Friday, April 24, 2009

ದಿ ಪೇಯ್ನ್ಪ್ರಿಯ ಸ್ನೇಹಿತರೆ
ಇದು ಕೆಲವು ವಾರಗಳ ಹಿಂದೆ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಪ್ರಕಟವಾದ ಕಥೆ.
ಮತ್ತೆ ಇಲ್ಲಿ ನಿಮಗಾಗಿ ಹಾಕುತ್ತಿದ್ದೇನೆ. ಓದಿಕೊಳ್ಳಿ

ಕಿಟಕಿ ತೆರೆದೇ ಇತ್ತು.
ದೂರದಲ್ಲಿ ಯಾರದೋ ಒಕ್ಕಳಾಳದಿಂದ ಎದ್ದು ಬಂದ ಸಣ್ಣದೊಂದು ಆಲಾಪ್. ಅದು ನೋವಿನ ಎಳೆ ಎಂದು ಗುರುತಿಸಿಕೊಳ್ಳುವುದಕ್ಕೆ ಪ್ರಿಯಾಗೆ ಸಮಯ ಹಿಡಿಯಲಿಲ್ಲ.
ಮಗ್ಗಲು ಬದಲಿಸಿದಳು. ಸಣ್ಣಗೆ ಕೆಮ್ಮು ಬಂದು ಉಸಿರು ಹಿಂಡಿದಂಗಾಯಿತು. ಕತ್ತು ಆನಿಸಿದಳು. ಉಫ್. ಒಂದು ನಿಡಿದಾದ ಉಸಿರಿಗಾಗಿ ಎಷ್ಟು ಪರದಾಡಬೇಕು?
ಥತ್...ಇನ್ನೂ ಯಾಕೆ ಬದುಕಿದ್ದೀನಿ ನಾನು? ಬದುಕು ಅನ್ನುವುದು ಕೇವಲ ಇಪ್ಪತ್ತೊಂದನೇ ವಯಸ್ಸಿಗೆ ಈ ಪರಿ ಮಕ್ಕಾಡೆ ಮಲಗಿಬಿಡುತ್ತದೆ ಅಂತ ನಾನು ಎಂದಾದರೂ ಭಾವಿಸಿದ್ದೆನಾ? ಎಷ್ಟು ಬೇಗ ನನ್ನೆಲ್ಲ ದಾರಿಗಳು ಮುಚ್ಚಿಹೋದುವಲ್ಲ. ಕನಸುಗಳು ಕಳೆದುಹೋದವು. ಮನಸ್ಸು ನಿಲರ್ಿಪ್ತವಾಯಿತು. ನಿದ್ರೆ ದೂರಾಯಿತು. ನೋವು ದಿನ ಕಳೆದಂತೆ ಅಭ್ಯಾಸವಾಗಿ ಹೋಯಿತು. ಪ್ರತಿ ಕ್ಷಣ ಕೂಡ ನಾನು ಸಾವಿಗೆ ಹತ್ತಿರಾಗುತ್ತಿದ್ದೇನೆ ಅನಿಸುತ್ತಿದೆ. ಸಾವು ಇಷ್ಟು ಯಾತನಾಮಯವಾಗಿರುತ್ತಾ? ಇನ್ನು ಎಷ್ಟು ನಿಮಿಷವೋ, ಎಷ್ಟು ವಾರವೋ, ಎಷ್ಟು ತಿಂಗಳೋ ನನ್ನ ಈ ಉಸಿರು.
ಪ್ರಿಯಾ ಬಳಿಗೆ ಬಂದ ನಸರ್್ ಯಾವುದೋ ಮಾತ್ರೆ ಕೈಗಿಟ್ಟು ನುಂಗಿ ಅನ್ನುವಂತೆ ಸನ್ನೆ ಮಾಡಿದಳು. ಅವಳ ಹೆಸರು ಪಾರ್ವತಿ. ಕೇರಳದಿಂದ ಬಂದವಳಂತೆ. ಕನ್ನಡ ಕಲಿತಿದ್ದಾಳೆ. ಹಾಸ್ಪಿಟಲ್ಗೆ ಬಂದ ದಿವಸದಿಂದ ನನ್ನ ಆರೈಕೆ ಮಾಡುತ್ತಿರುವ ಅಮ್ಮನಂಥವಳು. ಅವಳ ಪ್ರೀತಿ ದೊಡ್ಡದು. ನೀವು ಇಷ್ಟು ಚೆನ್ನಾಗಿದ್ದೀರಾ? ಆ ದೇವರು ನಿಮಗೆ ಯಾಕೆ ಈ ಕ್ಯಾನ್ಸರ್ ಅನ್ನೋ ಕಾಯಿಲೆ ಕೊಟ್ಟ ಸಿಸ್ಟರ್. ಅವನಿಗೆ ಚೆನ್ನಾಗಿರೋರನ್ನ ನೋಡಿದ್ರೆ ಆಗೊಲ್ಲ. ಪಕ್ಕಾ ಈಡಿಯಟ್ ಅವನು. ನನ್ನ ಅಕ್ಕನಿಗೂ ಹೀಗೆ ಆಗಿತ್ತು. ಅವಳೂ ನಿಮ್ಮಷ್ಟೇ ಚಂದಕ್ಕಿದ್ದಳು. ಏನೇ ಪ್ರಯತ್ನ ಮಾಡಿದರೂ ಅವಳನ್ನು ಮರೆಯೋದಕ್ಕೆ ಆಗುತ್ತಾ ಇಲ್ಲ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅನಿಸುತ್ತೆ ಅಂತ ಒಂದಿನ ಕಣ್ಣು ತುಂಬಿಕೊಂಡಿದ್ದಳು. ಅವಳಿಗೂ ಗೊತ್ತು ನಾನು ಹೆಚ್ಚು ದಿನ ಬದುಕೊಲ್ಲ ಅಂತ. ಏನೂ ಆಗೊಲ್ಲ ಸಿಸ್ಟರ್. ಒಂದಿನ ನೀವು ಹುಷಾರಾಗೇ ಆಗ್ತೀರ. ಡೋಂಟ್ ವರಿ ಅಂತ ಕೈ ಹಿಡಿದು ಸಾಂತ್ವನ ಹೇಳುತ್ತಾಳೆ. ಅದೆಲ್ಲ ನನ್ನ ಮೇಲಿನ ಪ್ರೀತಿಗಾಗಿ ಅಷ್ಟೆ.
