Sunday, October 24, 2010

ಅದಕ್ಕಿಂತ ಅಮಾನವೀಯತೆ ಇನ್ನೊಂದಿದೆಯೇ?


ಇತ್ತೀಚೆಗೆ ಒಂದು ಡಾಕ್ಯುಮೆಂಟರಿ ನೋಡುತ್ತಿದ್ದೆ. ಅದರಲ್ಲಿ ಕಾಡೆಮ್ಮೆಯೊಂದು ಕೆಸರಿನಲ್ಲಿ ಹೂತು ಹೋಗಿ ಕೇವಲ ತಲೆ ಮಾತ್ರ ಮೇಲಿರುತ್ತದೆ. ಕೆಸರಿನಿಂದ ಬಚಾವ್ ಆಗಿ ಬದುಕುವ ಎಲ್ಲಾ ಆಸೆಗಳೂ ಅದರ ಪಾಲಿಗೆ ಕಮರಿಹೋಗಿರುತ್ತದೆ. ಅದು ಅಂಥ ಡೆಡ್ಲಿ ಕೆಸರು.ಇದನ್ನ ಕ್ಯಾಮೆರಾ ಸೆರೆಹಿಡಿಯುತ್ತಲೇ ಇರುತ್ತದೆ. ಅದೇ ಸಮಯಕ್ಕೆ ಮೂರ್ನಾಲ್ಕು ಸಿಂಹದ ಮರಿಗಳು ಒಣಗಿದ ಕೆಸರಿನ ಮೇಲೆ ಮೆಲ್ಲ ಮೆಲ್ಲ ಹೆಜ್ಜೆ ಇಡುತ್ತಾ ಬಂದು ಕಾಡೆಮ್ಮೆಯ ಮೂತಿಗೆ ಬಾಯಿ ಹಾಕಿ ತಿನ್ನೋದಕ್ಕೆ ಶುರು ಮಾಡುತ್ತವೆ. ಕಾಡೆಮ್ಮೆ ಸಣ್ಣದೊಂದು ಚೀತ್ಕಾರ ಮಾಡಲೂ ಆಗದೆ ಸತ್ತುಹೋಗುತ್ತದೆ. ಸಾವು ಕೆಮೆರಾದಲ್ಲಿ ದಾಖಲಾಗುತ್ತದೆ.
***
ಕೆವಿನ್ ಕಾರ್ಟರ್ ಅನ್ನೋ ಒಬ್ಬ ಹೆಸರಾಂತ ಫೋಟೋ ಜರ್ನಲಿಸ್ಟ್ ಇದ್ದ. ಜೊಹಾನಸ್ ಬರ್ಗ್ ಅವನ ಊರು. ಕೆವಿನ್ ಹೆಸರು ನೀವೂ ಕೇಳಿರಬಹುದು. ಯಾಕೆಂದ್ರೆ ಅವನ ಬದುಕು ಬಲಿಯಾಗಿದ್ದು ಕೇವಲ ಒಂದು ಫೋಟೋಗಾಗಿ. 1994 ರಲ್ಲಿ ಸೂಡಾನಿಗೆ ಹೋದ ಕೆವಿನ್ ಅಲ್ಲಿನ ಬಡತನದ ಬೇಗೆಯನ್ನ ಸೆರೆಹಿಡಿಯುತ್ತಲೇ ಅದ್ಭುತ(?)ವಾದ್ದೊಂದು ಫೋಟೋ ತೆಗೆದುಬಿಡುತ್ತಾನೆ. ಆ ಫೋಟೋ ಅವನಿಗೆ ಪುಲಿಟ್ಜರ್ ಬಹುಮಾನವನ್ನೂ ತಂದುಕೊಡುತ್ತದೆ. ದುರಂತ ಅಂದ್ರೆ ಅದೇ ಫೋಟೊ ಅವನ ಸಾವಿಗೂ ಕಾರಣವಾಗಿಹೋಗುತ್ತದೆ.
