Monday, November 2, 2009

ಮುಖ ಮುಖವಾಡಕ್ಕೆ ಬಲಿಯಾಗಿದೆ

ಓ ಮನಸೇಯಲ್ಲಿ ನಾನು ಅತ್ಯಂತ ಪ್ರೀತಿಯಿಂದ ಬರೆಯುವ ಕಾಲಂ ಇನ್ಬಾಕ್ಸ್. ಹಾಗೇ ಹೆಚ್ಚು ತಲೆಕೆಡಿಸಿಕೊಂಡು ಬರೆಯುವ ಕಾಲಂ ಸಹ ಅದೆ. ಅದಕ್ಕೆ ಅದರದೇ ಆದ ಸಾವಿರಾರು ಓದುಗರಿದ್ದಾರೆ. ಅಭಿಮಾನಿಗಳಿದ್ದಾರೆ. ಕೆಲಸದ ಒತ್ತಡದಿಂದಲೋ ಅಥವಾ ನನ್ನ ಸೋಮಾರಿತನದಿಂದಲೋ ಒಂದಷ್ಟು ಕಾಲ ಬರೆಯಲಾಗಿರಲಿಲ್ಲ. ರವಿ ಬೆಳಗೆರೆ ಕೂಡ ಅದೇನೋ ಇನ್ಬಾಕ್ಸ್ ಅಂತ ಬರಿತೀರಲ್ಲ ರವಿ ಅದಕ್ಕೆ ತುಂಬಾ ಜನ ಓದುಗರಿದ್ದಾರೆ ಮತ್ತೆ ಬರೀರಿ ಅನ್ನುವ ಪ್ರೀತಿ ತೋರಿಸಿದ್ದರು. ಆದರೆ ನನಗೇ ಯಾಕೋ ಸಾಧ್ಯವಾಗಿರಲಿಲ್ಲ. ಕೆಲವೊಮ್ಮೆ ಬರೀಬೇಕು ಅನ್ನುವ ತುಡಿತ ಇದ್ದರೂ ಮನಸು ಚಂಡಿ ಹಿಡಿದು ಕುಳಿತುಬಿಡುತ್ತದೆ. ಜಪ್ಪಯ್ಯ ಅಂದರೂ ಒಂದು ಸಾಲು ಬರೆಯಲಾಗುವುದಿಲ್ಲ. ಎಲ್ಲಾ ಸರಿ ಇದೆ ಇನ್ನೇನು ಬರೆದುಬಿಡೋಣ ಅಂತ ಕೂತರೆ ಇನ್ನೇನೋ ಅವಾಂತರ. ಒಟ್ಟಿನಲ್ಲಿ ಇನ್ಬಾಕ್ಸ್ಗೆ ಕಲ್ಲುಬಿದ್ದಿತ್ತು.
ಈಗ ಮತ್ತೆ ಎರಡು ಸಂಚಿಕೆಯಿಂದ ಬರೆಯಲು ತೊಡಗಿದ್ದೇನೆ. ಅದೇ ಶ್ರದ್ಧೆಯಿಂದ ಅದೇ ಪ್ರೀತಿಯಿಂದ. ಓದಿಕೊಳ್ಳಿ.

