Saturday, November 8, 2008

ಬಬ್ಬಲ್ಗಮ್ಮು, ಪ್ಯಾಂಟು ಮತ್ತು ಜಿಪ್ ಹಾಕದ ಗೊರಿಲ್ಲಾ ಮಾಸ್ತರ್...

ನನಗೆ ಹಿಂದಿನಿಂದಲೂ ಒಂದು ಅಭ್ಯಾಸವಿತ್ತು.
ಎಗ್ಗಾಮಗ್ಗಾ ಚ್ಯೂಯಿಂಗ್ಗಮ್ ಅಗಿಯುವುದು. ಅದನ್ನ ಇತ್ತೀಚೆಗೆ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ ಮಾಡಿಕೊಂಡಿದ್ದೇನೆ ಬಿಡಿ.
ಇದು ಎಂಟತ್ತು ವರ್ಷಗಳ ಹಿಂದಿನ ಮಾತು. ಆಗೆಲ್ಲ ಚ್ಯೂಯಿಂಗ್ಗಮ್ ತಿನ್ನುವ ಆಸೆಯ ಜೊತೆಜೊತೆಗೆ ಒಂದು ಥರದ ಭಯವೂ ಇತ್ತು. ಅದಕ್ಕೆ ಕಾರಣ ಚ್ಯೂಯಿಂಗ್ಗಮ್ ಅಗಿಯುವಾಗ ಅದನ್ನೇನಾದ್ರೂ ಅಕಸ್ಮಾತ್ ನುಂಗಿಬಿಟ್ಟರೆ ಸತ್ತೇಹೋಗುತ್ತಾರೆ ಅನ್ನುವುದು. ನಾವೆಲ್ಲ ಯಾವ ಪರಿ ಹೆದರಿದ್ದೆವು ಅಂದ್ರೆ ನಾನಂತೂ ಕೆಲ ಕಾಲ ಚ್ಯೂಯಿಂಗ್ಗಮ್ ತಿನ್ನುವುದನ್ನೇ ಬಿಟ್ಟುಬಿಟ್ಟಿದ್ದೆ. ಮನೆಯಲ್ಲಿ ಚ್ಯೂಯಿಂಗ್ಗಮ್ ಕಂಡ್ರೆ ಸಾಕು ಹಾವು ಮೆಟ್ಟಿದಂಗಾಡ್ತಿದ್ರು. ಇದು ಇನ್ನೂ ಎಷ್ಟು ಎಕ್ಸ್ಟ್ರೀಮ್ ಹಂತಕ್ಕೆ ಹೋಯ್ತು ಅಂದ್ರೆ ಯಾರೋ ಒಬ್ಬ ಹುಡುಗ ಚ್ಯೂಯಿಂಗ್ಮ್ ತಿಂದು ಸತ್ತೇ ಹೋದನಂತೆ. ಚ್ಯೂಯಿಂಗ್ಗಮ್ನ ಬ್ಯಾನ್ ಮಾಡ್ತಾರಂತೆ ಅನ್ನುವ ಸುದ್ದಿ ಹರಡಿ ನಮ್ಮೆಲ್ಲರ ಜಂಗಾಬಲವೇ ಉಡುಗಿಹೋಗಿತ್ತು. ಅವತ್ತಿಂದ ಬಾಯಿಗೆ ಚ್ಯೂಯಿಂಗ್ಗಮ್ ಬಿದ್ರೆ ಸಾಕು ಎಲ್ಲಿ ನುಂಗಿಬಿಡುತ್ತೇನೋ ಅನ್ನುವ ಭಯ ಫೋಬಿಯಾ ಥರ ಇನ್ನಿಲ್ಲದೆ ಕಾಡತೊಡಗಿದ್ದು ಮಾತ್ರ ಸುಳ್ಳಲ್ಲ.
ಇಂಥ ಚ್ಯೂಯಿಂಗ್ಗಮ್ ನನ್ನದೊಂದು ಹೊಚ್ಚ ಹೊಸ ಪ್ಯಾಂಟನ್ನು ಹಾಳು ಮಾಡಿತ್ತು. ತೀರಾ ಮೊಲದ ಬಿಳುಪಿನದ್ದು ಅದು. ಅದನ್ನು ಎಷ್ಟು ಪ್ರೀತಿಯಿಂದ ಹೊಲಿಸಿಕೊಂಡಿದ್ದೆ ಅಂದ್ರೆ ಎಲ್ಲಿ ಹಾಕಿಕೊಂಡ್ರೆ ಕೊಳೆ ಆಗುತ್ತೋ ಅಂತ ಹೆಚ್ಚಾಗಿ ಹಾಕಿಕೊಳ್ತಾನೆ ಇರಲಿಲ್ಲ. ಮನೆಯಲ್ಲಿ ಹಾಕ್ಕೊಂಡುಹೋಗೋ. ಅದನ್ನೇನು ಹೊಲಿಸಿ ಇಟ್ಕೊಂಡು ಪೂಜೆ ಮಾಡ್ತೀಯ ಅಂತ ಸಣ್ಣಗೆ ಗದರಿದ್ದೂ ಉಂಟು.
