Friday, August 29, 2008

ಹೇಗೆ ಹೇಳಲೀ ಅವನೇ ಬಂದಿದ್ದು ಅಂತ...




ಅವತ್ತು ಮನೆ ಬಾಗಿಲು ತೆಗೆದಾಗ
ಮನೆಯ ಒಳಗಡೆ ನಾನಿರಲಿಲ್ಲ

ಒಳಗೆ ಬಂದವನಿಗೆ ಬಾಯಾರಿಕೆ
ಎಂಥದೋ ಚಡಪಡಿಕೆ
ನೋಡಿದರೆ ಕಳ್ಳನಂತೆ, ಮಳ್ಳನಂತೆ
ಗುಮ್ಮನ ಗುಸಕ್
ಏನೋ ಕದಿಯಲು ಬಂದಿದ್ದಾನೆಯೇ?
ಕದ್ದುಬಿಟ್ಟರೇನು ಗತಿ ಮಗಳ ಹೃದಯ ?

ಅಮ್ಮ ಅದ್ದರಿಸಿದ್ದಾಳೆ
ಹಚಾ ಹಚಾ
ಸುಮ್ಮನೆ ಹಾಗೆ ಯಾರ ಮನೆಯಂಗಳಕ್ಕೂ
ಬರಬಾರದು!
ಮನದಂಗಳಕ್ಕೂ!

ಆದರೂ
ಅವನ ಕಣ್ಣಿದೆಯಲ್ಲೇ
ನೀಲಿ ಬಾನನ್ನೆಲ್ಲ ತಂದು ಎರಕ ಹುಯ್ದಂತೆ
ಹುಬ್ಬೋ ಕಡುಕಪ್ಪು ಕಾಮನ ಬಿಲ್ಲು
ಎದೆ ಸೆಟೆದು ನಿಂತರೆ ವೀರಬಾಹು

ಎಲ್ಲಾ ಸರಿ
ಸರಿಯಿಲ್ಲ ಅವನು ಇಲ್ಲಿಗೆ ಬಂದದ್ದು
***
ನಾನು ಹೋಗುವಷ್ಟರಲ್ಲಿ
ಅವನು ಹೋಗಿಯಾಗಿತ್ತು

ಅಮ್ಮ ಕೇಳಿದಳು
ಬಂದವನು ಯಾರೆ?

ಯಾರೆಂದು ಹೇಳಲಿ?
ಯಾರೋ ಕಳ್ಳನಿರಬೇಕು ಬಿಡು!

ಕದಿಯುವುದಕ್ಕೆ ನಮ್ಮಲ್ಲೇನಿದೆ
ನನ್ನ ಹೃದಯವೊಂದನ್ನು ಬಿಟ್ಟು

ಆದರೂ
ಖಾಲಿ ಎದೆಯ ಒಳಗೊಂದು
ಕನಸು ಜೀಕುತ್ತಿದೆ
ಮನಸ ದಾರಿಯಲ್ಲಿ
ಮಲ್ಲಿಗೆ ಅರಳಿದೆ

ಹಾರಿ ಬಿಡಲಾ?

ಬಾಗಿಲಲ್ಲಿ ಅವನ ಕೈಯ್ಯ ಮಿದುವಿತ್ತು
ಮೈಯ್ಯ ಘಮವಿತ್ತು
ಬಿಟ್ಟು ಹೋದ ಉಸಿರಿನ
ಪಸೆ ಇತ್ತು

ಅಮ್ಮನಿಗೋ ಆತಂಕ
ಹೇಗೆ ಹೇಳಲೀ ಅವನೇ ಬಂದಿದ್ದು ಅಂತ!

Thursday, August 28, 2008

ಆಳೆತ್ತರಕ್ಕೆ ನಿಂತಿದ್ದ ಅಪ್ಪನ ಕಣ್ಣಲ್ಲೂ ಅಂತದೇ ದುಃಖವಿತ್ತಾ?

