Saturday, July 26, 2008

ಮಾರ್ನಿಂಗ್ ದುನಿಯಾದಲ್ಲಿ ಸಿಕ್ಕ ಗೆಳೆಯನೂ ಮತ್ತವನ ಪ್ರೀತಿಯೂ


ಅವತ್ತು ಇಡೀ ರಾತ್ರಿ ಕಣ್ಣು ಮುಚ್ಚಿಲ್ಲ. ಸೀನಣ್ಣ ಸ್ವಲ್ಪ ಸಮಯ ಜೊತೆಲಿದ್ದು ಆಮೇಲೆ ಹಾಯ್ ಬೆಂಗಳೂರ್ ಪ್ರಿಂಟ್ ಇದ್ದದ್ದರಿಂದ ಅದರ ಉಸ್ತುವಾರಿಗೆ ಹೋದ. ಎದುರಿಗಿದ್ದ ಮೆಷೀನ್ ಸೆಕೆಂಡಿಗೆ ಮೂರು ಕಲರ್ ಷೀಟ್ ಉಗುಳುತಿತ್ತು. ಮಧ್ಯೆ ಮಧ್ಯೆ ಪ್ರಿಂಟರ್ಗೆ ನಂಗೊಂದು ಷೀಟ್ ಕೊಡಿ ಅಂತ ತೆಗೆದುಕೊಂಡು ಕಲರ್ ಸರಿಯಾಗಿದೆಯಾ ಅಂತ ನೋಡ ನೋಡುತ್ತಲೇ ಬೆಳಕು ಹರಿದಿತ್ತು. ಪ್ರಿಂಟರ್ ತಮಿಳುನಾಡಿನವನು. ಕನ್ನಡ ಮಾತಾಡಿದರೆ ಅದು ತಮಿಳೇ ಇದ್ದಂಗಿತ್ತು. ಸಾರ್ ಣೀವು ಹೋಗಿ ಮಳಗಿ. ನಣ್ಣ ಮೇಲೇ ಣಂಬಿಗೆ ಇಳ್ಳವಾ? ಅಂತ ಅವನು. ಇಲ್ಲಪ್ಪ ನನಗೆ ಅಭ್ಯಾಸ ಆಗಿಹೋಗಿದೆ. ಪರವಾಗಿಲ್ಲ ಇರ್ತೇನೆ ಅಂತ ಪಟ್ಟಾಗಿ ಅಲ್ಲೇ ಒಂದು ಚೇರ್ ಎಳೆದುಕೊಂಡು ಕುಳಿತುಬಿಟ್ಟೆ. ನನಗೆ ಹೀಗೆ ನಿದ್ರೆಗೆಡುವುದೆಲ್ಲ ಹೊಸದಲ್ಲ. ಮೈಸೂರಿನಲ್ಲಿದ್ದಾಗ ಒಂದು ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿದ್ದ ಎಲ್ಲರೂ ತಮಿಳರೇ. ಹಾಗಾಗಿ ತಮಿಳಿನ ಗಂಧ ನನಗೆ ಸ್ವಲ್ಪ ಗೊತ್ತು. ಅವರು ಕೆಟ್ಟಕೆಟ್ಟದಾಗಿ ಬೈದಾಡಿಕೊಳ್ಳುತ್ತಿದ್ರೆ (ಅಥವಾ ನಮಗೆ ಬೈದ್ರೆ) ನಾನು ಮೊದಮೊದಲು ಪೆಕರುಪೆಕರಾಗಿ ನೋಡುತ್ತಿದ್ದೆ. ಆಮೇಲೆ ಸ್ವಲ್ಪ ಹುಷಾರಾಗಿ ಆ ಬೈಗುಳದ ಅರ್ಥ ತಿಳಿದುಕೊಂಡೆ. ಆಗ ಗೊತ್ತಾಯ್ತು ಅವರು ಏನೆಲ್ಲ ಬೈದಾಡಿಕೊಳ್ಳುತ್ತಿದ್ದರೂ ಅಂತ. ಆಮೇಲಾಮೇಲೆ ನಾನೂ ಅವರನ್ನು ಅದೇ ಭಾಷೆಯಲ್ಲಿ ಬೈದಾಗ ಇವನಿಗೆ ತಮಿಳು ಕಲಿಸಿಕೊಟ್ಟಿದ್ದೇ ತಪ್ಪಾಯ್ತು ಅಂತ ಅವರು ಪೇಚಾಡಿಕೊಂಡಿದ್ದರು.