ಇರಲಿ. ನಮ್ಮ ಕ್ಲಾಸ್ ಒಂಥರ ಪುಂಡರ ಸಂತೆ. ಏನೋ ತರಲೆ ಮಾಡ್ತೀಯ ಅಂತ ಹೊಡೆಯಲು ಹೋದ್ರೆ ಪಿಲ್ಟು ಅನ್ನುವ ಫ್ರೆಂಡ್ ಒಬ್ಬ ಮಾಸ್ತರನ ಕೈಲಿದ್ದ ಕೋಲನ್ನೇ ಬಿಗಿಯಾಗಿ ಕಿತ್ತುಕೊಂಡು ಅಬ್ಬರಿಸಿದ್ದ. ಹೊಡಿ ನೋಡ್ತೀನಿ ಅಂತ. ಅವನಿಗೆ ಅಷ್ಟು ಪೊಗರು ಹೇಗೆ ಬಂದಿತ್ತು ಅಂದ್ರೆ ಅವನು ಅಣ್ಣ ಆಗಲೇ ರೌಡಿ ಅಂತ ಹೆಸರು ಮಾಡಿದ್ದ. ಅವನೂ ಅದೇ ಸ್ಕೂಲ್ನ ಸೀನಿಯರ್ ಸ್ಟೂಡೆಂಟ್. ಅವನದೋ ಇನ್ನೂ ಅದ್ವಾನ. ಶನಿವಾರ ಬಿಳಿ ಡ್ರೆಸ್ ಹಾಕ್ಕೊಂಡು ಹೋಗೋದು ಕಂಪಲ್ಸರಿ ತಾನೆ. ಆದ್ರೆ ಈ ಮಹಾನುಭಾವ ಒಂದಿನ ಬಿಳಿ ಪಂಚೆ ಶಟರ್ು ಹಾಕ್ಕೊಂಡು ಬಂದು ಪ್ರೇಯರ್ನಲ್ಲಿ ನಿಂತಿದ್ದ. ನೋಡಿದ ಟೀಚರ್ರು ಏನಯ್ಯಾ ಇದು ಅಪದ್ಧ ಅಂದ್ರೆ, ಸರ್ ನಿಮಗೆ ಏನು ಬೇಕು. ಬಿಳಿ ಬಟ್ಟೆ ತಾನೆ ಅಂತ ದಬಾಯಿಸಿದ್ದ. ಅವತ್ತಿಡೀ ಅವನನ್ನ ಊರ ಬಾಗಿಲಿಗೆ ಕಾವಲು ನಿಲ್ಲಿಸಿದಂತೆ ಕ್ಲಾಸಿನ ಹೊರಗೆ ಬಿಸಿಲಿನಲ್ಲಿ ನಿಲಿಸಿದ್ದರು.
ಅಂತ ಶುದ್ಧಾನುಶುದ್ಧ ತರಲೆಗಳ ಕೈಗೆ ಸಿಕ್ಕು ನಾನೂ ನಜ್ಜುಗುಜ್ಜಾಗಿದ್ದೆ. ಒಂದಾ ಎರಡಾ ಚೇಷ್ಟೆ. ಕೂರುವಾಗ ಕೆಳಕ್ಕೆ ಪೆನ್ ಇಡುವುದು, ಬಬ್ಬಲ್ಗಮ್ ಅಂಟಿಸುವುದು, ಇಂಕ್ ಪೆನ್ನಿಂದ ಇಂಕ್ ಹಾರಿಸುವುದು ಇತ್ಯಾದಿಗಳೆಲ್ಲ ಒಂಥರ ಎಂಟಟರ್ೈನ್ ಮೆಂಟ್ ಥರ ಆಗಿಬಿಟ್ಟಿತ್ತು. ಎಕ್ಸ್ಟ್ರಾ ಕರಿಕಲರ್ ಆ್ಯಕ್ಟಿವಿಟೀಸ್ ಅನ್ನಿ ಬೇಕಾದ್ರೆ. ಇಂಥ ತರಲೆಗಳು ಒಂದಿನ ಮಾಡಬಾರದ ಕೆಲಸ ಮಾಡಿಬಿಟ್ಟಿದ್ದರು. ನನ್ನ ಹೊಸ ಪ್ಯಾಂಟ್ ಹಾಕಿಕೊಂಡು ಹೋದನಲ್ಲ ಆ ದಿನ ಕೂತು ಏಳುವಷ್ಟರಲ್ಲಿ ಬಬ್ಬಲ್ಗಮ್ ಅಂಟಿಸಿಬಿಟ್ಟಿದ್ದರು. ಏಳಲು ಹೋದ್ರೆ ಡೆಸ್ಕ್ಗೂ ನನ್ನ ಹಿಂಬದಿಗೂ ನಡುವೆ ಬಬ್ಬಲ್ಗಮ್ನ ಅಂಟು ಅಂಟು. ನಿಜಕ್ಕೂ ನನ್ನ ಕಣ್ಣಲ್ಲಿ ನೀರಿತ್ತು. ಕಣ್ಣೆದುರೇ ನನ್ನ ಕನಸಿನ ಪ್ಯಾಂಟನ್ನು ಈ ಸ್ಥಿತಿಗೆ ತಂದವರನ್ನು ಸುಮ್ಮನೆ ಬಿಡಬಾರದು ಅಂತ ಹಲಬುತ್ತಿದ್ದೆ. ಆದ್ರೆ ಅವಾಗ ನಾನು ಒಣಗಿದ ಅಂಚಿಕಡ್ಡಿಯಂತಿದ್ದವ. ಹೇಗೆ ತೂಕ ಹಾಕಿದರೂ ಐವತ್ತು ಕೇಜಿ ತೂಗುತ್ತಿರಲಿಲ್ಲ. ನನ್ನನ್ನು ಯಾರು ಕೇರ್ ಮಾಡಿಯಾರು? ಮನೆಗೋಗಿ ಅವ್ವನ ಹತ್ತಿರ ಚೆನ್ನಾಗಿ ತಿಕ್ಕಿಸಿದೆ. ಆದ್ರೂ ಅದು ಹೋಗಲೇ ಇಲ್ಲ. ಕೊನೆಗೆ ಉಜ್ಜೀ ಉಜ್ಜೀ ಪ್ಯಾಂಟಿನ ಹಿಂಬದಿಯಲ್ಲಿ ಸಣ್ಣಗೆ ಇಲಿ ಕೊರೆದಂತಹ ತೂತು ಕಾಣಿಸತೊಡಗಿತು. ತೂತು ಕಂಡ ಮೇಲೆ ಹಾಕಿಕೊಳ್ಳುವುದು ಎಂತು. ಅದನ್ನು ಮೂಲೆಗೆಸೆದದ್ದಾಯಿತು.
ಇನ್ನೊಂದೇ ಒಂದು ಇನ್ಸಿಡೆಂಟ್ ಹೇಳಲೇ ಬೇಕು ನಿಮಗೆ. ನಮ್ಮಲ್ಲಿ ಒಬ್ಬರು ಪೀಟಿ ಮಾಸ್ತರು ಇದ್ದರು. ಅವರ ಹೆಸರೇನೋ ನೆನಪಾಗುತ್ತಿಲ್ಲ. ಆದ್ರೆ ನಮ್ಮ ಶಾಲೆಯಲ್ಲಿ ಅವರಿಗೆ ಗೊರಿಲ್ಲಾ ಅಂತ ಕರೀತಿದ್ರು. ದೈತ್ಯ ದೇಹಿ. ಯಾವಾಗಲೂ ಹಾಕುತ್ತಿದ್ದದ್ದು ಗ್ರೇ ಕಲರ್ ಸಫಾರಿ ಮಾತ್ರ. ಅದನ್ನ ಬಿಟ್ಟು ಅವರು ಬೇರೆ ಬಟ್ಟೆ ಹಾಕಿದ್ದು ನಾ ಕಾಣೆ. ಆಗಲೇ ರಿಟೈಡರ್್ಮೆಂಟ್ ವಯಸ್ಸು. ಅವರು ರೂಮಿನಲ್ಲಿ ಕೂತಿದ್ರೆ ಈ ಹುಡುಗರು ಕಿಟಕಿಯಲ್ಲಿ ಹೋಗಿ ಗೊರಿಲ್ಲಾ ಅಂತ ಕಿರುಚಿಬಿಡ್ತಿದ್ರು. ಪಾಪ ಆವಯ್ಯಾ ತಬ್ಬಿಬ್ಬು. ಇಂಥ ಗೊರಿಲ್ಲಾ ಒಂದಿನ ಒಂದು ಎಡವಟ್ಟು ಮಾಡಿಕೊಂಡಿತ್ತು.
ಅವತ್ತು ಎಲ್ಲಾ ಪ್ರೇಯರ್ಗೆ ಅಂತ ನಿಂತಿದ್ದರು. ಸಾಮಾನ್ಯವಾಗಿ ಮಾಸ್ತರರೆಲ್ಲ ನಮಗಿಂತ ಎತ್ತರದ ಒಂದು ಸ್ಟೇಜ್ಮೇಲೆ ನಿಂತುಕೊಳ್ಳುತ್ತಿದ್ರು,. ಅವತ್ತೂ ಹಾಗೆ ನಿಂತಿದ್ರು. ಪೀಟಿ ಮಾಸ್ತರಲ್ವ ಗೊರಿಲ್ಲಾ ಯಾವಾಗಲೂ ಮುಂದೇನೆ ನಿಂತಿರೋದು. ಇನ್ನೇನು ರಾಷ್ಟ್ರಗೀತ್ ಶುರುಕರ್ ಅನ್ನಬೇಕು. ಯಾರೋ ಒಬ್ಬ ನಮ್ಮ ನಡುವಿನಿಂದಲೇ ಸಾರ್ ನೀವು ಪ್ಯಾಂಟ್ಗೆ ಜಿಪ್ಪೆ ಹಾಕಿಲ್ಲ ಅಂತ ಕಿರುಚಿಬಿಟ್ಟ.
ಪಾಪ ಗೊರಿಲ್ಲಾ ಮುಖ ಇಷ್ಟು ಚಿಕ್ಕದಾಯಿತು. ತಕ್ಷಣ ಸರಿ ಮಾಡಿಕೊಂಡರು. ನಮಗೆಲ್ಲ ನಗುವೋ ನಗು. ಉಳಿದ ಮೇಸ್ಟ್ರುಗಳಿಗೂ ಏನುಮಾಡಬೇಕೋ ಅಂತ ತೋಚದೆ ತಕ್ಷಣ ನಮ್ಮನ್ನೆಲ್ಲ ಗದರಿಸಿ ಪ್ರೇಯರ್ ಮಾಡಿಸಿದ್ರು.
ಇಂಥವು ಎಷ್ಟೋ!
ಮತ್ತೊಮ್ಮೆ ಬರೆದೇನು.