ಅವನು ರಿಚ್ rich ಅಪ್ಪ.ಮೂರು ತಲೆಮಾರು ತಿಂದರೂ ಮುಗಿಯದ ಆಸ್ತಿ ಅವನ ಬಳಿಯಿತ್ತು. ಕಾರು, ಬಂಗಲೇ, ಎಸ್ಟೇಟ್. ಹೇಳಬೇಕೆಂದ್ರೆ ಯಾವುದೇ ಹೊಸ ಕಾರು ಬಂದರೂ ಅದರ ಮಾರನೇ ದಿನವೇ ಇವರ ಮನೆಯ ಮುಂದೆ ನಿಂತಿರುತ್ತಿತ್ತು, ಅಷ್ಟರಮಟ್ಟಿಗೆ ಈ ಅಪ್ಪ ಕರೋಡ್ಪತಿ.ಇಂಥ ಕರೋಡ್ಪತಿಗೆ ತೇಜ ಅನ್ನೋ ಒಬ್ಬನೇ ಸುಪುತ್ರ. ಇಂಜಿನಿಯರಿಂಗ್ ಓದುತ್ತಿದ್ದ. ಈ ಬಾರಿ ಕೊನೆ ಸೆಮಿಸ್ಟರ್ನಲ್ಲಿ ಹೈಯೆಸ್ಟ್ ಮಾಕ್ಸರ್್ ತಗೊಂಡೇ ತಗೋತೀನಿ. ಕಸಮ್ ಡ್ಯಾಡ್ . ಆದ್ರೆ ನನ್ನ ಬತರ್್ಡೇಗೆ ನನಗೊಂದು ಸ್ಕೋಡ ಕಾರು ಬೇಕೇ ಬೇಕು ಅಂತ ಅಪ್ಪನಿಗೆ ದುಂಬಾಲು ಬಿದ್ದಿದ್ದ. ಒಬ್ಬನೇ ಮಗ, ಇರುವ ಆಸ್ತಿಯನ್ನೆಲ್ಲ ಯಾರಿಗೇ ಕೊಡೋದು? ಮಜ್ಜವಾಗಿರಲಿ ನನ್ನ ಮಗ ಅನ್ನೋದು ಅಪ್ಪನ ಆಸೆ. ಹಾಗಿದ್ದೂ ತುಂಬಾ ಸಲುಗೆ ಬಿಟ್ಟರೆ ಎಲ್ಲಿ ಮಗ ದಾರಿ ತಪ್ಪಿ ಹೋದಾನೋ ಅನ್ನುವ ಆತಂಕವೂ ಒಳಗೊಳಗೇ ಕಾಡುತ್ತಿತ್ತು. ಮಗ ಸ್ಕೋಡ ಕೇಳಿದನಲ್ಲ ಆವಾಗ, ನೋಡೋಣ ಮೈ ಸನ್ ಅಂತ ಬೇಕಂತಲೇ ಮಾತು ತೇಲಿಸಿಬಿಟ್ಟಿದ್ದ. ಅಪ್ಪ ನನಗೆ ಸ್ಕೋಡಾ ಕಾರು ಕೊಡಿಸದೇ ಇರೋದಿಲ್ಲ. ಯಾಕೆಂದ್ರೆ ನಾನಂದ್ರೆ ಅಪ್ಪನಿಗೆ ಅಷ್ಟಿಷ್ಟ. ಇಷ್ಟಕ್ಕೂ ಅವರು ನಾನು ಏನು ಕೇಳಿದೆನೋ ಅವನ್ನೆಲ್ಲ ಕೊಡಿಸಿಯೇ ಇದಾರೆ! ಇದನ್ನೂ ಹಾಗೇ, ಖಂಡಿತಾ ಕೊಡಸ್ತಾರೆ! ನನ್ನ ಬತರ್್ಡೇ ಪಾಟರ್ಿ ಮುಗಿಸಿಕೊಂಡು ಮೈ ಸ್ವೀಟ್ ಹಾಟರ್್ ಋತುವನ್ನು ಕರೆದುಕೊಂಡು ಜುಮ್ಮಂತ ಒಂದು ರೌಂಡ್ ಹೋಗಿ ಬಂದುಬಿಡಬೇಕು. ಸಾಧ್ಯವಾದರೇ ಅಪ್ಪನಿಗೆ ಸುಳ್ಳು ಹೇಳಿ ಅವಳನ್ನು ಬೇಕಲ್ ಫೋಟರ್್ಗೆ ಕರ್ಕೊಂಡು ಹೋಗಬೇಕು. ಅಲ್ಲಿ ಕೋಟೆ ಮೇಲೆ ನಿತ್ಕೊಂಡು ಅವಳಿಗೊಂದು ಕೆಂಪು ಗುಲಾಬಿ ಕೊಡ್ತಾ ಕೊಡ್ತಾ ಛಕ್ಕಂತ ಒಂದು ಮುತ್ತು ಕೊಟ್ಟುಬಿಡಬೇಕು. ಹೇಗೆ ರಿಯಾಕ್ಟ್ ಮಾಡ್ತಾಳೋ ಏನೋ? ಬಟ್ ನಾನು ಮಾಡೇ ಮಾಡ್ತೀನಿ. ಅದಕ್ಕಿಂತ ಥ್ರಿಲ್ಲಿಂಗ್ ಆದ ವಿಷ್ಯ ಇನ್ನೊಂದುಂಟೆ. ದೇವರೇ ಅಪ್ಪ ಕಾರು ಕೊಡಿಸಲಿ.... ಋತುಗೆ ಪಪ್ಪಿ ಕೊಡುವ ಭಾಗ್ಯ ನನ್ನದಾಗಲೀ...ಹೀಗೇನೋ ಹಂಬಲಿಸಿದ. ಆ ದಿನ, ಬತರ್್ಡೇ ದಿನವೂ ಬಂತು. ಹೊಸ ಬಟ್ಟೆ, ಹೊಸ ಕಾರು, ಋತುಗೆ ಕೊಡುವ ಮುತ್ತು ನೆನಸಿಕೊಂಡೇ ತೇಜು ರೋಮಾಂಚಿತನಾಗಿದ್ದ. ಇಂಜಿನಿಯರಿಂಗ್ ಅನ್ನು ಹೈಯಸ್ಟ್ ಮಾಕ್ಸರ್್ ತೆಗೆದು ಪಾಸು ಮಾಡಿದ್ದ. ಅಪ್ಪ ಖುಷಿ ಖುಷಿಯಾಗಿದ್ದರು. ಕಾರು ಗ್ಯಾರಂಟಿ ಬಿಡು ಅಂದುಕೊಂಡ. ಬೆಳಿಗ್ಗೆ ಎದ್ದವನಿಗೆ ಅಪ್ಪನದೇ ಮೊದಲ ವಿಷ್. ಹ್ಯಾಪಿ ಬತರ್್ ಡೇ ಟು ಯು ಮೈ ಸನ್. ಜೊತೆಗೆ ಕೈಯಲ್ಲೊಂದು ಕೆಂಪು ಕೆಂಪಾದ ಕಾಗದದಿಂದ ವ್ರಾಪ್ ಮಾಡಿದ ಗಿಫ್ಟ್. ಎಂದಿನಂತೆ ಒಂದು ಸಿಹಿ ಮುತ್ತು. ತೇಜುನ ತಲೆಯ ತುಂಬಾ ಸ್ಕೋಡಾ ಕಾರೇ! ಖುಷಿ ಖುಷಿಯಿಂದ ಗಿಫ್ಟ್ಪ್ಯಾಕ್ ಓಪನ್ ಮಾಡಿದರೆ ಒಳಗೇನಿದೆ? ಫಳ ಫಳ ಹೊಳೆಯುವ ಭಗವದ್ಗೀತೆ ಪುಸ್ತಕ. ತೇಜುಗೆ ಶಾಕ್. ವಾಟ್ ಈಸ್ ದಿಸ್ ಡ್ಯಾಡ್. ನಿಮ್ಮಿಂದ ನಾನು ಈ ಭಗವದ್ಗೀತೆ ಎಕ್ಸ್ಪೆಕ್ಟ್ ಮಾಡಿರಲಿಲ್ಲ. ಐ ಹೇಟ್ ಯು ಡ್ಯಾಡಿ. ನಾನೀಗಲೇ ಮನೆ ಬಿಟ್ಟು ಹೋಗ್ತಾ ಇದೀನಿ ಅಂತ ಅಪ್ಪನ ಒಂದು ಮಾತಿಗೂ ಕಾಯದೇ ಕಣ್ಣೀರಾಕಿಕೊಂಡು ಹೊರಟುಬಿಟ್ಟಿದ್ದ. ಹೋದವನು