ಇಂತಿಪ್ಪ ಪ್ರೆಸ್ನಲ್ಲಿ ನಾವು ಹೆಣ ಬಿದ್ದೋಗೋ ಹಂಗೆ ದುಡಿಯುತ್ತಿದ್ದೆವು. ನಿಜ ಹೇಳ್ತೀನಿ ಆ ಎರಡು ವರ್ಷದಲ್ಲಿ ನಾನು ದಿನಕ್ಕೆ ನಿದ್ರೆ ಅಂತ ಮಾಡುತ್ತಿದ್ದದ್ದು ಕೇವಲ ಮೂರೋ ನಾಲ್ಕೋ ಗಂಟೆ ಮಾತ್ರ. ರಾತ್ರಿ ಎಲ್ಲಾ ದುಡಿದು ಬೆಳಗಿನ ಮೂರೋ ನಾಲ್ಕೋ ಗಂಟೆಗೆ ಅವರು ಸೈಕಲ್ ಹತ್ತಿ ಹೊರಟುಬಿಡುತ್ತಿದ್ದರು. ನಾನು ಅಲ್ಲೇ ಡಬ್ಬಲ್ ಡೆಮಿ ಪೇಪರ್ ಒಂದನ್ನು ಹಾಸಿಕೊಂಡು ಅಂತದೇ ಇನ್ನೊಂದನ್ನು ಹೊದ್ದುಕೊಂಡು ಮಲಗಿಕೊಳ್ಳುತ್ತಿದ್ದೆ. ಬೆಳಿಗ್ಗೆ ಹೋದ್ರೆ ಮನೆ, ಇಲ್ಲ ಅಂದ್ರೆ ಡ್ಯೂಟಿ ಕಂಟಿನ್ಯೂ ಆಗ್ತಿತ್ತು. ಆ ರಾತ್ರಿಗಳಲ್ಲೆ ನಾನು ಗೆಳೆಯ ಗೆಳತಿಯರಿಗೆ ಒಬ್ಬಂಟಿಯಾಗಿ ಕುಳಿತು ಪತ್ರ ಬರೆಯುತ್ತಿದ್ದದ್ದು. ಆಗ ನನಗಿದ್ದ ಬರವಣಿಗೆ ಅಂದ್ರೆ ಅದೊಂದೇ. ಪುಟಗಟ್ಟಲೇ ಪತ್ರ ಬರೆಯುವುದು ಅಭ್ಯಾಸವಾಗಿ ಹೋಗಿತ್ತು. ಯಾವುದಾವುದೋ ವಿಷಯ... ಏನೇನೋ ಚಚರ್ೆ, ಜೊತೆಗೊಂದಿಷ್ಟು ಗೆರೆಗಳು. ನಾನು ಬರೆವ ಪ್ರತಿ ಲೆಟರ್ನಲ್ಲೂ ಚಿತ್ರ ಇದ್ದೇ ಇರುತ್ತಿತ್ತು. ಅವನ್ನೆಲ್ಲ ಈಗಲೂ ನೆನೆದು ಪುಳಕಗೊಳ್ಳುತ್ತೇನೆ.ನಾವಿದ್ದ ಪ್ರೆಸ್ನಿಂದ ಕೂಗಳತೆ ದೂರದಲ್ಲಿ ದಾಸ್ಪ್ರಕಾಶ್ ಪ್ಯಾರಡೈಸ್ನವರದೊಂದು ಬೇಕರಿ ಇತ್ತು. ಅಲ್ಲಿ ದಿಲ್ಪಸಂದ್ ನೆನಸಿಕೊಂಡ್ರೆ ಈಗಲೂ ಬಾಯಲ್ಲಿ ನೀರೂರುತ್ತೆ. ಅಷ್ಟು ಚೆನ್ನಾಗಿರುತ್ತಿತ್ತು. ಅದನ್ನ ತಂದು ಮೇಯ್ತಿದ್ವಿ. ಹೆಚ್ಚು ಕಡಿಮೆ ವಾರದಲ್ಲಿ ಮೂರ್ನಾಲ್ಕು ದಿನ ಇರ್ತಿತ್ತು. ಹಣದ್ದೇನು ಕೊರತೆ ಇರ್ತಿರಲಿಲ್ಲ. ಓಟಿ ಕೊಡ್ತಿದ್ರು. ತಿಂಡಿಗೂ ಕಾಸು ಕೊಡ್ತಿದ್ರಲ್ಲ! ಆಮೇಲೆ ರಾತ್ರಿಗೆ ಊಟಕ್ಕೆ ಅಂತ ಪರೋಟ ತಿಂತಿದ್ವಿ. ಅದೂ ಒಂಥರಾ ಮಜ್ಜಾ ಇರ್ತಿತ್ತು. ಪರೋಟ ತಂದು ಅದಕ್ಕೆ ಸಾಗು ಹಾಕ್ಕೊಂಡು ತಿನ್ನೋದು ಓಕೆ. ಆದ್ರೆ ಈ ತಮಿಳ್ನೋರು ನನಗೊಂದು ಹೊಸ ರುಚಿ ಹೇಳ್ಕೊಟ್ರು. ಪರೋಟಾನೆಲ್ಲ ಪೀಸ್ ಪೀಸ್ ಮಾಡಿ ಅದಕ್ಕೆ ಸಾಗು ಹಾಕಿ ಕಲಸಿ... ಜೊತೆಗೆ ಎರಡೋ ಮೂರೋ ಬಾಳೆ ಹಣ್ಣು ಹಾಕಿ ಕಲಸಿಕೊಳ್ಳೋದು. ಏನೋ ಒಂಥರ ರುಚಿ ಸಿಗ್ತಿತ್ತು. ಹಾಗೆ ಕಲಸಿಕೊಂಡು ಎರಡು ಪರೋಟ ತಿಂದುಬಿಟ್ರೆ ರಾತ್ರಿ ಇಡೀ ಹಸಿವು ಅನ್ನೋದು ಹತ್ತಿರಕ್ಕು ಸುಳಿಯುತ್ತಿರಲಿಲ್ಲ. ಆದ್ರ್ರೆ ಬೆಳಗಿನ ಜಾವ ಮೂರು ಗಂಟೆ ಆಗ್ತಾ ಇದ್ದ ಹಾಗೆ ಒಂದು ನಿದ್ರೆ ಬರ್ತಿತ್ತು ನೋಡಿ, ತಡೆಯೋದಕ್ಕೆ ಸಾಧ್ಯಾನೆ ಇಲ್ಲ ಅನ್ನೋ ನಿದ್ರೆ ಅದು. ಒಮ್ಮೆ ತೂಕಡಿಸುತ್ತಲೇ ಪೇಪರ್ ಎಲ್ಲಾ ಸ್ಟೋರ್ ಆಗುತ್ತಲ್ಲ ಟ್ರೇ ಅದರೊಳಕ್ಕೇ ಕೈ ಹಾಕ್ಕೊಂಡು ಮಲಗಿಬಿಟ್ಟಿದ್ದೆ. ಪುಣ್ಯಕ್ಕೆ ಅಲ್ಲಿರುವವರು ಎಚ್ಚರಿಸಿದ್ದರು.ಇಂಥ ಪ್ರೆಸ್ನಿಂದ ಒಂದಿನ ಒಂದು ಮಾತೂ ಆಡದೇ ಎದ್ದು ಬಂದಿದ್ದೆ. ಆಗ ನಾನು ಅನುಭವಿಸಿದ ಡಿಪ್ರೆಷನ್ ಇದೆಯಲ್ಲ ಅದರಿಂದ ಪಾರಾಗಲು ನನಗೊಂದು ದಾರಿ ಬೇಕಿತ್ತು. ನನ್ನ ಬದುಕು ಕಟ್ಟಿಕೊಳ್ಳಲು ಒಂದು ಕನಸು ಬೇಕಿತ್ತು. ಅಂಥದ್ದೊಂದು ಕನಸಿನ ಬೆನ್ನು ಹತ್ತಿ ಬಂದವನಿಗೆ ಬೆಂಗಳೂರು ಬೇಡ ಅನ್ನಲಿಲ್ಲ.ಬದುಕು ನಿಧಾನಕ್ಕೆ ಬದಲಾಗತೊಡಗಿತು.ಯಾಕೋ ಹೋದ ವಾರ ಫಸ್ಟ್ ಹಾಫ್ ಮುದ್ರಣಕ್ಕೆ ಅಂತ ಪ್ರೆಸ್ಗೆ ಹೋದಾಗ ಇದೆಲ್ಲ ನೆನಪಾಗತೊಡಗಿತು.ಹಾಗೆ ರಾತ್ರಿ ಎಲ್ಲ ನಿದ್ರೆ ಗೆಟ್ಟು ಬೆಳಿಗ್ಗೆ ಮನೆಗೆ ಹೋಗಿ ಸ್ನಾನ ಮಾಡಿಬರೋಣ ಅಂತ ಹೊರಟೆ. ಕಾರು ಪ್ರೆಸ್ಸಲ್ಲೇ ಬಿಟ್ಟು ಹೋಗಿದ್ದೆನಾದ್ದರಿಂದ ಇಸ್ಕಾನ್ ಹತ್ತಿರ ಬಂದ ಆಟೋ ಒಂದಕ್ಕೆ ಕೈ ಅಡ್ಡ ಹಾಕಿದೆ.