ಇನ್ನು
ಕಾರಣ ಸಾಕು
ಆಚೆ ಹೋಗು
ಎದೆಯಿಂದ
ಅಲ್ಲೀಗ
ಪಟ್ಟಾಭಿಷೇಕ
ನಡೆಯುತ್ತಿದೆ
ಇನ್ನೊಬ್ಬನಿಗೆ
*
ನೆಲ
ಅಗೆದು
ನೀರು ಕೊಡಬಲ್ಲೆ
ಎದೆ ಬಗೆದು
ಹೇಗೆ ಕೊಡಲಿ
ರಕುತ
*
ನೀನು
ಎಲ್ಲಾ ಕೇಳಿದೆ
ನನ್ನ ಬಳಿ
ಪ್ರೀತಿಯೊಂದನ್ನು
ಬಿಟ್ಟು
*
ನನಗೊಂದು
ಆಸೆ ಇದೆ
ನಿನ್ನ
ತೋಳ ತೆಕ್ಕೆಯಲಿ
ಸಾಯಬೇಕೆಂದು
*
ಪ್ರೀತಿ ಅಂದರೆ
ದೇವರ
ಕಾಲ ಕೆಳಗಿನ
ಹೂವಲ್ಲ
ಅದು
ನೀಲಾಂಜನ
*
ನಾವು
ಕಾಮವನ್ನು
ಬಿಡಬಹುದು
ಕಾಮ
ನಮ್ಮನ್ನು
ಬಿಡೋಲ್ಲ
*
ನನಗೆ
ಅಳುವುದಕ್ಕೆ ಬಿಡು
ದೇವರೇ
ಇನ್ನಾದರೂ
ಅವಳ
ನೆನಪು
ಸಾಯಲಿ
*
ಕಷ್ಟ ಬಂದಾಗ
ದೇವರೇ
ನನಗೊಂದು
ದೊಡ್ಡ
ಕಷ್ಟ ಇದೆ
ಏನು ಮಾಡಲಿ
ಅನ್ನಬೇಡಿ
ಕಷ್ಟವೇ
ನನ್ನಲ್ಲಿ
ದೊಡ್ಡ ದೇವರಿದ್ದಾನೆ ಎನ್ನಿ
*
ಗೊತ್ತಾಗುತ್ತೆ ಬಿಡು
ನಿನಗೂ
ಒಡೆದ ಹೃದಯದ
ನೋವು
ಏನೆಂದು!
*
ಸೋಲುವುದು
ಸುಲಭ
ಗೆಲ್ಲುವುದು ಕಷ್ಟ
ಅದಕ್ಕೆ
ನಾನು ನಿನಗೆ
ಸೋತಿದ್ದು
*
ತುಂಬಾ ಜನ
ಪ್ರಪೋಸ್ ಮಾಡಿದ್ರು
ನಂಗೆ ಇಷ್ಟ ಇಲ್ಲ ಅಂದೆ
ಈಗ
ಅವರೆಲ್ಲ
ಸುಖವಾಗಿದಾರೆ
*
ನೀನು ಕೊಟ್ಟ
ಗುಲಾಬಿ
ಬಣ್ಣ
ಕಳಕೊಂಡಿದೆ
*
ಎಂದಿಗಿಂತ
ಇಂದು
ರುಚಿಯಾಗಿತ್ತು ಕಣೆ
ಕಾಫಿ
ನಿನ್ನ
ಪ್ರೀತಿ
ಬೆರೆಸಿದ್ಯಾ?
*
ನಿನಗೊಂದು
ಮಾತೂ ಹೇಳದೆ
ಸತ್ತು ಹೋಗಬಹುದು
ನಾನು
ಡೋಂಟ್ ವರಿ
ಸತ್ತ ಮೇಲೂ
ನಿನ್ನ
ಪ್ರೀತಿಸುವುದಿದ್ದರೆ
ಅದು
ನಾನು ಮಾತ್ರ
*
ಪ್ರತಿ ಕಣ್ಣೀರೂ
ದುಃಖದ್ದಲ್ಲ
ಪ್ರತಿ ನಗುವೂ
ಸುಖದ್ದಲ್ಲ
ಪ್ರತಿ ಮೌನವೂ
ಏಕಾಂತದ್ದಲ್ಲ
ಮುಖ
ಮುಖವಾಡಕ್ಕೆ
ಬಲಿಯಾಗಿದೆ
*
ದೇವರು
ಒಂದು ಹೂ ಮಾಡಿ
ಜೇನಿನಲ್ಲಿ ಅದ್ದಿ
