Monday, May 5, 2008

ಸ್ಟವ್ ಕೊಟ್ಟ ಗೆಳೆಯನೊಬ್ಬನ ನೆನಪಿನಲ್ಲಿ...

ಈಗ್ಗೆ ಎಂಟುವರ್ಷದ ಹಿಂದೆ ಅನಿಸುತ್ತೆ. ನನಗಾಗ ಬೆಂಗಳೂರು ಹೊಚ್ಚ ಹೊಸದು. ಬಸ್ಸ್ಟಾಂಡಿನಲ್ಲಿ ಇಳಿದವನಿಗೆ ಬೆಂಗಳೂರಿನ ಗಲ್ಲಿಗಳು, ಮೇನ್ ರೋಡ್ಗಳು, ಕ್ರಾಸ್ಗಳು, ಹೆಸರೇ ಇಲ್ಲದ ರಸ್ತೆಗಳು ಒಂದು ಅನೂಹ್ಯ ಜಗತ್ತಿನ ಥರ ಕಾಣಿಸಿದ್ದವು. ಅವಳೊಬ್ಬಳು ಇಲ್ಲದಿದ್ದರೆ ನನಗೆ ಈ ಬೆಂಗಳೂರು ಪರಿಚಯವಾಗದೇ ಉಳಿದುಬಿಡುತ್ತಿತ್ತಾ? ಗೊತ್ತಿಲ್ಲ. ಪುಟ್ಟ ಮಗು ಕೈ ಹಿಡಿದು ನಡೆಯುವಂತೆ ನಾನು ಅವಳ ಕೈ ಹಿಡಿದು ನಡೆಯುತಿದ್ದರೆ ಅವಳು ಬೆಂಗಳೂರನ್ನು ಒಂದೊಂದಾಗಿ ತೋರಿಸುತ್ತಾ ಹೋಗುತ್ತಿದ್ದಳು. ನನ್ನ ಕಣ್ಣಲ್ಲಿ ಬೆರಗು, ಅವಳ ಕಣ್ಣಲ್ಲಿ ಸಾರ್ಥಕತೆ. ಬೆಂಗಳೂರಿನ ಬೀದಿಗಳನ್ನು ಸುತ್ತಿದ್ದೇ ಹಾಗೆ. ಸುತ್ತು ಹೊಡೆದು ಹೊಡೆದು ನಮ್ಮ ಕೊನೆಯ ನಿಲ್ದಾಣವಾಗುತ್ತಿದ್ದದ್ದು ಮಾತ್ರ ಕಲಾಕ್ಷೇತ್ರ. ಅಲ್ಲಿ ನಾನು ಅವಳು ಕುಳಿತು ನಾಟಕ ನೋಡುತ್ತಿದ್ದೆವು. ಪಾಪ್ ಕಾನರ್್ ತಿನ್ನುತ್ತಿದ್ದೆವು. ಕಡಲೆ ಕಾಯಿ ತಿನ್ನುತ್ತಿದ್ದೆವು. ನಮ್ಮ ಕೆಪಾಸಿಟಿ ಅಷ್ಟೆ ಆಗಿತ್ತು. ಒಮ್ಮೆಯೂ ಅವಳು ಐಸ್ಕ್ರೀಮ್ ಕೇಳಿದವಳಲ್ಲ. ಬಣ್ಣದ ಡ್ರೆಸ್ ಕೊಡಿಸೋ ಅಂತ ಹಟಕ್ಕೆ ಬಿದ್ದವಳಲ್ಲ. ಪಿಚ್ಚರ್ಗೋಗೋಣ ನಡೆಯೋ ಅಂತ ಕೈ ಹಿಡಿದು ಜಗ್ಗಿದವಳಲ್ಲ. ಅವಳು ಕೇಳಿದ್ದರೂ ನನಗೆ ಕೊಡಿಸುವ ತಾಕತ್ತಾದರೂ ಎಲ್ಲಿತ್ತು? ಅವಳೇ ಒಮ್ಮೆ ನಾನು ಊರಿಗೆ ಹೊರಟಾಗ ಐದು ರುಪಾಯಿನ ಕ್ಯಾಡ್ಬರೀಸ್ ಚಾಕ್ಲೆಟ್ ಕೊಡಿಸಿದ್ದಳು. ನಾನು ಅದನ್ನ ಪೆದ್ದುಪೆದ್ದಾಗಿ ಜತನದಿಂದ ಜೇಬಿನಲ್ಲೇ ಇಟ್ಟುಕೊಳ್ಳಲು ಹೋಗಿ ಮೈಸೂರು ತಲಪುವಷ್ಟರಲ್ಲಿ ಪಾಯಸದಂತಾಗಿತ್ತು.