ನನ್ನ ಏರಿಯಾಗೆ ಬರ್ತೀಯಾ ಅಂದೆ.ನಾನಿದ್ದ ಡ್ರೆಸ್ ನೋಡಿಯೋ ಏನೋ, ಏನ್ ಸಾರ್ ಇಲ್ಲಿಗಂಟ. ಜಾಗಿಂಗ್ ಬಂದುಬಿಟ್ರಾ ಅಂತ ಆತ್ಮಿಯವಾಗಿ ಕೇಳಿದ. ಇಲ್ಲ ಇಲ್ಲ. ಪ್ರೆಸ್ಗೆ ಬಂದಿದ್ದೆ. ಈಗ ಮನೆಗೆ ಹೋಗತಾ ಇದೀನಿ ಅಂದೆ.ಪ್ರೆಸ್ನವರ ಸಾರ್. ಯಾವ ಪ್ರೆಸ್ಸು? ಅಂದ.ಹಾಯ್ ಬೆಂಗಳೂರ್ ಅಂದೆ.ಸಾರ್ ನಿಮ್ಮೆಸರು ಅಂದ.ರವಿ ಅಜ್ಜೀಪುರ ಅಂದೆ.ನಾನು ನಿಮ್ಮ ಫ್ಯಾನ್ ಸಾರ್. ನೀವು ಓ ಮನಸೇನಲ್ಲಿ ಬರೀತೀರಲ್ವಾ. ಸೂಪೆರ್ಬ್ ಅಂದ. ನನಗೆ ಇನ್ ಬಾಕ್ಸ್ ಅಂದ್ರೆ ಪ್ರಾಣ ಅಂದ. ನಾನು ನನ್ನ ಹುಡುಗಿಗೇ ಈ ಮೆಸ್ಸೇಜ್ಗಳನ್ನೇ ಕಳಿಸೋದು ಸಾರ್. ಅವಳಿಗೆ ತುಂಬಾ ಇಷ್ಟ ಅಂದ.ಹಾಗೆ ಮಾತಾಡ್ತಾ ಮಾತಾಡ್ತ ಮನೆ ಬಂದಿದ್ದೇ ಗೊತ್ತಾಗಲಿಲ್ಲ. ಹಣ ಕೊಡಲು ಹೋದ್ರೆ ಸರ್ ನಿಮ್ಮತ್ರ ಹಣಾನ, ಬೇಡ ಸಾರ್ ಅಂತ ಹಿಂಜರಿಯತೊಡಗಿದ.ಬಲವಂತ ಮಾಡಿ ಹಣ ಕೊಟ್ಟೆ.ಓ ಮನಸೇ ತುಂಬಾ ಲೇಟ್ ಮಾಡಬೇಡಿ ಸಾರ್. ನಮ್ಮಂತೋರು ಕಾಯ್ತಾ ಇರ್ತೀವಿ. ಮನೇಲಿ ಅದಿದ್ರೆ ದಾರಿ ದೀಪ ಇದ್ದಂಗೆ ಅಂದವನ ಕಣ್ಣಲ್ಲಿದ್ದ ಪ್ರೀತಿಗೆ ಏನು ಹೇಳಲಿ. ಎಲ್ಲಿಯವರೋ, ಯಾರೊ? ವಿನಾಕಾರಣ ನಮ್ಮನ್ನು ಪ್ರೀತಿಸಿಬಿಡುತ್ತಾರೆ. ಒಮ್ಮೊಮ್ಮೆ ಅಂಥ ಪ್ರೀತಿಗೆ ನಾವು ಅರ್ಹರೇ ಅನ್ನುವ ಪ್ರಶ್ನೆಯೂ ಎದ್ದು ದಿಗಿಲಾಗುತ್ತದೆ. ಇವೆಲ್ಲದರ ನಡುವೆ ಒಂದು ಒಳ್ಳೆ ಕೆಲಸ ಮಾಡಿದಾಗ ಆಗುವ ಖುಷಿ ಇದೆಯಲ್ಲ ಅದಕ್ಕೆ ಪಾರವೇ ಇಲ್ಲ. ಈಗ ಫಸ್ಟ್ ಹಾಫ್ ಕೈಯಲ್ಲಿದೆ. ಅದನ್ನು ನೋಡುತ್ತಾ ಕೂರುವುದರ ಸಂಭ್ರಮವೇ ಬೇರೆ ಬಿಡಿ.

