Friday, May 8, 2009

ಮಧುವನ ಕರೆದರೆ

ಮಧುವನ ಕರೆದರೆ
ತನುಮನ ಸೆಳೆದರೆ
ಶರಣಾಗು ನೀನು ಆದರೆ...
ಅದ್ಯಾವ ಅಮೃತ ಘಳಿಗೆಯಲ್ಲಿ ಈ ಹಾಡು ಕೇಳಿದೆನೋ ಗೊತ್ತಿಲ್ಲ ಅವಾಗಿನಿಂದ ಒಂದೇ ಸಮನೆ ಮಧುವನವನ್ನ ಕೇಳುತ್ತಿದ್ದೇನೆ.
ನಾನು ಒಂಥರಾ ಹಾಗೆ. ಒಂದು ಹಾಡು ಇಷ್ಟ ಆಗುತ್ತೆ ಅಂದ್ರೆ ಅದನ್ನೇ ಎಗ್ಗಿಲ್ಲದೇ ಕೇಳುತ್ತೇನೆ. ನೀವು ಅದಕ್ಕಿಂತ ಚಂದಕ್ಕಿದೆ ಕೇಳಿ ಅಂತ ನೂರು ಹಾಡು ಕೊಟ್ಟರೂ ನನಗೆ ಕೇಳಿಸೊಲ್ಲ. ನನಗೆ ನನ್ನದೇ ಹಾಡು. ನನ್ನದೇ ಪಾಡು. ಅದರ ಪಸೆ ಆರಿ, ಇನ್ನು ಸಾಕು ಅನ್ನುವ ತನಕ ಅದು ಕೇವಲ ನನ್ನ ಹಾಡು. ಗುಂಗು ಹಿಡಿಸಿರುತ್ತದೆ. ಅಂದಹಾಗೆ ಮಧುವನ ಇಂತಿ ನಿನ್ನ ಪ್ರೀತಿಯ ಚಿತ್ರದ್ದು. ಬರೆದವರು ನನ್ನ ಪ್ರೀತಿಯ ಗೆಳೆಯರೂ ಲೇಖಕರೂ ಆದ ಜಯಂತ್ ಕಾಯ್ಕಿಣಿ ಅವರು. ವಾಣಿ ಅದ್ಭುತವಾಗಿ ಹಾಡಿದ್ದಾರೆ.
ಈಗೊಂದಿಷ್ಟು ವರ್ಷದ ಹಿಂದೆ ಎಂ ಡಿ ಪಲ್ಲವಿಯವರು ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ "ನೀನಿಲ್ಲದೇ ನನ್ನದೇನಿದೆ" ಅನ್ನುವ ಭಾವಗೀತೆಯೊಂದನ್ನ ಹಾಡಿದ್ದರು. ನನಗೆ ಆ ಹಾಡು ಎಷ್ಟು ಹುಚ್ಚು ಹಿಡಿಸಿಬಿಡ್ತು ಅಂದ್ರೆ ಅದನ್ನ ಎಷ್ಟೋ ದಿನಗಳ ತನಕ ಎಡೆಬಿಡದೇ ಕೇಳಿದ್ದೆ. ಅದರಲ್ಲೂ ಎಂ ಡಿ ಪಲ್ಲವಿಯವರ ದನಿಯಲ್ಲಿ ಆ ಹಾಡನ್ನು ಕೇಳುವುದೇ ಒಂದು ಸೊಬಗು.
ಕೆಲವು ಹಾಡು ಮಾತ್ರ ಆ ಥರದ ಗುಂಗು ಹಿಡಿಸಿಬಿಡುತ್ತವೆ. ಅವರು ಹಾಡಿದ್ದಾರೆ ಅಂತ ಆ ಹಾಡಿಗೆ ಅಷ್ಟು ತೂಕ ಬಂತಾ ಅಥವಾ ಆ ಹಾಡು ಹಾಡಿದ್ದರಿಂದಲೇ ಹಾಡಿದವರಿಗೊಂದು ತೂಕ ಬಂತಾ? ಗೊತ್ತಿಲ್ಲ.
ಬಟ್ ಎರಡೂ ಹೌದು.
ರತ್ನಮಾಲಾ ಪ್ರಕಾಶ್ ಹಾಡಿದ ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ... ಅರ್ಚನಾ ಉಡುಪಾ ಅವರ ಕರುಣಾಳೆ ಬಾ ಬೆಳಕೆ... ಪುತ್ತೂರು ನರಸಿಂಹ ನಾಯಕ್ ಅವರ ದಾಸರ ಪದಗಳು, ಮೈಸೂರು ಅನಂತ ಸ್ವಾಮಿಯವರ ರತ್ನನ್ ಪದಗಳು, ಯಾವ ಮೋಹನ ಮುರಳಿ ಕರೆಯಿತೋ, ಅಶ್ವಥ್ ಅವರ ಕೋಡಗಾನ ಕೋಳಿ ನುಂಗಿತ್ತಾ... ಒಂದಾ ಎರಡಾ. ಕೇಳಿದರೆ ಯಾವತ್ತಿಗೂ ದಣಿಯದ ಹಾಡುಗಳವು.
ಕೇಳಿದ್ದರೂ ಕೇಳದಿದ್ದರೂ ಮಧುವನ ಕರೆದರೆ ಇನ್ನೊಮ್ಮೆ ಕೇಳಿ ನೋಡಿ.
ಅದರ ಗಮ್ಮತ್ತೇ ಬೇರೆ.