Thursday, October 7, 2010

ಹೇಗೆ ಮರೆಯೋದು ಹೇಳು ಬದುಕಿಗೆ ಕೊಳ್ಳಿ ಇಟ್ಟವನನ್ನ

ಇಷ್ಟಕ್ಕೂ ಪ್ರೀತಿ ಸೋತು ಹೋಗುವುದು ಯಾವಾಗ?
ಯಾವ ಪ್ರಿತಿಯನ್ನ.. ಯಾರ ಪ್ರೀತಿಯನ್ನ ಎದೆಗಪ್ಪಿಕೊಂಡು... ಕೈ ಕೈ ಹಿಡಿದುಕೊಂಡು ತಿರುಗಾಡುತ್ತೇವೆಯೋ ಅದೇ ಪ್ರೀತಿ ಒಂದೊಂದ್ಸಲ ಥತ್ ತೇರಿಕೆ ಅನ್ನಿಸಿಬಿಡುತ್ತದೆ. ಇಷ್ಟೇನಾ ಈ ಪ್ರೀತಿಯ ಅರ್ಥ ಅನಿಸಿಬಿಡುತ್ತದೆ. ಹಾಗಂತ ಪ್ರೀತಿ ಸೋತಿತು ಅಂತಲ್ಲ. ಕೆಲವು ಸಲ ನಾವೇ ಪ್ರಿತಿಗೆ ಅರ್ಹರಾಗಿರೋಲ್ಲ ಅಷ್ಟೆ.
ಹೇಳಬೇಕೆಂದೆರೆ, ನಾನು ನೀನು ಜನ್ಮ ಇರೋ ತನಕ ಪ್ರೀತಿಸೋಣ ಅನ್ನೋದು ಆ ಕ್ಷಣದ ಭಾವುಕತೆಯಾಗಿರುತ್ತದೆ.ಇಂಥ ಮಾತುಗಳು ಕೆಲವೊಮ್ಮೆ ಇಷ್ಟಪಟ್ಟವರನ್ನ ಒಲಿಸಿಕೊಳ್ಳಲು ಒಂದು ಅಸ್ತ್ರವಾಗಬಹುದು. ಇದು ಪ್ರೀತಿಯಲ್ಲ... ಯಾವಾಗ ಪ್ರ್ರೀತಿ ನಾಟಕವಾಗುತ್ತದೋ... ಒಂದು ಅಸ್ತ್ರವಾಗುತ್ತದೋ ಅಲ್ಲಿ ಪ್ರೀತಿಗೆ ಬೆಲೆ ಇರೋದಿಲ್ಲ. ಆಡಿದ ನಾಟಕಕ್ಕೆ ಅರ್ಥ ಇರೋದಿಲ್ಲ.
ಇತ್ತೀಚೆಗೆ ನನಗೊಂದು ಹುಡುಗಿ ಪೋನ್ ಮಾಡಿದ್ದಳು. ಹೆಸರು ಲಕ್ಷ್ಮೀ. ಆಕೆ ಹುಡುಗನೊಬ್ಬನನ್ನು ಇಷ್ಟ ಪಟ್ಟು ಪ್ರೀತಿಸುತ್ತಿದ್ದಳಂತೆ. ಪ್ರೀತಿ ಒಂದು ಹಂತಕ್ಕೆ ಬಂದಾಗ ಮನೆಯವರನ್ನೆಲ್ಲ ದಿಕ್ಕರಿಸಿ ಮದುವೆ ಆಗಿದ್ದರು. ಇಷ್ಟು ಸಾಕು ನಮ್ಮ ಪ್ರೀತಿ ಗೆದ್ದಿತು ಅಂತ ಬೆಂಗಳೂರಿಗೆ ಬಂದು ಸಂಸಾರ ಹೂಡುವಷ್ಟರಲಿ ಪ್ರೀತಿಗೆ ಹುಳು ಬಿದ್ದಿತ್ತು. ಬದುಕಿನ ರಿಯಾಲಿಟಿ ಎದ್ದು ಕುಳಿತಿತ್ತು. ಪರಸ್ಫರ ಈಗೊ ಇಬ್ಬರ ಕಣ್ಣಲ್ಲಿ ಕುಣಿಯುತ್ತಿತ್ತು. ನಾವಿಬ್ರೂ ತುಂಬಾನೆ ಪ್ರೀತಿಸುತ್ತಿದ್ವಿ. ಎರಡು