Saturday, April 26, 2008

ಅಕ್ಕ ಹೇಳಿದ ಕುಡುಕನ ಪ್ರಸಂಗ...


ನನ್ನ ಭಾವನದೊಂದು ತೋಟ ಇದೆ ಊರಲ್ಲಿ. ಅವಾಗವಾಗ ಅಲ್ಲಿಗೆ ಹೋಗಿ ಬರೋದು ಅಭ್ಯಾಸ. ಹಾಗೆ ಹೋಗಲಿಲ್ಲ ಅಂದ್ರೆ ಭಾವ ಹುಷಾರು, ಒಂದಿನ ಹೋಗಿ ನೋಡಿದ್ರೆ ನಿಮ್ಮ ತೋಟಾನೆ ಇರೋಲ್ಲ ಅಂತ ನಾವು ರೇಗಿಸ್ತಿರ್ತೀವಿ. ಹಾಗಾಗಿ ರಜೆ ಸಿಕ್ಕಿದ್ರೆ ಸಾಕು ತೋಟ ಅಂತ ಭಾವ ಪರಾರಿ ಅಗಿಬಿಡ್ತಾರೆ.

ಈ ತೋಟ ನೋಡ್ಕೊಳೋಕೆ ಅಂತ ಅಲ್ಲೊಂದು ಸಂಸಾರ ಇಟ್ಟಿದಾರೆ. ಮಹಾನ್ ಕುಡುಕನಂತೆ ಆತ. ಆದ್ರೆ ಭಾವ ತೋಟಕ್ಕೆ ಹೋದಾಗ ಮಾತ್ರ ಆತ ಬಿಲ್ಕುಲ್ ಕುಡಿಯೋಲ್ಲವಂತೆ.

ಆದ್ರೆ ಅವತ್ತು ಆಗಿದ್ದೇ ಬೇರೆ. ಯಥಾ ಪ್ರಕಾರ ಇವರು ತೋಟಕ್ಕೆ ಹೋಗಿದ್ದಾರೆ. ಎಲ್ಲಾ ಸರಿ ಇದೆಯಾ ಅಂತ ನೋಡಿದಾರೆ. ಕೊನೆಗೆ ಒಂದು ಹೊಂಗೆ ಮರದ ಕೆಳಗೆ ಉಸ್ಸಪ್ಪ ಅಂತ ತೋಟದ ಮಾಲಿ ಜೊತೆ ಕುಳಿತಿದ್ದಾರೆ. ಅಷ್ಟರಲ್ಲಿ ಅದೇ ಊರಿನವನೊಬ್ಬ ಅಲ್ಲಿಗೆ ಬಂದಿದ್ದಾನೆ. ಅವನು ಬರುವ ರೀತಿ ನೋಡಿದರೆ ದೇವರು ಒಳಗಿದ್ದ ಅನಿಸುತ್ತಿತ್ತಂತೆ.ಬಂದವನು ದೊರೆ ಹತ್ತು ರುಪಾಯಿ ಕೊಡಿ ಅಂದವನೆ.ಭಾವ ಇಲ್ಲ ಹೋಗಿ ಅಂದಿದಾರೆ.ಅವನು ಬಿಟ್ಟಿಲ್ಲ. ಕೊನೆಗೆ ಹಾಳಾಗಿ ಹೋಗು ಅಂತ ಭಾವ ಹತ್ತು ರುಪಾಯಿ ಕೊಟ್ಟು ಅದನ್ನು ಮರೆತೂ ಬಿಟ್ಟಿದ್ದಾರೆ.

ಆದ್ರೆ ಹಾಗೆ ಈಸಿಕೊಂಡು ಹೋದವನು ಹಾಗೆ ಫುಲ್ ಟೈಟಾಗಿ ಬಂದು ಎದುರಿಗೆ ನಿಂತಾಗಲೇ ಇವರಿಗೆ ಗೊತ್ತಾಗಿದ್ದು ಇವನ ವರಸೆ ಬೇರೇನೆ ಇದೆ ಅಂತ.