Friday, July 25, 2008

ಗೆಳೆಯನಿಗೆ ಬಿಟ್ಟ ಒಂದು ಮೆಸ್ಸೇಜು...

ಒಂದು ವಿನಂತಿಯ ಹೊರತು ನಾನು ನಿನ್ನನ್ನೇನೂ ಕೇಳುವುದಿಲ್ಲಅಂದ ಹುಡುಗ.
ಹುಡುಗಿ ನಕ್ಕಳು.
ನಂತರ ಮಳೆ ಬಂತು.
ಮಳೆ ಬಿಸಿಲು ಬಂತು.
ಮುಗಿಲು ಶುಭ್ರವಾಯ್ತು.
ನೆಲ ಮಾತ್ರ ರಕ್ತಸಿಕ್ತವಾಗಿತ್ತು.
ಇದು ನಾನು ಭಾನುವಾರ ಗೆಳೆಯ ನವಿಲುಗರಿ ಸೋಮುವಿಗೆ ಕಳಿಸಿದ್ದ ಮೆಸ್ಸೇಜ್. ಅವತ್ತು ಹಾಸನದಿಂದ ಹಿಂದಿರುಗುತ್ತಿದ್ದೆ. ಯಾಕೋ ಏನೋ ಸುಮ್ಮನೆ ಕೂರಲು ಆಗದೇ ಒದ್ದಾಡುತ್ತಿದ್ದೆ. ಕುಣಿಗಲ್ ತಲಪುವಷ್ಟರಲ್ಲಿ ಚೂರೇ ಚೂರು ಮಳೆ ಬಂದು ಹಿತವೆನಿಸಿತು. ಕಿಟಕಿಯಲ್ಲಿ ತಲೆ ತೂರಿಸಿ ಆಹಾ ಅನ್ನಲು ಹೋದೆ. ಡ್ರೈವರ್ ರೀ ಸ್ವಾಮಿ ತಲೆ ಒಳಕ್ಕಾಕಳ್ರೀ, ಇಲ್ಲ ಅಂದ್ರೆ ತಲೇನೇ ಇರಲ್ಲ ಅಂದ. ಸರಕ್ಕನೆ ತಲೆ ಒಳಕ್ಕೆಳೆದುಕೊಂಡು ಕುಳಿತೆ. ಹೇಳಬೇಕೆಂದ್ರೆ ನನಗೆ ಈ ಪ್ರಯಾಣ ಯಾವಾಗಲೂ ಬೋರೇ! ಒಂಥರ ಆಯಾಸ ತಂದುಬಿಡುತ್ತೆ. ತೀರಾ ಹಸಿರು ಉಕ್ಕುವ ಪ್ರದೇಶಕ್ಕೆ ಹೋಗಿ ಬಂದರೆ ಮಾತ್ರ ಮನಸ್ಸು ಸ್ವಲ್ಪ ಉಲ್ಲಾಸದಿಂದಿರುತ್ತೇನೋ! ಆದ್ರೆ ಸುಮ್ಮನೆ ಯಾರದೋ ಮನೆಗೆ ಹೋಗಿ ತಿಂದುಂಡು ಮಲಗಿ ಮತ್ತೆ ಎದ್ದು ಹೊರಡುವುದಿದೆಯಲ್ಲ ಅದು ನಿಜಕ್ಕೂ ಬೇಜಾರಿನ ಕೆಲಸ. ನಾನು ಮಾಡಿದ್ದೂ ಅದನ್ನೇ! ಹಾಗಾಗಿ ಮನಸ್ಸಿನಲ್ಲಿ ಲವಲವಿಕೆಯೇ ಇರಲಿಲ್ಲ.