ನಾನು ಕಣ್ಣೀರಾಗುತ್ತೇನೆ. ಪಾರ್ವತಿ ಕೈ ನನ್ನ ನೆತ್ತಿ ಸವರುತ್ತದೆ.
ಪಕ್ಕದ ರೂಮಿನಲ್ಲಿ ಯಾರೋ ಕಿರುಚಿದರು. ಅದೇನು ಕೊನೆಯ ಆರ್ತನಾದವಾ? ಕಳಕೊಂಡವರ ದುಃಖವಾ? ಆಸ್ಪತ್ರೆ ಅನ್ನುವುದು ನರಕ ಕೂಪಗಳಿದ್ದ ಹಾಗೆ! ಇಲ್ಲಿಗೆ ಜನ ಸಾಯಲಿಕ್ಕೆಂದೇ ಬರುತ್ತಾರಾ? ಓಹ್... ಅಮ್ಮ ಬರಬಹುದು ಈಗ. ನನಗೆ ಅಂತ ಅವಳು ಹಾಲು ತರುತ್ತಾಳೆ. ಎಂತೆಂಥದೋ ಹಣ್ಣು ತರುತ್ತಾಳೆ. ಮಗಳು ಬದುಕಿಯಾಳು ಅನ್ನುವ ಸಣ್ಣ ಭರವಸೆ ಅವಳಲ್ಲಿ ಮಾತ್ರ ಗಟ್ಟಿಯಾಗಿದೆ. ಯಾಕೆಂದ್ರೆ ಅವಳು ತಾಯಿ. ಯಾವ ತಾಯಿ ತಾನೆ ಮಗಳು ತನ್ನ ತೊಡೆಯ ಮೇಲೇ ಸಾಯುವುದನ್ನ ಇಷ್ಟಪಟ್ಟಾಳು. ನಿನಗೆ ಏನೂ ಆಗೊಲ್ಲ ಮಗಳೆ. ಡಾಕ್ಟರು ಹೇಳಿದ್ದಾರೆ. ಈಗೇನು ಎಂಥ ಕ್ಯಾನ್ಸರನ್ನೂ ಗುಣ ಪಡಿಸಬಹುದಂತೆ. ಅದರಲ್ಲೂ ಡಾ. ಸುರೇಶ್ ಪಾಟೀಲ್ ತುಂಬಾ ಫೇಮಸ್ ಆದಂಥವರು. ಅವರು ನಿಮ್ಮ ಮಗಳಿಗೆ ಏನೂ ಆಗೋದಿಲ್ಲ ಅಂತ ಹೇಳಿದ್ದಾರೆ. ನೀನು ಧೈರ್ಯ ಗೆಡಬೇಡ ಮಗಳೇ, ಅಂತ ಅಮ್ಮ ಹೇಳುತ್ತಿರುತ್ತಾಳೆ. ಅವಳಿಗೂ ಗೊತ್ತು ನನ್ನ ಮಗಳು ಬದುಕೋಲ್ಲ ಅಂತ. ಆದರೂ ನನ್ನ ಮೇಲಿನ ಪ್ರೀತಿಗಾಗಿ ಹಾಗೆ ಹೇಳುತ್ತಾಳೆ. ಅಪ್ಪ ಇದ್ದಿದ್ದರೆ ಅಮ್ಮನಿಗಿಂತ ಹೆಚ್ಚು ಸಂಕಟ ಪಡುತ್ತಿದ್ದನೇನೋ. ಇದನ್ನೆಲ್ಲ ನೋಡಬೇಕಾಗುತ್ತೆ ಅಂತ ಮೊದಲೇ ಹೋಗಿಬಿಟ್ಟ. ಡೋಂಟ್ ವರಿ ಡ್ಯಾಡಿ ಇನ್ನೇನು ಕೆಲವೆ ದಿನ ನಾನು ನಿನ್ನಲ್ಲಿಗೆ ಬರುತ್ತೇನೆ.