ಕುಟುಂಬವನ್ನ ಎದುರುಹಾಕಿಕೊಂಡು ಹೊರಗೆ ಬಂದು ಮದುವೆ ಕೂಡ ಆದ್ವಿ. ಇನ್ನೂ ಒಂದು ವರ್ಷ ತುಂಬಿಲ್ಲ. ಆಗಲೇ ಈಗ ಅದರ ಕಷ್ಟ ಗೊತ್ತಾಗ್ತಿದೆ. ನನ್ನ ಪತಿ ಅನಿಸಿಕೊಂಡ ಭೂಪ ಕೆಲಸ ಬಿಟ್ಟು ಮನೇಲಿ ಕುಳಿತಿದ್ದಾನೆ. ಅವನಿಗೆ ವಿಪರೀತ ಇನ್ಫೀರಿಯಾರಿಟಿ. ಡೌಟು. ಯಾರೊ ನಿನ್ನನ್ನ ಹಿಂಬಾಲಿಸ್ತಿದಾನೆ ಅಂತ ನನ್ನ ಕೈಲಿದ್ದ ಕೆಲಸವನ್ನೂ ಬಿಡಿಸಿಬಿಟ್ಟ.ಇಬ್ಬರೂ ಮನೆಯಲ್ಲಿ ಕುಳಿತಿದ್ದೇವೆ. ನನ್ನ ಮಾತನ್ನ ಅವನು ಕೇಳುತ್ತಿಲ್ಲ... ಅವನ ಮಾತನ್ನೂ ನಾನು ಕೇಳುತ್ತಿಲ್ಲ. ಏನು ಮಾಡೋದು ಅಂತ ಗೊತ್ತಾಗುತ್ತಿಲ್ಲ. ಬದುಕು ಇಲ್ಲಿಗೆ ಸಾಕು ಅನಿಸಿಬಿಟ್ಟಿದೆ. ಈ ಕೆಟ್ಟ ಪ್ರೀತೀನ ನಂಬಿಕೊಂಡು ನನ್ನೆಲ್ಲ ಸಂಬಂಧಗಳನ್ನ ಕಳೆದುಕೊಂಡು ಬಿಟ್ಟೆ ಅಂತ ಕಣ್ಣೀರಾದಳು ಲಕ್ಷ್ಮಿ.
ಇಂಥ ಸೋತ ಪ್ರೀತಿಗಳೆಷ್ಟೋ.... ಒಡೆದು ಹೋದ ಮನಸುಗಳೆಷ್ಟೋ... ಹಾಗಂತ ಪ್ರೀತಿಸುವುದು ನಿಂತುಹೋಯ್ತಾ? ನೋ. ಆದ್ರೆ ಜನ ಯಾಕೋ ಪ್ರೀತಿಯನ್ನ ನಂಬಿಕೊಂಡಷ್ಟು ಸಂಖ್ಯೆಯಲ್ಲಿ ಬದುಕಿನ ಸತ್ಯವನ್ನ ನಂಬಿಕೊಳ್ಳುವುದಿಲ್ಲ. ಹಸಿವು ಪ್ರೀತಿಗಿಂತ ದೊಡ್ಡದಾಗಿ ಕಂಡಾಗ ಪ್ರೀತಿ ಸತ್ತು ಹೋಗುತ್ತದೆ. ಅವಮಾನಗಳು ಹೆಡೆ ಎತ್ತುತ್ತವೆ. ನಂಬಿಕೆ ಗೋತಾ ಹೊಡೆಯುತ್ತದೆ. ಅವನು ಕೆಲಸಕ್ಕೆ ಹೋಗುತ್ತಿಲ್ಲ... ಇವಳನ್ನೂ ಅನುಮಾನದಿಂದ ಬಿಡಿಸಿದ. ಹೊಟ್ಟೆಗೇನು ತಣ್ಣೀರು ಬಟ್ಟೆ ಹಾಕಿಕೊಂಡು ಇರಲಿಕ್ಕಾಗುತ್ತದಾ? ನಿಜ್ಜ ಹೇಳ್ತೀನಿ, ಹಸಿವಿನ ಗರ್ಭದಲ್ಲಿ ಪ್ರೀತಿ ಹುಟ್ಟಲಾರದು. ಆದ್ರೆ ಇಂತ ಮನೆಬಿಟ್ಟು ಓಡಿ ಬರುವ ಪ್ರೇಮಿಗಳಿಗೆ ಬದುಕಿನ ಕಟು ಸತ್ಯ ಗೊತ್ತಾಗುವುದು ಯಾವಾಗ?
