Tuesday, August 5, 2008

ಪ್ರತಿ ಹುಡುಗಿಯ ಕನಸು, ನನಸು ಮತ್ತು ಈ ಮೊಗ್ಗಿನ ಮನಸು


ನನ್ನನ್ನ ನೀನು ಎಷ್ಟು ಇಷ್ಟ ಪಡ್ತೀಯ?

ನೀನು ನಿನ್ನನ್ನ ಎಷ್ಟು ಇಷ್ಟ ಪಡ್ತೀಯೋ ಅಷ್ಟು.

ಹುಡುಗಿ ಕಣ್ಣಲ್ಲಿ ಭರವಸೆಯ ಬೆಳಕು ಫಳ್ ಅನ್ನುತ್ತದೆ.

ಅದಾದ ಮೇಲೆ ಒಂದಿನ ಬಂದವಳೇ ನನ್ನನ್ನು ಮರೆತುಬಿಡು ಅಂದುಬಿಡುತ್ತಾಳೆ.ಹಾಗೆಲ್ಲ ಮರೆಯೋದಕ್ಕೆ ಸಾಧ್ಯಾನಾ? ಏನಾಗಿದೆ ನಿನಗೆ? ಅನ್ನುತ್ತಾನೆ ಹುಡುಗ. ನನ್ನನ್ನ ಏನೂ ಕೇಳಬೇಡ, ಏನೂ ಹೇಳಬೇಡ. ಜಸ್ಟ್ ಇಷ್ಟ ಇಲ್ಲ ಅಂದುಬಿಡುತ್ತಾಳೆ. ಹುಡುಗನಿಗೆ ಸಿಟ್ಟು ಬಂದು ನಿನ್ನನ್ನ ಕೊಂದಾಕಿಬಿಡ್ತೀನಿ ಅನ್ನುತ್ತಾನೆ. ಕೊಂದುಬಿಡು. ಇಲ್ಲ ನನ್ನನ್ನ ಮರೆತುಬಿಡು ಅನ್ನುತ್ತಾಳೆ ಹುಡುಗಿ ತಣ್ಣಗೆ. ಹುಡುಗ ಎರಡನ್ನು ಮಾಡುವುದಿಲ್ಲ. ಆದ ಶಾಕ್ನಿಂದ ಚೇತರಿಸಿಕೊಂಡು ತಿರುಗಿ ನೋಡುವಷ್ಟರಲ್ಲಿ ಅವಳು ಬಹಳ ದೂರ ನಡೆದುಬಿಟ್ಟಿರುತ್ತಾಳೆ. ಹೆಣ್ಣೆಂದ್ರೆ ಅಷ್ಟೊಂದು ನಿಭರ್ಾವುಕಾ ಮನಸ್ಸಾ? ಹುಡುಗರೆಂದ್ರೆ ಹೀಗೇನಾ?

