Wednesday, February 13, 2008

ಗೊತ್ತಿರಲಿ, ಪ್ರೀತಿ ಯಾವತ್ತೂ ಚಟವಾಗಬಾರದು..

"Tell me whom you love and I will tell you who you are." - Houssaye
ಯಾರನ್ನು ಪ್ರೀತಿಸುತ್ತೀಯ ಅಂತ ಹೇಳು ನೀನು ಎಂಥವನು ಅಂತ ಹೇಳುತ್ತೇನೆ ಅನ್ನೋ ಅರ್ಥ ಬರುವಂಥ ಈ ಮಾತುಗಳನ್ನು ಹೇಳಿದವನು ಫ್ರೆಂಚ್ ಕಾದಂಬರಿಕಾರ, ಕವಿ ಆಸರ್ೆನ್ ಹುಸ್ಸೇ. ಎಷ್ಟು ನಿಜ್ಜ ಅನ್ನಿಸಿಬಿಡ್ತು ಗೊತ್ತಾ?
ಯಾಕೇಂದ್ರೆ, ಕೆಲವೊಮ್ಮೆ ಪ್ರೀತಿಯ ಹೆಸರಿನಲ್ಲಿ ಅಪಾತ್ರರನ್ನೆಲ್ಲ ಎಳೆದುತಂದು ಎದೆಯ ಅಂಗಳದಲ್ಲಿ ಕುಳ್ಳಿರಿಸಿಕೊಂಡು ಬಿಡುತ್ತೇವೆ. ಅವರು ನಮಗೆ ಯೋಗ್ಯರಾ, ತಕ್ಕುದಾದವರಾ ಅಂತ ಒಮ್ಮೆ ಕೂಡ ಯೋಚಿಸುವುದಿಲ್ಲ. ಅಂತ ಅಪಾತ್ರರನ್ನೇ ಬಗಲಲ್ಲಿಟ್ಟುಕೊಂಡು ತಿರುಗುತ್ತೇವೆ, ಗಂಟೆ ಗಟ್ಟಲೆ ಮಾತಾಡುತ್ತೇವೆ, ಹರಟುತ್ತೇವೆ, ತೋಳ ತೆಕ್ಕೆಯಲ್ಲಿ ವಿಹರಿಸುತ್ತೇವೆ. ನನಗೆ ಈ ಪ್ರೀತಿ ಒಗ್ಗೊಲ್ಲ ಅಂತ ಗೊತ್ತಾಗುವ ತನಕ ಈ ಪಯಣ ಹಾಗೇ ಮುಂದುವರೆಯುತ್ತದೆ.ಒಮ್ಮೆ ಗೊತ್ತಾಯಿತು ಅಂತಿಟ್ಟುಕೊಳ್ಳಿ, ಅಲ್ಲಿಗೆ ಪ್ರೀತಿ ಮಕ್ಕಾಡೆ ಮಲಗಿತು ಅಂತಲೇ ಅರ್ಥ. ಆದರೆ ಹಾಗೆ ಮಲಗಿದ ಪ್ರೀತಿಯನ್ನೂ ಎಬ್ಬಿಸಿ ಕೈ ಹಿಡಿದು ಕರೆದುಕೊಂಡು ಹೋಗುವವರೂ ಇದ್ದಾರೆ. ಅಂಥ ಪ್ರೀತಿ ಎಲ್ಲಿತನಕ ಹೋಗಿ ನಿಲ್ಲುತ್ತದೋ ಹೇಳಬರುವುದಿಲ್ಲ.
ನನ್ನ ಗೆಳೆಯ ಒಬ್ಬನಿದ್ದ ಮೈಸೂರಿನಲ್ಲಿ ; ಹರೀಶ ಅಂತ. ಅವನಿಗೆ ಊರ ತುಂಬಾ ಸಖಿಯರು. ಹೋದಲ್ಲಿ ಬಂದಲ್ಲಿ ಅವನಿಗೆ ಒಬ್ಬೊಬ್ಬಳು ಸಿಕ್ಕಿ ಬೀಳುತ್ತಿದ್ದರು. ಹಾಗೆ ಹುಡುಗಿಯರು ಸಿಕ್ಕಿ ಹಾಕಿಕೊಳ್ಳುತ್ತಿದ್ದುದಕ್ಕೆ ಅವನ ಗಿಲೀಟಿನ ಮಾತೂ ಹುಡುಗಿಯರ ದಡ್ಡತನವೂ ಕಾರಣವಾಗಿತ್ತು ಅನ್ನೋದು ನನ್ನ ಅನಿಸಿಕೆ. ಹೀಗೆ ಹೇಳಿದಾಗೆಲ್ಲ, ನೀನು ವಿನಾಕಾರಣ ನನ್ನ ಪ್ರೇಮ ಸಂಗತಿಗಳಿಗೆ ತಲೆ ಹಾಕಬೇಡ ಅಂತ ಆತ ತಾಕೀತು ಮಾಡಿದ್ದ. ನಾನೋ ನನ್ನ ಕಣ್ಣಿಗೆ ಬಿದ್ದ ಅವನ ಹುಡುಗಿಯರಿಗೆಲ್ಲ ಅವನು ಇಂತಿಂಥವನು ಕಣ್ರೆ ಅಂತ ಹೇಳಿದ್ರೆ ಅವರು ನನ್ನನ್ನೇ ಅನುಮಾನದಿಂದ ನೋಡುತ್ತಿದ್ದರು. ಆದರೆ ಕಾಲ ಎಲ್ಲದಕ್ಕೂ ಒಂದು ಫುಲ್ಸ್ಟಾಪ್ ಇಡದೇ ಬಿಡುವುದಿಲ್ಲವಂತೆ. ಸತ್ಯ ಎಂದಾದರೂ ಒಮ್ಮೆ ಜಗತ್ತಿಗೆ ತೀಳಿಯಲೇ ಬೇಕು. ಹಾಗೆಯೇ ಹರೀಶನ ಪ್ರೀತಿಯ ಸತ್ಯ ಒಂದಿನ ಹುಡುಗಿಯರಿಗೆ ಗೊತ್ತಾಗಿಹೋಯಿತು.
ಆದ್ರೆ ಅಷ್ಟು ಹೊತ್ತಿಗೆ ಹರೀಶ ಆ ಹುಡುಗಿಯರ ಒಟ್ಟಿಗೆ ಬಹು ದೂರ ಸಾಗಿಬಿಟ್ಟಿದ್ದ. ಯಾಕೆ ಹೇಳಿದೆನೆಂದ್ರೆ, ಇಲ್ಲಿ ಹರೀಶ ಒಬ್ಬ ಟೈಲರ್ ಆಗಿದ್ದ. ಅವನಿಗೆ ಹಲವು ಹುಡುಗಿಯರನ್ನು ಪ್ರೀತಿಸುವುದೊಂದು ಚಟವಾಗಿತ್ತು. ಗೊತ್ತಿರಲಿ, ಪ್ರೀತಿ ಯಾವತ್ತೂ ಚಟವಾಗಬಾರದು ; ಡ್ರಗ್ಸ್ನಂತೆ, ಹೆಂಡದಂತೆ, ಸೆಕ್ಸ್ನಂತೆ. ಕೊನೆಗೆ ದರಿದ್ರ ಕೆರೆತದಂತೆಯೂ. ಆ ಕ್ಷಣಕ್ಕೆ ಕೆರೆತ ಖುಷಿ ಕೊಟ್ಟರೂ ಅದರಿಂದ ಉಂಟಾಗುವ ಗಾಯ ಮಾತ್ರ ಅಳಿಸಿಹೋಗಲಾರದೇನೋ!
ಇಂತಹ ಚಟಾಗ್ರೇಸರನ ಪ್ರೀತಿಗೆ ಮರುಳಾಗುವ ಮೊದಲು ಈ ಹುಡುಗಿಯರು ಒಮ್ಮೆ ಅವನ ಬ್ಯಾಕ್ಗ್ರೌಂಡ್ ನೋಡಬಹುದಿತ್ತಲ್ಲ? ಕೇವಲ ಒಂದು ಕಣ್ಣೋಟಕ್ಕೆ, ನಗುವಿಗೆ, ಚಂದಕ್ಕೆ ಮತ್ತು ಇನ್ಯಾತಕ್ಕೋ ಪ್ರೀತಿಗೆ ಬಿದ್ದು ಬಿಡುವ ಕಾತರದಲ್ಲಿ ಇಡೀ ಬದುಕನ್ನ ಅವನ/ಅವಳ ಕೈ ಗೆ ಕೊಡುವುದು ಎಷ್ಟು ಸರಿ?ಎಷ್ಟೋ ಜನ ಪ್ರೀತಿಯನ್ನ ಕೇವಲ ಕಾಮದ ಕಾಲುದಾರಿ ಅಂತಂದುಕೊಂಡಿದ್ದಾರೆ. ಅಂತವರಿಗೆ ಪ್ಲಟೋನಿಕ್ ಪ್ರೀತಿಯ ಅರ್ಥ ಗೊತ್ತಾಗುವುದಾದರೂ ಹೇಗೆ?
ಬಹುಶಃ ಹುಸ್ಸೇ ಪ್ರೀತಿಯ ಹುನ್ನಾರಗಳನ್ನೆಲ್ಲ ಹಿನ್ನೆಲೆಯಲ್ಲಿಟ್ಟುಕೊಂಡೇ ಮೇಲಿನ ಮಾತು ಹೇಳಿರಬೇಕು. ...................................ಯಾಕೋ ಇದನ್ನೆಲ್ಲ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.
ಒಪ್ಪಿಸಿಕೊಳ್ಳಿ.