ಇಲ್ಲಿ ಗಮನಿಸಬೇಕಾದ್ದು ಪ್ರೀತಿಸುತ್ತೇವೆ ಅಂತ ಹೊರಟವರ ಜಿದ್ದು. ಪ್ರೀತಿ ಸಿಕ್ತಲ್ಲ ಇನ್ನೆಲ್ಲ ಸಿಕ್ಕಿತು ಬಿಡು ಅಂತ ಅಂದುಕೊಂಡುಬಿಡುವ ಮೂರ್ಖತನ. ಯಾವ ಪ್ರೀತಿಯೂ ಹಸಿವಿಗೆ ಮದ್ದಲ್ಲ ಅನ್ನುವುದು ಗೊತ್ತಿದ್ದರೆ ಚೆನ್ನ. ಬದುಕಿನ ರಿಯಾಲಿಟಿ ಅರಿತುಕೊಳ್ಳದ ಹೊರತು ಎಷ್ಟೇ ಪ್ರೀತಿ ಇದ್ದರೂ ವೇಸ್ಟ್.
ನನ್ನ ಗೆಳೆಯನೊಬ್ಬನಿದ್ದ ಜಗ್ಗಿ ಅಂತ. ಊರಿನಲ್ಲಿ ಆತ ಲೇಡಿಸ್ ಟೈಲರ್. ಪಕ್ಕಾ ಹುಂಬ ಮನಸ್ಸಿನವ. ಪ್ರೀತಿ ಮಾಡೊದು ಅವನಿಗೊಂದು ಖಯಾಲಿ. ಬಟ್ಟೆ ಹೊಲಿಸಿಕೊಳ್ಳಲು ಬರುವ ಬಹುತೇಕ ಹುಡುಗೀರ ಜೊತೆ ಅವರಿಗೆ ಇಷ್ಟವಾಗುವ ಹಾಗೆ ಮಾತಾಡುತ್ತಿದ್ದ. ಜೋಕ್ ಮಾಡುತ್ತಿದ್ದ. ನಗಿಸುತ್ತಿದ್ದ. ಕೀಟಲೇ ಮಾಡುತ್ತಿದ್ದ. ಕೆಲವು ಚೆಲುವೆಯರಿಗೆ ಜಗ್ಗಿ ಪಕ್ಕನೆ ಇಷ್ಟ ಕೂಡ ಆಗಿಬಿಡುತ್ತಿದ್ದ. ನಾವೆಲ್ಲ ಅವನ ಹೀರೋಯಿಸಂ ನೋಡಿ ಬೆಕ್ಕಸ ಬೆರಗಾಗುತ್ತಿದ್ದೆವು. ಹುಡುಗೀರ ಮುಂದೆ ಅಷ್ಟೆಲ್ಲ ಶಾಣ್ಯಾತನ ತೋರಿಸಿ ಅವರನ್ನ ಬುಟ್ಟಿಗೆ ಹಾಕಿಕೊಳ್ಳುವ ಅವನ ಕಲೆ ನಮಗೆ ಮಿರಾಕಲ್ ಥರ ಕಾಣಿಸುತ್ತಿತ್ತು. ಅವನಿಗೋ ಊರ ತುಂಬಾ ಪ್ರೇಯಸಿಯರಿದ್ದರು.ವಾರದಲ್ಲಿ ಒಂದೆರಡು ದಿನ ಒಬ್ಬೊಬ್ಬರ ಜೊತೆ ಹೊರಗೆಲ್ಲೋ ಹೋಗಿ ಸುತ್ತಾಡಿಕೊಂಡು ಬರುತ್ತಿದ್ದ. ನಮಗೋ ಒಳಗೊಳಗೇ ಹೊಟ್ಟೆಕಿಚ್ಚು.
ಮೇಲಿಂದ ಮೇಲೆ ಅವನ ಹುಡಗೀರ ಆಪಾದನೆಗಳು ಕೇಳಿಬಂದವು. ಅದನ್ನೆಲ್ಲ ಹೇಗೋ ಮ್ಯಾನೇಜ್ ಮಾಡಿಕೊಳ್ಳುತ್ತಿದ್ದ ಜಗ್ಗಿ, ಒಂದ್ಸಲ ವಿಪರೀತ ಯಡವಟ್ಟು ಮಾಡಿಕೊಂಡುಬಿಟ್ಟಿದ್ದ. ಹುಡುಗಿಯೊಬ್ಬಳನ್ನು ಪ್ರೀತಿಸುವ ಅವನ ಇನ್ನೊಂದು ನಾಟಕ ಆರಂಭವಾಗಿತ್ತು. ಆ ಪ್ರೀತಿ ಕೂಡ ಹುಟ್ಟಿಕೊಂಡಿದ್ದೇ ವಿಚಿತ್ರ. ಜಗ್ಗಿಯ ಅಣ್ಣನಿಗೆ ಹೆಣ್ಣು ನೋಡಲು ಹೋದಾಗ ಆ ಮದುವೆ ಕುದುರಿರಲಿಲ್ಲ. ಆದ್ರೆ ಜಗ್ಗಿ ಹುಡುಗಿಯ ತಂಗಿಯನ್ನ ಒಲಿಸಿಕೊಂಡುಬಿಟ್ಟಿದ್ದ. ನೋಡ ನೋಡುತ್ತಿದ್ದಂತೆ ಅವನ ಓಡಾಟ ಜೋರಾಗತೊಡಗಿತು. ಟೈಲರ್ ಅಂಗಡಿ ಬಾಗಿಲು ತೆಗೆಯುವುದೇ ಅಪರೂಪವಾಗಿತ್ತು. ಬಟ್ಟೆ ಹೊಲಿಯಲು ಕೊಟ್ಟಿದ್ದ ಮಹಿಳೆಯರು ಬೈದುಕೊಂಡು ತಿರುಗಾಡತೊಡಗಿದರು. ನಾವು ಕೂಡ ಆ ಅಡ್ಡ ಬದಲಾಯಿಸಿದೆವು.
ಹೀಗಿರುವಾಗಲೇ ಜಗ್ಗಿ ಒಂದಿನ ಎಲ್ಲಿಂದಲೋ ಫೋನ್ ಮಾಡಿದ್ದ. ನನಗೊಂದು ಹೆಲ್ಪ್ ಆಗಬೇಕು ರವೀ ಅಂತ. ಏನು ಅಂದಿದ್ದೆ. ನಾನು ಒಂದು ಹುಡುಗಿಯನ್ನ ಕರೆದುಕೊಂಡು ಬಂದುಬಿಟ್ಟಿದ್ದೇನೆ. ಏನು ಮಾಡುವುದೋ ಗೊತ್ತಾಗುತ್ತಿಲ್ಲ ಅಂದ.
ಯಾರು ಆ ಹುಡುಗಿ? ಅಂದೆ.
ಅದೇ ನಾನು ಇತ್ತೀಚೆಗೆ ಪ್ರೀತಿಸುತ್ತಿದ್ದೆನಲ್ಲ ಅದೇ ಹುಡುಗಿ ಅಂದ.
ಇನ್ನಾರಾದ್ರೂ ಹೊಸಬರು ಸಿಕ್ಕಿರಬೇಕು ಅಂದುಕೊಂಡ ನಾನು ಯಾರು ಗೊತ್ತಾಗ್ತಿಲ್ಲ ಕಣೋ ಅಂದೆ.
ಪ್ರಣತಿ ಕಣೋ ಅಂದ.
ನನಗೆ ನಿಜಕ್ಕೂ ಶಾಕ್ ಆಗಿದ್ದು ಆಗಲೇ... ಯಾಕೆಂದ್ರೆ ಆ ಹುಡುಗಿ ಸೌಮ್ಯ ಸ್ವಭಾವದವಳು. ಮರ್ಯಾದಸ್ತ ಮನೆತನದವಳು. ಅಂಥವಳು ಇವನ ಬಲೆಗೆ ಬಿದ್ದುಬಿಟ್ಟಳು ಅಂದ್ರೆ ಇವನು ಎಂಥ ಗಾಳ ಹಾಕಿರಬೇಡ...?
ಬೆಂಗಳೂರಿಗೆ ಬಂದು ಮೂರು ದಿನ ಆಯ್ತು. ಯಾರದ್ದೋ ಸಂಬಂಧಿಕರ ಮನೆಯಲ್ಲಿದ್ದೇವೆ. ಯಾಕೋ ಭಯ ಆಗ್ತ್ತಿದೆ. ಏನ್ಮಾಡ್ಲೀ ಅಂತ ಕಣ್ಣೀರಾಕಿದ್ದ.