ರೀ ಸ್ವಾಮಿ, ನನಗೆ ಕೇವಲ ಹತ್ತು ರುಪಾಯಿ ಕೊಡ್ತೀರಾ? ಎಷ್ಟು ಕೊಬ್ಬು ನಿನಗೆ? ಅಂದವನೆ.

ಭಾವ ಇದೊಳ್ಳೆ ಆಯ್ತಲ್ಲ, ದುಡ್ಡು ಕೊಟ್ಟುಬುಟ್ಟು ಉಗಿಸಿಕೊಂಡಂಗಾಯ್ತಲ್ಲ ಅಂದುಕೊಂಡು ಹೋಗಯ್ಯ ಅತ್ಲಾಗೆ ಅಂತ ಬಟ್ಟೆ ಕೊಡವಿಕೊಂಡು ಎದ್ದವರೆ.

ಮಾಲಿಯೂ ಹೋಯ್ತೀಯೋ ಇಲ್ಲ ಒದೆ ಬೇಕೋ ಅಂದವನೆ.

ಆದರೆ ಅವನು ಬಿಡಬೇಕಲ್ಲ.

ಎಲ್ಲಿಗ್ರಿ ಹೋಗ್ತೀರಾ? ನಂಗೆ ಹತ್ತು ರುಪಾಯಿ ಕೊಟ್ಟು ಅವಮಾನ ಮಾಡಿದೀರಾ? ನೀವು ಮಾತ್ರ ಸಾವಿರ ಗಟ್ಟಲೆ ಉಯ್ಕೊತೀರಾ? ನಮಗೆ ಮಾ.....ತ್ರ ....ಹ.....ತ್ತು ....ರು .......ಪಾಯೀನಾ? ಈಡಿಯಟ್....

ಇನ್ನೂ ಏನೇನೋ?

ಭಾವನಿಗೆ ಕೋಪ ಬಂದಿದೆ.

ಹೋಗ್ತೀಯ ಇಲ್ಲ ಒದೆ ಬೇಕಾ ಅಂದಿದಾರೆ.

ನೀನೇನು ಒದಿಯೋದು. ನಾನೆ ಒದೀತೀನಿ ತಗೋ ಅಂತ ಕಾಲೆತ್ತಿಕೊಂಡು ಬಂದವನು ಅಲ್ಲೇ ಮುಗ್ಗರಿಸಿ ಬಿದ್ದಿದ್ದಾನೆ.ಒಳ್ಳೆ ಕಥೆಯಾಯಿತಲ್ಲಪ್ಪ ಅಂತ ತೋಟದ ಕಾವಲುಗಾರ ಇವರು ಇಬ್ಬರೂ ಸೇರಿಕೊಂಡು ಎರಡು ತದುಕಿದ್ದಾರೆ.ಆಮೇಲೆ ಅಲ್ಲಿಂದ ಎದ್ದವನು ಸೀದಾ ಊರ ಕಡೆಗೆ ಮಾಯವಾಗಿದ್ದಾನೆ.

ಅವತ್ತಿಂದ ಭಾವ ಊರಿಗೋಗ್ತೀನಿ ಅಂದಾಗಲೆಲ್ಲ ಈ ಘಟನೆ ನೆನಪಾಗುತ್ತಂತೆ ಅಕ್ಕನ ಮನೆಯವರಿಗೆ.

ಹುಷಾರು ಅಪ್ಪ ಯಾರಿಗೂ ಕಾಸು ಕೊಡಬೇಡಿ. ಒದ್ದುಗಿದ್ದಾರು ಅಂತ ಮಗಳು ರೇಗಿಸ್ತಿರ್ತಾಳೆ.

