Thursday, November 13, 2008

ಕೆಪ್ಪ ಅನ್ನೋ ಮೇಸ್ಟ್ರು ಮತ್ತು ಸೀನಿಯರ್ಸ್- ಸ್ಕೂಲ್ ಪುರಾಣ 2

ನಮಗೊಬ್ಬ ಮೇಸ್ಟ್ರು ಇದ್ದರು. ದಪ್ಪಕ್ಕೆ, ಕುಳ್ಳಕ್ಕೆ. ಥೇಟ್ ಗುಜ್ಜಾರ್ ಕಾಟರ್ೂನ್ ಥರ ಅಂತಿಟ್ಟುಕೊಳ್ಳಿ. ಜೀವಶಾಸ್ತ್ರ ತಗೋಳೋರು. ನಾವೆಲ್ಲ ಒಂದಿಷ್ಟು ಜನ ಜೀವಶಾಸ್ತ್ರವನ್ನ ಜೀವ ಹಿಂಡೋಶಾಸ್ತ್ರ ಅಂತಲೇ ಭಾವಿಸಿದ್ದ ಕಾಲ ಅದು. ಗಣಿತ, ವಿಜ್ಞಾನ ಅಂದ್ರೆ ಅದೆಂಥದೋ ಭಯ ನಮಗೆ.
ಈ ಮೇಸ್ಟ್ರನ್ನ ನಮ್ಮ ಸೀನಿಯರ್ಸ್ ಕೆಪ್ಪ ಅಂತ ಕರೀತಿದ್ರು. ಕೆಪ್ಪ ಅಂದ್ರೆ ಒಂದರ್ಥದಲ್ಲಿ ಕಿವುಡ ಅಂತಲೂ ಆಗುತ್ತೆ. ಆದ್ರೆ ಆ ಮಾಸ್ತರಿಗೆ ಕಿವಿ ಚೆನ್ನಾಗೆ ಕೇಳಿಸ್ತಿತ್ತು. ಕೆಪ್ಪ ಅಂತ ಕರೆದು ಕರೆದು ಅವರ ಒರಿಜಿನಲ್ ಹೆಸರೇ ನಮಗೆ ಮರೆತುಹೋಗಿತ್ತು. ನಡೆದು ಹೋಗುತ್ತಿದ್ದವರ ಎದುರಾಎದುರಿಗೆ ನಿಂತು ಏನೋ ಕೆಪ್ಪ ಅಂತ ಕರೆದುಬಿಡೋದಕ್ಕೂ ಧಮ್ಮು ಬೇಕು ಬಿಡಿ. ಆಗತಾನೆ ಹಳ್ಳಿಯಿಂದ ಗುಳೇ ಎದ್ದುಬಂದಿದ್ದ ನಮಗೆ ಇದೆಲ್ಲ ಆಶ್ಚರ್ಯ, ದಿಗ್ಭ್ರಮೆ ಹುಟ್ಟಿಸುತ್ತಿತ್ತು. ಮೇಸ್ಟ್ರು ಅಂದ್ರೆ ದೇವರ ಸಮಾನ ಅನ್ನೋ ನಮ್ಮ ನಂಬಿಕೆಗೆ ಕ್ಷಣ ಮಾತ್ರದಲ್ಲಿ ಎಳ್ಳುನೀರು ಬಿಟ್ಟವರು ನಮ್ಮ ಸೀನಿಯರ್ಗಳು. ಅವರಿಗೆ ಮಾಸ್ತರು ಅಂದ್ರೆ ಏನೇನೇನೂ ಅಲ್ಲ. ಮೊದಲೇ ಹೇಳಿದಂಗೆ ಹೊಡೆಯೋದಕ್ಕೆ ಬಂದ್ರೆ ಕೋಲು ಕಿತ್ತಿಕೊಳ್ಳೋದು, ಕ್ಲಾಸಿನಲ್ಲೇ ಪಟಾಕಿ ಹೊಡೆಯೋದು, ಬುಧವಾರ ಶನಿವಾರ ಆದ್ರೆ ವೈಟ್ ಅಂಡ್ ವೈಟ್ ಹಾಕ್ಕೋಬೇಕಲ್ಲ ಅವತ್ತು ಬಿಳಿ ಪಂಚೆ ಬಿಳಿ ಶಟರ್್ ಹಾಕ್ಕೊಂಡು ಬರೋದು, ಪ್ರೇಯರ್ ಮಾಡಬೇಕಾದ್ರೆ ಎಲ್ಲರೂ ಮುಗಿಸಿದ್ರೆ ಒಬ್ಬ ಮಾತ್ರ ಹಾಡುತ್ತಲೇ ಇರೋದು... ಒಂದಾ ಎರಡಾ ಕಿತಾಪತಿ. ನನಗಂತೂ ನೋಡಿ ನೋಡಿ ಗಾಬರಿಯಾಗುತಿತ್ತು. ಹಳ್ಳಿಯಿಂದ ಬಂದವನು ನೋಡಿ. ಅಲ್ಲಿ ಸೀನಿಯರ್ಗಳಂತೂ ಕಡಿದರೆ ನಾಲ್ಕು ಊರಿಗೆ ಊಟಹಾಕಬಹುದು ಹಂಗಿದ್ರು. ಜೊತೆಗೆ ಒಬ್ಬೊಬ್ಬರದೂ ಒಂದೊಂದು ಗ್ಯಾಂಗ್. ನೋಡಿದ್ರೆ ಸಾಕು ಯಾಕೋ ಗುರಾಯಿಸ್ತೀಯ ಅಂತ ಒದೆ ಬೀಳುತ್ತಿತ್ತು. ಅಂಥದರಲ್ಲಿ ನಾನೋ ನರಪೇತಲ ನಾರಾಯಣನಂತಿದ್ದವ. ಮೈಯಲ್ಲಿ ಮಾಂಸವೇ ಇರಲಿಲ್ಲ. ಇನ್ನು ಧೈರ್ಯ ಎಲ್ಲಿಂದ ಬರಬೇಕು.
ಇಂತಿಪ್ಪ ಕೆಪ್ಪನ ಮೇಲೆ ನಡೆಯುತ್ತಿದ್ದ ಆಕ್ರಮಣಗಳು ಒಂದೆರಡಲ್ಲ. ಅವರು ಬರಲಿ ಹೋಗಲಿ ಕೂರಲಿ ಸದಾ ಏನಾದರೊಂದು ಕಿತಾಪತಿ ಮಾಡೋದಕ್ಕೆ ಅಂತಾನೆ ಕಾಯ್ದುಕೊಂಡು ಒಂದು ಪಡೆ ನಿಂತಿರುತ್ತಿತ್ತು.
ಬೆಳಿಗ್ಗೆ ಸ್ಕೂಲ್ ಶುರುವಾಗುವ ವೇಳೆಗೆ ಅವರು ತಮ್ಮ ಪುಟ್ಟ ಬೈಕ್ನಲ್ಲಿ ಬಂದಿಳಿಯೋರು. ಅದೆಂಥದೋ ಮಾಡೆಲ್ ಬೈಕ್ ಅದು. ಎತ್ತರವೂ ಇಲ್ಲ, ಉದ್ದಾನೂ ಇಲ್ಲ. ನೋಡೋದಕ್ಕೆ ಚೆನ್ನಾಗೂ ಇರಲಿಲ್ಲ. ಆ ಥರದ ಬೈಕ್ ಅದೊಂದೇ ನಾನು ನೋಡಿದ್ದು. ಅದರ ಸ್ಪೀಡ್ ಹೇಗೆಂದ್ರೆ ನಾವೆಲ್ಲ ಚೂರು ಚೂರೇ ಜೋರಾಗಿ ನಡೆಕೊಂಡು ಹೋದ್ರೆ ಹೆಂಗಿರುತ್ತೋ ಹಂಗೆ.
ಅಂತ ಬೈಕಲ್ಲಿ ಅವರು ಬುಡುಬುಡು ಅಂತ ಬಂದು ಇನ್ನೇನು ಗೇಟ್ ಒಳಗೆ ನುಗ್ಗಬೇಕು ಆಗಲೇ ಅವಿತುಕೊಂಡು ನಿಂತಿದ್ದ ಪುಂಡರು ಕೆಪ್ಪ ಅವರ ತಲೆಮೇಲೆ ಫಟ್ ಅಂತ ಹೊಡೆದುಬಿಡೋರು. ಹಿಂದಿನಿಂದಲೆ ಕೆಪ್ಪ ಅನ್ನೋ ಒಕ್ಕೊರಲ ಕೂಗು. ಅವರು ಯಾವೊನೋ ಅವನು ಅಂತ ಇಳಿದು ನಿಂತರೆ ಎಲ್ಲಾ ಪರಾರಿ.