ಇಂಥವನಿಗೆ ಏನೂ ಮಾಡಬಾರದು ಅಂತ ನನಗಾಗಲೇ ಗೊತ್ತಾಗಿಹೋಗಿತ್ತು ಹಾಗಾಗಿ ಆಯ್ತು ನೋಡೋಣ ಅಂತ ಸುಮ್ಮನಾದೆ. ವಾರ ಕಳೆಯುವಷ್ಟರಲ್ಲಿ ಆತ ನಮ್ಮ ಊರಿಗೆ ಅವಳ ಜೊತೆ ಬಂದಿದ್ದ. ಮಗಳು ಪ್ರಣತಿ ನಾಪತ್ತೆ ಆಗಿದ್ದು ಈ ಟೈಲರ್ ಜೊತೆಗೇ ಅಂತ ಗೊತ್ತಾದ ಆಕೆಯ ಮನೆಯವರು ವ್ಯಗ್ರರಾಗಿದ್ದರು. ಸಿಗಲಿ ಕತ್ತರಿಸಿ ಹಾಕುತ್ತೇವೆ ಅಂತ ಅಬ್ಬರಿಸುತ್ತಿದ್ದರು. ಕತ್ತರಿಸಿ ಹಾಕಿದ್ರೆ ಗತಿ ಏನು ಅನ್ನೋದು ನಮ್ಮೆಲ್ಲರ ಆತಂಕವೂ ಆಗಿತ್ತು.
ಪ್ರಣತಿ ಒಂದು ರಾತ್ರಿ ಮನೆ ತಲುಪಿದ್ದಳು. ಆದ್ರೆ ಅವಳನ್ನು ಬಿಟ್ಟ ಜಗ್ಗಿ ಅಬ್ಸ್ಕ್ಯಾಂಡ್. ಎಲ್ಲಿ ಹೋದ? ಆಕೆಯ ಮನೆಯವರು ಹುಡುಕತೊಡಗಿದರು. ನಾವು ಪ್ರಣತಿಯನ್ನ ಭೇಟಿ ಆಗಿ ಏನೆಲ್ಲ ನಡೀತು ಅಂತ ತಿಳಿದುಕೊಂಡೆವು. ನಿನ್ನನ್ನ ಮದುವೆ ಆಗುತ್ತೇನೆ ಅಂತ ನಂಬಿಸಿ ಜಗ್ಗಿ ಪ್ರಣತಿಯನ್ನ ಕರೆದುಕೊಂಡು ಹೋಗಿದ್ದನಂತೆ. ಹುಡುಗಿಗೆ ಸತ್ಯ ಅರ್ಥವಾಗಿತ್ತು. ನನಗೆ ಜಗ್ಗಿಯ ಜೊತೆ ಇಷ್ಟವಿಲ್ಲ ಅಂತ ಗೋಳಾಡುತ್ತಿದ್ದಳು. ಅವಳಿಗೆ ಅವನ ಇನ್ನೊಂದು ಮುಖ ಆಗಲೇ ತಿಳಿದುಹೋಗಿತ್ತು. ಆದ್ರೆ ಏನೂ ಮಾಡುವ ಹಾಗಿರಲಿಲ್ಲ. ಊರ ತುಂಬಾ ಇವರಿಬ್ಬರ ವಿಷಯವೇ ಗುಲ್ಲು ಗುಲ್ಲು.
ಪ್ರಣತಿಯಂತೂ ವಾರದಲ್ಲೇ ಸೊರಗಿಹೋಗಿದ್ದಳು. ಎರಡು ರಾತ್ರಿ ಏನೂ ತಿಂದಿರಲಿಲ್ಲವಂತೆ. ನನಗೆ ಈ ಪ್ರೀತೀನು ಬೇಡ ಏನೂ ಬೇಡ. ಊರಿಗೆ ಕರೆದುಕೊಂಡು ಹೋಗಿ ಬಿಟ್ಟುಬಿಡು ಅಂತ ಹಟ ಹಿಡಿದಿದ್ದಳಂತೆ. ಆದ್ರೆ ಜಗ್ಗಿ ಅಷ್ಟು ಸುಲಭವಾಗಿ ಬಿಡುವವನಲ್ಲ.
