು ಇವನ ಬಲೆಗೆ ಬಿದ್ದುಬಿಟ್ಟಳು ಅಂದ್ರೆ ಇವನು ಎಂಥ ಗಾಳ ಹಾಕಿರಬೇಡ...?
ಬೆಂಗಳೂರಿಗೆ ಬಂದು ಮೂರು ದಿನ ಆಯ್ತು. ಯಾರದ್ದೋ ಸಂಬಂಧಿಕರ ಮನೆಯಲ್ಲಿದ್ದೇವೆ. ಯಾಕೋ ಭಯ ಆಗ್ತ್ತಿದೆ. ಏನ್ಮಾಡ್ಲೀ ಅಂತ ಕಣ್ಣೀರಾಕಿದ್ದ.
ಇಂಥವನಿಗೆ ಏನೂ ಮಾಡಬಾರದು ಅಂತ ನನಗಾಗಲೇ ಗೊತ್ತಾಗಿಹೋಗಿತ್ತು ಹಾಗಾಗಿ ಆಯ್ತು ನೋಡೋಣ ಅಂತ ಸುಮ್ಮನಾದೆ. ವಾರ ಕಳೆಯುವಷ್ಟರಲ್ಲಿ ಆತ ನಮ್ಮ ಊರಿಗೆ ಅವಳ ಜೊತೆ ಬಂದಿದ್ದ. ಮಗಳು ಪ್ರಣತಿ ನಾಪತ್ತೆ ಆಗಿದ್ದು ಈ ಟೈಲರ್ ಜೊತೆಗೇ ಅಂತ ಗೊತ್ತಾದ ಆಕೆಯ ಮನೆಯವರು ವ್ಯಗ್ರರಾಗಿದ್ದರು. ಸಿಗಲಿ ಕತ್ತರಿಸಿ ಹಾಕುತ್ತೇವೆ ಅಂತ ಅಬ್ಬರಿಸುತ್ತಿದ್ದರು. ಕತ್ತರಿಸಿ ಹಾಕಿದ್ರೆ ಗತಿ ಏನು ಅನ್ನೋದು ನಮ್ಮೆಲ್ಲರ ಆತಂಕವೂ ಆಗಿತ್ತು.
ಪ್ರಣತಿ ಒಂದು ರಾತ್ರಿ ಮನೆ ತಲುಪಿದ್ದಳು. ಆದ್ರೆ ಅವಳನ್ನು ಬಿಟ್ಟ ಜಗ್ಗಿ ಅಬ್ಸ್ಕ್ಯಾಂಡ್. ಎಲ್ಲಿ ಹೋದ? ಆಕೆಯ ಮನೆಯವರು ಹುಡುಕತೊಡಗಿದರು. ನಾವು ಪ್ರಣತಿಯನ್ನ ಭೇಟಿ ಆಗಿ ಏನೆಲ್ಲ ನಡೀತು ಅಂತ ತಿಳಿದುಕೊಂಡೆವು. ನಿನ್ನನ್ನ ಮದುವೆ ಆಗುತ್ತೇನೆ ಅಂತ ನಂಬಿಸಿ ಜಗ್ಗಿ ಪ್ರಣತಿಯನ್ನ ಕರೆದುಕೊಂಡು ಹೋಗಿದ್ದನಂತೆ. ಹುಡುಗಿಗೆ ಸತ್ಯ ಅರ್ಥವಾಗಿತ್ತು. ನನಗೆ ಜಗ್ಗಿಯ ಜೊತೆ ಇಷ್ಟವಿಲ್ಲ ಅಂತ ಗೋಳಾಡುತ್ತಿದ್ದಳು. ಅವಳಿಗೆ ಅವನ ಇನ್ನೊಂದು ಮುಖ ಆಗಲೇ ತಿಳಿದುಹೋಗಿತ್ತು. ಆದ್ರೆ ಏನೂ ಮಾಡುವ ಹಾಗಿರಲಿಲ್ಲ. ಊರ ತುಂಬಾ ಇವರಿಬ್ಬರ ವಿಷಯವೇ ಗುಲ್ಲು ಗುಲ್ಲು.
ಪ್ರಣತಿಯಂತೂ ವಾರದಲ್ಲೇ ಸೊರಗಿಹೋಗಿದ್ದಳು. ಎರಡು ರಾತ್ರಿ ಏನೂ ತಿಂದಿರಲಿಲ್ಲವಂತೆ. ನನಗೆ ಈ ಪ್ರೀತೀನು ಬೇಡ ಏನೂ ಬೇಡ. ಊರಿಗೆ ಕರೆದುಕೊಂಡು ಹೋಗಿ ಬಿಟ್ಟುಬಿಡು ಅಂತ ಹಟ ಹಿಡಿದಿದ್ದಳಂತೆ. ಆದ್ರೆ ಜಗ್ಗಿ ಅಷ್ಟು ಸುಲಭವಾಗಿ ಬಿಡುವವನಲ್ಲ.