ಆಗ ಹೊಳೆದಿದ್ದೇ ಈ ಸಾಲುಗಳು.ತಕ್ಷಣ ನವಿಲುಗರಿ ಸೋಮುವಿಗೆ ಕಳಿಸಿಬಿಟ್ಟೆ. ಅವರಿಗೆ ಅದೇನು ಹಿಡಿಸಿತೋ ಮೂರು ದಿನ ಆದಮೇಲೆ ಒಂದು ಮೆಸ್ಸೇಜ್ ಬಿಟ್ಟರು. ನನಗೆ ನಿಜಕ್ಕೂ ಇದು ಹುಚ್ಚು ಹಿಡಿಸಿಬಿಟ್ಟಿದೆ. ಕೊನೆ ಸಾಲು ಮಾತ್ರ ಜಪ್ಪಯ್ಯ ಅಂದರೂ ಅರ್ಥ ಆಗಲಿಲ್ಲ. ಅದರಲ್ಲಿ ಏನೋ ಇದೆ ಅನಿಸುತ್ತಿದೆ. ಅದೇನು ಅಂತ ಹೇಳು ಗುರುವೇ ಅಂತ. ನಾನು ಅದುವರೆಗೂ ಆ ಮೆಸ್ಸೇಜ್ ಕಳಿಸಿ ಮರೆತು ಸುಮ್ಮನಿದ್ದವ. ಆದ್ರೆ ಯಾವಾಗ ಈ ನವಿಲುಗರಿ ಮತ್ತೆ ಕಳಿಸಿದರೋ ಮತ್ತೆ ಮತ್ತೆ ಓದಿಕೊಂಡೆ. ಹೌದಲ್ಲ ಇದರಲ್ಲೇನೋ ಇದೆ ಅನಿಸಿಬಿಟ್ಟಿತು. ಏನದು?ನಾನು ಹೇಳುವುದಕ್ಕಿಂತ ಅದನ್ನು ನೀವು ಹೇಳಿದ್ರೇ ಚೆನ್ನ. ಏನನ್ನಿಸಿತು ಅಂತ ಒಂದು ಮೆಸ್ಸೇಜ್ ಬಿಡಿ.
ಮನಸ್ಸು ಖುಲ್ಲಂ ಖುಲ್ಲ ಖುಷಿಯಾಗುತ್ತದೆ.

Wednesday, July 23, 2008

ಫಸ್ಟ್ ಹಾಫ್ ನೋಡಬೇಕು ಅಂದಿದ್ರು ವ್ಯಾಸರು

ಆಗತಾನೆ ಬಂದಿದ್ದ "ಫಸ್ಟ್ ಹಾಫ್" ಪುಸ್ತಕವನ್ನ ಪತ್ರಕರ್ತ ಗೆಳೆಯ ಶ್ರೀಕಂಠ ಒಂದು ಎಕ್ಸೈಟ್ಮೆಂಟ್ನೊಂದಿಗೆ ತಿರುವಿ ಹಾಕುತ್ತಿದ್ದರು. ಆ ಪುಸ್ತಕದ ಬಗ್ಗೆ ನನಗಿಂತ ಅವರಿಗೇ ಹೆಚ್ಚು ಕುತೂಹಲವಿತ್ತು. ಹಾಗಾಗಿ ಪುಸ್ತಕದ ಮೊದಲ ಕಾಪಿ ಬಂತು ಅನ್ನುತ್ತಿದ್ದಂತೆ ನನಗೆ ತೋರಿಸಿಯೇ ನೀವು ಹೋಗಬೇಕು ಅಂತ ಹಟ ಹಿಡಿದಿದ್ದರು. ಇಡೀ ಪುಸ್ತಕ ನೋಡಿ ಆದ ಮೇಲೆ ಅವರು ಹೇಳಿದ್ದಿಷ್ಟು... ಈ ತರಹದ ಪುಸ್ತಕ ಇದುವರೆಗೂ ಬಂದಿಲ್ಲ. ನೀವು ಅದ್ಭುತವಾದ ಕೆಲಸ ಮಾಡಿದ್ದೀರಿ ಅಂತ. ಅವರ ಪ್ರೀತಿ ದೊಡ್ಡದು.