ಇಟ್ಕೋ ಅಂತ ಕೊಟ್ಟ
ಅದು
ನೀನೇ ಕಣೆ
*
ಒದ್ದೆಯಾದ
ಮಣ್ಣ ಮೇಲೆ ನಿಂತು
ಆಚೆ ಬಂದಾಗಲೂ
ಉಳಿದುಬಿಡುತ್ತದಲ್ಲ
ಗುರುತು
ಹಾಗೇ ಪ್ರೀತಿ
*
ಪುಟ್ಟ ಕಥೆ ಹೇಳ್ತೀನಿ
ಅವನು ನಕ್ಕ
ಇವಳೂ ನಕ್ಕಳು
ಮಗು ಮಾತ್ರ
ಅಳ್ತಿತ್ತು
*
ಮಳೆ ಅಂದ್ರೆ
ಇಷ್ಟ ಅಂದವರೆ
ಬಂದಾಗ
ಛತ್ರಿ ಹುಡುಕ್ತಾರೆ
ಸೂರ್ಯ ಅಂದ್ರೆ
ಇಷ್ಟ ಅಂದವರೆ
ನೆರಳು ಹುಡುಕ್ತಾರೆ
ತಂಗಾಳಿ ಬೀಸಲಿ
ಅಂದವರೆ
ಬಂದಾಗ ಕಿಟಕಿ ಹಾಕ್ತಾರೆ
ಅದಕ್ಕೇ ಗೆಳೆಯ
ಯಾರಾದ್ರೂ
ಐ ಲವ್ ಯೂ
ಅಂದಾಗೆಲ್ಲ
ನನಗೆ ಭಯ
*
ಏನೂ
ಕೊಡಬೇಡ
ಕೇವಲ
ಪ್ರೀತಿಯ
ಹೊರತು
*
ಪ್ರೀತಿ
ಸುಲಭವೂ ಅಲ್ಲ
ಕಷ್ಟವೂ ಅಲ್ಲ
ಅದು ಹಗ್ಗದ
ಮೇಲಿನ ನಡಿಗೆ
*
ನಿಜ ಹೇಳ್ತೀನಿ
ನಾನು ಬಡವನಾಗಲು
ನಿನ್ನ ಬ್ಯೂಟಿಯೇ ಕಾರಣ
ನಿನಗೆ
ಕಾಸ್ಮೆಟಿಕ್ಸ್ ಕೊಡಿಸಲಿಲ್ಲ ಅಂದ್ರೆ
ಬೆಂಗಳೂರಲ್ಲೊಂದು
ಸೈಟ್ ಮಾಡ್ತಿದ್ದೆ
*
ಮೊನ್ನೆ ಕೇಳಬೇಕು ಅಂತಿದ್ದೆ
ಆಗಲಿಲ್ಲ
ನಿನ್ನೆ ಕೇಳಬೇಕು ಅಂತಿದ್ದೆ
ಆಗಲಿಲ್ಲ
ಇವತ್ತು ಕೇಳ್ತಿದೀನಿ ಕಣೋ
ನನ್ನ ಮರೆತು ಬಿಡು
ನನಗೆ ಪ್ರೀತಿಯೆಂದರೆ
ಕೇವಲ ಶೋಕಿಯಲ್ಲ
*
ಕೆಲವರು
ಬದುಕು
ಬಿಸಾಕಿ ಎದ್ದು ಹೋಗಿದ್ದು
ಬಾಳಲಿಕ್ಕಾಗಲ್ಲ ಅಂತಲ್ಲ
ನಾವೇ
ಬಿಡಲಿಲ್ಲ ಅಂತ

ನೂರು ರುಪಾಯಿಗೆ ಏನು ಬರುತ್ತೆ?

ಮೊನ್ನೆ ಸಂಜೆ ಯಾಕೋ ಫುಲ್ ಅಜರ್ೆಂಟಾಗಿ ಒಂದು ಟೀ ಕುಡಿಯಬೇಕೆನಿಸಿತು. ಒಮ್ಮೊಮ್ಮೆ ಯಾಕೆ ಹಾಗನ್ನಿಸುತ್ತದೆ ಅಂತ ನನಗೂ ಗೊತ್ತಿಲ್ಲ. ಬೇಜಾರಗಲಿಕ್ಕೆ, ತಲೆ ನೋವು ಬರಲಿಕ್ಕೆ ಆಫೀಸಿನಲ್ಲಿ ಬೇಜಾನ್ ಕಾರಣಗಳಿವೆ ಬಿಡಿ. ಆದರೆ ಅವತ್ತು ಅಂಥದ್ದೇನೂ ನಡೆದಿರಲಿಲ್ಲ.