ಒಂದಿನ ಜಗ್ಗಿ ಊರಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ. ಮೊದಲೇ ಹೇಳಿದಂಗೆ ಹುಂಬು ಧೈರ್ಯ ಅವನದ್ದು. ಪ್ರಣತಿಯ ಮನೆಯವರು ಜಗ್ಗಿಯನ್ನ ಹಿಡಿದು ಯಾವ ಪರಿ ತದುಕಿದ್ದರೆಂದ್ರೆ ಕೊಂದೇ ಹಾಕಿಬಿಡುತ್ತಾರೆನೋ ಅಂತ ನಾವೆಲ್ಲ ಗಾಬರಿ ಆಗಿದ್ದೆವು. ಇಬ್ಬರನ್ನೂ ಕೂರಿಸಿಕೊಂಡು ಮದುವೆ ಆಗ್ತಿರಾ ಅಂತ ಕೇಳಿದ್ರೆ ಪ್ರಣತಿ ಬಿಲ್ಕುಲ್ ನಾನು ಮದುವೆ ಆಗೊಲ್ಲ ಅಂದುಬಿಟ್ಟಿದ್ದಳು. ಜಗ್ಗಿಗೂ ಅವಳು ಬೇಕಾಗಿರಲಿಲ್ಲ. ಇವಳಿಲ್ಲದಿದ್ರೆ ಇನೊಬ್ಬಳು ಅನ್ನುವ ಆಸಾಮಿ ಆತ. ಪ್ರಣತಿ ಹೋದರೇನು ...?
ಆ ಕೇಸ್ ಅಲ್ಲಿಗೆ ಹೇಗೋ ಸ್ತಭ್ದವಾಯಿತು.
ಇದಾದ ಮೇಲೆ ಒಂದೆರಡು ತಿಂಗಳು ಸರಿಯಾಗಿ ಬಾಗಿಲು ತೆಗೆದ ಜಗ್ಗಿ. ಆದ್ರೆ ನಾಯಿ ಬಾಲ ನೆಟ್ಟಗಾದೀತೆ. ಮತ್ತೆ ಅವನ ಬೇಟೆ ಶುರುವಾಗಿತ್ತು. ಪ್ರಣತಿಯನ್ನ ಅವಳ ಮನೆಯವರು ತರಾತುರಿಯಲ್ಲಿ ಮದುವೆ ಮಾಡಿ ಬೆಂಗಳೂರಿಗೆ ಹುಡುಗನ ಮನೆಗೆ ಕಳುಹಿಸಿಕೊಟ್ಟುಬಿಟ್ಟಿದ್ದರು. ಅವಳು ಒಮ್ಮೆ ಊರಿಗೆ ಬಂದಾಗ ನನಗೆ ಸಿಕ್ಕಿದ್ದಳು. ಎಲ್ಲೋ ಜಗ್ಗಿ ಅಂದಿದ್ದಳು. ನೀನು ಅವನನ್ನ ಇನ್ನೂ ಮರೆತಿಲ್ವಾ... ಅಂದೆ. ಬದುಕಿಗೆ ಕೊಳ್ಳಿ ಇಟ್ಟವನನ್ನ ಹೇಗೋ ಮರೆಯೋದು ಅಂದಿದ್ದಳು.
ಹೇಗಿದೆ ಹೊಸ ಜೀವನ ಅಂದೆ. ನಿನ್ನ ಗೆಳೆಯನ ಪ್ರೀತಿ ನಂಬಿಕೊಂಡಿದ್ರೆ ನಾನು ಹಸಿವಿನಿಂದ... ಕೀಳರಿಮೆಯಿಂದ.. ದುಃಖದಿಂದ ಸತ್ತು ಹೋಗ್ತಿದ್ದೆ ಕಣೋ. ದೇವರು ಡೊಡ್ಡವನು. ಆದ್ರೆ ಆ ನೋವಿನ್ನೂ ಎದೆಯಲ್ಲಿ ಜೀಕುತ್ತಿದೆ. ಅದನ್ನ ಸಮಾಧಿ ಮಾಡಲುಪ್ರಯತ್ನಿಸುತ್ತಿದ್ದೇನೆ ಅಂದಿದ್ದಳು. ಕಣ್ಣು ಒದ್ದೆ ಒದ್ದೆ.
***
ಯಾಕೋ ಲಕ್ಷ್ಮಿಯಂಥವರ ಫೋನ್ ಕರೆಗಳು ಬಂದಾಗಲೆಲ್ಲ ಪ್ರೀತಿಯ ಇನ್ನೊಂದು ಮುಖ ಕೈ ಹಿಡಿದು ಜಗ್ಗಿದಂತಾಗುತ್ತದೆ.
ಟೇಕ್ ಕೇರ್.

Sunday, January 3, 2010

ನಿಮ್ಮನ್ನು ನೋಡುವ ಭಾಗ್ಯ ಹೀಗಾದರೂ ಸಿಗಲಿಗೆಳೆಯ ಮಣಿಕಾಂತ್ ಮತ್ತು ನನ್ನದು ಆರೇಳು ವರ್ಷಗಳ ಗಟ್ಟಿ ಸ್ನೇಹ. ನಾನು ವಿಜಯಕನರ್ಾಟಕದ ಹೊಸ್ತಿಲು ತುಳಿಯುವ ಹೊತ್ತಿಗಾಗಲೇ ಅವರು ಅಲ್ಲಿ ಸ್ಥಾಪಿತರಾಗಿಬಿಟ್ಟಿದ್ದರು. ತುಂಬಾ ಆತ್ಮೀಯ. ಸ್ನೇಹಿತರ ಬಗ್ಗೆ ತುಂಬಾ ಪ್ರೀತಿ ಇಟ್ಟುಕೊಂಡವರು. ಯಾವಾಗ ಸಿಕ್ಕರೂ ಗಂಟೆಗಟ್ಟಲೇ ಕುಳಿತು ಹರಟುತ್ತೇವೆ. ಬನ್ನಿ ರವಿ ನಿಮಗೆ ಗಣೇಶ್ ಸ್ವೀಟ್ಸ್ನಲ್ಲಿ ಮೈಸೂರ್ ಪಾಕ್ ಕೊಡಸ್ತೀನಿ ಅಂತ ಕರ್ಕೊಂಡು ಹೋಗಿ ಅವಾಗವಾಗ ಮೈಸೂರ್ ಪಾಕ್ ತಿನ್ನಿಸ್ತಿರ್ತಾರೆ. ಹಾಗಾಗೆ ನಾನು ದಪ್ಪ ಅಂತ ಏನಾದರೂ ಆಗಿದ್ದರೆ ಅದರ ಹಿಂದೆ ಮಣಿಯ ಕೈವಾಡವೂ ಇದೆ ಅನ್ನುವ ಗುಮಾನಿ ನನಗೆ. ಒಮ್ಮೊಮ್ಮೆ ಅಂತೂ ನಿಮ್ಮನ್ನು ನೋಡಬೇಕು ಎಲ್ಲಿ ಸಿಕ್ತೀರಾ ಅಂತ ಮೆಸೇಜ್ ಬಿಟ್ಟು ತುದಿಗಾಲಲ್ಲಿ ನಿಂತಿರ್ತಾರೆ. ಪ್ರತಿ ಸಲ ಸಿಕ್ಕಾಗಲೂ ಅದೇ ಪ್ರಿತಿ ಅದೇ ರೀತಿ.
ಇಂಥ 'ಮಣಿಯ ಹಾಡು ಹುಟ್ಟಿದ ಸಮಯ' ಅನ್ನೋ ಪುಸ್ತಕ ಹತ್ತನೇ ತಾರೀಕು ಬೆಳಿಗ್ಗೆ ಹತ್ತೂ ಮೂವತ್ತಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಅನಾವರಣಗೊಳ್ಳುತ್ತಿದೆ. ವಿಜಯಕನರ್ಾಟಕದಲ್ಲಿ ಅತ್ಯಂತ ಪಾಪ್ಯುಲರ್ ಆದ ಕಾಲಂ ಅದು. ಗುನುಗುನಿಸುವ ಹಾಡು ಹುಟ್ಟಿದ್ದರ ಹಿಂದೆ ಒಂದು ಪ್ರೀತಿ ಇದ್ದ ಹಾಗೆ ದುಃಖವೂ ಇರುತ್ತದೆ. ಪ್ರತಿ ಹಾಡಿಗೂ ಒಂದು ಇತಿಹಾಸ ಇದ್ದೇ ಇರುತ್ತದೆ. ಅಂತ ಹಾಡುಗಳ ಇತಹಾಸವೇ ಈ ಪುಸ್ತಕ. ಅವತ್ತು ನಟ ರಮೇಶ್ ಅರವಿಂದ್ ಬರ್ತಿದಾರೆ. ವಿಶ್ವೇಶ್ವರಭಟ್, ಅನಂತ ಚಿನಿವಾರ್ ಮುಂತಾದವರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ಒಂದಿಷ್ಟು ಹಾಡುಗಳಿವೆ. ನೀವು ಅವತ್ತು ಬಿಡುವು ಮಾಡಿಕೊಂಡು ಬರಲೇಬೇಕು ಇಲ್ಲದಿದ್ದರೆ ನಾನು ಸುಮ್ಮನಿರೋಲ್ಲ ಅಂತ ಅವಾಜ್ ಹಾಕಿ ಹೋಗಿದ್ದಾರೆ ಮಣಿ. ಬಹುಶಃ ಅವರಿಗಿಂತ ಮೊದಲೇ ಅವತ್ತು ನಾನಲ್ಲಿರುತ್ತೇನೆ.
