Tuesday, October 7, 2008

ಆ ಭಾನುವಾರದ ಪ್ರೀತಿ ಮತ್ತು ಸಂಭ್ರಮದಲ್ಲಿ ನೀವೂ ಇರಬೇಕಿತ್ತು...ವಾವ್ ವಾಟ್ ಅ ಪ್ರೋಗ್ರಾಮ್?ಹಾಗಂತ ನನಗೆ ನಾನೇ ಅಂದುಕೊಂಡೆ. ಅಷ್ಟು ಚಂದದ ಪ್ರೋಗ್ರಾಮ್ ಒಂದನ್ನ ಮಾಡಲಿಕ್ಕೆ ಬೇರೆ ಯಾರಿಗಾದ್ರೂ ಸಾಧ್ಯಾನಾ? ನೋ ಅಂತಲ್ಲ. ಮಾಡಬಹುದು ಬಿಡಿ. ಪೊಲಿಟಿಷಿಯನ್ಸ್ ಆದ್ರೆ ಹಣ ಕೊಟ್ಟು ಜನ ತಂದು ಸೇರಿಸ್ತಾರೆ. ಸಿನೆಮಾ ಮಂದಿಗೊಂದು ಅಟ್ರಾಕ್ಷನ್ ಅಂತ ಇರುತ್ತೆ!. ಆದ್ರೆ ಒಬ್ಬ ರವಿ ಬೆಳಗೆರೆಗೆ?ಕೇವಲ ಪ್ರೀತಿಯೊಂದರಿಂದಲೇ ಅಷ್ಟು ಜನರನ್ನು ಸಂಪಾದಿಸಿದವರು ಅವರು. ಅವತ್ತಿನ ಮಟ್ಟಿಗೆ ಅದು ನಮ್ಮ ಪಾಲಿಗೆ ಸಂಭ್ರಮದ ದಿನ! ಎಂದೂ ಮರೆಯಲಾರದ ದಿನ.ಅವತ್ತು ಕಲಾಕ್ಷೇತ್ರದಲ್ಲಿ ಹಾಯ್ ಬೆಂಗಳೂರ್!ಗೆ ಹದಿನಾಲ್ಕುರವಿ ಬೆಳಗೆರೆಗೆ ಐವತ್ತರ ಸಂಭ್ರಮವಿತ್ತು; ಯಾಪಾಟಿ ಜನ ಸೇರಿದ್ರು ಅಂದ್ರೆ ನನ್ನ ಕಣ್ಣನ್ನ ನಾನೇ ನಂಬಲಿಲ್ಲ. ಆ ಫಂಕ್ಷನ್ನಿಗೆ ಬಂದವರಾದರು ಎಂಥವರು, ಅಪರೂಪದ ವ್ಯಕ್ತಿತ್ವದ ಸುನೀಲ್ ಶಾಸ್ತ್ರಿಗಳು. ಅವರು ಲಾಲ್ ಬಹದ್ದೂರ್ ಶಾಸ್ತ್ರಿಗಳ ಮಗ. ತುಂಬಾ ಪ್ರಜ್ಞಾವಂತ, ವಿನಯವಂತ, ಕ್ಲೀನ್ಡ್ ಪೊಲಿಟಿಷಿಯನ್. ಅವರಂತವರು ಅಪರೂಪ. ಲಾಲ್ ಬಹದ್ದೂರ್ ಶಾಸ್ತ್ರಿಗಳ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡಂತಿದ್ದಾರೆ ಶಾಸ್ತ್ರೀಜಿ. ಅವರ ಧರ್ಮ ಪತ್ನಿ ಮೀರಾ ಶಾಸ್ತ್ರೀಗಳೂ ಬಂದಿದ್ದರು. ಕೇವಲ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಸುನೀಲ್ ಶಾಸ್ತ್ರೀಜಿ ಅವರಿಗೆ ಬೈಪಾಸ್ ಸರ್ಜರಿ ಆಗಿತ್ತು. ಆದ್ರೂ ಬಂದಿದ್ದರು. ನನಗೆ ಈ ಫಂಕ್ಷನ್ ನೋಡಿದ ಮೇಲೆ ಆಯಾಸಗಿಯಾಸ ಏನೂ ಇಲ್ಲ ಅಂದ್ರು. ಅಪ್ಪನ್ನ ಇಡೀ ದೇಶ ಯಾಕೆ ಮೆಚ್ಚುತ್ತೆ ಅಂತ ಹೇಳಿದ್ರು. ಮನೆಯವರ ಬಗೆಗಿನ ಕಾಳಜಿಗಿಂತ ದೇಶದ ಕಾಳಜಿ ಎಷ್ಟು ಮುಖ್ಯ. ಅದು ಶಾಸ್ತ್ರೀಜಿಯವರಲ್ಲಿ ಹೇಗೆ ಮೈಗೂಡಿತ್ತು ಅಂತಾನು ಹೇಳಿದ್ರು. ಎಷ್ಟು ಚೆನ್ನಾಗಿ ಮಾತನಾಡಿದ್ರು ಅಂದ್ರೆ ಕೊನೆಗೆ ಸಭೆಯಲ್ಲಿದ್ದವರೆಲ್ಲ ಎದ್ದು ನಿಂತು ಅವರಿಗೆ ಗೌರವ ಸೂಚಿಸಿದ್ರು. ಒಂದೇ ಒಂದು ಎಕ್ಸ್ಟ್ರಾ ಮಾತಿಲ್ಲ. ಎಕ್ಸಾಗರೇಷನ್ ಇಲ್ಲ. ಎಲ್ಲಾ ನೀಟ್ ನೀಟ್ ನೀಟ್. ಅವರ ನೆನಪಿನ ಶಕ್ತಿಯಂತೂ ಅಗಾಧ. ನನಗನಿಸುತ್ತೆ, ಅಂತ ಒಬ್ಬ ಸಜ್ಜನ ವ್ಯಕ್ತಿಯನ್ನ ನೋಡಿದ್ದೇ ನಮ್ಮ ಭಾಗ್ಯ.ಅವತ್ತು ಎರಡು ಪುಸ್ತಕಗಳು ಅಧಿಕೃತವಾಗಿ ರಿಲೀಸ್ ಆದ್ವು. ಒಂದು ಫಸ್ಟ್ ಹಾಫ್. ಎರಡನೇದು ಡಿ ಕಂಪನಿ. ಎರಡೂ ವಿಶಿಷ್ಟವಾದ ಪುಸ್ತಕಗಳೇ! ಒಂದು ರವಿ ಬೆಳಗೆರೆಗೆ ಐವತ್ತು ತುಂಬಿದ ಸಂದರ್ಭದಲ್ಲಿ ಅವರಿಗೆ ಅಭಿನಂದನಾ ಗ್ರಂಥವಾಗಿ ನಮ್ಮ ಸ್ಟಾಫ್ ಎಲ್ಲಾ ಸೇರಿ ತಂದ ಪುಸ್ತಕ, ಫಸ್ಟ್ ಹಾಫ್. ಅದನ್ನು ನೋಡುವುದೇ ಒಂದು ಸೊಗಸು ಬಿಡಿ. ಅಷ್ಟು ಚಂದದ ಪುಸ್ತಕವನ್ನ ಯಾರಾದರೂ ಕನ್ನಡದಲ್ಲಿ ಮಾಡಿದ್ದಾರಾ? ಗೊತ್ತಿಲ್ಲ. ಪುಸ್ತಕ ನೋಡಿದವರೇ ಶಾಸ್ತ್ರೀಜಿಗಳು... ವಾಟ್ ಅ ನೈಸ್ ಬುಕ್ ಅಂತ ಹೇಳಿಬಿಟ್ರು. ಎಲ್ಲೆಲ್ಲೂ ಅದರದೇ ಮಾತು. ಅದನ್ನು ರೂಪಿಸಿದ ಪ್ರಮುಖರಲ್ಲಿ ನಾನೂ ಒಬ್ಬ ಅನ್ನೋದು ನನಗೆ ಹೆಮ್ಮೆಯ ವಿಚಾರವೇ!ಇನ್ನು ರವಿ ಬೆಳಗೆರೆಯವರ ಡಿ ಕಂಪನಿ. ಎಪ್ಪತ್ತರ ದಶಕದಿಂದ ಇಂದಿನ ತನಕ ಮುಂಬೈ ಪಾತಕ ಜಗತ್ತನ್ನು ಪರಿಚಯಿಸುವ ಪುಸ್ತಕ. ಒಬ್ಬ ದಾವೂದ್ ಹುಟ್ಟಿಕೊಂಡದ್ದಾದರು ಹೇಗೆ? ಚೋಟಾ ರಾಜನ್ ಹೇಗಾದ? ಅವನಾರು ಮಾಯಾ ಡೊಳಾಸ್? ಮೆಳ್ಳಗಣ್ಣ ಸದಾಮಾಮನ ಹತ್ಯೆಗಳಾದರೂ ಎಂಥವು? ಹತ್ಯೆಗಳ ಹಿಂದಿನ ಸಂಚುಗಳಾದರೂ ಎಷ್ಟು ಕರಾರುವಾಕ್ಕಾಗಿರುತ್ತವೆ? ತೆಳ್ಳಗಿನ ಉದ್ದ ಕೋಲಿನಂತಿರುವ ಆಸಾಮಿ ಅರುಣ್ ಗೌಳಿ ಯಾರು? ಎಲ್ಲರೂ ದುಬೈ ಅಲ್ಲಿ ಇಲ್ಲಿ ಹೋಗಿ ಸೆಟ್ಲ್ ಆದಾಗ ನಾನು ಇಲ್ಲೇ ಇದ್ದು ನಿಮಗೆ ಗೌಳಿ ಏನೂ ಅಂತ ತೋರಿಸುತ್ತೇನೆ ಅಂತ ದಗಡೀ ಚಾಳದಲ್ಲಿ ಕಾಲೂರಿ, ಇಡೀ ಮುಂಬೈ ಪಾತಕ ಜಗತ್ತನ್ನು ಆಳಿದ ಗೌಳಿಯ ತಾಕತ್ತಾದರೂ ಎಂಥದು? ಅವನು ಅಡಗಿಕೊಳ್ಳುತ್ತಿದ್ದದಾದರೂ ಎಲ್ಲಿ? ಪ್ರತಿ ಅಧ್ಯಾಯವೂ ಮುಂಬೈ ಪಾತಕ ಜಗತ್ತಿನಲ್ಲಿ ಅದ್ದಿ ಅದ್ದಿ ತೆಗೆದಂಥದೇ. ಅದರ ಲೇಔಟ್ ನೋಡಬೇಕು. ಪೂತರ್ಿ ಕಪ್ಪು ಬಿಳುಪಿನಲ್ಲಿ ಒಂದು ಪುಸ್ತಕವನ್ನು ಅಷ್ಟು ಚೆನ್ನಾಗಿ ಮಾಡಲು ಸಾಧ್ಯವೇ? ಎಂಥ ಕೆಲಸ ಮಾಡಿದ್ದೀರಿ ಅಂದ್ರೆ ಫಸ್ಟ್ ಹಾಫ್ ಮತ್ತು ಡಿ ಕಂಪನಿಯನ್ನ ಹೊಸಬಗೆಯಲ್ಲಿ ತಂದು ಇಡೀ ಕನ್ನಡ ಪ್ರಕಾಶನಕ್ಕೆ ಹೊಸ ತಿರುವು ನೀಡಿದಿರಿ. ಗ್ರೇಟ್ ಅಂದ್ರು ಪುಸ್ತಕ ನೋಡಿದ ಪತ್ರಕರ್ತ ಗೆಳೆಯ ಅಜಿತ್ ಹನುಮಕ್ಕನವರ್. ಅವರ ಮಾತಿಗೆ ಪುಷ್ಠಿ ನೀಡುವ ಅಭಿಪ್ರಾಯಗಳ ಸರಮಾಲೆಯೇ ಪುಸ್ತಕದ ಬಗ್ಗೆ ಬಂದಿದೆ.ಇಷ್ಟೆಲ್ಲ ಆಯ್ತಲ್ಲ ಅವತ್ತಿನ ಸಂಭ್ರಮ ನೋಡಬೇಕಿತ್ತು. ಮನಸು ಕೊಡಿ ಅಂತ ಮುಗಿಬಿದ್ದವರಿಗೆ ಲೆಕ್ಕವಿಲ್ಲ, ನೀವು ಎಷ್ಟು ಚಂದಕ್ಕೆ ಬರೀತೀರಿ ಅಂತ ಕೈಹಿಡಿದು ಮಾತನಾಡಿಸಿದವರು ಎಷ್ಟು ಜನ. ನಿಜಕ್ಕೂ ಕಣ್ಣು ತುಂಬಿ ಬಂತು. ಯಾರೋ ಎಲ್ಲಿಂದಲೋ ಬಂದು ನಮ್ಮದೊಂದು ಆಟೋಗ್ರಾಫ್ ಹಾಕಿಸಿಕೊಂಡು ಹೋಗುತ್ತಾರಲ್ಲ ಅವರ ಪ್ರೀತಿಗೆ ಏನು ಹೇಳುವುದು. ಕೆಲವರಂತೂ ಮೊದಲೇ ಮೆಸ್ಸೇಜ್ ಮಾಡಿ ನಿಮ್ಮನ್ನ ನೋಡಬೇಕು ಅದಕ್ಕೋಸ್ಕರಾನೆ ಬರ್ತಿದೀವಿ ಪ್ಲೀಸ್ ಮಿಸ್ ಮಾಡಬೇಡಿ ಅಂದಿದ್ದರು.

ಅವರ ಪ್ರೀತಿಗೆ ನಾನು ಋಣಿ.