ಕೆಲವೇ ವರ್ಷಗಳಲ್ಲಿ ಮುಂಬೈನ ದೊಡ್ಡ ಬಿಜಿನೆಸ್ ಮ್ಯಾನ್ ಎನಿಸಿಕೊಂಡ. ತೇಜು ಈಗ ಬಿಜಿ ಬಿಜಿ ಬಿಜಿ. ಹೀಗಿದ್ದವನಿಗ,ೆ ಎಷ್ಟೋ ವರ್ಷಗಳ ನಂತರ ಅಪ್ಪನನ್ನ ನೋಡಬೇಕು ಅಂತ ಅನಿಸಿದೆ. ಹೆಂಡತಿ, ಮಕ್ಕಳು, ಕೆಲಸ, ಆಸ್ತಿ ಮಾಡುವುದರಲ್ಲೇ ವಯಸ್ಸಾದ ಅಪ್ಪನನ್ನು ಮರೆತುಬಿಟ್ಟೆನಲ್ಲ ಅಂತ ಕಾಡುವುದಕ್ಕೆ ಶುರುವಾಗಿದೆ. ತಕ್ಷಣ ಹೊರಡಬೇಕು ಅಂತ ಅಂದುಕೊಂಡವನ ಮೊಬೈಲ್ಗೊಂದು ಮೆಸೇಜು. ನಿನ್ನ ಅಪ್ಪ ತೀರಿಕೊಂಡು ತುಂಬಾ ದಿನವಾಯಿತು. ನೀನು ಬಂದು ಇಲ್ಲಿನ ಆಸ್ತಿಪಾಸ್ತಿಗೊಂದು ವ್ಯವಸ್ಥೆ ಮಾಡು ಅಂತ. ಅರ್ರೆ ಅಪ್ಪ ತೀರಿಕೊಂಡರೇ? ಛೇ ನನಗೆ ಗೊತ್ತೇ ಆಗಲಿಲ್ಲವಲ್ಲ. ಅಪ್ಪ ನನ್ನನ್ನು ಎಷ್ಟು ಮಿಸ್ ಮಾಡಿಕೊಂಡರೋ ಏನೋ! ಅವರಿಗೆ ನನ್ನ ಮೇಲೆ ಅತೀವ ಪ್ರೀತಿ ಇತ್ತು. ಅಮ್ಮ ಸತ್ತ ಮೇಲೆ ಮಲತಾಯಿ ಬಂದ್ರೆ ನನ್ನ ಮಗನನ್ನು ಹೇಗೆ ನೋಡಿಕೊಳ್ಳುತ್ತಾಳೋ ಅನ್ನುವ ಆತಂಕದಿಂದ ಎರಡನೇ ಮದುವೆಯನ್ನೂ ಆಗದೇ ಒಬ್ಬಂಟಿಯಾಗಿ ಇಡೀ ಜೀವನ ಕಳೆದುಬಿಟ್ಟರಲ್ಲ! ಅಪ್ಪನನ್ನು ನಾನು ಕೊನೆ ಗಳಿಗೆಯಲ್ಲಿಯಾದರೂ ಸರಿಯಾಗಿ ನೋಡಿಕೊಳ್ಳಬೇಕಿತ್ತು. ಛೇ ನಾನು ತಪ್ಪು ಮಾಡಿಬಿಟ್ಟೆ! ಕಣ್ಣು ಒದ್ದೆ ಒದ್ದೆ. ಮನಸ್ಸಿನ ತುಂಬಾ ರೋದನ. ಅಪ್ಪನಿಗಾಗಿ ಹಂಬಲಿಸಿದ. ತಕ್ಷಣ ಊರಿಗೆ ಹೊರಟ. ಅಲ್ಲಿ ಮನೆಯ ಹೊಸ್ತಿಲು ತುಳಿದರೇ ಅಪ್ಪನದೇ ನೆನಪು. ಅಪ್ಪನ ತೊಡೆಯ ಮೇಲೆ ಕುಳಿತು ಕೆನ್ನೆ ಗಿಂಡುತಿದ್ದದ್ದು, ಹೆಗಲ ಮೇಲೆ ಕೂರಿಸಿಕೊಂಡು ನಿಂತಿದ್ದು, ಬೆನ್ನ ಮೇಲೆ ಉಪ್ಪು ಮೂಟೆ ಆಡಿಸಿದ್ದು, ಬೆಲೂನ್ ಕಟ್ಟಿ ಆಕಾಶಕ್ಕೆ ಆರಿಸಿದ್ದು, ಕೊನೆಯ ಬತರ್್ಡೇವರೆಗಿನ ಒಟ್ಟು ಇಪ್ಪತ್ತೈದು ಬತರ್್ಡೇ ಫೋಟೋಗಳು. ಅದರಲ್ಲಿ ಮಿಸ್ ಮಾಡದೇ ಅಪ್ಪ ಕೆನ್ನೆಗಿಡುತ್ತಿದ್ದ ಸಿಹಿಸಿಹಿ ಮುತ್ತು....