ನೀವೂ ಬನ್ನಿ... ನಿಮ್ಮನ್ನು ನೋಡುವ ಭಾಗ್ಯ ಹೀಗಾದರೂ ಸಿಗಲಿ.
ಮಿಸ್ ಮಾಡಲ್ಲ ತಾನೆ.

Monday, November 2, 2009

ಮುಖ ಮುಖವಾಡಕ್ಕೆ ಬಲಿಯಾಗಿದೆ

ಓ ಮನಸೇಯಲ್ಲಿ ನಾನು ಅತ್ಯಂತ ಪ್ರೀತಿಯಿಂದ ಬರೆಯುವ ಕಾಲಂ ಇನ್ಬಾಕ್ಸ್. ಹಾಗೇ ಹೆಚ್ಚು ತಲೆಕೆಡಿಸಿಕೊಂಡು ಬರೆಯುವ ಕಾಲಂ ಸಹ ಅದೆ. ಅದಕ್ಕೆ ಅದರದೇ ಆದ ಸಾವಿರಾರು ಓದುಗರಿದ್ದಾರೆ. ಅಭಿಮಾನಿಗಳಿದ್ದಾರೆ. ಕೆಲಸದ ಒತ್ತಡದಿಂದಲೋ ಅಥವಾ ನನ್ನ ಸೋಮಾರಿತನದಿಂದಲೋ ಒಂದಷ್ಟು ಕಾಲ ಬರೆಯಲಾಗಿರಲಿಲ್ಲ. ರವಿ ಬೆಳಗೆರೆ ಕೂಡ ಅದೇನೋ ಇನ್ಬಾಕ್ಸ್ ಅಂತ ಬರಿತೀರಲ್ಲ ರವಿ ಅದಕ್ಕೆ ತುಂಬಾ ಜನ ಓದುಗರಿದ್ದಾರೆ ಮತ್ತೆ ಬರೀರಿ ಅನ್ನುವ ಪ್ರೀತಿ ತೋರಿಸಿದ್ದರು. ಆದರೆ ನನಗೇ ಯಾಕೋ ಸಾಧ್ಯವಾಗಿರಲಿಲ್ಲ. ಕೆಲವೊಮ್ಮೆ ಬರೀಬೇಕು ಅನ್ನುವ ತುಡಿತ ಇದ್ದರೂ ಮನಸು ಚಂಡಿ ಹಿಡಿದು ಕುಳಿತುಬಿಡುತ್ತದೆ. ಜಪ್ಪಯ್ಯ ಅಂದರೂ ಒಂದು ಸಾಲು ಬರೆಯಲಾಗುವುದಿಲ್ಲ. ಎಲ್ಲಾ ಸರಿ ಇದೆ ಇನ್ನೇನು ಬರೆದುಬಿಡೋಣ ಅಂತ ಕೂತರೆ ಇನ್ನೇನೋ ಅವಾಂತರ. ಒಟ್ಟಿನಲ್ಲಿ ಇನ್ಬಾಕ್ಸ್ಗೆ ಕಲ್ಲುಬಿದ್ದಿತ್ತು.
ಈಗ ಮತ್ತೆ ಎರಡು ಸಂಚಿಕೆಯಿಂದ ಬರೆಯಲು ತೊಡಗಿದ್ದೇನೆ. ಅದೇ ಶ್ರದ್ಧೆಯಿಂದ ಅದೇ ಪ್ರೀತಿಯಿಂದ. ಓದಿಕೊಳ್ಳಿ.