ಎಷ್ಟೋ ಸಲ ಕ್ರಿಕೆಟ್ ಆಡುತ್ತಿದ್ದಾಗ ಅವರು ಬರ್ತಾರೆ ಅಂದ್ರೆ ಅವರು ಬರುವ ಕಡೆಗೆ ಬ್ಯಾಟ್ ಬೀಸೋರು. ಬಾಲ್ ಎಸೆಯೋ ನೆಪದಲ್ಲಿ ಅವರ ಬೆನ್ನಿಗೆ ಹೊಡೆಯೋದು ನಡೀತಾ ಇತ್ತು. ಅವರು ಸ್ಟಾಫ್ ರೂಮಿನಲ್ಲಿ ಕೂತಿದ್ರೆ ಕಿಟಕಿಯಲ್ಲಿ ಹೋಗಿ ಕೆಪ್ಪ ಅಂತ ಕಿರುಚಿಬಿಡೋರು. ಪಾಪ ಅವರಿಗೆ ಎಂಥ ಮುಜುಗರ ಆಗುತ್ತಿತ್ತೋ ಏನೋ! ಕ್ಲಾಸಿಗೆ ಬಂದಾಗಲೆಲ್ಲ ಗರಮ್ ಆಗೇ ಇರುತ್ತಿದ್ದರು.
ಒಂದ್ಸಲ ಅವರಿಗೆ ರೋಸಿಹೋಗಿತ್ತು ಅನಿಸುತ್ತೆ. ಯಾರ್ಯಾರು ತಲೆ ಮೇಲೆ ಹೊಡೀತಾರೆ, ಕೆಪ್ಪ ಅಂತ ಕೂಗ್ತಾರೆ ಅವರ ಹೆಸರನ್ನೆಲ್ಲ ಪಟ್ಟಿ ಮಾಡಿ ಹೆಡ್ ಮೇಡಮ್ಗೆ ಕೊಟ್ಟುಬಿಟ್ಟರು. ನಿಮ್ಮ ಅಪ್ಪ-ಅಮ್ಮನ್ನ ಕರ್ಕೊಂಡು ಬನ್ನಿ ಇಲ್ಲ ಅಂದ್ರೆ ಎಕ್ಸಾಮ್ಗೆ ಕೂರ್ಸೊಲ್ಲ ಅಂತ ಅವರು ರೋಫ್ ಹಾಕಿ ಕಳಿಸಿಬಿಟ್ಟರು.
ಈ ಸೀನಿಯರ್ರುಗಳೆಲ್ಲ ಸೇರಿ ತಪ್ಪಾಯ್ತು. ಇನ್ನುಮೇಲೆ ಹಿಂಗಿಂಗೆಲ್ಲ ಮಾಡೋಲ್ಲ ಅಂತ ಬರೆದುಕೊಟ್ರು. ಹೆಡ್ ಮೇಡಮ್ಗೆ ಸಿಟ್ಟು ಬಂತು. ಹಿಂಗ್ ಮಾಡೊಲ್ಲ ಅಂದ್ರೆ ಬೇರೆ ಥರ ಮಾಡ್ತೀರ ಈಡಿಯಟ್ಸ್. ಒದ್ದು ಪೊಲೀಸ್ ಸ್ಟೇಷನ್ಗೆ ಹಾಕಿಸ್ ಬಿಡ್ತೀನಿ. ಮೇಸ್ಟ್ರು ಅಂದ್ರೆ ಏನಂದುಕೊಂಡಿದೀರೋ ಮುಠ್ಠಾಳರಾ! ಅಂತೆಲ್ಲ ಕೂಗಾಡಿದ್ರು.
ಇವರು ಅಪ್ಪ ಅಮ್ಮನ್ನ ಕರೆಸಿ ಅವರೂ ಇನ್ನು ಮೇಲೆ ನಮ್ಮ ಮಕ್ಕಳು ಹೀಗೆಲ್ಲ ಮಾಡೋಲ್ಲ ಅಂತ ಬರೆದುಕೊಟ್ಟ ಮೇಲೆ ಕ್ಲಾಸಿಗೆ ಸೇರಿಸಿಕೊಂಡಿದ್ದರು.
ಅದಾಗಿ ಒಂದು ವಾರವಾಗಿತ್ತು ಅನಿಸುತ್ತೆ. ಯಥಾಪ್ರಕಾರ ಆ ಮೇಸ್ಟ್ರು ಸ್ಕೂಲಿನ ಗೇಟ್ ಬಳಿ ಬಂದು ಬೈಕ್ ತಿರುಗಿಸಿದ್ದಾರೆ. ಅದೇ ಕೆಪ್ಪ ಅನ್ನೋ ಒಕ್ಕೊರಲ ದನಿ.
ಯಾರೋ ಅವನು ಈಡಿಯಟ್ ಅಂತ ತಿರುಗಿನೋಡಿದ್ರೆ ಹೊಚ್ಚ ಹೊಸ ಗುಂಪು.
ಜೂನಿಯರ್ಸ್ದು.