Friday, December 19, 2008

ಗಿಫ್ಟ್ ಏನ್ ಕೊಡ್ತೀರಾ ಅಂದ್ರೆ...




ತುಂಬಾ ದಿನ ಆದಮೇಲೆ ಒಂದಿನ ರಸ್ತೆಯಲ್ಲಿ ನೀವು ನನ್ನನ್ನ ಅಚಾನಕ್ಕಾಗಿ ಭೇಟಿ ಆಗ್ತೀರ. ಉಭಯಕಲಸೋಪರಿ ಆದಮೇಲೆ ಇವತ್ತು ನನ್ನ ಬತರ್್ಡೇ ಅಂತ ಅದ್ಯಾಗೋ ನಿಮಗೆ ಗೊತ್ತಾಗಿಬಿಡುತ್ತೆ. ಆದ್ರೆ ನನಗೆ ಗಿಫ್ಟ್ ಅಂತ ಕೊಡಲಿಕ್ಕೇ ನಿಮ್ಮತ್ರ ಏನೇನೇನೂ ಇರೋಲ್ಲ. ಅಂತ ಸಮಯದಲ್ಲಿ ಏನು ಗಿಫ್ಟ್ ಕೊಡ್ತೀರಾ?
ಈ ಪ್ರಶ್ನೆಗೆ ರಿಪ್ಲೈ ಮಸ್ಟ್ ಅಂತ ಒಂದಿಷ್ಟು ಸ್ನೇಹಿತರಿಗೆ ಕಳುಹಿಸಿದೆ.
ಅವರು ಕೊಟ್ಟ ಉತ್ತರಗಳಿವು.

ಚುಪ್ಪಿ: ಪೊರಕೆ. ನಿಮ್ಮ ಲೈಫ್ನಲ್ಲಿರೋ ಕಸಾನೆಲ್ಲ ಗುಡಿಸಿ ಹೊರ ಹಾಕಿ ಅನ್ನೋ ಸ್ಲೋಗನ್ ಜೊತೆ.
ಕಮೆಂಟ್: ನಿಮ್ಮತ್ರ ಏನೇನೂ ಇಲ್ಲ ಅಂದಮೇಲೆ ಪೊರಕೆ ಎಲ್ಲಿಂದ ಬರಬೇಕು. ಪೊರಕೆ ಅವಸಿಕೊಂಡೇನಾದ್ರೂ ಹೋಲ್ಸೇಲ್ ಆಗಿ ಸಿಟಿ ಕ್ಲೀನ್ ಮಾಡೋದಕ್ಕೆ ಹೊರಟಿದ್ರಾ!

ಕಲಾ: ನನ್ನ ಕಣ್ಣ ರೆಪ್ಪೆಯ ಕೂದಲನ್ನು ಕೊಡುವೆ ಗೆಳೆಯ. ನೀನು ಬಯಸಿದ್ದು ಅದನ್ನು ಗಾಳಿಗೆ ತೂರಿದಾಗ ಸಿಗಲಿ ಎಂದು ಹಾರೈಸುವೆ.
ಕಮೆಂಟ್: ನಿಮ್ಮ ಐಡಿಯಾ ಏನೋ ಸೂಪರ್ರ್! ಆದ್ರೆ ಇರೋದೆರಡು ರೆಪ್ಪೆ ಕೂದಲು ಕಿತ್ತುಕೊಂಡ್ರೆ ಸೇವಿಂಗ್ ಮಾಡಿಸಿದ ಕೋತಿ ಥರ ಕಾಣಿಸಲ್ವಾ? ಥಿಂಕ್ ಟ್ವೈಸ್!

ಮಣಿಕಾಂತ್: ನೂರಾರು ಹಾರೈಕೆ ನಿಮಗೆ ಎಂಬ ಹರಕೆಯ ಬಿಟ್ಟಿ ಮಾತು.
ಕಮೆಂಟ್: ರೀ ಮಿನಿಕಾಂತ್ ಅದರಲ್ಲೂ ಕಂಜೂಸಾ? ಬಿಟ್ಟಿ ಅಂತಿದೀರಾ ಬೇರೆ...ನೂರಾರೇ ಏಕೆ. ಸಾವಿರಾರು ಅಂತಾದರೂ ಅನ್ರೀ!

ಕುಮಾರ ಸ್ವಾಮಿ: ಏನೂ ಕೊಡೋಲ್ಲ ಜಸ್ಟ್ ವಿಷಸ್ ಅಷ್ಟೇ!
ಕಮೆಂಟ್: ನೀವು ಕೊಡೊಲ್ಲ ಅಂತ ಗೊತ್ತು ಬಿಡ್ರೀ ನಟರೇ. ನಿಮ್ಮನ್ನ ನೋಡುದ್ರೆ ಯಾವ ಕಡೇ ಇಂದಾನೂ ಕೊಡೋ ಸೂಚನೆಗಳೇ ಇಲ್ಲ. ಹೇಳೋದರಲ್ಲೂ ಎಂಥ ನೇರವಂತಿಕೆ ನಿಮ್ಮದು. ಮೆಚ್ಚಿದೆ ಮೆಚ್ಚಿದೆ.

ಸುಬ್ಬು: ಮೊದಲೇ ಹೇಳಬಾರದಿತ್ತೇನೋ ಜೇಬ್ನಲ್ಲಿ ತಾಜ್ ಮಹಲ್ಲೆ ಇಟ್ಕಂಬತ್ತಿದ್ದೆ!
ಕಮೆಂಟ್: ಜೇಬಿದೆಯಾ ಅಂತ ನೋಡ್ಕೋ. ಇದ್ರೂ ತೂತಿರಬಹುದು. ತಾಜ್ ಮಹಲ್ ಇರಲಿ ನಿನ್ನ ಅಂಗಡೀಲಿರೋ ಒಂದು ಲಾಲಿ ಪಪ್ಪನ್ನ ಯಾರಿಗಾದ್ರೂ ದಾನ ಮಾಡಿದಿಯೇನೊ ಬ್ರದರ್!

ರವಿರಾಜ್: ನಿಮ್ಮ ಹುಟ್ಟಿದಬ್ಬ ನೆನಪಿಸಿಕೊಳ್ಳೋದೇ ನನಗೊಂದು ವಿಶೇಷ ಬಿಡಿ. ಯಾಕೆಂದ್ರೆ ನಾನು ಆಬ್ಸೆಂಟ್ ಮೈಂಡೆಡ್.
ಕಮೆಂಟ್: ಹೋಗಲಿ ಬಿಡಿ ರವಿರಾಜ್ ನಿಮ್ಮನ್ನ ನೆನಪಿಸಿಕೊಂಡ್ರೇ ಸಖತ್ ದುಃಖ ಆಗುತ್ತೆ. ಯಾವುದಕ್ಕೂ ಒಳ್ಳೇ ಕಡೆ ತೋರಿಸಿಕಳಿ.