ಅಮ್ಮ ಸರಸ್ವತಿ ಬಂದರು.
ಬರುವಾಗಲೇ ಕಣ್ಣ ತುಂಬಾ ನೀರು. ಮಗಳಿಗೆ ಗೊತ್ತಾದೀತು ಅಂತ ಸಣ್ಣಗೆ ತಿರುಗಿ ಸೀರೆ ಸೆರಗಿನಿಂದ ಒರೆಸಿಕೊಂಡರು.
ಸೇಬು ತಿನ್ನು ಮಗಳೇ!
ಅಮ್ಮ ನಾನು ಅಂದ್ರೆ ನಿನಗೆ ಅಷ್ಟಿಷ್ಟಾನಾ?
ಯಾಕೆ ಹಾಗೆಲ್ಲ ಕೇಳ್ತೀಯ?
ಅಲ್ಲ ನಾನು ಸತ್ತು ಹೋದ್ರೆ ನೀನು ಎಷ್ಟು ಸಂಕಟ ಪಡ್ತೀ ಅಂತ ನನಗೆ ದಿಗಿಲಾಗಿದೆ!
ಸರಸ್ವತಿಗೆ ದುಃಖ ತಡೆಯಲಾಗಲಿಲ್ಲ. ಮಗಳನ್ನು ಬಾಚಿ ತಬ್ಬಿಕೊಂಡರು.
ದೇವರೆ ಎಷ್ಟು ಅಂತ ದುಃಖ ಕೊಡುತ್ತೀ. ಗಂಡನನ್ನ ಕಿತ್ತುಕೊಂಡೆ. ಆದರೂ ನಾನು ಬದುಕಿದೆ, ಅದು ನನ್ನ ಮಗಳಿಗಾಗಿ. ಅವಳು ಚೆನ್ನಾಗಿರಬೇಕು ಅಂತ ನಾನು ಮಾಡಿದ ಕೆಲಸ, ಪಟ್ಟ ಯಾತನೆ ಇದೆಯಲ್ಲ ಅದು ಬೇರೆ ಯಾವ ತಾಯಿಗೂ ಬೇಡ. ಇದ್ದದ್ದೊಂದು ಮನೆ ಬೆಳಕಿನಂತವಳು ಮಗಳು. ಈಗ ಅವಳನ್ನು ಕಿತ್ತುಕೊಳ್ಳಲು ಹೊರಟಿದ್ದೀಯಲ್ಲ. ಮುಂದೆ ನಿನಗೆ ಯಾವತ್ತೂ ನಾನು ಕೈ ಮುಗಿಯಲಾರೆ, ದೀಪ ಹಚ್ಚಲಾರೆ. ಇದ್ದೊಂದು ದೀಪವನ್ನೂ ನೀನೇ ಆರಿಸಿದ ಮೇಲೆ ನನಗೆ ಇನ್ನೆಲ್ಲಿದೆ ಬದುಕು.
ಸರಸ್ವತಿಯ ದುಃಖ ಇನ್ನೂ ಬತ್ತಿರಲಿಲ್ಲ.
ಯಾರೋ ಹೆಗಲ ಮೇಲೆ ಕೈ ಇಟ್ಟಂತಾಯಿತು. ತಿರುಗಿದರೆ ಅದೇ ಹುಡುಗ.
ನೀನಾ?
ಆ್ಯಂಟಿ. ಹಾಗನ್ನುವ ಮೊದಲೇ ಅವನ ಕಣ್ಣು ತುಂಬಿಬಂತು. ಹೀಗೆ ಕೇಳಿದೆ ಪ್ರಿಯಾಳಿಗೆ ಹುಷಾರಿಲ್ಲ ಅಂತ. ನೋಡಿ ಹೋಗೋಣ ಅಂತ ಬಂದೆ. ಅವಳಿಗೆ ಏನೂ ಆಗೊಲ್ಲ ಆ್ಯಂಟಿ. ದೇವರಿದ್ದಾನೆ.
ಎಲ್ಲಿದ್ದಾನೆ ದೇವರು. ನನ್ನ ಪಾಲಿಗೆ ಅವನು ಯಾವತ್ತೋ ಸತ್ತು ಹೋದ. ಹೇಗೆ ಭರಿಸಲಿ ಈ ದಃಖವನ್ನ? ಸರಸ್ವತಿಯ ಕಣ್ಣು ಅತ್ತು ಅತ್ತು ಬತ್ತಿಹೋದ ಕೊಳದಂತಾಗಿದ್ದವು.
ವಿಕಾಸ್ ಹೋಗಿ ಪ್ರಿಯಾಳ ಪಕ್ಕ ಕುಳಿತ. ಕೈ ಹಿಡಿದುಕೊಂಡ.
ಡೋಂಟ್ ವರಿ ನಾನಿದ್ದೇನೆ. ನಿನಗೆ ಏನೂ ಆಗೊಲ್ಲ.