ಹಸಿವಿನಿಂದ ಬಳಲಿದ ಮಗುವೊಂದು ಸಾಯುವ ಸ್ಥಿತಿಯಲ್ಲಿ ಕುಳಿತಿರುತ್ತದೆ. ಅದರ ಹಿಂದೇನೆ ಆ ಮಗುವಿನ ಸಾವಿಗಾಗಿ ರಣ ಹದ್ದೊಂದು ಕಾಯುತ್ತಾ ಕುಳಿತಿರುತ್ತದೆ. ಈ ಫೋಟೋ ತೆಗೆದ ಕೆವಿನ್ ಆ ಕ್ಷಣಕ್ಕೆ ಥ್ರಿಲ್ ಆಗಿ ಹೋಗಿದ್ದ. ಯಾಕೆಂದ್ರೆ ಅಂಥ ಕರುಣಾಜನಕವಾದ ಫೋಟೋವನ್ನ ಅದುವರೆಗೂ ಯಾರೂ ತೆಗೆದಿರಲಿಲ್ಲ. ತೆಗೆಯೋದಕ್ಕೂ ಅಂಥ ಸಂದರ್ಭ ಸಿಗಬೇಕಲ್ಲ. ಹಾಗಾಗಿ ಗ್ರೇಟ್ ಫೋಟೋ ಅಂತ ಪರಿಗಣಿಸಿ ಕೆವಿನ್ ಗೆ ಪುಲಿಟ್ಜರ್ ಪ್ರಶಸ್ತಿಯೂ ಬಂತು.
ಪ್ರಶಸ್ತಿ ಪಡೆದ ಕೆವಿನ್ನನ ಖುಷಿ ಅವನ ಕಾಲ ಬುಡದಲ್ಲೆ ಸತ್ತುಬಿದ್ದಿತ್ತು. ಕೆವಿನ್ನನನ್ನ ನಿಲ್ಲಿಸಿ, ಅಲ್ಲಯ್ಯ ನೀನು 20 ನಿಮಿಷ ಕೂತು ಅಡ್ಜೆಸ್ಟ್ ಮಾಡಿ ನಿನಗೆ ಬೇಕಾದ ಥರ ಆ ಫೋಟೋ ತೆಗೆದೆಯಲ್ಲ. ಅಷ್ಟು ನಿಮಿಷದಲ್ಲಿ ಆ ಮಗುವಿಗೊಂದು ಬ್ರೆಡ್ ಪೀಸ್ ಕೊಡೋದಕ್ಕೆ ಆಗಲಿಲ್ಲವಾ... ಕೈ ಹಿಡಿದು ಎತ್ತಿ ಸಾಂತ್ವನ ಮಾಡೋದಕ್ಕೆ ಆಗಲಿಲ್ಲವಾ... ಹಚಾ ಹಚಾ ಅಂತ ರಣಹದ್ದನ್ನು ಓಡಿಸಿ ಮಗುವನ್ನ ಬದುಕಿಸೋದಕ್ಕೆ ಆಗಲಿಲ್ಲವಾ? ದೊಡ್ಡ ಈಡಿಯಟ್ ನೀನು. ನಿನಗೆ ಬೇಕಾದ ಫೋಟೋ ಆ ಮಗುವಿನ ಪ್ರಾಣಕ್ಕಿಂತ ದೊಡ್ಡದಾಗಿಹೋಯ್ತಾ ಅಂತ ಯಾರು ಕೇಳಿದರೋ ಗೊತ್ತಿಲ್ಲ. ಪ್ರಶ್ನೆ ಕೇಳಿ ಕೆವಿನ್ ವಿಲವಿಲನೆ ಒದ್ದಾಡಿಹೋಗಿದ್ದ. ಮನಸ್ಸು ಹೌದಲ್ಲವಾ ಅಂತ ಪರಿತಪಿಸಿಬಿಟ್ಟಿತ್ತು. ತಪ್ಪು ಮಾಡಿಬಿಟ್ಟೆ ಅಂತೆನಿಸಿ ಒಳಗೊಳಗೆ ಕೊರಗಿದ್ದ ಕೆವಿನ್. ಮಾಡಿದ ತಪ್ಪು ಮನಸ್ಸನ್ನು ಕ್ಷಣಕ್ಷಣವೂ ಕಿತ್ತು ತಿನ್ನುತ್ತಿತ್ತು. ಆ ಶಾಕ್ನಿಂದ ಹೊರಬರಲಾರದೆ ಕೆವಿನ್ ಮೂರು ತಿಂಗಳಲ್ಲಿ ಮಾನಸಿಕವಾಗಿ ಬಳಲಿ ಬಳಲಿ ಸತ್ತು ಹೋದ.