ಮೊಗ್ಗಿನ ಮನಸ್ಸು ನೋಡಿ ಬಂದಾಗಿನಿಂದ ಮನಸ್ಸು ಒಂದೊಳ್ಳೆ ಸಿನೆಮಾ ನೋಡಿದ ಖುಷಿಗೆ ಬಿದ್ದಿದೆ. ಇಷ್ಟು ಕ್ಲಿಯರ್ ಆಗಿ, ಇಷ್ಟು ಲವಲವಿಕೆಯಿಂದ, ಅದೂ ಇಷ್ಟು ಚಂದಕ್ಕೆ ಒಂದು ಸಿನೆಮಾ ಮಾಡಲು ಸಾಧ್ಯಾನಾ? ನಿಜ ಹೇಳಬೇಕೆಂದ್ರೆ, ಇಂಥದ್ದೊಂದು ಪಿಚ್ಚರ್ ನೋಡಿಯೇ ಎಷ್ಟೋ ವರ್ಷಗಳಾಗಿತ್ತು. ಅಸಲಿಗೆ ಮೊಗ್ಗಿನ ಮನಸ್ಸಿನ ನಿಜವಾದ ಸ್ಟಫ್ ಏನು?ನಾಲ್ಕು ಹುಡುಗೀರು. ಮತ್ತವರ ಮನಸ್ಸು. ಆ ಮನಸ್ಸಿನ ಕಾಂಕ್ಷೆ, ಧಾವಂತ. ತಳಮಳ ಮತ್ತು ಕೊನೆಗೆ ಒಡೆದ ಹೃದಯದ ರೋದನ. ಚಿಕ್ಕ ಚಿಕ್ಕ ಖುಷಿಗಳಿವೆ. ಆ ಖುಷಿಯ ಮಗ್ಗುಲಲ್ಲೆ ಅಡಗಿದ್ದ ದುಃಖದ ಛಾಯೆಯೂ ಇದೆ. ಅಗಲಿಕೆಯ ಜೊತೆಗೆ ಮತ್ತೆ ಸೇರಿದ ಖುಷಿ ಕೂಡ ಇದೆ. ಅದಕ್ಕೆ ಅಬ್ಬರವಿದೆಯಾ ಅಂದ್ರೆ ನೋ. ಎಲ್ಲಾ ತಣ್ಣಗಿನದ್ದು.ಹಾಗೆ ನೋಡಿದ್ರೆ ಇಡೀ ಚಿತ್ರದಲ್ಲಿ ಎಲ್ಲೂ ಅಬ್ಬರವಿಲ್ಲ. ಫೈಟ್ ಇಲ್ಲ. ತುಂಬಾ ಎಮೋಷನಲ್ ಅನ್ನುವ ಶಾಟ್ಸ್ಗಳಿಲ್ಲ. ಅಳುಮುಂಜೀ ಪಾತ್ರಗಳಿಲ್ಲ. ಆದರೂ ಕಣ್ಣು ಅಲ್ಲಲ್ಲಿ ಒದ್ದೆಯಾಗುತ್ತದೆ. ಹೀಗೆ ನನಗೂ ಆಗಿತ್ತಲ್ವಾ ಅಂತ ಹುಡುಗಿಯ ಮನಸ್ಸು ದಿಗ್ಗನೆದ್ದು ಕುಳಿತು ಕಾಡುತ್ತದೆ. ತೀರಾ ಘಾಸಿಗೊಂಡ ಮನಸ್ಸನ್ನಿಟ್ಟುಕೊಂಡು ಬಂದು ಅಮ್ಮನ ತೊಡೆಯ ಮೇಲೆ ಮಲಗಿ ಒಳಗೊಳಗೇ ದುಃಖಿಸುವ ಹುಡುಗಿಯ ಮನಸ್ಸು ನನ್ನದೂ ಏನೋ ಅನ್ನಿಸುವಷ್ಟು ಆಪ್ತವೆನಿಸಿಬಿಡುತ್ತದೆ. ಪ್ರೀತಿಸಿದ್ದು ತಪ್ಪಾ? ಪ್ರೀತಿಸಿದ ಮೇಲೆ ಕಾಮಿಸಿದ್ದು ತಪ್ಪಾ? ಯಾರು ಸರಿ? ಯಾರು ತಪ್ಪು? ಹುಡುಗರೆಂದ್ರೆ ಹೀಗೇನಾ? ಅಥವಾ ಹುಡುಗಿಯರೆಂದ್ರೆ ಹೀಗೀಗೇನಾ? ಪ್ರೀತಿ ನಂಬಿಕೆಯಾ, ಅಪನಂಬಿಕೆಯಾ? ಪ್ರೀತಿ ಸಾವಾ? ಗೆಲುವಾ? ಅವಕ್ಕೆಲ್ಲ ಪಾತ್ರಗಳೇ ಉತ್ತರ ಹೇಳುತ್ತಾ ಸುಮ್ಮನೆ ಎಲ್ಲವನ್ನೂ ಒಡಲಲ್ಲಿಟ್ಟುಕೊಂಡು ಸಾಗುವ ತಣ್ಣನೆಯ ನದಿಯ ಹಾಗೆ ಚಿತ್ರ ಸಾಗುತ್ತದೆ.