ಯಾಕೆ ಹಾಗಂತೀಯ ವಿಕಿ. ನೀನೂ ಸುಳ್ಳು ಹೇಳ್ತೀಯಲ್ಲ ಅನ್ನಬೇಕೆನಿಸಿತು ಪ್ರಿಯಾಳಿಗೆ.
ಸುಮ್ಮನೆ ಅವನ ಕೈ ಅದುಮಿದಳು ಅಷ್ಟೆ.
ಎಂಥ ಹುಡುಗ ಇವನು. ನನಗಾಗಿ ಪ್ರಾಣ ಬೇಕಾದ್ರೆ ಕೊಡ್ತೀನಿ ಅಂದಿದ್ದ ಒಮ್ಮೆ. ಹುಚ್ಚಾ ಅದೆಲ್ಲ ಯಾಕೆ, ನಿನ್ನನ್ನ ಪ್ರೀತಿ ತಾನೆ ಮಾಡಬೇಕು. ಮಾಡ್ತೀನಿ ಬಿಡು ಅಂದಿದ್ದೆ ನಾನು. ಅವತ್ತು ಅವನಷ್ಟು ಖುಷಿ ಪಟ್ಟವರನ್ನ ನಾನು ಈ ಜನ್ಮದಲ್ಲಿ ಕಂಡಿಲ್ಲ. ಮುಗಿಲೇ ಎಟಕುವಷ್ಟು ಜಿಗಿದಾಡಿದ್ದ. ನನ್ನ ಕರೆದುಕೊಂಡು ಊರೆಲ್ಲ ಸುತ್ತಿಸಿದ್ದ. ಕೇಳಿದ್ದೆಲ್ಲ ಕೊಡಿಸಿದ್ದ. ಒಂದೇ ಒಂದಿನ ನನ್ನ ಪ್ರೀತಿಯನ್ನಲ್ಲದೇ ಬೇರೆ ಏನನ್ನೂ ಬಯಸದ ಹುಡುಗ. ಪ್ಲೆಟಾನಿಕ್ ಪ್ರೀತಿ ಅಂತಾರಲ್ಲ ಅಂಥದು.
ಆಮೇಲೆ ಕೆಲಸದ ಮೇಲೆ ಮುಂಬೈಗೆ ಅಂತ ಹೊರಟು ಹೋದ. ವರ್ಷದ ಮೇಲಾಯಿತು. ಅಲ್ಲ ಕಣೋ ನೀನು ಅಲ್ಲಿ ನಾನು ಇಲ್ಲಿ. ಹೇಗಪ್ಪ ಪ್ರೀತಿ ಅಂದ್ರೆ ದೂರ ಇದ್ದಷ್ಟು ಪ್ರೀತಿ ಜಾಸ್ತಿ ಕಣೆ. ಹತ್ತಿರ ಅದರಲ್ಲೂ ತೀರಾ ಹತ್ರ ಇದ್ರೆ ಪ್ರೀತಿಗೆ ಕಾಮದ ವಾಂಛೆ ಬಂದುಬಿಡುತ್ತೆ. ನಾನು ಬರುವುದಕ್ಕೆ ಇನ್ನೂ ಒಂದು ವರ್ಷ ಆಗಬಹುದು. ಅಲ್ಲಿವರೆಗೂ ನಿನಗೆ ತಾಳ್ಮೆ ಇದ್ದರೆ ಕಾಯಿ. ಇಲ್ಲ ಅಂದ್ರೆ ಒಳ್ಳೆ ಹುಡುಗ ಸಿಕ್ಕಿದ್ರೆ ಮದುವೆ ಆಗಿಬಿಡು. ನಾನು ಪ್ರಾಕ್ಟಿಕಲ್ ಮನುಷ್ಯ. ಯಾರಿಗಾಗೋ ಕಾಯುತ್ತಾ ಕೂತು ಬದುಕನ್ನ ವ್ಯರ್ಥ ಮಾಡಿಕೊಳ್ಳುವುದರಲ್ಲಿ ಅರ್ಥ ಇಲ್ಲ ಪ್ರಿಯಾ ಅಂತ ಫೋನ್ ಮಾಡಿದ್ದ.
ಅವತ್ತೇ ನನಗೆ ಗೊತ್ತಾಗಿದ್ದು ಇವನು ನನ್ನ ಬುದ್ಧಿಗೆ ಮೀರಿದ ಹುಡುಗ ಅಂತ.
ಅದಾದ ಮೇಲೆ ನಮ್ಮಿಬ್ಬರದು ಸಂಪರ್ಕವೇ ಇಲ್ಲ.
ಈಗ ನೋಡಿದ್ರೆ ಪಕ್ಕದಲ್ಲೇ ಬಂದು ಕುಳಿತಿದ್ದಾನೆ. ಪ್ರೀತಿಗೆ ಅಷ್ಟೊಂದು ಸೆಳೆತವಿದೆಯಾ?
ಪ್ರಿಯಾಳ ಕಣ್ಣು ಮತ್ತೆ ಹನಿಗೂಡಿದವು.