Thursday, November 6, 2008

ಸಂಡೇ ನೋಡಿದ ವೆಡ್ನೆಸ್ಡೇ ಮತ್ತು ಸಂಜೆ ನೋಡಿದ ಫ್ಯಾಷನ್

ಬದುಕು ಎಂಥ ಭಯಕ್ಕೆ ಬಿದ್ದಿದೆ ಗೊತ್ತಾ ಫ್ರೆಂಡ್ಸ್?
ಯಾವ ತೊಟ್ಟಿಯಲ್ಲಿ ಎಂಥ ಬಾಂಬ್ ಇದೆಯೋ? ಎಷ್ಟೊತ್ತಿಗೆ ಸಿಡಿದಾವೋ ಅನ್ನುವ ಆತಂಕವನ್ನು ಕೈಲಿಡಿದುಕೊಂಡೇ ಓಡಾಡಬೇಕಿದೆ. ಹಾದಿ ಬೀದಿ ತುಂಬಾ ಭಯದ ನೆರಳು ಬಾಚಿಕೊಂಡಿದೆ. ಮನೆಯಿಂದ ಹೋದವರು ಮನೆಯಲ್ಲೇ ಉಳಿದವರು ಇಬ್ಬರೂ ಸುರಕ್ಷಿತವಲ್ಲ. ಎರಡೂ ಕಡೆ ಆತಂಕ ಮಡುವುಗಟ್ಟಿದೆ. ಕೊಲ್ಲುವುದೇ ಗುರಿಯಾಗಿಸಿಕೊಂಡವರಿಗೆ, ಕೊಲ್ಲುವುದೇ ನಮ್ಮ ಧರ್ಮದ ಧರ್ಮ ಅಂದುಕೊಂಡವರಿಗೆ ಯಾವ ಉಪದೇಶ ತಾನೆ ಹಿಡಿಸೀತು? ಯಾವ ಸರಳು ತಾನೆ ಬಂಧಿಸೀತು? ಅಲ್ಲಿ ಕೇವಲ ರಕ್ತದ ದಾಹ ಇರುತ್ತದೆಯೇ ವಿನಹ ಕೊಲ್ಲುವವರ ಕಣ್ಣಲ್ಲಿ ಚೂರು ಅಳುಕಾಗಲೀ ವಿಷಾದವಾಗಲೀ ಇರುವುದಿಲ್ಲ.
ಎಲ್ಲಿದ್ದೇವೆ ನಾವು? ಎಂಥ ಬದುಕು ಸಾಗಿಸುತ್ತಿದ್ದೇವೆ? ನಾಗರಿಕ ಸಮಾಜವೊಂದು ನಡೆದುಕೊಳ್ಳುವ ರೀತಿಯೇ ಇದು. ಮನುಷ್ಯ ಮನುಷ್ಯನನ್ನ ಗೌರವಿಸದ, ಅರ್ಥ ಮಾಡಿಕೊಳ್ಳದ ಸಮಾಜವೊಂದು ನಿಮರ್ಾಣವಾಗಿಬಿಟ್ಟರೆ ಬದುಕಾದರು ಹೇಗೆ ನಡೆಸೋದು. ಒಂದು ಕಡೆ ದೇಶದ ರಾಜಕಾರಣಿಗಳು ಲೂಟಿ ಹೊಡೆಯುತ್ತಿದ್ದಾರೆ, ಇನ್ನೊಂದು ಕಡೆ ಉಗ್ರರು ಬದುಕನ್ನ ಛಿದ್ರಗೊಳಿಸುತ್ತಿದ್ದಾರೆ. ಹಾಗಾದ್ರೆ ಜನಸಾಮಾನ್ಯರಿಗೆ ಶಾಂತಿಯಿಂದ ಬದುಕುವ ಹಕ್ಕೇ ಇಲ್ಲವೇ?
ಇದನ್ನೆ ನೀರಜ್ ಪಾಂಡೆ ವೆಡ್ನೆಸ್ಡೇನಲ್ಲಿ ಹೇಳೋದು. ಕ್ಷಣ ಕ್ಷಣವೂ ಆತಂಕದಿಂದಲೇ ಇದ್ದು ಸಾಕಾಗಿದೆ. ಎಷ್ಟು ದಿನ ಇದನ್ನು ಸಹಿಸಿಕೊಳ್ಳೋದು. ಅದಕ್ಕೊಂದು ಫುಲ್ ಸ್ಟಾಪ್ ಹಾಕಬೇಡವೇ? ಹಿಂಸೆ ಅನ್ನುವುದು, ರಕ್ತ ಅನ್ನುವುದು ಮನಷ್ಯನನ್ನ ಯಾವ ರೀತಿ ಅಧೀರನನ್ನಾಗಿ ಮಾಡಿಬಿಡುತ್ತದೆ ಅಂದ್ರೆ ಅವನು ಮಾನಸಿಕವಾಗಿ ತೀರಾ ಕುಗ್ಗಿಹೋಗುತ್ತಾನೆ. ಹಾಗೆ ಅಧೀರನನ್ನಾಗಿ ಮಾಡುವುದೇ ಉಗ್ರರ ಗುರಿ ಕೂಡ ಹೌದಾ?