ಇನ್ನೂ ಸ್ವಾರಸ್ಯ ಅಂದ್ರೆ ಇದೇ ವ್ಯಕ್ತಿ ಹಿಂದೊಮ್ಮೆ ಹೀಗೆ ಗಲಾಟೆ ಮಾಡಿದ್ದಾಗ ಅಲ್ಲೇ ಇದ್ದ ಬಾವಿಗೆ ಎತ್ತಿ ಹಾಕಿದ್ರಂತೆ.ಈ ಕುಡುಕನ ಪ್ರಸಂಗ ಹೇಳಿದ್ದು ನನ್ನ ಅಕ್ಕ. ಮೊನ್ನೆ ಮಂಡ್ಯಕ್ಕೆ ಹೋಗಿದ್ದಾಗ.

Monday, April 21, 2008

ಎಂಟು ವರ್ಷಗಳ ನಂತರ ಒಡಮೂಡಿದ ಈ ಕವಿತೆ ...


ನಾನು ಕವಿತೆ ಬರೆದೇ ಸುಮಾರು ವರ್ಷಗಳಾಗಿ ಹೋದವು. ಈ ನಡುವೆ ಬರೀಬೇಕೆಂದು ಯಾವತ್ತೂ ಅನಿಸಿಯೇ ಇರಲಿಲ್ಲ. ಅಥವಾ ನನ್ನ ಮನಸ್ಸು ಅದಕ್ಕೆ ಸಿದ್ಧವಿರಲಿಲ್ಲವೋ ಗೊತ್ತಿಲ್ಲ. ಒಂದು ಕಾಲಕ್ಕೆ ಎಲ್ಲೆಂದರಲ್ಲಿ ಕವಿತೆ ಬರೆದು ಗೆಳೆಯರನ್ನು ಬೆಚ್ಚಿ ಬೀಳಿಸಿದ್ದೆ. ಕಾಲೇಜಿನ ಕಾರಿಡಾರಿನಲ್ಲಿ ಕವಿ ಬಂದ್ರು ಅಂತಿದ್ರು. ಅದಕ್ಕೆ ತಕ್ಕುನಾಗಿ ಅವಾಗವಾಗ ಜುಬ್ಬ ಹಾಕಿಕೊಂಡು, ಗಡ್ಡ ಬಿಟ್ಕೊಂಡು ಹೋಗೋದೂ ಇತ್ತು. ಹೊಸ ಕವಿತೆ ಬರೆದು ಬರೆದು ಕಾಲೇಜಿನ ನೋಟೀಸ್ ಬೋಡರ್ಿಗೆ ಹಾಕೋದು ಆಗ ನನಗೆ ರೂಢಿ. ಇದನ್ನು ನೋಡಿ ಉತ್ತರ ಕನರ್ಾಟಕದ ಗೆಳೆಯ ಬಸವರಾಜ ನೀನೇನು ಕವಿತೆಯಲ್ಲೆ ಎಲ್ರನ್ನೂ ಕೊಲ್ಲೋಂಗ್ ಕಾಣಿಸ್ತೀಯಲ್ಲೋ ಮಾರಾಯ ಅಂತಿದ್ದ. ಹಂಗ ಬರೀತಿದ್ದೆ. ಇಡೀ ಕಾಲೇಜಿಗೆ ಕವಿತೆಯಲ್ಲಿ ಫಸ್ಟ್ ಪ್ರೈಜ್ ಹೊಡಕೊಂಡು ಬಂದಿದ್ದೆ. ಆಮೇಲೆ ಪೊಯಿಟ್ರಿ ಸೊಸೈಟಿ ಆಫ್ ಇಂಡಿಯಾದವರು ಮಾಡಿದ್ದ ಒಂದು ವಾರದ ಪೊಯಿಟ್ರಿ ವಕರ್್ಶಾಪ್ಗೆ ಹೋಗಿದ್ದೆ. ಅದೊಂದು ಮರೆಯಲಾಗದ ಅನುಭವ. ಇನ್ನೊಮ್ಮೆ ಯಾವತ್ತಾದರೂ ಬರೆದೇನು. ಅಲ್ಲಿಗೆ ಬಂದವರಲ್ಲಿ ತುಂಬಾ ಜನ ನನ್ನ ಥರಾನೆ ಪತ್ರಕರ್ತರಾಗಿದ್ದಾರೆ. ಹಾಗೆ ಶುರುವಾದ ಕವಿತೆ ಯಾಕೋ ಬೆಂಗಳೂರಿಗೆ ಬಂದ ಮೇಲೆ ಗೊತ್ತಿಲ್ಲದೇ ಕಳೆದುಹೋಯಿತು. ನಾನೂ ಹುಡುಕುವ ಉಸಾಬರಿ ತೆಗೆದುಕೊಳ್ಳಲಿಲ್ಲ.ಓ ಮನಸೇಯಲ್ಲಿ ಇನ್ಬಾಕ್ಸ್ ಅಂಕಣದಲ್ಲಿ ಒಂದಿಷ್ಟು ಸಣ್ಣ ಸಣ್ಣ ಕವಿತೆಗಳನ್ನು ಬರೆದದ್ದು ಬಿಟ್ಟರೆ ಮತ್ತೇನೂ ಬರೆದಿಲ್ಲ. ಅದು ಬಹಳ ಪಾಪ್ಯುಲರ್ ಆಗಿಹೋಯಿತು.