Monday, February 11, 2008

ಹೀಗೊಂದು ಕಥೆ : ಇಬ್ಬನಿ

ಅದು ಹೊಳೆ ದಂಡೆ.
ಕಾಲು ಇಳಿ ಬಿಟ್ಟುಕೊಂಡು ಕುಳಿತ ಇಬ್ಬನಿಯ ಕಣ್ಣಲ್ಲಿ ಕೇವಲ ಆಕಾಶ್.ನಿನ್ನೆಯಷ್ಟೇ ಕೆನೆ ಹಳದಿ ಬಣ್ಣದ ಚೂಡಿ ಕೊಡಿಸಿ... ಅದರ ಮೇಲಿನ ಬಿಳಿ ಹೂಗಳನ್ನ ಎಣಿಸುತ್ತಾ ಕುಳಿತಿದ್ದ."ಯಾಕೋ ಹೂ ಎಣಿಸ್ತಿದೀಯಾ?" ಅಂದಿದ್ದಕ್ಕೆ... "ಅವನ್ನೆಲ್ಲ ಎಣಿಸಿ, ಅಷ್ಟೇ ಹೂ ತಂದು ನಿನ್ನ ಮುಡಿಗೇರಿಸಬೇಕು ಅನ್ನೋ ಆಸೆ" ಅಂತ ನಗಾಡಿದ್ದ."ಲೂಸ್" ಅಂತ ಬೈದು ಸಣ್ಣಗೆ ಅವನ ಕೆನ್ನೆ ಗಿಂಡಿದ್ದಳು.ಇವನು ಹಾಗೆ ಗಿಂಡಿಸಿಕೊಳ್ಳುವುದಕ್ಕೇ ಹಾಗೆ ಎಣಿಸಿದ್ದು ಅಂತ ಅವಳಿಗೂ ಗೊತ್ತಿತ್ತು.
ಗಿಂಡುವ ಮತ್ತು ಗಿಂಡಿಸಿಕೊಳ್ಳುವ ಆಸೆ...ಇಬ್ಬರಿಗೂ ಇದ್ದದ್ದರಿಂದ ತರ್ಲೆ ಮಾಡಿದಾಗಲೆಲ್ಲ ಯಾಕೆ ಅಂತ ಮಾತ್ರ ಇಬ್ಬರೂ ಕೇಳುತ್ತಿರಲಿಲ್ಲ. ಸಿಟ್ಟಾಗುತ್ತಿರಲಿಲ್ಲ.
ಇವತ್ತೂ ಅವನು ಏನಾದ್ರು ತರ್ಲೆ ಮಾಡ್ತಾನೆ ಅಂತಲೇ ಇಬ್ಬನಿಗೆ ಗೊತ್ತಿತ್ತು. ನಾನು ಗಿಂಡ್ತೀನಿ ಅಂತಲೂ ಗೊತ್ತಿದ್ದರಿಂದ ಒಳಗೊಳಗೇ ಖುಷಿ ಅನುಭವಿಸುತ್ತಾ ಹೊಳೆ ದಂಡೆಯ ಅಂಚಿನಲ್ಲಿ ಕುಳಿತು ಜುಳು ಜುಳು ಹರಿವ ನೀರಿನಲ್ಲಿ ಕಾಲು ಬಿಸಾಕಿ ಕುಳಿತಿದ್ದಳು.