ಏನನ್ನೋ ಹೇಳಲು ಹೊರಟ ವಿಕಾಸ್ ಅವಳ ಕಣ್ಣೊರೆಸಿದ.
ಮತ್ತೆ ಮತ್ತೆ ಹನಿಗೂಡುತ್ತಿದ್ದ ಕಣ್ಣನ್ನು ಒರೆಸುವುದಾದರೂ ಯಾಕೆ?
ಪ್ರಿಯಾ ಅವನ ಮುಖ ನೋಡಲಿಕ್ಕಾಗದೆ ಚಡಪಡಿಸಿದಳು.
***
ಡಾಕ್ಟರ್ ಪ್ರಿಯಾಳ ಸ್ಥಿತಿ ಹೇಗಿದೆ?
ಎದುರಿಗೆ ಕುಳಿತ ಸುರೇಶ್ ಪಾಟೀಲರು ಕ್ಷಣ ಮೌನವಾದರು.
ಅವಳನ್ನು ಬದುಕಿಸಿಕೊಡಲಿಕ್ಕೆ ಆಗಲ್ಲವಾ ಡಾಕ್ಟರ್? ವಿಕಾಸ್ ಡಾಕ್ಟರ್ರ ಕೈ ಹಿಡಿದುಕೊಂಡ.
ಪ್ಲೀಸ್ ಡಾಕ್ಟರ್. ಅದಕ್ಕೋಸ್ಕರ ನಾನು ಏನು ಮಾಡಬೇಕು ಹೇಳಿ?
ಸುರೇಶ್ ಪಾಟೀಲ್ರ ಕಣ್ಣು ತುಂಬಿಬಂತು. ಇಷ್ಟು ವರ್ಷದಲ್ಲಿ ಎಂಥೆಂತ ಕ್ಯಾನ್ಸರ್ ಕೇಸ್ಗಳನ್ನು ನೋಡಿಲ್ಲ ನಾನು .ಇದರಷ್ಟು ಕರಳು ಹಿಂಡಿದ್ದು ಮತ್ತೊಂದಿಲ್ಲ. ಯಾಕೋ ಪ್ರಿಯಾ ಬದುಕಬೇಕು ಅನಿಸುತ್ತೆ. ಆದ್ರೆ ಅವಳು ಬದುಕುವ ಯಾವ ಕುರುಹೂ ಇಲ್ಲ. ಕ್ಯಾನ್ಸರ್ ಅವಳನ್ನು ಅಷ್ಟು ಆವರಿಸಿಕೊಂಡುಬಿಟ್ಟಿದೆ.
ಐ ಯಾಮ್ ಸಾರಿ ಮಿಸ್ಟರ್ ವಿಕಾಸ್. ಪ್ರಿಯಾ ಬದುಕಲಾರದಷ್ಟು ದೂರ ಹೊರಟುಹೋಗಿದ್ದಾಳೆ. ಅವಳಿಗೆ ಲಂಗ್ ಕ್ಯಾನ್ಸರ್. ಉಸಿರಾಟ ಈಸಿಯಾಗಿ ಆಗೊಲ್ಲ. ನೋವಿಗೆ ಮಾಫರ್ಿನ್ ಕೊಡುತ್ತಿದ್ದೇವೆ. ಅದನ್ನು ನಿಲ್ಲಿಸಿದರೆ ಅವಳಿಗೆ ನೋವು ತಡೆದುಕೊಳ್ಳಲು ಕಷ್ಟ್ಲ. ಮಾಫರ್ಿನ್ ಕೊಡೋದರಿಂದ ಅವಳ ಇತರೆ ಆರ್ಗನ್ಗಳಿಗೂ ತೊಂದರೆ ಆಗಿದೆ. ಬಿಲೀವ್ ಮಿ, ಅವಳನ್ನ ಇನ್ನು ಮರೆತುಬಿಡೋದು ಒಳ್ಳೇದು.
ಅವರ ಕಣ್ಣಂಚಿನಿಂದ ಜಾರಿದ ಹನಿಯೊಂದು ವಿಕಾಸ್ನ ಮುಂಗೈ ಬೇಲೆ ಬಿತ್ತು.
ಪ್ಲೀಸ್ ಇನ್ನೊಂದೇ ಒಂದು ಚಾನ್ಸ್ ನೋಡಿ ಡಾಕ್ಟರ್!
ಇಲ್ಲ ವಿಕಾಸ್. ಇರುವಷ್ಟು ದಿನ ಅವಳಿಗೆ ಒಂದು ಕಂಫಟರ್್ ಕೊಡಿ. ನನಗೂ ಅವಳು ಬದುಕಬೇಕು ಅನಿಸುತ್ತಿದೆ. ಬಟ್ ಐಯಾಮ್ ಹೆಲ್ಪ್ಲೆಸ್. ಸಾರಿ ಅಂತ ಎದ್ದರು.
ವಿಕಾಸ್ ಕುಸಿದುಹೋದ. ಹಾಗಾದರೆ ಇನ್ನೆಷ್ಟು ದಿನ ಪ್ರಿಯಾಳ ಈ ಯಾತನಾ ಬದುಕು.
ಡಾಕ್ಟರ್ ಒಂದು ನಿಮಿಷ ಪ್ಲೀಸ್.
ಮತ್ತೆ ಸುರೇಶ್ ಪಾಟೀಲ್ ಕುಳಿತರು.
ನಾನೊಂದು ನಿಧರ್ಾರಕ್ಕೆ ಬಂದಿದ್ದೇನೆ.
ಏನು?
ನಾನು ಪ್ರಿಯಾಳನ್ನು ಮದುವೇ ಆಗಬೇಕೆಂದಿದ್ದೇನೆ.
ವಾಟ್?
ಹೌದು. ಅವಳು ನನ್ನ ಹೃದಯದ ಹುಡುಗಿ. ಅಂಥ ಹುಡುಗಿಯನ್ನ ನಾನು ಮತ್ತೆಲ್ಲಿಯೂ ಕಾಣಲಾರೆ. ಅವಳು ನನಗೆ ಮಾತ್ರ ಹುಟ್ಟಿ ಬಂದಿದ್ದವಳು. ನನ್ನ ಬದುಕಿನ ಮುದುವೆಯ ಅಧ್ಯಾಯವೂ ಅವಳು ಬದುಕಿರುವಾಗಲೆ ಮುಗಿದುಹೋಗಲಿ.
ಒಮ್ಮೆ ಯೋಚಿಸಿ ನಿಧರ್ಾರ ತೆಗೆದುಕೊಂಡರೆ ಒಳಿತು. ಅವಳಿರುವ ಸ್ಥಿತಿಯಲ್ಲಿ ಅದೆಲ್ಲ ಬೇಕಾ? ಒಪ್ಪುತ್ತಾಳಾ?
ನಾನು ಒಪ್ಪಿಸುತ್ತೇನೆ. ಇದು ನನ್ನ ಮತ್ತು ಅವಳ ವೈಯಕ್ತಿಕ ನಿಧರ್ಾರ. ಅದಕ್ಕೆ ಪಮರ್ಿಷನ್ ಕೊಡಬೇಕು ನೀವು.
ಆಯಿತು. ನಾನೇ ಎಲ್ಲಾ ವ್ಯವಸ್ಥೆ ಮಾಡಿಸುತ್ತೇನೆ. ನಿನ್ನ ಮನಸ್ಸು ದೊಡ್ಡದು. ನೀನು ನಮ್ಮೆಲ್ಲರ ಮುಂದೆ ಗ್ರೇಟ್ ಆಗಿಬಿಟ್ಟಿರಿ ವಿಕಾಸ್. ದೇವರು ಈಡಿಯಟ್ ಅಂತ ನನಗೆ ಈಗ ಅನಿಸುತ್ತಿದೆ. ಅವಳು ಬದುಕಿರಬೇಕಿತ್ತು ವಿಕಾಸ್ ... ಬದುಕಿರಬೇಕಿತ್ತು. ಅವರ ಕಣ್ಣಾಲಿಗಳು ತುಂಬಿಬಂದವು.
ಎದ್ದು ಸರಸರನೆ ಹೊರಟುಹೋದರು.
***
ಅಮ್ಮ ನಾನು ಪ್ರಿಯಾಳನ್ನು ಮದುವೆ ಆಗುತ್ತಿದ್ದೇನೆ.
ಅವಳಿಗೆ ಕ್ಯಾನ್ಸರ್ ಇದೆ ಅಂತಿದ್ರು.
ಗೊತ್ತಿದ್ದೇ ಮದುವೆ ಆಗಬೇಕು ಅಂತಿದ್ದೀನಿ ಮಮ್ಮಿ. ಅವಳು ಇನ್ನು ಹೆಚ್ಚೆಂದರೆೆ ಎಷ್ಟು ದಿನ ಬದುಕುತ್ತಾಳೋ ಗೊತ್ತಿಲ್ಲ. ಆದ್ರೆ ಅವಳು ಮುತ್ತೈದೆ ಆಗಿಯೇ ಹೋಗಲಿ ಅನ್ನೋದು ನನ್ನ ಇಷ್ಟ. ಇದಕ್ಕೆ ನಿನ್ನ ಒಪ್ಪಿಗೆ ಬೇಕು.
ವಿಕಾಸ್ನ ಅಮ್ಮ ಶಾರದಾಗೆ ಮಗ ಎಂಥವನು ಅಂತ ಗೊತ್ತು. ಅವನ ಮನಸ್ಸು ಎಂಥದು ಅಂತ ಗೊತ್ತು. ಒಂದೇ ಒಂದು ದಿನ, ಕ್ಷಣ ಇನ್ನೊಬ್ಬರಿಗೆ ಕೇಡಾಗಲಿ ಅಂತ ಬಗೆದವನಲ್ಲ. ಅವನದು ಹೂವಿನಂತಹ ಮನಸ್ಸು. ಆದ್ರೆ ಈಗ ನೋಡಿದ್ರೆ ಪ್ರಿಯಾಳನ್ನೆ ಮದುವೆ ಆಗುತ್ತೇನೆ ಅಂತಿದಾನಲ್ಲ. ಹೇಗೆ ಇದು? ಅರ್ಥವೇ ಆಗುತ್ತಿಲ್ಲ. ಖಡಾಖಂಡಿತವಾಗಿ ಬೇಡ ಅಂದು ಅವನ ಮನಸ್ಸನ್ನು ಹೇಗಾದರೂ ನೋಯಿಸಲಿ.