ಒಂದಿನ ಜಗ್ಗಿ ಊರಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ. ಮೊದಲೇ ಹೇಳಿದಂಗೆ ಹುಂಬು ಧೈರ್ಯ ಅವನದ್ದು. ಪ್ರಣತಿಯ ಮನೆಯವರು ಜಗ್ಗಿಯನ್ನ ಹಿಡಿದು ಯಾವ ಪರಿ ತದುಕಿದ್ದರೆಂದ್ರೆ ಕೊಂದೇ ಹಾಕಿಬಿಡುತ್ತಾರೆನೋ ಅಂತ ನಾವೆಲ್ಲ ಗಾಬರಿ ಆಗಿದ್ದೆವು. ಇಬ್ಬರನ್ನೂ ಕೂರಿಸಿಕೊಂಡು ಮದುವೆ ಆಗ್ತಿರಾ ಅಂತ ಕೇಳಿದ್ರೆ ಪ್ರಣತಿ ಬಿಲ್ಕುಲ್ ನಾನು ಮದುವೆ ಆಗೊಲ್ಲ ಅಂದುಬಿಟ್ಟಿದ್ದಳು. ಜಗ್ಗಿಗೂ ಅವಳು ಬೇಕಾಗಿರಲಿಲ್ಲ. ಇವಳಿಲ್ಲದಿದ್ರೆ ಇನೊಬ್ಬಳು ಅನ್ನುವ ಆಸಾಮಿ ಆತ. ಪ್ರಣತಿ ಹೋದರೇನು ...?
ಆ ಕೇಸ್ ಅಲ್ಲಿಗೆ ಹೇಗೋ ಸ್ತಭ್ದವಾಯಿತು.
ಇದಾದ ಮೇಲೆ ಒಂದೆರಡು ತಿಂಗಳು ಸರಿಯಾಗಿ ಬಾಗಿಲು ತೆಗೆದ ಜಗ್ಗಿ. ಆದ್ರೆ ನಾಯಿ ಬಾಲ ನೆಟ್ಟಗಾದೀತೆ. ಮತ್ತೆ ಅವನ ಬೇಟೆ ಶುರುವಾಗಿತ್ತು. ಪ್ರಣತಿಯನ್ನ ಅವಳ ಮನೆಯವರು ತರಾತುರಿಯಲ್ಲಿ ಮದುವೆ ಮಾಡಿ ಬೆಂಗಳೂರಿಗೆ ಹುಡುಗನ ಮನೆಗೆ ಕಳುಹಿಸಿಕೊಟ್ಟುಬಿಟ್ಟಿದ್ದರು. ಅವಳು ಒಮ್ಮೆ ಊರಿಗೆ ಬಂದಾಗ ನನಗೆ ಸಿಕ್ಕಿದ್ದಳು. ಎಲ್ಲೋ ಜಗ್ಗಿ ಅಂದಿದ್ದಳು. ನೀನು ಅವನನ್ನ ಇನ್ನೂ ಮರೆತಿಲ್ವಾ... ಅಂದೆ. ಬದುಕಿಗೆ ಕೊಳ್ಳಿ ಇಟ್ಟವನನ್ನ ಹೇಗೋ ಮರೆಯೋದು ಅಂದಿದ್ದಳು.
ಹೇಗಿದೆ ಹೊಸ ಜೀವನ ಅಂದೆ. ನಿನ್ನ ಗೆಳೆಯನ ಪ್ರೀತಿ ನಂಬಿಕೊಂಡಿದ್ರೆ ನಾನು ಹಸಿವಿನಿಂದ... ಕೀಳರಿಮೆಯಿಂದ.. ದುಃಖದಿಂದ ಸತ್ತು ಹೋಗ್ತಿದ್ದೆ ಕಣೋ. ದೇವರು ಡೊಡ್ಡವನು. ಆದ್ರೆ ಆ ನೋವಿನ್ನೂ ಎದೆಯಲ್ಲಿ ಜೀಕುತ್ತಿದೆ. ಅದನ್ನ ಸಮಾಧಿ ಮಾಡಲುಪ್ರಯತ್ನಿಸುತ್ತಿದ್ದೇನೆ ಅಂದಿದ್ದಳು. ಕಣ್ಣು ಒದ್ದೆ ಒದ್ದೆ.
***
ಯಾಕೋ ಲಕ್ಷ್ಮಿಯಂಥವರ ಫೋನ್ ಕರೆಗಳು ಬಂದಾಗಲೆಲ್ಲ ಪ್ರೀತಿಯ ಇನ್ನೊಂದು ಮುಖ ಕೈ ಹಿಡಿದು ಜಗ್ಗಿದಂತಾಗುತ್ತದೆ.
ಟೇಕ್ ಕೇರ್.