ನದಿಗೆ ಯಾರ ಕಾಲಾದರೇನು? ಇವಳ ಹಾಲುಬಿಳುಪಿನ ಕಾಲಿಗೆ ಒತ್ತಿಕೊಂಡು ಹರಿಯತೊಡಗಿತು.
ಹಿಂದಿನಿಂದ ಮೆಲ್ಲಗೆ ಬಂದ ಆಕಾಶ್ ಇಬ್ಬನಿಯ ಕಣ್ಣು ಮುಚ್ಚಿದ.
"ಲೂಸ್ ಗೊತ್ತು ಬಿಡೋ" ಅಂದಳು.
ಅವನು ಬಿಡಲಿಲ್ಲ."ಬಿಡ್ತೀಯೋ ಇಲ್ವೋ.. . . ಲೂಸ್! ಅಂತ ಒಮ್ಮೆ ಕೈ ಜಾಡಿಸಿ ಮಾಡ್ತೀನಿ ಇರು ಎಂದು ತಿರುಗಿದಳು. ಅಷ್ಟೆ!ಆಕಾಶ್ ತಪ್ಪಿಸಿಕೊಳ್ಳುವ ಭರದಲ್ಲಿ ಹಿಂದಕ್ಕೆ ಜಿಗಿದ.
ಆದರೆ ಮುಂದಕ್ಕೆ ಮುಗ್ಗರಿಸಿ ಬಿದ್ದ.
ಬಿದ್ದವನನ್ನು ಹೊಳೆ ಬಗಲಲ್ಲಿ ಹಾಕಿಕೊಂಡು ಗೊತ್ತಿಲ್ಲದಂತೆ ಸುಮ್ಮನೆ ಹರಿಯತೊಡಗಿತು.
ಇಬ್ಬನಿ ನಿಂತಲ್ಲೇ ಕಂಪಿಸಿದಳು. ಮಾತು ಸತ್ತು ಕಣ್ಣ ತುಂಬ ಹುಚ್ಚುಕೋಡಿ ನೀರು.
"ಆಕಾಶ್... ನಾನೂ ಬರ್ತೀದೀನಿ..." ಕಿರುಚಿದಳು.
ಅಷ್ಟರಲ್ಲಿ, ಪಕ್ಕದಲ್ಲೇ ಲವ್ ಅಂಡ್ ಅಫೇರ್ಸ್ ಪುಸ್ತಕ ಓದುತ್ತ ಮಲಗಿದ್ದ ಗಂಡ ಯಾಕೋ ಬ್ಲಡೀ ಬಿಚ್ಚ್ ಅಂತ ಬೈದು ಪುಸ್ತಕ ಒಗೆದ.