ಒಮ್ಮೆ ಯೋಚಿಸಿ ನೋಡಿದ್ರೆ ಒಳ್ಳೇದು ಕಣೋ ವಿಕ್ಕಿ. ಪ್ರಿಯಾ ಬದುಕೋಲ್ಲ ಅಂತ ನೀನೇ ಹೇಳ್ತಿದೀಯಾ? ಅವಳು ಹೋದ ನಂತರ ಹೇಗಿರ್ತೀಯಾ?
ಅವಳ ನೆನಪಿನೊಂದಿಗೆ ಮಮ್ಮಿ. ಇದರಲ್ಲಿ ಯೋಚಿಸಿ ನೊಡೋದು ಏನೂ ಇಲ್ಲ. ಇದು ಫೈನಲ್ ಡಿಸಿಷನ್. ಪ್ಲೀಸ್ ನನ್ನ ಬದುಕು ನನಗೆ ಬೇಕಾದ ಹಾಗೆ ರೂಪಿಸಿಕೊಳ್ಳೋದಕ್ಕೆ ಒಂದು ಅವಕಾಶ ಕೊಡಿ ಮಮ್ಮಿ. ಅವಳನ್ನು ನಾನು ನಿನಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಈಗ ಅವಳೇ ಇಲ್ಲವಾದ ಮೇಲೆ ನನಗೆ ಮದುವೆಯ ಸಂತೋಷ ಎಲ್ಲಾ ಯಾಕೆ. ಇದೆಲ್ಲ ಅವಳ ಸಂತೋಷಕ್ಕಾಗಿ. ಪ್ಲೀಸ್ ನನ್ನನ್ನ ತಡೆಯಬೇಡಿ.
ಶಾರದಾ ಅಳು ತಡೆಯಲಾರದೇ ಒಳಕ್ಕೆ ಹೋದರು.
ಇದ್ದೊಬ್ಬ ಮಗನೂ ಹೀಗೆ ಆದ್ರೆ ನನ್ನ ಪಾಡೇನು. ಯಜಮಾನರು ಒಪ್ಪುತ್ತಾರಾ?
ದೇವರೆ ಎಂಥ ಪರೀಕ್ಷೆಗೆ ಒಡ್ಡಿದೆಯಲ್ಲ.
***
ರಾತ್ರಿ ವಿಕಾಸ್ಗೆ ನಿದಿರೆ ಹತ್ತಲಿಲ್ಲ. ಕಣ್ಣು ಮುಚ್ಚಿದರೆ ಸಾಕು ಪ್ರಿಯಾ ಬಂದು ನಿಲ್ಲುತ್ತಿದ್ದಳು. ಹೋಗ್ತೀನಿ ಕಣೋ. ಏನೂ ಅನ್ಕೋ ಬೇಡ. ನನಗೂ ನಿನ್ನ ಜೊತೆ ದಿವಿನಾಗಿ ಬದುಕಬೇಕು ಅನ್ನೋ ಆಸೆ ಇತ್ತು. ನಿಜ್ಜ ಹೇಳ್ತೀನಿ, ನನ್ನ ಬದುಕಿನಲ್ಲಿ ನೀನೊಬ್ಬನಿದ್ದರೆ ನನಗೆ ಅಷ್ಟೇ ಸಾಕಿತ್ತು. ಆದ್ರೆ ಏನು ಮಾಡಲಿ. ನಿನ್ನೊಬ್ಬನನ್ನೇ ಬಿಟ್ಟು ಹೋಗುತ್ತಿದ್ದೇನೆ. ಐ ಯಾಮ್ ಸಾರಿ.
ದಿಂಬು ತೋಯ್ಯುವಷ್ಟು ಅತ್ತ.
ಹಳೆಯ ದಿನಗಳು ನೆನಪಾದವು. ಒಂದಿನ ನನಗೆ ವಿಪರೀತ ಜ್ವರ. ಆಸ್ಪತ್ರೆಗೆ ಅಡ್ಮಿಟ್ ಆಗಿದ್ದೆ. ಒಂದೇ ಒಂದು ದಿನ ಕ್ಲಾಸಿಗೆ ಹೋಗಿರಲಿಲ್ಲ. ಎರಡನೇ ದಿನ ಬಂದವಳು ಯಾಪಾಟಿ ಅತ್ತಿದ್ದಳು ಅಂದ್ರೆ ನೀನಿಲ್ದೆ ನಾನು ಸತ್ತೇಹೋಗ್ತೀನಿ ಕಣೋ ಅಂದಿದ್ದಳು. ಇದೆಂಥ ಹುಚ್ಚು ಪ್ರೀತಿ ಅಂದುಕೊಂಡಿದ್ದೆ ನಾನು. ಆಸ್ಪತ್ರೆಯಲ್ಲಿ ನಾನಿದ್ದ ವಾರವೂ ಅಲ್ಲೇ ಇದ್ದಳು. ಇಡೀ ರಾತ್ರಿ ಕಣ್ಣು ಮುಚ್ಚಿದವಳಲ್ಲ. ನಿನ್ನ ಪ್ರೀತಿಗೋಸ್ಕರ ನಾನು ಇಷ್ಟು ಮಾಡದೇ ಹೋದ್ರೆ ಹೇಗೋ?
