Friday, April 17, 2009

ಮಣಿಕಾಂತ್ ಅವರ ಪುಸ್ತಕ ಬಿಡುಗಡೆಗೆ ನಾನೂ ಬರ್ತೇನೆ ನೀವೂ ಬನ್ನಿ






ಪತ್ರಕರ್ತ ಮಿತ್ರ ಮಣಿಕಾಂತ್ರ ಮತ್ತೊಂದು ಪುಸ್ತಕ 'ಅಮ್ಮ ಹೇಳಿದ ಎಂಟು ಸುಳ್ಳುಗಳು'ಬಿಡುಗಡೆಯಗುತ್ತಿದೆ. ಮಣಿಕಾಂತ್ ಮತ್ತು ನನ್ನ ಸ್ನೇಹ ಐದಾರು ವರ್ಷದಷ್ಟು ಹಳೆಯದು. ಮಾತಿಗೆ ಸಿಕ್ಕಾಗಲೆಲ್ಲ ನಮ್ಮಗಳ ಮಾತು ಚಿತ್ರಾನ್ನ. ಮೈಸೂರ್ ಪಾಕು ಕೊಡಸ್ತೀನಿ ಅಂತ ವರ್ಷದಿಂದ ರೈಲ್ ಬಿಡ್ತಾನೆ ಇದಾರೆ. ಈ ಸಲ ಮಾತ್ರ ಪುಸ್ತಕ ಬಿಡುಗಡೆಯ ನೆಪದಲ್ಲಿ ತಿನ್ನದೇ ಬಿಡುವುದಿಲ್ಲ. ಅವರ ಪ್ರೀತಿ ದೊಡ್ಡದು. ತುಂಬಾ ನಿಷ್ಕಲ್ಮ್ಮಷ ಹೃದಯಿ. ಅದೆಲ್ಲಕ್ಕಿಂತ ಹೆಚ್ಚಾಗಿ ಚೆನ್ನಾಗಿ ಬರೆಯುತ್ತಾರೆ. ಉಭಯಕುಶಲೋಪರಿ ಅವರ ಅತ್ಯಂತ ಫೇಮಸ್ ಅಂಕಣ. ಅವರದೆ 'ಈ ಗುಲಾಬಿಯು ನಿನಗಾಗಿ' ಅಂಕಣ ನಾಡಿನ ಯುವಕ ಯುವತಿಯರ ಗಮನಸೆಳೆದು ಅದು ಪುಸ್ತಕ ಕೂಡ ಆಗಿದೆ.
'ಅಮ್ಮ ಹೇಳಿದ ಎಂಟು ಸುಳ್ಳುಗಳು' ಮುದ್ದಾದ ಮುಖಪುಟದೊಂದಿಗೆ ರೆಡಿಯಾಗಿದೆ. ಒಳಗಿನ ಲೇಖನಗಳೂ ಅಷ್ಟೆ ಮನಸ್ಸಿಗೆ ತಟ್ಟುತ್ತವೆ. ಕೈ ಹಿಡಿದು ಸಾಂತ್ವನ ಹೇಳುತ್ತವೆ. ಅರೆ ಇವಳು ಹೇಗೆ ಅಷ್ಟೆಲ್ಲ ನೋವು ಗೆದ್ದು ಚೂರೇ ಚೂರು ಖುಷಿ ತಂದುಕೊಂಡಳು ಅಂತ ಸೋಜಿಗ ಆಗುತ್ತೆ. ಇಲ್ಲಿ ಸೋತು ಗೆದ್ದವರ ಕಥೆಗಳಿವೆ. ನೋವಿನ ಆಳದಿಂದೆದ್ದು ಬಂದು ಚೂರು ಪ್ರೀತಿಗಾಗಿ ಹಂಬಲಿಸಿದವರ ಕಥೆಗಳಿವೆ. ಅವೆಲ್ಲವನ್ನೂ ಮಣಿ ಎಲ್ಲೆಲ್ಲಿಂದಲೋ ಹೆಕ್ಕಿ ನಿಮಗಾಗಿ ಕಟ್ಟಿಕೊಟ್ಟಂತವು. ನೀವು ಓದಲೇಬೇಕಾದ ಪುಸ್ತಕ ಅದು; ಅಮ್ಮ ಹೇಳಿದ ಎಂಟು ಸುಳ್ಳುಗಳು.
ಇದೇ ತಿಂಗಳ 26 ನೇ ತಾರೀಖು ಬೆಳಿಗ್ಗೆ ಹನ್ನೊಂದು ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ. ಖ್ಯಾತ ನಟ ಪ್ರಕಾಶ್ ರೈ ಪುಸ್ತಕ ಬಿಡುಗಡೆ ಮಾಡುತ್ತಾರೆ. ರವಿ ಬೆಳಗೆರೆಯವರು ಅಮ್ಮನ ಪ್ರೀತಿಯ ಬಗ್ಗೆ ಮಾತಾಡುತ್ತಾರೆ.
ವಿಶ್ವೇಶ್ವರ ಭಟ್ಟರು ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ. ಕೃಷ್ಣೇಗೌಡರು ಪುಸ್ತಕದ ಬಗ್ಗೆ ಮಾತಾಡುತ್ತಾರೆ. ಇದಕ್ಕೆಲ್ಲ ಮೊದಲು ಗೆಳೆಯ ಉಪಾಸನಾ ಮೋಹನ್ ತಂಡ ಭಾವಗೀತೆಗಳನ್ನ ಹಾಡಲಿದೆ.
ಅಂತ ಸಮಾರಂಭದಲ್ಲಿ ನೀವು ಇಲ್ಲದೇ ಹೋದರೆ ಹೇಗೆ?
ನಾನೂ ಬರುತ್ತೇನೆ. ನೀವೂ ಬನ್ನಿ.