ಆಫೀಸಿನ ಪಕ್ಕದಲ್ಲೊಂದು ಬೇಕರಿ ಇದೆ. ಅದು ಮರಳುಗಾಡಿನಲ್ಲಿ ಸಿಕ್ಕ ಓಯಸಿಸ್ ಥರ. ಅಲ್ಲಿಗೆ ಹೋಗಿ ಒಂದು ಟೀ ಹೇಳಿ ನಿಂತುಕೊಂಡೆ. ಬ್ಲೂ ಜೀನ್ಸ್ ಬ್ಲ್ಯಾಕ್ ಟೀಶಟರ್್ ತೊಟ್ಟಿದ್ದ ಚೆಲುವೆಯೊಬ್ಬಳು ಬಂದು ಎರಡು ಲೀಟರ್ ಪೆಪ್ಸಿ, ಎರಡು ಲೀಟರ್ ಮಿರಿಂಡಾ, ಎಡು ಲೀಟರ್ ಕೋಕ್ ತೆಗೆದುಕೊಂಡು ಹೋದಳು. ಅವಳು ಆ ಕಡೆ ಹೋದ ಮೇಲೆ ಅಂಗಡಿಯಾತ ಯಾತಕ್ಕೋ ನಕ್ಕ. ಏನ್ರಿ ಅಷ್ಟೊಂದು ಕುಡಿತಾರಾ? ಅಂದೆ. ಸ್ನಾನಕ್ಕಿರಬೇಕು ಸಾರ್ ಅಂದು ಆತ ಮತ್ತೆ ಫಕಫಕನೆ ನಕ್ಕ.
ಕೈಗೆ ಟೀ ಬರುವಷ್ಟರಲ್ಲಿ ಒಂದು ಮಗು ನೂರು ರುಪಾಯಿಯ ನೋಟು ಹಿಡಿದುಕೊಂಡು ಓಡೋಡಿ ಬಂತು. ಅದರ ಅಮ್ಮ ಮತ್ತು ಚಿಕ್ಕ ತಂಗಿ ಇನ್ನೂ ಆ್ಯಕ್ಟೀವಾದಿಂದ ಇಳಿದಿರಲೇ ಇಲ್ಲ. ಆಗಲೇ ಈ ಪೋರಿ ಈ ನೂರು ರುಪಾಯಿಗೆ ಏನು ಬರುತ್ತೆ ಅಂಕಲ್ ಅಂತ ಮೂರು ಸಲ ಕೇಳಿದ್ದಳು. ಅಂಗಡಿಯಾತ ಮಲಯಾಳಿ. ಅವನಿಗೆ ಏನು ಅರ್ಥ ಆಯಿತೋ ಅರ್ಥ ಆಗಲಿಲ್ಲವೋ! ಮಗುವಿನ ಮಾತಿಗೆ ಪ್ರತಿಕ್ರಿಯಿಸಲಾಗದೇ ಸುಮ್ಮನೆ ನಿಂತಿದ್ದ. ಮಗು ಮತ್ತೆ ಕೇಳಿತು, ಅಲ್ಲಿದ್ದ ತಿಂಡಿಯನ್ನೆಲ್ಲ ಒಮ್ಮೆ ನೋಡುತ್ತಾ... ನೂರು ರುಪಾಯಿಗೆ ಏನು ಬರುತ್ತೆ ಅಂಕಲ್ ?