ಹೇಳಬೇಕೆಂದ್ರೆ, ಮೊಗ್ಗಿನ ಮನಸ್ಸು ಪ್ರತಿಯೊಂದು ಹುಡುಗಿಯ ಮನಸ್ಸಿನ ಕ್ಯಾನ್ವಾಸ್. ಮೊದಲ ಸಲ ಪಿಯುಸಿ ಮೆಟ್ಟಿಲು ಹತ್ತುವ ಹುಡುಗಿಯರ ಧಾವಂತದಿಂದ ಹಿಡಿದು ಕಡೆಗೆ ತಾನು ಜೀವ ಹೋಗುವಷ್ಟು ಪ್ರೀತಿಸುವ ಹುಡುಗನನ್ನು ನಿರಕರಿಸುವ ತನಕ ಕ್ಯಾನ್ವಾಸ್ ವಿಸ್ತಾರಗೊಂಡಿದೆ. ಮೊದಲ ಕ್ರಷ್, ಮೊದಲ ಸ್ಪರ್ಶ, ಮೊದಲ ಮಾತು ಹುಡುಗಿ ಪುಳಕಗೊಳ್ಳುತ್ತಾಳೆ. ಇಡೀ ಮೊಗ್ಗಿನ ಮನಸು ನಿಲ್ಲುವುದು ಅದರ ಲವಲವಿಕೆಯಲ್ಲಿ. ನಾಲ್ಕೂ ಹುಡುಗಿಯರ ಮನಸ್ಸಿನ ಭಾವಗಳು ಎಲ್ಲೋ ಒಂದು ಕಡೆ ಒಬ್ಬಳದೆ ಅನ್ನುವಷ್ಟು ಒಂದು ಫ್ರೇಮ್ಗೆ ಒಳಗಾದರೂ ಹಾಗೇ ನೋಡ ನೋಡುತ್ತಲೇ ಅವು ಪ್ರತಿಯೊಂದು ಹುಡುಗಿಯ ಮನಸಿನ ಭಾವನೆಗಳೂ ಆಗಿಬಿಡುವ ಸಾಧ್ಯತೆಯೇ ಹೆಚ್ಚು. ನಿನಗೋಸ್ಕರ ಜೀವ ಬೇಕಾದ್ರೆ ಕೊಡ್ತೇನೆ ಅಂತಿದ್ದ ಹುಡುಗನೇ ಸುರಿವ ಮಳೆಯಲ್ಲಿ ನಿಂತು ನೀನು ನಿನ್ನ ಫ್ರೆಂಡ್ಸ್ ಜೊತೆ ಹಾಗೆಲ್ಲ ಚೆಲ್ಲು ಚೆಲ್ಲಾಗಿ ನಗುವುದು ನನಗಿಷ್ಟ ಇಲ್ಲ ಅಂದುಬಿಡುತ್ತಾನೆ. ಅರೆ ನನ್ನನ್ನ ಪ್ರೀತಿಸುತ್ತಿರುವ ಹುಡುಗ ಇವನೇನಾ? ಅಂತ ಹುಡುಗಿಗೆ ಕ್ಷಣ ತಬ್ಬಿಬ್ಬಾಗುತ್ತದೆ. ಹಾಗೆಲ್ಲ ಅನ್ನಬೇಡ ಕಣೋ ಅಂತಾಳೆ. ಅವನು ನಿನಗೆ ನನಗಿಂತ ಅವರೇ ಹೆಚ್ಚಾ ಅಂತ ಹುಚ್ಚಾಡುತ್ತಾನೆ. ಡೋಂಟ್ ಟ್ರೀಟ್ ಲೈಕ್ ಅ ಪ್ರಾಪಟರ್ಿ ಅಂತ ಗದರಿ ಎದ್ದುಹೋಗಿಬಿಡುತ್ತಾಳೆ. ಪ್ರೀತಿ ನೆಗೆದು ಬೀಳುತ್ತದೆ. ಇಡೀ ಚಿತ್ರದಲ್ಲಿ ಪ್ರೀತಿ ಗೆಲ್ಲುವ, ಪ್ರೀತಿ ಸೋಲುವ ಮತ್ತೆ ಪ್ರೀತಿ ಗೆಲ್ಲುವ ಅನುಭೂತಿ ಇದೆ. ವಂಡರ್ಫುಲ್ ಅನ್ನಿಸುವ ಲೊಕೇಷನ್ಗಳಿವೆ. ಯಾಣವನ್ನ, ಬೇಕಲ್ ಫೋಟರ್್ ಅನ್ನ ಅಷ್ಟು ಅದ್ಭುತ ಅನ್ನಿಸುವಷ್ಟರ ಮಟ್ಟಿಗೆ ತೋರಿಸಿದ್ದಾರೆ. ಹಾಡುಗಳು ತೀರಾ ಮೆಲೊಡಿ ಅನ್ನುವಂತಿಲ್ಲವಾದರೂ ಓಕೆ.

ಅಷ್ಟೊಂದು ಚೆನ್ನಾಗಿ ಹುಡುಗಿಯರ ಮನಸ್ಸನ್ನು ಹೇಗೆ ಅರ್ಥ ಮಾಡಿಕೊಂಡಿರಿ ಅಂದ್ರೆ ಗೆಳೆಯ ಶಶಾಂಕ್, ಇದು ಸುಮ್ಮನೆ ಹೆಣೆದ ಕಥೆಯಲ್ಲ. ಪಕ್ಕಾ ರಿಯಲ್ ಇನ್ಸಿಡೆಂಟ್ಗಳನ್ನ ಸ್ಟಡಿ ಮಾಡಿದೀನಿ ಅಂತಾರೆ. ಅದಕ್ಕೆ ಅವರಿಗೆ ಪ್ರೇರಣೆಯೂ ಇದೆಯಂತೆ. ಹ್ಯಾಟ್ಸಾಫ್ ಟು ಯು ಶಶಾಂಕ್. ಹಾಗೆ ಇಂಥದ್ದೊಂದು ವಿಭಿನ್ನ ಚಿತ್ರಕ್ಕೆ ಹಣ ಹಾಕಿದ ಕೃಷ್ಣಪ್ಪನವರಿಗೂ ಒಂದು ಹ್ಯಾಟ್ಸಾಫ್. ಒಟ್ಟಿನಲ್ಲಿ ಮೊಗ್ಗಿನ ಮನಸು ಚಿತ್ರ ನೋಡಿ ಹೊರಬಂದ ಮೇಲೂ ಕಾಡುತ್ತದೆ. ಒಂದು ಚಿತ್ರ ಕಾಡಿತು ಅಂದ್ರೆ ಅದು ನಿಜಕ್ಕೂ ಗೆದ್ದಂತೆಯೇ. ಹಾಗಾಗಿ ಮೊಮ ಗೆದ್ದಿದೆ.ಬಿಡುವು ಮಾಡಿಕೊಂಡು ಒಮ್ಮೆ ಹೋಗಿ ಬನ್ನಿ. ಇಲ್ಲ ಅಂದ್ರೆ ಒಂದು ಒಳ್ಳೆ ಚಿತ್ರ ಖಂಡಿತಾ ಮಿಸ್ ಮಾಡಿಕೊಳ್ತೀರಿ.