ಈಗ ಅದೆ ಪ್ರಿಯಾ ಸಾವಿನ ಕುದುರೆ ಏರಿ ಕುಳಿತಿದ್ದಾಳೆ. ತಡೆದು ನಿಲ್ಲಿಸುವವರು ಯಾರು?
ಟೆರೇಸ್ ಮೇಲಕ್ಕೆ ಹೋದ. ಕತ್ತಲು ಹಾಸಿ ಹೊದ್ದುಕೊಂಡು ಮಲಗಿದ್ದಂತಿತ್ತು.
ಅಲ್ಲೇ ಅಂಗಾತ ಮಲಗಿ ಆಕಾಶ ದಿಟ್ಟಿಸಿದ. ಯಾರೋ ಕರೆದಂಗಾಯಿತು. ನಾನೂ ಪ್ರಿಯಾ ಜೊತೆ ಹೋಗಿಬಿಡಲಾ?
ಮೈ ಬೆವೆತಿತು.
***
ಮೂರು ದಿನ ಕಳೆಯುವಷ್ಟರಲ್ಲಿ ವಿಕಾಸ್ ಪ್ರಿಯಾ ಜೊತೆ ಮದುವೆ ಬಗ್ಗೆ ಮಾತಾಡಿದ. ಅವಳು ನಿಜಕ್ಕು ಖಿನ್ನಳಾದಳು. ಹೇಗಿದ್ರೂ ನಾನು ಸಾಯುವವಳು. ನನಗೇಕೆ ಮದುವೆ. ನಾನು ಹೋದ ಮೇಲೆ ನೀನು ಮದುವೆ ಆಗಿ ಸುಖವಾಗಿರಬೇಕು ಅನ್ನೋದೆ ನನ್ನ ಆಸೆ ಅಂದಳು. ಇವನು ಒಪ್ಪಲಿಲ್ಲ. ಮದುವೆ ಅಂತ ಆದ್ರೆ ಅದು ನಿನ್ನನ್ನೆ. ನನ್ನ ಜೊತೆ ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ನಾನು ನಿರೀಕ್ಷಿಸಲಾರೆ. ಪ್ಲೀಸ್ ಇದು ನನ್ನ ಕೊನೆ ಬಯಕೆಯೂ ಹೌದು. ಅದು ನಿನ್ನದೂ ಆಗಲಿ ಬಿಡು ಅಂತ ಪರಿಪರಿಯಾಗಿ ಬೇಡಿದ. ಮೂರು ರಾತ್ರಿ ಮೂರು ಹಗಲು ಒತ್ತಾಯಿಸಿದ ಮೇಲೆ ಪ್ರಿಯಾ ಒಪ್ಪಿಕೊಂಡಳು.
ಆ ದಿನವೂ ಬಂತು.
ಪ್ರಿಯಾಳನ್ನು ಆಕ್ಸಿಜನ್ ಕೊಳವೆಯ ಜೊತೆಗೆ ತುಸು ಸಿಂಗಾರ ಮಾಡಲಾಯಿತು.
ತೀರಾ ಸಿಂಪಲ್ ಆಗಿ ಆಸ್ಪತ್ರೆಯ ಅಂಗಳದಲ್ಲೇ ಪ್ರಿಯಾ ಮತ್ತು ವಿಕಾಸ್ ಮದುವೆ ನಡೆದುಹೋಯಿತು.
ಅದು ಪ್ರಿಯಾಳ ಬದುಕಿನ ಸಂತಸದ ಕ್ಷಣವಾ? ದುಃಖದ ಕ್ಷಣವಾ?
ವಿಕಾಸನ ಬದುಕಿನ ಈ ಕ್ಷಣಕ್ಕೆ ಏನಂತ ಹೆಸರಿಡುವುದು?
ಅದಾದ ಸರಿ ಐದನೇ ರಾತ್ರಿ ಪ್ರಿಯಾಳಿಗೆ ಎಚ್ಚರವಾಯಿತು. ವಿಕಾಸ್ ದಡಬಡಾಯಿಸಿ ಎದ್ದ.
ಉಸಿರಾಡಲು ಕಷ್ಟವಾಗ್ತಿದೆ ಕಣೋ ಅನ್ನೋ ರೀತಿ ಸನ್ನೆ ಮಾಡಿದಳು.
ಎದೆಗೊರಗಿಸಿಕೊಂಡ.
ಒಂದೇ ಬಿಕ್ಕು ಅಷ್ಟೆ.
ಇವನ ಕೈಯೊಳಗಿದ್ದ ಅವಳ ಕೈ ತಣ್ಣಗಾಗತೊಡಗಿತು.