ಕಮೀಷನರ್ ಪ್ರಕಾಶ್ ರಾಥೋಡ್ಗೆ ಒಂದು ಕಾಲ್ ಬರುತ್ತದೆ. ಅದು ಕ್ರಾಂಕ್ ಕಾಲಾ? ಹಾಗಂತ ಅನುಮಾನಿಸುತ್ತಾರೆ ಪ್ರಕಾಶ್. ಆದ್ರೆ ಅತ್ತ ಕಡೆಯ ವ್ಯಕ್ತಿ ನಿನ್ನ ಆಫೀಸಿನಲ್ಲೇ ಬಾಂಬ್ ಇಟ್ಟಿದ್ದೇನೆ ನೋಡು ಅನ್ನುತ್ತಾನೆ. ನೋಡಿದ್ರೆ ಅದು ನಿಜವೂ ಆಗಿರುತ್ತದೆ! ಹಾಗಿದ್ದರೆ ಉಳಿದ ಕಡೆ ಬಾಂಬ್ ಸಿಡಿದರೆ ಗತಿ ಏನು? ಯಾರೀತ? ಅವನ ಹಿಂದಿರುವ ಸಂಘಟನೆಯ ಹೆಸರೇನು?
ಪ್ರಕಾಶ್ ಗಡಬಡಿಸಿಹೋಗುತ್ತಾರೆ. ನಿಮ್ಮ ಕಸ್ಟಡಿಯಲ್ಲಿರುವ ನಾಲ್ಕು ಜನ ಉಗ್ರರನ್ನು ನಾನು ಹೇಳಿದಲ್ಲಿಗೆ ತರಬೇಕು ಅನ್ನುತ್ತಾನೆ ಆತ. ಅಂದ್ರೆ ಆತನ ಇಂಟೆನ್ಷನ್ ಅರ್ಥ ಆಯ್ತಲ್ಲ. ಆದ್ರೆ ನಾಲ್ಕು ಜನ ಉಗ್ರರನ್ನೂ ಹೇಗೆ ಬಿಡುಗಡೆ ಮಾಡುವುದು? ದೇಶದ ಮಾನ? ಪವರ್?
ಟೀವಿ ವರದಿಗಾಗಿ ಹಂಬಲಿಸುವ ನೈನಾ ರಾಯ್ಗೆ ಫೋನ್ ಮಾಡಿ ಹೇಳುತ್ತಾನೆ ಆತ. ನಿನ್ನ ಜೀವನದ ಅತ್ಯಂತ ಮುಖ್ಯ ಘಳಿಗೆ ನೀನು ನೋಡಬೇಕೆಂದ್ರೆ ಇಂತ ಕಡೆ ಬಾ. ನ್ಯೂಸ್ನ ಹಸಿವಿದ್ದ ನೈನಾ ಒಪ್ಪಿಕೊಳ್ಳುತ್ತಾಳೆ.
ಮುಂದೆ ಏನಾಯ್ತು? ನಾನು ನಿಮ್ಮ ಕುತೂಹಲ ಹಾಳುಮಾಡೊಲ್ಲ. ಸಿನೆಮಾ ಒಂದು ಬಾರಿ ನೋಡಿಬನ್ನಿ. ಫಸ್ಟ್ಕ್ಲಾಸ್ ಆಗಿದೆ ಅಂತ ಮಾತ್ರ ಹೇಳಬಲ್ಲೆ.
ನಾಸಿರುದ್ದೀನ್ ಶಾ ಒಮ್ಮೆ ಕೇಳುತ್ತಾನೆ. ಅವರು ಅಷ್ಟು ಜನರನ್ನು ನಿರ್ದಯವಾಗಿ ಕೊಂದಿದಾರೆ. ನೀವ್ಯಾಕೆ ಕೇವಲ ನಾಲ್ವರನ್ನ ಕೊಲ್ಲುವುದಕ್ಕೆ ಹೆದರುತ್ತೀರಿ?
ಪ್ರಶ್ನೆಯನ್ನ ನಮ್ಮ ರಾಜಕಾರಣಿಗಳಿಗೆ, ಪೊಲೀಸರಿಗೆ ಕೇಳಬೇಕು. ಕೊಲೆ ಮಾಡಿದ್ದು ಇವನೆ. ಬಾಂಬ್ ಹಾಕಿದ್ದು ಇವನೆ ಅಂತ ಎಲ್ಲವೂ ನೇರನೇರ ಗೊತ್ತಿರುತ್ತದೆ. ಅಂಥವರನ್ನು ಇಟ್ಟುಕೊಂಡು ಎನ್ಕ್ವೈರಿ ಮಾಡಿ ಸಾಧಿಸುವುದಾದರೂ ಏನು?
ಇಡೀ ಚಿತ್ರ ತುಂಬಾ ಸೂಕ್ಷ್ಮವಾಗಿದೆ.