ನೀನಿಲ್ಲದೇ ನಾನು ಇನ್ಕಂಪ್ಲೀಟ್ ಕಣೆ

ಹಾಯ್ ಫ್ರೆಂಡ್ಸ್

ಒನ್ಸ್ ಅಗೈನ್ ಬರುತ್ತಿರುವ ಪ್ರೇಮಿಗಳ ದಿನಾಚರಣೆಗೆ ಎಲ್ಲಾ ಪ್ರೇಮಿಗಳೂ ಕಾತರದಿಂದ ಕಾಯುತ್ತಿದ್ದಾರೆ. ಏನು ಕೊಡಬೇಕು? ಹೇಗೆಲ್ಲ ಮಾತಾಡಬೇಕು? ಹೇಗೆ ಅವಳಿಗೆ ಇಷ್ಟ ಆಗುವ ಥರ ನಡೆದುಕೊಳ್ಳಬೇಕು? ಐ ಲವ್ ಯು ಅಂತ ಹೇಳುವುದಾದರೂ ಹೇಗೆ? ಒಪ್ಪಿಕೊಳ್ಳುತ್ತಾಳಾ/ನಾ ಇಲ್ಲವಾ? ದೇವರೇ ನನ್ನ ಪ್ರೀತಿ ಅಂಕುರಿಸಲಿ ಅನ್ನುವ ರಿಹರ್ಸಲ್ಲೇ ಮನದ ತುಂಬಾ! ಅಲ್ಲಿ ತವಕವಿದೆ, ಪುಳಕವಿದೆ, ಮನದ ತುಂಬಾ ಚೆಲ್ಲಿಕೊಂಡ ಅವಳ/ಅವನ ಗುಂಗೇ ಇದೆ.
ಅಂತಹ ಒಂದು ಗುಂಗಿನ ಸಹಜ ಪ್ರೀತಿಗೆ ನನ್ನ ಸಲಾಮ್.
ಪ್ರೀತಿ ಮಟ್ಟಿಗೆ ಎಷ್ಟು ಬರೆದರೂ ಮುಗಿಯೊಲ್ಲ ಅನ್ನೋದು ನಿಮಗೆ ಗೊತ್ತಿದೆ. ಅದೊಂದು ಮಾತ್ರವೇ ಮೊಗೆದಷ್ಟೂ ಸಿಗಬಲ್ಲಂಥದು. ಅಂತ ಪ್ರೀತಿಯ ಬಗ್ಗೆ ಬರೆದ ಒಂದಿಷ್ಟು ಪ್ರೀತಿಯ ಹನಿಗಳನ್ನು ನದಿಗೆ ಚೆಲ್ಲಿದ್ದೇನೆ.
ಅದೂ ಪ್ರೀತಿಯಿಂದ ಒಪ್ಪಿಸಿಕೊಳ್ಳಿ.

ಹ್ಯಾಪಿ ವ್ಯಾಲೆಂಟೈನ್ಸ್ ಡೇ.




***
ನೀನು
ಪುಸ್ತಕದ ಒಳಗೆ ಇಟ್ಟುಕೊಂಡ
ಅಪ್ಪಚ್ಚಿಯಾದ ಹೂ ಥರ.
ಅದರಲ್ಲಿ ಸುಗಂಧ ಇರುವುದಿಲ್ಲ ನಿಜ
ಆದರೆ ನೋಡಿದಾಗಲೆಲ್ಲ
ನಾ ನಿನಗೆ ನೆನಪಾಗೋದು ಮಾತ್ರ
ಖರೆ