7 comments:

chand said...

.....ಆದ್ರೆ ಜನ ಯಾಕೋ ಪ್ರೀತಿಯನ್ನ ನಂಬಿಕೊಂಡಷ್ಟು ಸಂಖ್ಯೆಯಲ್ಲಿ ಬದುಕಿನ ಸತ್ಯವನ್ನ ನಂಬಿಕೊಳ್ಳುವುದಿಲ್ಲ. ಹಸಿವು ಪ್ರೀತಿಗಿಂತ ದೊಡ್ಡದಾಗಿ ಕಂಡಾಗ ಪ್ರೀತಿ ಸತ್ತು ಹೋಗುತ್ತದೆ. ಅವಮಾನಗಳು ಹೆಡೆ ಎತ್ತುತ್ತವೆ. ನಂಬಿಕೆ ಗೋತಾ ಹೊಡೆಯುತ್ತದೆ....
ಚೆಂದ ಇದೆ ರವಿ. ಇಷ್ಟವಾಯ್ತು.. ನೀವು ಮತ್ತೆ ಮತ್ತೆ ಬರೆಯುತ್ತಿರಿ. ಆರು ತಿಂಗಳಿಗೊಮ್ಮೆ ಅಲ್ಲ!!!

ಭಾಶೇ said...

very touching!

Love is the most complicated thing to understand and to live with. but we cannot live without it also!

It can turn any ones life upside down anytime!

Very nice write up!

Anonymous said...

love can make man crazy. but hungry can not tolerate much longer. it'll teach mind to earn to eat first and then rest of the things. thanks for publishing article after long time. i'll post it to my near n dear who do not have the experience of love and hungry, so that, they may come to know whats the first preference.

ಎ.ಎಂ. ಹನೀಫ್ ಅನಿಲಕಟ್ಟೆ said...

ಹದಿಹರೆಯದ ಪ್ರೀತಿ ಬದುಕಲ್ಲ. ಪೂಳ್ಳು ಮಾತುಗಳಿಗೆ ಬಳಿ ಬೀಳೋ ಮುಗ್ಧ ಹುದ್ಗಿರನ್ನೂ ಎಚ್ಚರಿಸೋ ಬರಹ ಇನ್ನೂ ಬರಲಿ

Basavaraj.S.Pushpakanda said...

ಎಷ್ಟು ಚೆನ್ನಾಗಿ ಬರಿತೀರ ರವಿ. ಕೆಲವೊಮ್ಮೆ ಪ್ರೀತ್ಸೋಕೆ ಇದೇ ಬದುಕು ಅಡ್ಡಗಾಲು ಹಾಕೋದು ಸತ್ಯ . ಎಷ್ಟೋ ಹುಡುಗರು ಹುಡುಗಿರನ್ನ ಪ್ರೀತ್ಸೋಕು ಮುಂಚೆ ಬದುಕಿನ ಬಗ್ಗೆ ಯೋಚನೆ ಮಡಿ ಹೇಳೋದನ್ನೇ ಬಿಟ್ಬಿಡ್ತಾರೆ. ಮನಿಸಿಗೆ ತುಂಬಾನೇ ಇಷ್ಟ ಆಯಿತು .ತುಂಬಾ intense ಆಗಿ, ಭಾವುಕರಾಗಿ ಬರಿತೀರ.

ದೀಪಸ್ಮಿತಾ said...

ಮೇಲೊಬ್ಬರು ಬರೆದಂತೆ ಪ್ರೀತಿ ಎನ್ನುವುದು ಅತಿ ಸಂಕೀರ್ಣ ಎನ್ನುವುದು ಸುಳ್ಳಲ್ಲ. ಹೃದಯಸ್ಪರ್ಶಿ ಲೇಖನ

ಡಾ. ಚಂದ್ರಿಕಾ ಹೆಗಡೆ said...

"priti maaye hushaaru" pritiya banna hachchikondiddaarooo ilvee nijavaada color... test maadi... pritisi enu .. gadibidi illadeye!
olle baraha...