ಹಾಗೆ ಫ್ಯಾಶನ್ ನೋಡಿದೆ.
ಆ ಲೋಕವೇ ಒಂಥರಾ ಬಿಡಿ. ಅಲ್ಲಿ ಸೆಕ್ಸ್ಗೆ, ಪ್ರೀತಿಗೆ, ಬದುಕಿಗೆ ಅರ್ಥವೇ ಇರುವುದಿಲ್ಲ. ಎಲ್ಲಾ ಬಟ್ಟೆ ಬದಲಾಯಿಸಿದಷ್ಟೇ ಸಲೀಸಾಗಿ ಬದಲಾಗುತ್ತಿರುತ್ತದೆ. ನಾನು ಮಾಡೆಲ್ ಆಗಬೇಕು ಅಂತ ಬಂದ ಹುಡುಗಿಯೊಬ್ಬಳು ಹೇಗೆ ತನ್ನತನವನ್ನೆಲ್ಲ ಕಳೆದುಕೊಂಡು ಬದುಕಬೇಕಾಗುತ್ತದೆ ಅನ್ನುವುದೇ ಚಿತ್ರದ ಥೀಮ್. ಅಲ್ಲಿ ಅವಳ ಮಜರ್ಿಗೆ ಅಂತ ಏನೂ ನಡೆಯುವುದಿಲ್ಲ. ಏಣಿ ಹಾಕಿ ಆಕಾಶ ತೋರಿಸುವ ಜನ ಕೆಳಗೆ ನಿಂತುಕೊಂಡೇ ಕಾಲೆಳೆಯುತ್ತಿರುತ್ತಾರೆ.
ಇಟ್ಟ ಪ್ರತಿ ಕ್ರಾಸ್ ಲೆಗ್ ತಪ್ಪುತ್ತಿರುವುದು ಗೊತ್ತೇ ಆಗುವುದಿಲ್ಲ. ಗೊತ್ತಾಗುವ ಹೊತ್ತಿಗೆ ಬದುಕು ಮುರುಟಿಹೋಗಿರುತ್ತದೆ. ಇಂಟೆರೆಸ್ಟಿಂಗ್ ಫಿಲ್ಮ್.
ಸಾಧ್ಯವಾದರೆ ಒಮ್ಮೆ ನೋಡಿ ಬನ್ನಿ.