***
ನಿಜ್ಜ ಹೇಳ್ಲ
ಆ ನಕ್ಷತ್ರಗಳಲ್ಲಿ
ಒಂದೇ ಒಂದೂ
ನಿನ್ನದೊಂದು ಕಣ್ಣಿಗೆ
ಸಮವಲ್ಲ ಬಿಡು

***
ದೇವರು
ನೀನಿನ್ನು ಇಪ್ಪತ್ನಾಲ್ಕು ಗಂಟೆ ಅಷ್ಟೇ
ಬದುಕಿರ್ತೀಯ ಅಂದ್ರೆ
ಅದರಲ್ಲಿ ಇಪ್ಪತ್ಮೂರು ಗಂಟೆ
ನಿಂಜೊತೇನೆ ಇರ್ತೀನಿ
ಇನ್ನೊಂದ್ ಗಂಟೇಲಿ
ನಾನು ಸತ್ತ ಮೇಲೆ ನಿನ್ನ ಬಗ್ಗೆ
ಕೇರ್
ತಗಳೋರನ್ನ ಹುಡುಕ್ತೀನಿ

***
ಗೆಳತಿ
ನಿನ್ನ ಕಣ್ಣಲ್ಲಿ ಹುಟ್ಟಿ
ಕೆನ್ನೆ ಮೇಲಿಳಿದು
ಅಧರದಲ್ಲಿ ಲೀನವಾಗುತ್ತಲ್ಲ
ಕಂಬನಿ
ನನಗೆ ಅದಾಗುವಾಸೆ

***
ನನಗೊಂದಾಸೆ
ನಿನ್ನ ಎದೆಗೊರಗಿಕೊಂಡೇ
ಸಾಯಬೇಕೆನ್ನುವುದು

***
ನಾನು
ನಿನ್ನೆದೆಯೊಳಗಿನ
ಕೊಳದಲ್ಲಿ
ತೇಲುವ
ಪುಟ್ಟ ಹಾಯಿ ದೋಣಿ

***
ನೀನು
ನನ್ನೊಳಗಿದ್ದಾಗ
ನಾನು ನಿನ್ನೊಳಗಿರಬೇಕು ತಾನೆ
ಅದೇ..... ಆಗುತ್ತಿಲ್ಲ!

***
ಮೊಬೈಲು
ಮೇಲು
ಎಸ್ಸೆಮ್ಮೆಸ್ಸು
ಎಲ್ಲಾ ಬೋರಾಗಿದೆ
ಸಂಜೆ ಸಿಕ್ತೀಯ
ಒಂದೆರಡು
ಮಾತಾಡೋಣ
ಕೈ ಕೈ ಹಿಡಿದು

***
ಎಲ್ಲಾ ಹೂಗಳೂ
ರೋಸ್ನಂತಲ್ಲ
ಎಲ್ಲಾ ಮರಗಳೂ ನೆರಳು ನೀಡೋಲ್ಲ
ಎಲ್ಲರನ್ನೂ ಪ್ರೀತಿಸೋಕ್ಕಾಗೊಲ್ಲ
ನಿಜ್ಜ ಹೇಳ್ಲ
ನಿನ್ನ ನೋಡಿದ್ ಮೇಲೆ
ಯಾಕೋ ಜೀವ ಬೇರೇನನ್ನೂ ಬಯಸ್ತಿಲ್ಲ
ಮನಸ್ಸು ಚಂಡಿ ಹಿಡಿದಿದೆ
ನೀನೇ ಬೇಕಂಥ
ಪ್ಲೀಸ್ ಒಮ್ಮೆ ಸಿಗೆ!