ಇನ್ನು
ಕಾರಣ ಸಾಕು
ಆಚೆ ಹೋಗು
ಎದೆಯಿಂದ
ಅಲ್ಲೀಗ
ಪಟ್ಟಾಭಿಷೇಕ
ನಡೆಯುತ್ತಿದೆ
ಇನ್ನೊಬ್ಬನಿಗೆ
*
ನೆಲ
ಅಗೆದು
ನೀರು ಕೊಡಬಲ್ಲೆ
ಎದೆ ಬಗೆದು
ಹೇಗೆ ಕೊಡಲಿ
ರಕುತ
*
ನೀನು
ಎಲ್ಲಾ ಕೇಳಿದೆ
ನನ್ನ ಬಳಿ
ಪ್ರೀತಿಯೊಂದನ್ನು
ಬಿಟ್ಟು
*
ನನಗೊಂದು
ಆಸೆ ಇದೆ
ನಿನ್ನ
ತೋಳ ತೆಕ್ಕೆಯಲಿ
ಸಾಯಬೇಕೆಂದು
*
ಪ್ರೀತಿ ಅಂದರೆ
ದೇವರ
ಕಾಲ ಕೆಳಗಿನ
ಹೂವಲ್ಲ
ಅದು
ನೀಲಾಂಜನ
*
ನಾವು
ಕಾಮವನ್ನು
ಬಿಡಬಹುದು
ಕಾಮ
ನಮ್ಮನ್ನು
ಬಿಡೋಲ್ಲ
*
ನನಗೆ
ಅಳುವುದಕ್ಕೆ ಬಿಡು
ದೇವರೇ
ಇನ್ನಾದರೂ
ಅವಳ
ನೆನಪು
ಸಾಯಲಿ
*
ಕಷ್ಟ ಬಂದಾಗ
ದೇವರೇ
ನನಗೊಂದು
ದೊಡ್ಡ
ಕಷ್ಟ ಇದೆ
ಏನು ಮಾಡಲಿ
ಅನ್ನಬೇಡಿ
ಕಷ್ಟವೇ
ನನ್ನಲ್ಲಿ
ದೊಡ್ಡ ದೇವರಿದ್ದಾನೆ ಎನ್ನಿ
*
ಗೊತ್ತಾಗುತ್ತೆ ಬಿಡು
ನಿನಗೂ
ಒಡೆದ ಹೃದಯದ
ನೋವು
ಏನೆಂದು!
*
ಸೋಲುವುದು
ಸುಲಭ
ಗೆಲ್ಲುವುದು ಕಷ್ಟ
ಅದಕ್ಕೆ
ನಾನು ನಿನಗೆ
ಸೋತಿದ್ದು
*
ತುಂಬಾ ಜನ
ಪ್ರಪೋಸ್ ಮಾಡಿದ್ರು
ನಂಗೆ ಇಷ್ಟ ಇಲ್ಲ ಅಂದೆ
ಈಗ
ಅವರೆಲ್ಲ
ಸುಖವಾಗಿದಾರೆ
*
ನೀನು ಕೊಟ್ಟ
ಗುಲಾಬಿ
ಬಣ್ಣ
ಕಳಕೊಂಡಿದೆ
*
ಎಂದಿಗಿಂತ
ಇಂದು
ರುಚಿಯಾಗಿತ್ತು ಕಣೆ
ಕಾಫಿ
ನಿನ್ನ
ಪ್ರೀತಿ
ಬೆರೆಸಿದ್ಯಾ?
*
ನಿನಗೊಂದು
ಮಾತೂ ಹೇಳದೆ
ಸತ್ತು ಹೋಗಬಹುದು
ನಾನು
ಡೋಂಟ್ ವರಿ
ಸತ್ತ ಮೇಲೂ
ನಿನ್ನ
ಪ್ರೀತಿಸುವುದಿದ್ದರೆ
ಅದು
ನಾನು ಮಾತ್ರ
*
ಪ್ರತಿ ಕಣ್ಣೀರೂ
ದುಃಖದ್ದಲ್ಲ
ಪ್ರತಿ ನಗುವೂ
ಸುಖದ್ದಲ್ಲ
ಪ್ರತಿ ಮೌನವೂ
ಏಕಾಂತದ್ದಲ್ಲ
ಮುಖ
ಮುಖವಾಡಕ್ಕೆ
ಬಲಿಯಾಗಿದೆ
*
ದೇವರು
ಒಂದು ಹೂ ಮಾಡಿ
ಜೇನಿನಲ್ಲಿ ಅದ್ದಿ
ಇಟ್ಕೋ ಅಂತ ಕೊಟ್ಟ
ಅದು
ನೀನೇ ಕಣೆ
*
ಒದ್ದೆಯಾದ
ಮಣ್ಣ ಮೇಲೆ ನಿಂತು
ಆಚೆ ಬಂದಾಗಲೂ
ಉಳಿದುಬಿಡುತ್ತದಲ್ಲ
ಗುರುತು
ಹಾಗೇ ಪ್ರೀತಿ
*
ಪುಟ್ಟ ಕಥೆ ಹೇಳ್ತೀನಿ
ಅವನು ನಕ್ಕ
ಇವಳೂ ನಕ್ಕಳು
ಮಗು ಮಾತ್ರ
ಅಳ್ತಿತ್ತು
*
ಮಳೆ ಅಂದ್ರೆ
ಇಷ್ಟ ಅಂದವರೆ
ಬಂದಾಗ
ಛತ್ರಿ ಹುಡುಕ್ತಾರೆ
ಸೂರ್ಯ ಅಂದ್ರೆ
ಇಷ್ಟ ಅಂದವರೆ
ನೆರಳು ಹುಡುಕ್ತಾರೆ
ತಂಗಾಳಿ ಬೀಸಲಿ
ಅಂದವರೆ
ಬಂದಾಗ ಕಿಟಕಿ ಹಾಕ್ತಾರೆ
ಅದಕ್ಕೇ ಗೆಳೆಯ
ಯಾರಾದ್ರೂ
ಐ ಲವ್ ಯೂ
ಅಂದಾಗೆಲ್ಲ
ನನಗೆ ಭಯ
*
ಏನೂ
ಕೊಡಬೇಡ
ಕೇವಲ
ಪ್ರೀತಿಯ
ಹೊರತು
*
ಪ್ರೀತಿ
ಸುಲಭವೂ ಅಲ್ಲ
ಕಷ್ಟವೂ ಅಲ್ಲ
ಅದು ಹಗ್ಗದ
ಮೇಲಿನ ನಡಿಗೆ
*
ನಿಜ ಹೇಳ್ತೀನಿ
ನಾನು ಬಡವನಾಗಲು
ನಿನ್ನ ಬ್ಯೂಟಿಯೇ ಕಾರಣ
ನಿನಗೆ
ಕಾಸ್ಮೆಟಿಕ್ಸ್ ಕೊಡಿಸಲಿಲ್ಲ ಅಂದ್ರೆ
ಬೆಂಗಳೂರಲ್ಲೊಂದು
ಸೈಟ್ ಮಾಡ್ತಿದ್ದೆ
*
ಮೊನ್ನೆ ಕೇಳಬೇಕು ಅಂತಿದ್ದೆ
ಆಗಲಿಲ್ಲ
ನಿನ್ನೆ ಕೇಳಬೇಕು ಅಂತಿದ್ದೆ
ಆಗಲಿಲ್ಲ
ಇವತ್ತು ಕೇಳ್ತಿದೀನಿ ಕಣೋ
ನನ್ನ ಮರೆತು ಬಿಡು
ನನಗೆ ಪ್ರೀತಿಯೆಂದರೆ
ಕೇವಲ ಶೋಕಿಯಲ್ಲ
*
ಕೆಲವರು
ಬದುಕು
ಬಿಸಾಕಿ ಎದ್ದು ಹೋಗಿದ್ದು
ಬಾಳಲಿಕ್ಕಾಗಲ್ಲ ಅಂತಲ್ಲ
ನಾವೇ
ಬಿಡಲಿಲ್ಲ ಅಂತ

ನೂರು ರುಪಾಯಿಗೆ ಏನು ಬರುತ್ತೆ?

ಮೊನ್ನೆ ಸಂಜೆ ಯಾಕೋ ಫುಲ್ ಅಜರ್ೆಂಟಾಗಿ ಒಂದು ಟೀ ಕುಡಿಯಬೇಕೆನಿಸಿತು. ಒಮ್ಮೊಮ್ಮೆ ಯಾಕೆ ಹಾಗನ್ನಿಸುತ್ತದೆ ಅಂತ ನನಗೂ ಗೊತ್ತಿಲ್ಲ. ಬೇಜಾರಗಲಿಕ್ಕೆ, ತಲೆ ನೋವು ಬರಲಿಕ್ಕೆ ಆಫೀಸಿನಲ್ಲಿ ಬೇಜಾನ್ ಕಾರಣಗಳಿವೆ ಬಿಡಿ. ಆದರೆ ಅವತ್ತು ಅಂಥದ್ದೇನೂ ನಡೆದಿರಲಿಲ್ಲ.
ಆಫೀಸಿನ ಪಕ್ಕದಲ್ಲೊಂದು ಬೇಕರಿ ಇದೆ. ಅದು ಮರಳುಗಾಡಿನಲ್ಲಿ ಸಿಕ್ಕ ಓಯಸಿಸ್ ಥರ. ಅಲ್ಲಿಗೆ ಹೋಗಿ ಒಂದು ಟೀ ಹೇಳಿ ನಿಂತುಕೊಂಡೆ. ಬ್ಲೂ ಜೀನ್ಸ್ ಬ್ಲ್ಯಾಕ್ ಟೀಶಟರ್್ ತೊಟ್ಟಿದ್ದ ಚೆಲುವೆಯೊಬ್ಬಳು ಬಂದು ಎರಡು ಲೀಟರ್ ಪೆಪ್ಸಿ, ಎರಡು ಲೀಟರ್ ಮಿರಿಂಡಾ, ಎಡು ಲೀಟರ್ ಕೋಕ್ ತೆಗೆದುಕೊಂಡು ಹೋದಳು. ಅವಳು ಆ ಕಡೆ ಹೋದ ಮೇಲೆ ಅಂಗಡಿಯಾತ ಯಾತಕ್ಕೋ ನಕ್ಕ. ಏನ್ರಿ ಅಷ್ಟೊಂದು ಕುಡಿತಾರಾ? ಅಂದೆ. ಸ್ನಾನಕ್ಕಿರಬೇಕು ಸಾರ್ ಅಂದು ಆತ ಮತ್ತೆ ಫಕಫಕನೆ ನಕ್ಕ.
ಕೈಗೆ ಟೀ ಬರುವಷ್ಟರಲ್ಲಿ ಒಂದು ಮಗು ನೂರು ರುಪಾಯಿಯ ನೋಟು ಹಿಡಿದುಕೊಂಡು ಓಡೋಡಿ ಬಂತು. ಅದರ ಅಮ್ಮ ಮತ್ತು ಚಿಕ್ಕ ತಂಗಿ ಇನ್ನೂ ಆ್ಯಕ್ಟೀವಾದಿಂದ ಇಳಿದಿರಲೇ ಇಲ್ಲ. ಆಗಲೇ ಈ ಪೋರಿ ಈ ನೂರು ರುಪಾಯಿಗೆ ಏನು ಬರುತ್ತೆ ಅಂಕಲ್ ಅಂತ ಮೂರು ಸಲ ಕೇಳಿದ್ದಳು. ಅಂಗಡಿಯಾತ ಮಲಯಾಳಿ. ಅವನಿಗೆ ಏನು ಅರ್ಥ ಆಯಿತೋ ಅರ್ಥ ಆಗಲಿಲ್ಲವೋ! ಮಗುವಿನ ಮಾತಿಗೆ ಪ್ರತಿಕ್ರಿಯಿಸಲಾಗದೇ ಸುಮ್ಮನೆ ನಿಂತಿದ್ದ. ಮಗು ಮತ್ತೆ ಕೇಳಿತು, ಅಲ್ಲಿದ್ದ ತಿಂಡಿಯನ್ನೆಲ್ಲ ಒಮ್ಮೆ ನೋಡುತ್ತಾ... ನೂರು ರುಪಾಯಿಗೆ ಏನು ಬರುತ್ತೆ ಅಂಕಲ್ ?
ಅಂದರೆ ಆ ಮಗುವಿಗೆ ನೂರು ರುಪಾಯಿಗೆ ಅಂಥದ್ದೇನೂ ಬರೋಲ್ಲ ಅಂತ ಗೊತ್ತಾಗಿದೆಯೇ? ನೋ ಐಡಿಯಾ!
ಅಷ್ಟರಲ್ಲಿ ಅವರ ಅಮ್ಮ ಹೆಲ್ಮೆಟ್ಟೂ ತೆಗೆಯದೇ ಪರ ಲೋಕದಿಂದ ಬಂದ ಏಲಿಯನ್ಸ್ ಥರ ಇನ್ನೊಂದು ಚಿಕ್ಕ ಮಗುವಿನ ಕೈ ಹಿಡಿದುಕೊಂಡು ಬಂದಳು. ಮಗುವಿನ ಕೈಯಲ್ಲಿದ್ದ ನೂರು ರುಪಾಯಿ ಇಸಿದುಕೊಂಡು ಏನು ಬೇಕು ಬೇಗ ಹೇಳು? ಅಂತ ಅವಸರವಸರ ಮಾಡಿದಳು.
ಚಿಕ್ಕದು ದೊಡ್ಡದಕ್ಕಿಂತ ಹುಷಾರು. ನನಗೆ ಜೆಮ್ಸ್ ಬೇಕು. ಫ್ರೂಟಿ ಬೇಕು, ಕುರುಕುರೆ ಬೇಕು ಅಂತೆಲ್ಲ ಕೈ ಬೆರಳು ಎಣಿಸುತ್ತಾ ಪಟ್ಟಿಮಾಡತೊಡಗಿತು. ದೊಡ್ಡ ಮಗುವಿಗೆ ಮಾತ್ರ ಮೊದಲಿದ್ದ ಸ್ಪಿರಿಟ್ ಯಾಕೋ ಕಡಿಮೆಯಾದಂತಿತ್ತು. ಅದು ಒಂದೇ ಒಂದು ಡೈರಿಮಿಲ್ಕ್ಗೆ ಮೊರೆ ಹೋಗಿತ್ತು ಅಷ್ಟೆ.
ಬದುಕು ಎಂಥ ಡ್ರಾಸ್ಟಿಕ್ ಚೇಂಜ್ಗೆ ಒಳಗಾಗಿದೆ ಅಲ್ವಾ? ನಾವು ಚಿಕ್ಕವರಿದ್ದಾಗ ಐದು ಪೈಸೆಗೆ ಐದು ಶುಂಠಿ ಪೆಪ್ಪರ್ ಮಿಂಟ್ ಸಿಕ್ಕಿದರೆ ಅದೇ ಭಾಗ್ಯ. ಅದನ್ನೇ ಎಲ್ಲಿ ಬೇಗ ಕರಗಿ ಹೋಗುತ್ತದೋ ಅಂತ ಸ್ವಲ್ಪ ಚೀಪಿ ಇನ್ನು ಸ್ವಲ್ಪವನ್ನ ಅಂಗಿ ತುದಿಯಲ್ಲಿ ಒರೆಸಿ ಚಡ್ಡಿ ಜೇಬಲ್ಲಿ ಇಟ್ಟುಕೊಳ್ಳುತಿದ್ವಿ. ಈಗಿನ ಮಕ್ಕಳಿಗೆ ಅಂತ ಕೊರತೆಯಿಲ್ಲ. ಲಿಮಿಟ್ಟುಗಳೂ ಇಲ್ಲ. ಬಯಸಿದ್ದು ಕ್ಷಣದಲ್ಲೇ ಬೊಗಸೆಯಲ್ಲಿ ಸಿಗುತ್ತದೆ. ಸಿಗದೇ ಹೋಗಿರುವುದು ನಮಗೆ ಸಿಕ್ಕಿತಲ್ಲ ಆ ಮಜಬೂತಾದ ಬಾಲ್ಯ.