ಎರಡು ಸಣ್ ಕಥೆ

ಎಂಥ ಸೆಖೆ ಕಣೆ? ಎದುರಿಗೆ ಕೇತಾನ್ ಫ್ಯಾನ್ ಇಟ್ಟುಕೊಂಡು ಕುಳಿತರೂ ಇಷ್ಟೊಂದು ಸೆಖೆ ಆಗುತಲ್ಲಾ? ಹಾಳಾದ ಸಮ್ಮರ್!
ಅವನು ಹೇಳಿದ.
ಜಡೆ ಬಿಚ್ಚಿಕೊಂಡು, ಅದನ್ನ ಬೆಲ್ಲದ ಬಣ್ಣದ ಬೆನ್ನಿಗೆಲ್ಲ ಹರವಿಕೊಂಡು ಘಮಲಿನ ಎಣ್ಣೆ ಹಚ್ಚಿಕೊಳ್ಳುತ್ತಾ ಕುಳಿತಿದ್ದ ಇವಳು ಎದ್ದು ನಿಂತಳು.
ಅಷ್ಟೆ!
ರೂಮಿನ ತುಂಬ ಬರೀ ಘಮ್ ಘಮಲು.
***
ಅವಳು ಬೆತ್ತಲೆ ಮಲಗಿದ್ದಳು.
ಅವನೂ.
ಮಗು ಮಾತ್ರ ನಿದ್ರಿಸುತ್ತಿತ್ತು.

ಹೂಒಂದಾದರೂ ಸರಿ ಹೂವಿನ ಗಿಡ ಹಾಕಿ. ಅದು ಹೂ ಬಿಟ್ಟ ಮೇಲೆ ಅದರ ಅಂದ-ಚಂದ, ಘಮವನ್ನೆಲ್ಲ ಅನುಭವಿಸುವುದನ್ನು ಬಿಟ್ಟು ಇನ್ಯಾರೋ ಹೂ ತರುತ್ತಾರೆಂದು ಕಾಯುತ್ತಾ ಕೂರುವುದಿದೆಯಲ್ಲ ಅದು ಸರಿಯಲ್ಲ ಅಂತಾನೆ ಒಬ್ಬ ಫಿಲಾಸಫರ್.

ಸುಮ್ಮನೆ ಕುಳಿತವನ ಮನದ ಪಟಲದಲ್ಲಿ ಎದ್ದು ಕುಳಿತದ್ದು ಈ ಕವಿತೆ. ಆದ್ರೆ ಬರೆದು ಮುಗಿಸಿದವನಿಗೆ ಯಾಕೋ ಒಂದು ಶೀಷರ್ಿಕೆ ಕೊಡಲು ಆಗಲಿಲ್ಲ. ಕೊಡಬೇಕೆನಿಸದರೆ ನೀವೇ ಅದಕ್ಕೊಂದು ಶೀಷರ್ಿಕೆ ಕೊಟ್ಟುಬಿಡಿ.