ಆದರೆ ವಿಪಯರ್ಾಸ ನೋಡಿ. ವ್ಯಾಸರು ರವಿ ಬೆಳಗೆರೆ ಬಗ್ಗೆ ಅತ್ಯಂತ ಪ್ರೀತಿಯಿಂದ ಬರೆದುಕೊಟ್ಟಿದ್ದ ಲೇಖನವನ್ನ ತಿರುವಿಹಾಕುತ್ತಿದ್ದಾಗಲೇ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಂತು. ಮಧ್ಯಾಹ್ನ 12.20ಕ್ಕಷ್ಟೇ ಫೋನ್ ಮಾಡಿ ವಿಠ್ಠಲ ಗಟ್ಟಿ ಉಳಿಯ ಅವರ ಜೊತೆ ನಗುನಗುತ್ತಾ ಮಾತಾಡಿದ್ದರು. ನಮ್ಮನ್ನೆಲ್ಲ ಯಥಾಪ್ರಕಾರ ವಿಚಾರಿಸಿದ್ದರು. ಓ ಮನಸೇ ಬೇಗ ಕೊಡಿ. ಯಾಕೆ ಲೇಟ್ ಮಾಡ್ತೀರಿ ಅಂದಿದ್ದರು. ನಾನು ಫಸ್ಟ್ ಹಾಫ್ ಪುಸ್ತಕದ ರಿಲೀಸಿಂಗ್ ಫಂಕ್ಷನ್ಗೆ ಬರ್ತೇನೆ ಅಂದಿದ್ದರಂತೆ. ಇನ್ನೆಲ್ಲಿ ಬರೋದು? ಯಾಕೋ ಗೊತ್ತಿಲ್ಲ ಹಿರಿಯರೆನಿಸಿಕೊಂಡಿದ್ದವರೆಲ್ಲ ಒಬ್ಬೊಬ್ಬರಾಗಿ ಹೇಳದೆ ಕೇಳದೆ ಹೊರಟುಹೋಗುತ್ತಿದ್ದಾರೆ. ನನ್ನ ಅತ್ಯಂತ ಪ್ರೀತಿಯ ರಾಮ್ದಾಸ್ ಹೋದಾಗಲಂತೂ ನನ್ನನ್ನೊಂದು ಶೂನ್ಯ ಆವರಿಸಿಕೊಂಡಿತ್ತು. ಮೊನ್ನೆ ಅವರ ಕೊನೆಯ ಫೋಟೋ ಆಕಸ್ಮಿಕವಾಗಿ ಸಿಕ್ಕಿತು. ಕಣ್ಣು ಒತ್ತರಿಸಿಕೊಂಡು ಬಂತು. ಒಮ್ಮೆ ಮೂಡುಬಿದಿರೆಯಲ್ಲಿ ಸಿಕ್ಕು ಇಷ್ಟು ಎತ್ತರ ಬೆಳೆದುಬಿಟ್ಟಿದ್ದೀರಾ? ಗುರುತೇ ಸಿಗುತ್ತಿಲ್ಲ ಅಂದಿದ್ದರು. ಆಮೇಲೆ ಅದೆಂಥದೋ ಮರದ ಕೆಳಗೆ ಗಂಟೆಗಟ್ಟಲೆ ಕುಳಿತು ಹರಟೆ ಹೊಡೆದಿದ್ದರು. ಹಾಗೆ ತೇಜಸ್ವಿ. ಈಗ ವ್ಯಾಸರು. ನಾವೆಲ್ಲ ಸಾಹಿತ್ಯಕ ತಬ್ಬಲಿಗಳಾಗುತ್ತಿದ್ದೀವೇನೋ ಅನಿಸಿಬಿಟ್ಟಿದೆ.ಗೆಳೆಯ ವಿಠ್ಠಲ ಗಟ್ಟಿ ಉಳಿಯ ಅವರಿಗೆ ವ್ಯಾಸರು ಫೋನ್ ಮಾಡಿದಾಗಲೆಲ್ಲ ರವಿ ಅಜ್ಜೀಪುರ ಅವರನ್ನು ಕೇಳಿದೆ ಅಂತ ಹೇಳಿ. ಅವರು ಚೆನ್ನಾಗಿ ಬರೆಯುತ್ತಾರೆ. ಅವರ ಶೈಲಿ ಚೆನ್ನಾಗಿದೆ ಅನ್ನುತ್ತಿದ್ದರಂತೆ. ಪ್ರತಿ ಮೆಸ್ಸೇಜ್ನಲ್ಲೂ ನಮ್ಮ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ರು. ಒಮ್ಮೆ ಹೋಗಿ ಅವರನ್ನು ನೋಡಿಕೊಂಡು ಬರೋಣ ಅಂತ ನಾನು ವಿಠ್ಠಲಗಟಿ ಉಳಿಯ ಮಾತಾಡಿಕೊಂಡಿದ್ದೆವು. ಅವರಿಗೆ ಫಸ್ಟ್ ಹಾಫ್ ಪುಸ್ತಕ ನೋಡಬೇಕೆಂಬ ಆಸೆ ತೀವ್ರವಾಗಿತ್ತು. ಆದ್ರೆ ಅದನ್ನು ನೋಡುವ ಮೋದಲೇ ಹೊರಟುಬಿಟ್ಟರಲ್ಲ ಅನ್ನುವ ವ್ಯಥೆ ಇನ್ನಿಲ್ಲದೇ ಕಾಡುತ್ತಿದೆ.