ಯಾರೂ ಕೊಡದಿದ್ದನ್ನ ನಾನು ಜಗತ್ತಿಗೆ ಮೊದಲು ಕೊಡಬೇಕು....ಮೊದಲು ತೋರಿಸಬೇಕು...ನನ್ನ ಹೆಸರು ರಾರಾಜಿಸಬೇಕು ಅನ್ನೋ ಪತ್ರಕರ್ತರ ಹಪಾಹಪಿಗೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಎಲ್ಲಿ ತಪ್ಪು ಮಾಡುತ್ತಿದ್ದೇನೆ ಅನ್ನೋದ್ರ ಅರಿವೂ ಇಲ್ಲದಂತೆ ಕೆಲವೊಮ್ಮೆ ಪತ್ರಕರ್ತ ಬ್ಲೈಂಡ್ ಆಗಿ ಕೆಲಸ ಮಾಡಿಬಿಟ್ಟಿರುತ್ತಾನೆ. ಹೆಸರು ಮಾಡಬೇಕೆನ್ನುವ ಪತ್ರಕರ್ತನ ಹಪಾಹಪಿ ಒಂದು ಜೀವದ ಬೆಲೆಯನ್ನ ಒಂದು ಪೋಟೋದ ಬೆಲೆಗೆ ತಂದು ನಿಲ್ಲಿಸಿಬಿಡುತ್ತದೆ? ಕೆವಿನ್ ಫೋಟೋ ತೆಗೆದುಕೊಂಡು ಬಂದ... ಅಲ್ಲಿ ಮಗು ಬದುಕ್ತಾ... ರಣ ಹದ್ದಿಗೆ ಆಹಾರವಾಗಿಹೋಯ್ತಾ? ಅವನಿಗೇನಾಗಬೇಕಿದೆ. ಇಲ್ಲಿ ಅದೇ ಮಗುವಿನ ಹಸಿವಿನ ನರಳಿಕೆಯ ಮೇಲೆ ಹೊಗಳಿಕೆಯ ಸೌಧ ಕಟ್ಟುತ್ತಿರುತ್ತಾರಲ್ಲ. ಸಾಕವನಿಗೆ.