ಅಂದರೆ ಆ ಮಗುವಿಗೆ ನೂರು ರುಪಾಯಿಗೆ ಅಂಥದ್ದೇನೂ ಬರೋಲ್ಲ ಅಂತ ಗೊತ್ತಾಗಿದೆಯೇ? ನೋ ಐಡಿಯಾ!
ಅಷ್ಟರಲ್ಲಿ ಅವರ ಅಮ್ಮ ಹೆಲ್ಮೆಟ್ಟೂ ತೆಗೆಯದೇ ಪರ ಲೋಕದಿಂದ ಬಂದ ಏಲಿಯನ್ಸ್ ಥರ ಇನ್ನೊಂದು ಚಿಕ್ಕ ಮಗುವಿನ ಕೈ ಹಿಡಿದುಕೊಂಡು ಬಂದಳು. ಮಗುವಿನ ಕೈಯಲ್ಲಿದ್ದ ನೂರು ರುಪಾಯಿ ಇಸಿದುಕೊಂಡು ಏನು ಬೇಕು ಬೇಗ ಹೇಳು? ಅಂತ ಅವಸರವಸರ ಮಾಡಿದಳು.
ಚಿಕ್ಕದು ದೊಡ್ಡದಕ್ಕಿಂತ ಹುಷಾರು. ನನಗೆ ಜೆಮ್ಸ್ ಬೇಕು. ಫ್ರೂಟಿ ಬೇಕು, ಕುರುಕುರೆ ಬೇಕು ಅಂತೆಲ್ಲ ಕೈ ಬೆರಳು ಎಣಿಸುತ್ತಾ ಪಟ್ಟಿಮಾಡತೊಡಗಿತು. ದೊಡ್ಡ ಮಗುವಿಗೆ ಮಾತ್ರ ಮೊದಲಿದ್ದ ಸ್ಪಿರಿಟ್ ಯಾಕೋ ಕಡಿಮೆಯಾದಂತಿತ್ತು. ಅದು ಒಂದೇ ಒಂದು ಡೈರಿಮಿಲ್ಕ್ಗೆ ಮೊರೆ ಹೋಗಿತ್ತು ಅಷ್ಟೆ.
ಬದುಕು ಎಂಥ ಡ್ರಾಸ್ಟಿಕ್ ಚೇಂಜ್ಗೆ ಒಳಗಾಗಿದೆ ಅಲ್ವಾ? ನಾವು ಚಿಕ್ಕವರಿದ್ದಾಗ ಐದು ಪೈಸೆಗೆ ಐದು ಶುಂಠಿ ಪೆಪ್ಪರ್ ಮಿಂಟ್ ಸಿಕ್ಕಿದರೆ ಅದೇ ಭಾಗ್ಯ. ಅದನ್ನೇ ಎಲ್ಲಿ ಬೇಗ ಕರಗಿ ಹೋಗುತ್ತದೋ ಅಂತ ಸ್ವಲ್ಪ ಚೀಪಿ ಇನ್ನು ಸ್ವಲ್ಪವನ್ನ ಅಂಗಿ ತುದಿಯಲ್ಲಿ ಒರೆಸಿ ಚಡ್ಡಿ ಜೇಬಲ್ಲಿ ಇಟ್ಟುಕೊಳ್ಳುತಿದ್ವಿ. ಈಗಿನ ಮಕ್ಕಳಿಗೆ ಅಂತ ಕೊರತೆಯಿಲ್ಲ. ಲಿಮಿಟ್ಟುಗಳೂ ಇಲ್ಲ. ಬಯಸಿದ್ದು ಕ್ಷಣದಲ್ಲೇ ಬೊಗಸೆಯಲ್ಲಿ ಸಿಗುತ್ತದೆ. ಸಿಗದೇ ಹೋಗಿರುವುದು ನಮಗೆ ಸಿಕ್ಕಿತಲ್ಲ ಆ ಮಜಬೂತಾದ ಬಾಲ್ಯ.
ಆ ವಿಷಯದಲ್ಲಿ ನಾವು ಭಾಗ್ಯವಂತರೇ!
ಏನಂತೀರಿ?