ಇರಲಿ... ಆ ದಿನಗಳಲ್ಲಿ ನಾನು ಓಆರ್ಜಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ದಿನಕ್ಕೆ ತೊಂಬತ್ತು ರುಪಾಯಿ ಸಂಬಳ ಪ್ಲಸ್ ಇನ್ನೊಂದಿಷ್ಟು ಅದಕ್ಕೆ ಇದಕ್ಕೆ ಅಂತ ಸಿಗುತ್ತಿತ್ತು. ಯೂನಿಸೆಫ್ನವರ ಮಿಡ್ಡೇ ಮೀಲ್ ಬಗೆಗಿನ ಸವರ್ೆ ಅದು. ಗೆಳೆಯ ಶ್ರೀನಿವಾಸ್ನ ಗಿರಿನಗರದ ರೂಮಿನಲ್ಲೇ ಸ್ವಲ್ಪ ದಿನ ಉಳಿದುಕೊಂಡಿದ್ದೆ. ಹೊರಗೆ ಹೋದ್ರೆ ತಿಂಗಳುಗಟ್ಲೆ ಬರ್ತಿರಲಿಲ್ಲವಾದ್ದರಿಂದ ವಸತಿ ಸಮಸ್ಯೆ ಅಷ್ಟಿರಲಿಲ್ಲ. ಆದ್ರೂ ಇರಲಿ ಅಂತ ನಾನು ಗೆಳೆಯ ಹನೀಫ್ ಸೇರಿ ವಿಜಯನಗರದಲ್ಲೊಂದು ರೂಮ್ ಮಾಡಿದ್ವಿ. ಆ ರೂಮಿನ ಬಗ್ಗೆ ಬರೆದರೆ ಅದೇ ಒಂದು ಖಾಸ್ಬಾತ್ ಆದೀತು. ಅದನ್ನು ಮತ್ಯಾವಗಾದರು ಹೇಳ್ತೇನೆ.ಇಂಥ ಸಮಯದಲ್ಲಿ ನನ್ನಲ್ಲಿ ಕಾಸಿಗೆ ಬರ. ರೂಮ್ ಏನೋ ಕಷ್ಟ ಪಟ್ಟು ಮಾಡಿದ್ದೆ. ಆದ್ರೆ ಅಡುಗೆ? ಸ್ಟವ್ ಇಲ್ಲ. ಸೀಮೆ ಎಣ್ಣೆ ಇಲ್ಲ. ಹಾಸಿಕೊಳ್ಳಲು ನೆಟ್ಟಗೊಂದು ಚಾಪೆಯೂ ಇಲ್ಲ. ಹನೀಫ ರೂಮಿನಲ್ಲಿರುತ್ತಿದ್ದದ್ದೇ ಅಪರೂಪವಾದ್ದರಿಂದ ಅವನ ಚಾಪೆಯನ್ನೇ ನಾನು ಬಳಸಿಕೊಳ್ಳುತ್ತಿದ್ದೆ.ಆದ್ರೆ ಅಡುಗೆಗೆ ಏನು ಮಾಡುವುದು?ಒಮ್ಮೆ ಸವರ್ೆಗೆ ಟೀಮ್ ಸೆಲೆಕ್ಟ್ ಮಾಡುವ ಇಂಟರ್ ವ್ಯೂ ಇತ್ತು. ಎಲ್ಲೆಲ್ಲಿಂದಲೋ ಹುಡುಗ್ರು ಬಂದಿದ್ರು. ಅದರಲ್ಲೊಬ್ಬ ಹುಡುಗನ ಪರಿಚಯವಾಯಿತು. ಬೆಂಗಳೂರಿನವನೇ. ತುಂಬಾ ಆತ್ಮೀಯತೆಯಿಂದ ಮಾತಾಡಿಸಿದ. ಅದೂ ಇದು ಮಾತಾಡುತ್ತಾ ವಿಷಯ ಬದುಕಿನತ್ತ ಹೊರಳಿತು. ನನ್ನ ಪರಿಸ್ಥಿತಿ ಕೇಳಿ... ಅಯ್ಯೋ ಬನ್ನಿ ನಮ್ ಮನೆಗೆ ಅಂತ ಕರೆದೋಯ್ದ. ಅವನು ಕರೆದುಕೊಂಡು ಹೋದ ಏರಿಯಾ ಕೂಡ ನನಗೆ ನೆನಪಿಲ್ಲ. ಅವತ್ತು ಅವನ ಮನೆಯಲ್ಲಿ ಯಾರೂ ಇರಲಿಲ್ಲ. ಹೋದವನೆ ಅದೆಲ್ಲಿಟ್ಟಿದ್ದನೋ ಅಟ್ಟದ ಮೇಲಿದ್ದ ಒಂದು ಸ್ಟವ್ ತೆಗೆದು ಕೊಟ್ಟ. ಬತ್ತಿ ಸ್ಟವ್ ಅದು. ನಾನು ಸಂಕೋಚದಿಂದ ಬೇಡ ಅಂದೆ. ಇರಲಿ ತಗೊಳಿ ಅಂದ. ಬೇಡವೆಂದರೂ ಊಟ ಹಾಕಿದ. ನಾಳೆ ಸಿಕ್ತೇನೆ ಅಂತ ಬೀಳ್ಕೊಟ್ಟ.
ನಿಜ್ಜ ಹೇಳ್ಲ ಅದೇ ಸ್ಟವ್ನಿಂದಲೇ ನಾನು ಸುಮಾರು ದಿವಸ ಅನ್ನ ಬೇಯಿಸಿಕೊಂಡು ತಿಂದದ್ದು. ಟೊಮ್ಯಾಟೋ ಗೊಜ್ಜು ಮಾಡಿಕೊಂಡಿದ್ದು. ಬಿಸಿ ಬಿಸಿ ಆಮ್ಲೆಟ್ ಹಾಕಿಕೊಂಡಿದ್ದು. ಅವತ್ತು ಭೇಟಿಯಾದ ಆ ಗೆಳೆಯ ಮಾರನೆ ದಿನದಿಂದಲೇ ಕೆಲಸಕ್ಕೆ ಬರಲಿಲ್ಲ. ಸ್ಯಾಲರಿ ಸಾಲಲಿಲ್ಲವೋ ಮತ್ತಿನ್ನೇನೋ. ಅವತ್ತೇ ನಾವೆಲ್ಲ ಬಿಜಾಪುರಕ್ಕೆ ಹೊರಟು ಹೋದ್ವಿ. ಬರೋಬ್ಬರಿ ಒಂದೂವರೆ ತಿಂಗಳ ಸವರ್ೆ ಅದು. ಅವನ ಮುಖ ಮತ್ತೆ ನಾನು ನೋಡಲಿಲ್ಲ. ಆದ್ರೆ ಅವನು ಕೊಟ್ಟ ಆ ಸ್ಟವ್ ಮಾತ್ರ ನನ್ನಲ್ಲಿ ತುಂಬಾ ಕಾಲ ಉಳಿದಿತ್ತು.
ಬದುಕಿನ ಪಥದಲ್ಲಿ ಯಾರ್ಯಾರೋ ಎಲ್ಲೆಲ್ಲಿಂದಲೋ ಬಂದು ಸಹಾಯ ಮಾಡಿಬಿಡುತ್ತಾರೆ. ಅಂಥವರಿಂದಲೇ ಅಲ್ಲವೇ ಬದುಕು ಅವುಡುಗಚ್ಚಿ ಚಿಗಿತುಕೊಳ್ಳುತ್ತಾ ಹೋಗುವುದು. ಅವೆಲ್ಲ ಸಣ್ಣ ಸಣ್ಣ ಸಹಾಯಗಳಿರಬಹುದು. ಆದ್ರೆ ಇಡೀ ದಾರಿ ಸುಗಮವಾಗಿದ್ದು ಮಾತ್ರ ಅವರೆಲ್ಲರಿಂದಲೇ ಅನ್ನುವುದನ್ನ ಮರೆಯಬಾರದು.
ಯಾಕೋ ಇವತ್ತು ಬರೆಯುತ್ತಾ ಕುಳಿತವನಿಗೆ ಇದೆಲ್ಲ ನೆನಪಾಯಿತು.