ಇವತ್ತು ಸುಮ್ಮನೆ ಕುಳಿತವನಿಗೆ ಅದ್ಯಾಕೋ ಹೀಗೆ ಬರೆಯಬೇಕೆನಿಸಿತು. ಬರೆದಿದ್ದೇನೆ.

ಸುಮ್ಮನೆ ಓದಿಕೊಳ್ಳಿ.ಎಂಟು ವರ್ಷಗಳ ನಂತರ ಒಡಮೂಡಿದ ಕವಿತೆ.


ನಾನು ಹಾಗೇ!


ನಾನು ಹಾಗೇ!

ನನ್ನ ಮನದ ಕಡಲಿಗೆ

ಟಾಚರ್್ ಬಿಟ್ಟು ನೋಡಿಕೊಂಡವನು

ಎದೆಯ ಪ್ರೀತಿಗೆ ಸೇತುವೆ ಕಟ್ಟಿ

ಯಾರಿಗಾಗೋ ಕಾದು ಕುಳಿತವನು


ನಾನು ಹಾಗೇ!

ಬಣ್ಣಕ್ಕೆ ಬಣ್ಣ ಹಚ್ಚಿ

ಅದರ ಬೆರಗ ನೋಡುವವನು

ಅನ್ಲಿಮಿಟ್ ಆಕಾಶಕ್ಕೆ

ಏಣಿ ಹಾಕಲು ಹೊರಟವನು


ನಾನು ಹಾಗೇ!

ಅವಳ ಪ್ರೀತಿಗೆ ಸೋತಹಾಗೆ

ಮೋಸಕ್ಕೂ ಸೋತವನು

ಖಾಲಿ ಹೃದಯವಿಟ್ಟುಕೊಂಡು

ಒಳಗೆ ಮಾತ್ರ

ಚಿಲಕವಿಟ್ಟುಕೊಂಡವನು


ನಾನು ಹಾಗೇ!

ನದಿ ತಿರುವಿನಂತೆ, ಓಘದಂತೆ

ಬೆಟ್ಟದಿಂದಿಳಿದು ಓಡುವ

ಪುಟ್ಟ ಜರಿಯಂತೆ

ಆಮೇಲೆ ಕಾಲ ಬುಡದಲ್ಲೇ

ಅದನ್ನೆಲ್ಲ ಹೀರಿಕೊಂಡು ಬೆಳೆದ

ಸಂಪಿಗೆ ಮರದಂತೆ


ನಾನು ಹಾಗೇ!

ಸುಖದ ಸಂಬಂಧಿ

ದುಃಖದ ಬಂಧಿ


ನಾನು ಹಾಗೇ!

ನನ್ನ ಹಾಗೇ

ಮೂರ್ತ, ಅಮೂರ್ತ


ನಾನು ಹೇಳಬೇಕೆಂದ್ರೆ,

ಹಾಗೇ!

ಥೇಟ್ ನನ್ನ ಹಾಗೇ!