ಬೀದಿ ಬದಿಯ ಗೂಡಂಗಡಿಯಲಿ
ಬೀಡಿಕೊಳ್ಳುವಾಗ
ಹೋದದ್ದು ನೀನಾ?
ಹಸಿರು ಲಂಗಕ್ಕೆ
ಹೂ ಮಲ್ಲಿಗೆಯ ಹೊದಿಕೆ
ಮೇಲೆ ಕನಕಾಂಬರದ ರವಿಕೆ
ಎಂಥ ಸೊಗಸಿತ್ತು ಗೊತ್ತಾ
ನಿನ್ನ ಸುತ್ತ
ಅಂಗಡಿಯವ ಕೇಳಿದ
ಅವಳು ನಿನಗೆ ಗೊತ್ತಾ?
ಮನಸು ಗೊತ್ತು ಅಂತು
ಮಾತು ಗೊತ್ತಿಲ್ಲ ಅಂತು

ಊರ ಹೊರಗಿನ
ಮಾರೀ ಗುಡಿಯ ಬಳಿ
ಇತ್ತಲ್ಲ ಬಾವಿ
ಅಲ್ಲಿಗೆ ನೀನು ಬರುವಾಗಲೆಲ್ಲ
ದಾಹ ನನ್ನಲ್ಲಿ
ನಾನು ಕಳ್ಳ ಕಳ್ಳನೇ ಬರುತ್ತಿದ್ದೆ
ನೀನು ಮೆಲ್ಲಮೆಲ್ಲನೇ ನಡೆಯುತ್ತಿದ್ದೆ

ನಿನಗೋ ಆಗಾಗ
ಕೋಪ
ಹುಸಿ ಮುನಿಸು
ತುಂಟ ಸೆರಗಿನ ಮೇಲೆ
ಅದರದ್ದು ಜಾರುವ ಜಾಯಮಾನ
ನಿನಗೋ ಜಾರಿಬಿದ್ದೇನೆಂಬ ಅನುಮಾನ

ನನಗೆ ನಿನ್ನ ಗೆಲ್ಲುವ ಬಯಕೆ
ನಿನಗೋ ಸೋತೇನೆಂಬ ಹೆದರಿಕೆ

ನಡುವೆ ನನ್ನ
ಎದೆಯ ಗೂಡಿನ ಗೋಡೆಗೆ ಹೊರಗಿ
ಕುಳಿತಿದ್ದ ಪ್ರೀತಿ
ಫಕ್ಕನೆದ್ದು ಕುಳಿತು ಹಾಡಿತು
ಒಳಗೊಳಗೇ
ಜೀಕಿತು
ಅವಳೆಂದ್ರೆ ನಿನಗೆ ಇಷ್ಟಾನಾ?

ಅವತ್ತು ಬಿಡು
ನನ್ನ ಮನದ ತುಂಬಾ
ಬಿಸಿಲಮಳೆ
ಕಣ್ತುಂಬಾ
ಕಾಮನ ಬಿಲ್ಲು

ನಾನು ಸೋಲದ
ರಾಜಕುಮಾರನಂತಿದ್ದವ
ಅಂಥವನನ್ನೂ ಕಣ್ಣ ಇಷಾರೆಯಲ್ಲಿ
ಸೋಲಿಸಿದ
ಯಶೋಧರೆ ನೀನು

ಹೀಗಿರುವಾಗ
ಅಂದು ನೀನು
ಸಿಕ್ಕೆ, ನಕ್ಕೆ
ಬಂದ ಮಾತಿಗೂ ಬೀಗ ಹಾಕಿದೆ
ಮಾತಾಡಲು ಮಾತಿರಲಿಲ್ಲವಾ?
ಗೊತ್ತಿಲ್ಲ!

ಪ್ರೀತಿಯೆಂದ್ರೆ
ಗಾಳಿಮಾತಲ್ಲ ಬಿಡು
ಮನದ ಮಾತು

ಅವತ್ತು ಭಾನುವಾರ
ಊರ ಕೆರೆ ಬಳಿಯ
ಕಡುಗಪ್ಪು ಕಲ್ಲಿನ ಮೇಲೆ
ಕುಳಿತಿದ್ಯಲ್ಲ ನೀನು
ಪಕ್ಕದಲ್ಲೇ
ನಿನ್ನ ಎದೆಗಾನಿಸಿಕೊಂಡಿದ್ದನಲ್ಲ
ಅವನು

ಅವತ್ತೇ ಕೊನೆ

ಅಂದಿನಿಂದ ನನಗೆ ಹುಷಾರಿಲ್ಲ
ಉಸಿರೂ ಇಲ್ಲ

ಕಾಲ ಬುಡದಲ್ಲೆ
ಪ್ರೀತಿ ಸತ್ತು ಮಲಗಿದೆ
ಎಬ್ಬಿಸಬೇಕಾದ ನೀನೇ
ಎದ್ದುಹೋದೆ

ಇನ್ನೆಲ್ಲಿಯ ಬದುಕು?

Monday, November 3, 2008