***
ಹೇಗೆಬರಲೀ ಹೇಳು
ನಿನ್ನಲ್ಲಿಗೆ
ಈ ಉರಿ ಬಿಸಿಲಲ್ಲಿ
ಕೈಯಲ್ಲಿರುವ
ಐಸ್ಕ್ರೀಮ್
ಕರಗಿ ಹೋಗುವ ಮುನ್ನ...

***
ಸುಧಾರಣೆ ಆಗು ಅಂತೀಯಲ್ಲ
ನಿನ್ನ ಪ್ರೀತಿಸಲಿಕ್ಕೆಶುರು ಮಾಡಿದ್ದು
ಸುಧಾರಣೆ ಅಲ್ವೇನು?

***
ಸುಮ್ಮನೆ ನಿಂತಿದ್ದು
ಸುಮ್ಮನೆ ಕುಳಿತದ್ದು
ಒಮ್ಮೆಲೇ ಮಾತು ಹೊರಟು
ಇಬ್ಬರೂ ನಕ್ಕಿದ್ದು
ಈಗ ಕೂಡ
ಸುಮ್ಮನೆ ಕುಳಿತಾಗ
ಸುಮ್ಮನೆ ನಿಂತಾಗ
ಒಮ್ಮೆಲೇ ಮಾತು ಹೊರಟು
.........................ಈ ಕ್ಷಣ
ನೀನು
ಎದುರಿಗಿಲ್ಲವಾಗಿ
ಕಾಡುತ್ತಿದೆ ನೆನಪು
.............................
ಇಲ್ಲಿ ನನಗೆ ಹೀಗೆ
ಅಲ್ಲಿ ನಿನಗೆ ಹೇಗೆ?

***
ಪ್ರಿಯೆ
ಬರೀ ಊಟ, ತಿಂಡಿ
ಕಾರು, ಬಂಗ್ಲೆ
ಇಷ್ಟಕ್ಕೇ ನಾ ಬದುಕಿಲ್ಲ
ನೀನು ಸಿಕ್ತೀಯೇನೋ ಅಂತ
ಜೀವ ಜೀಕುತ್ತಿದೆ
ಒಮ್ಮೆ ಬಂದು ಹೋಗು
ಒಂದು ಜೀವ ಉಳಿಸಿದಕೀತರ್ಿಗೆ
ನೀನು ಪಾತ್ರಳಾಗ್ತೀಯ
ನಿನ್ನ ಕೊನೆ ಬಾರಿ ನೋಡಿದ ಕೀತರ್ಿಗೆ
ನಾನು ಪಾತ್ರನಾಗ್ತೀನಿ

***
ನೀನು ನನ್ನ ಕಣ್ಣ ನೋಟ
ತುಟಿಯಲ್ಲರಳಿದ ನಗು
ಮೊಗದ ಸಿರಿ
ಮನದ ಭಾವ
ನೀನಿಲ್ಲದೇ ನಾನು
ಇನ್ಕಂಪ್ಲೀಟ್

***
ಕದ್ದಿದ್ದು
ಒಂದೇ ಆದರೂ
ಅದಕ್ಕಾಗಿ ನನಗೆ ಖುಷಿ ಇದೆ
ಹೆಮ್ಮೆ ಇದೆ
ಯಾಕೆಂದ್ರೆ
ಅದು ನಿನ್ನ ಹೃದಯ

***
ಒಂದೇ ಒಂದು
ಗುಲಾಬಿ ಕೇಳ್ದೆ
ಇಡೀ ತೋಟಾನೆ ಕೊಟ್ಟ
ಹನಿ ನೀರು ಕೇಳಿದ್ರೆ
ಇಟ್ಕೋ ಅಂತ
ಸಮುದ್ರಾನೆ ಕೊಟ್ಟ
ಏಂಜೆಲ್ ಕಳಿಸು ಅಂದ್ರೆ
ನಿನ್ನನ್ನು ಕಳುಹಿಸಿದ
ಅವನಿಗೊಂದು ಥ್ಯಾಂಕ್ಸ್

***
ಹೇಗೆ ಗೊತ್ತಾಗಬೇಕು
ನಿನಗೆ ನನ್ನ ಪ್ರೀತಿ
ನಾನು ಮನಸ್ಸು ಬಿಚ್ಚುವ ಮೊದಲೇ
ನೀನು
ಮನದ ಬಾಗಿಲು ಮುಚ್ಚಿ
ಎದ್ದು ಹೋದೆಯಲ್ಲ!