***
ಕಲಹರಿ ಮರುಭೂಮಿಯಲ್ಲಿ ಮೀರ್ ಕ್ಯಾಟ್ ಅನ್ನೋ ಚುರುಕಾದ ಅಪರೂಪದ ಪುಟ್ಟ ಪ್ರಾಣಿಗಳಿವೆ.ಅವು ರಸ್ತೆ ದಾಟಬೇಕಾದರೆ ಕ್ಷಣ ನಿಂತು ಅತ್ತ ಇತ್ತ ನೋಡಿ ಯಾವುದೇ ವೆಹಿಕಲ್ ಬರ್ತಾ ಇಲ್ಲ ಅಂದಾಗ ಮಾತ್ರ ರಸ್ತೆ ದಾಟುವುದಕ್ಕೆ ಮುಂದಾಗುತ್ತವೆ. ಅದು ಅವುಗಳ ಬುದ್ಧಿವಂತಿಕೆಗೆ ಹಿಡಿದ ಕನ್ನಡಿ. ಆದ್ರೆ ಎಲ್ಲಾ ಸಲ ಅವುಗಳ ಲೆಕ್ಕಾಚಾರ ಸರಿ ಇರುವುದಿಲ್ಲ. ಮನುಷ್ಯರಾದ ನಮ್ಮದೇ ಗೆಸ್ ಎಷ್ಟೋ ಸಲ ಹಳ್ಳ ಹಿಡಿದಿರುತ್ತೆ ಅಂದ ಮೇಲೆ ಪಾಪ ಪ್ರಾಣಿಗಳ ಲೆಕ್ಕಾಚಾರ ಹೇಗೆ ಸರಿ ಇರಲು ಸಾಧ್ಯ. ಮೀರ್ ಕ್ಯಾಟ್ ಒಂದು ರಸ್ತೆ ಮಧ್ಯದಲ್ಲಿ ಹಾಗೆ ಲೆಕ್ಕಾಚಾರದಲ್ಲಿ ನಿಂತಿದ್ದಾಗಲೇ ಟ್ರಕ್ ಒಂದು ಹೊಡೆದು ದಾರುಣವಾಗಿ ಸತ್ತುಹೋಗುವುದನ್ನ ತೋರಿಸಿ ನೋಡಿ ಅವುಗಳ ಲೆಕ್ಕಾ ಚಾರ ಹೇಗೆ ತಪ್ಪಾಗಿ ಹೋಯ್ತು ಅನ್ನುತ್ತಾನೆ ಡಾಕ್ಯುಮೆಂಟರಿ ಮಾಡಿದಾತ. ಟ್ರಕ್ ಕೆಳಗಿನಿಂದ ಕೆಮೆರಾ ಇಟ್ಟು ಅದು ಸಾಯುವುದನ್ನ ಚಿತ್ರೀಕರಿಸಿದವನಿಗೆ ಪುಟ್ಟ ಮೀರ್ ಕ್ಯಾಟ್ ನ್ನ ಬಚಾವ್ ಮಾಡಲು ಆಗಲಿಲ್ಲವೇ? ಜಸ್ಟ್ ಥಿಂಕ್.
***
ಪ್ರಪಂಚದ ಇನ್ನೊಂದು ಮುಖ ಹೇಗೆಲ್ಲ ಇದೆ ಅನ್ನೋದನ್ನ ಒಂದೊಂದು ಮೂಲೆಯಿಂದಲೂ ಹೆಕ್ಕಿ ತಂದು ಇನ್ನೊಂದು ಮೂಲೆಗೆ ತಿಳಿಯಪಡಿಸುವ ಜವಾಬ್ದಾರಿ ಖಂಡಿತಾ ಪತ್ರಕರ್ತರ ಮೇಲಿದೆ. ಆದ್ರೆ ಆ ತರಾತುರಿಯಲ್ಲಿ ಮಾನವೀಯತೆಯನ್ನ ಕಳೆದುಕೊಳ್ಳಬಾರದು. ಸತ್ತುಹೋದ ಮಗುವಿನ ದಃಖದಲ್ಲಿರುವ ತಾಯಿಯನ್ನ ನಿಮ್ಮ ಮಗ ಸತ್ತುಹೋದ ಹೇಗನಿಸ್ತಾ ಇದೆ ಅಂತ ಕೇಳಿದ್ರೆ ಅದಕ್ಕಿಂತ ಅಮಾನವೀಯವಾದ್ದು ಇನ್ನೊಂದಿದೆಯಾ? ಐ ಡೋಂಟ್ ನೋ.
ಒಂದು ಜೀವವನ್ನ ಬದುಕಿಸುವ ಸಾಧ್ಯತೆಯಿದ್ದಾಗ ಯಾರೇ ಆಗಲಿ ಮೊದಲು ಅದಕ್ಕೆ ಪ್ರಾಧಾನ್ಯತೆ ಕೊಡಬೇಕು. ಉಳಿದಿದ್ದು ನೆಕ್ಸ್ಟ್.
ಏನಂತೀರಿ?