ಅವರ ಪ್ರೀತಿ ಅಜರಾಮರ. ಅವರು ಬರೆದ ಕಥೆಗಳೂ

Monday, July 21, 2008

ಫಸ್ಟ್ ಹಾಫ್ ಅನ್ನೋ ಬೆಳಗೆರೆ ಬದುಕಿನ ಬೆರಗು
ಫಸ್ಟ್ ಹಾಫ್.


ಫಸ್ಟ್ ಹಾಫ್ಇದೇನು ಹೆಸರೇ ಡಿಫರೆಂಟ್ ಆಗಿದೆ ಅಂದುಕೊಂಡ್ರಾ! ಹೆಸರು ಮಾತ್ರವಲ್ಲ ಬುಕ್ಕೂ ಡಿಫರೆಂಟಾಗೆ ಇದೆ.ನಾಲ್ಕುನೂರಕ್ಕೂ ಹೆಚ್ಚಿನ ಫೊಟೋಗಳು.... ಎಪ್ಪತ್ತಕ್ಕೂ ಹೆಚ್ಚಿನ ಆಪ್ತ ಬರಹಗಳು... ಸೊಗಸಾದ ವಿನ್ಯಾಸ... ಬೊಗಸೆಯಲ್ಲಿ ಬಿದ್ದೊಡನೆಯೇ ಬೆರಗುಗೊಳಿಸುವಂತಹ ಮುದ್ದುಮುದ್ದಾದ ಪುಸ್ತಕ ಇದು. ನಿಜ್ಜ ಇದು ರವಿ ಬೆಳಗೆರೆ ಅಭಿನಂದನಾ ಗ್ರಂಥ. ಅವರನ್ನು ಕಣ್ಣಲ್ಲಿ ತುಂಬಿಕೊಂಡವರು... ಮನದಲ್ಲಿ ಬಚ್ಚಿಟ್ಟುಕೊಂಡವರು ...ಹೇಗಿದ್ದ ಹೇಗಾದ ಅಂತ ಬೆರಗುಗೊಂಡವರು... ಬಹಳ ಕಷ್ಟಪಟ್ಟಾಂನ್ರಿ. ಅಂವ ಇನ್ನೂ ಚೆನ್ನಾಗಿರಬೇಕು ಅಂತ ಮನ ಬಿಚ್ಚಿ ಹರಸಿದವರು... ಕೈ ಹಿಡಿದು ನಡೆಸಿದವರು...ಗೆಳೆಯರು-ಗೆಳತಿಯರು... ಅವರ ನೆರಳಲ್ಲೇ ಬದುಕು ಕಂಡುಕೊಂಡವರು... ಎಲ್ಲರ ಮನದ ಮಾತು ಇಲ್ಲಿದೆ.


ಪ್ರತಿ ಪುಟವೂ ನವನವೀನ ಅಂತಾರಲ್ಲ ಹಾಗೇ.


ನಿಜ್ಜ ಹೇಳ್ತೀನಿ ಇಂಥ ಚಂದಕ್ಕೆ ಕನ್ನಡದಲ್ಲಿ ಈ ಮೊದಲು ಪುಸ್ತಕ ಬಂದಿದೆಯಾ?ಗೊತ್ತಿಲ್ಲ.ಆದ್ರೆ ಫಸ್ಟ್ ಹಾಫ್ ನ ಫಸ್ಟ್ ಕಾಪಿ ಬಂತಲ್ಲ ಅದನ್ನ ಕೈಯಲ್ಲಿಡಿದುಕೊಂಡು ಅದೆಷ್ಟು ಹೊತ್ತು ನೋಡುತ್ತಾ ಕುಳಿತೆನೋ..ನೋಡಿದಷ್ಟೂ ಬೆರಗು ತಣಿಯಲಿಲ್ಲ...


ಆ ಬೆರಗು ಇನ್ನೇನು ಕೆಲವೇ ದಿನಗಳಲ್ಲಿ ನಿಮಗೂ ಸಿಗಲಿದೆ...