ಯಾಕೋ ದುಃಖ ತಡೆಯಲಾಗಲಿಲ್ಲ. ಅಲ್ಲೇ ಹೊಸ್ತಿಲ ಬಳಿ ಕುಳಿತು ಬಿಕ್ಕತೊಡಗಿದ. ಆದರೆ ಎಲ್ಲಿ ಶಮನವಾದೀತು? ಯಾರೋ ಬಂದು, ನಿಮ್ಮಪ್ಪ ಒಂದಿಷ್ಟು ಇಂಪಾಟರ್ೆಂಟ್ ಅನ್ನುವ ವಸ್ತುಗಳನ್ನೆಲ್ಲ ಒಂದು ರೂಮಿನಲ್ಲಿಟ್ಟುಹೋಗಿದ್ದಾರೆ. ನೋಡಿ ಅಂದ್ರು. ಮೆಲ್ಲಗೆ ರೂಮಿನ ಬಾಗಿಲು ತೆಗೆದು ಒಳ ಅಡಿ ಇಟ್ಟರೆ ಅಷ್ಟೆಲ್ಲ ಇಂಪಾಟರ್ೆಂಟ್ ವಸ್ತುಗಳ ನಡುವೆ ಅದೇ ಕೆಂಪು ಕೆಂಪಾದ ವ್ರಾಪರ್ನ ಗಿಫ್ಟ್ಪ್ಯಾಕ್. ಮೆಲ್ಲಗೆ ಅದರ ಮೈ ದಡವಿ ಒಳಗಿನ ಭಗವದ್ಗೀತೆ ತೆಗೆದರೆ ಠಣ್ ಅಂತ ಕೆಳಗೆ ಏನೋ ಬಿದ್ದಂಗಾಯಿತು. ಏನು ಅಂತ ನೋಡಿದರೆ ಸ್ಕೋಡ ಕಾರಿನ ಕೀ. ಅದರ ಟ್ಯಾಗ್ನಲ್ಲಿ ನಮೂದಾದ ತನ್ನ ಇಪ್ಪತ್ತೈದನೆಯ ಬತರ್್ಡೇ ಡೇಟ್ ಮತ್ತು ವಿಷಸ್. ಅಂದ್ರೆ ಅಪ್ಪ ನನಗೆ ಕೊಡಬೇಕೆಂದಿದ್ದ ಕಾರ್ ಕೀಯನ್ನ ಈ ಪುಸ್ತಕದೊಳಗಿಟ್ಟು ಕೊಟ್ಟರಾ? ದೇವರೆ ನನಗೇನಾಗಿತ್ತು ಅವತ್ತು? ಕ್ಷಣ ಪುಸ್ತಕ ತೆಗೆದು ನೋಡಿದ್ದರೂ ನನ್ನ ಅಪ್ಪ ನನ್ನ ಬಳಿಯೇ ಇರುತ್ತಿದ್ರಲ್ಲ! ಆ ಒಂದು ತಾಳ್ಮೆಯನ್ನೂ ಯಾಕೆ ಕಿತ್ತುಕೊಂಡಿಬಿಟ್ಟೆ ದೇವರೇ? ಕಣ್ಣು ತಿರ್ಗಾ ಮಂಜಾದವು. ನಿಲ್ಲಲಾಗದೇ ಹೊರಕ್ಕೆ ಬಂದು ಕುಳಿತವನ ಎದೆಯ ತುಂಬಾ ದುಃಖದ ಹೊಳೆ. ಎದುರಿನ ಫೋಟೊದಲ್ಲಿ ಆಳೆತ್ತರಕ್ಕೆ ನಿಂತಿದ್ದ ಅಪ್ಪನ ಕಣ್ಣಲ್ಲೂ ಅಂತದೇ ದುಃಖವಿತ್ತಾ? ಗೊತ್ತಿಲ್ಲ!