ಆ ವಿಷಯದಲ್ಲಿ ನಾವು ಭಾಗ್ಯವಂತರೇ!
ಏನಂತೀರಿ?

Monday, May 25, 2009

ದಿಸ್ ಈಸ್ ರೈ

ಆತ್ಮೀಯರೇ
ನಿಮಗೆ ಗೊತ್ತಿದೆ, ಪ್ರಕಾಶ್ ರೈ ಸಿಗುವುದೇ ಅಪರೂಪ. ಅಷ್ಟು ಬಿಜಿ ಬಿಜಿ ಬಿಜಿ ನಟ. ಆದರೆ ಅಷ್ಟು ಬಿಜಿಯ ನಡುವೆಯೂ ಬದುಕನ್ನ ಉಲ್ಲಾಸವಾಗಿಟ್ಟುಕೊಂಡವರು ರೈ. ಅವರ ಮಾತು ಕೇಳಿದರೆ ಇನ್ನಷ್ಟು ಹೊತ್ತು ರೈ ಮಾತಾಡಬಾರದಿತ್ತಾ ಅನಿಸುತ್ತದೆ. ಹೇಳಬೇಕೆಂದ್ರೆ ನಮಗಿಂತ ಚೆನ್ನಾಗಿ ಕನ್ನಡ ಮಾತಾಡುತ್ತಾರೆ. ಅವರೇ ಒಂದು ಕಡೆ ಹೇಳಿದ್ದು ನೆನಪಿದೆ. ನಾನು ಯಾವುದೇ ಕಡೆ ಹೋದರೂ ಅಲ್ಲಿನವರಿಗಿಂತ ಚೆನ್ನಾಗಿ ಆ ಭಾಷೆಯನ್ನು ಮಾತಾಡಬಲ್ಲೆ ಅಂತ. ಅದು ತಮಿಳಾಗಿರಲಿ, ತೆಲಗಾಗಿರಲಿ, ಇಂಗ್ಲಿಷ್ ಆಗಿರಲಿ, ಸೈ. ಭಾಷೆ ಅವರಿಗೆ ಅಷ್ಟು ಸುಲಲಿತ. ಕಮಷರ್ಿಯಲ್ ಮತ್ತು ಆಟರ್್ ಸಿನೆಮಾ ಯಾವುದಾದರೂ ಆಗಲಿ ಅವರ ಅಭಿನಯ ಕೂಡ ಫಕ್ಕಾ ಪ್ರೊಫೆಷನಲ್. ನಾಗಮಂಡಲ ಮರೆಯೋದಕ್ಕೆ ಸಾಧ್ಯಾನಾ?
ಇಲ್ಲಿ ಒಂದಷ್ಟು ರೈ ಅವರ ಫೋಟೋ ತೆಗೆದಿದ್ದೇನೆ. ಪತ್ರಕರ್ತ ಮಿತ್ರ ಮಣಿಕಾಂತ್ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ಬಿಡುಗಡೆಗೆ ಬಂದಿದ್ದರಲ್ಲ ಅವಾಗ ತೆಗೆದದ್ದು. ಕಲಾಕ್ಷೇತ್ರದ ಹಿಂಬದಿಯ ಅರಳಿ ಕಟ್ಟೆಯ ಮೇಲೆ ರೈ ಪವಡಿಸಿದ್ರು. ಜೊತೆಗೆ ಬಿ ಸುರೇಶ್ ಇದ್ರು. ನಾನಿದ್ದೆ. ಇನ್ನೂ ಹಲವು ಪತ್ರಕರ್ತ ಮಿತ್ರರೂ ಇದ್ರು. ಈ ಫೋಟೋಸ್ ಟಿಪಿಕಲ್ ರೈ ಅಂದ್ರೆ ಹೀಗಿರುತ್ತಾರೆ ಅಂತಿರ್ತೀವಲ್ಲ ಹಂಗಿದೆ.
ನಿಮಗೆ ಇಷ್ಟ ಆಗುತ್ತೆ ಅಂದುಕೊಳ್ಳುತ್ತೇನೆ.