ಅದು ಹೊಳೆ ದಂಡೆ.
ಕಾಲು ಇಳಿ ಬಿಟ್ಟುಕೊಂಡು ಕುಳಿತ ಇಬ್ಬನಿಯ ಕಣ್ಣಲ್ಲಿ ಕೇವಲ ಆಕಾಶ್.ನಿನ್ನೆಯಷ್ಟೇ ಕೆನೆ ಹಳದಿ ಬಣ್ಣದ ಚೂಡಿ ಕೊಡಿಸಿ... ಅದರ ಮೇಲಿನ ಬಿಳಿ ಹೂಗಳನ್ನ ಎಣಿಸುತ್ತಾ ಕುಳಿತಿದ್ದ."ಯಾಕೋ ಹೂ ಎಣಿಸ್ತಿದೀಯಾ?" ಅಂದಿದ್ದಕ್ಕೆ... "ಅವನ್ನೆಲ್ಲ ಎಣಿಸಿ, ಅಷ್ಟೇ ಹೂ ತಂದು ನಿನ್ನ ಮುಡಿಗೇರಿಸಬೇಕು ಅನ್ನೋ ಆಸೆ" ಅಂತ ನಗಾಡಿದ್ದ."ಲೂಸ್" ಅಂತ ಬೈದು ಸಣ್ಣಗೆ ಅವನ ಕೆನ್ನೆ ಗಿಂಡಿದ್ದಳು.ಇವನು ಹಾಗೆ ಗಿಂಡಿಸಿಕೊಳ್ಳುವುದಕ್ಕೇ ಹಾಗೆ ಎಣಿಸಿದ್ದು ಅಂತ ಅವಳಿಗೂ ಗೊತ್ತಿತ್ತು.
ಗಿಂಡುವ ಮತ್ತು ಗಿಂಡಿಸಿಕೊಳ್ಳುವ ಆಸೆ...ಇಬ್ಬರಿಗೂ ಇದ್ದದ್ದರಿಂದ ತರ್ಲೆ ಮಾಡಿದಾಗಲೆಲ್ಲ ಯಾಕೆ ಅಂತ ಮಾತ್ರ ಇಬ್ಬರೂ ಕೇಳುತ್ತಿರಲಿಲ್ಲ. ಸಿಟ್ಟಾಗುತ್ತಿರಲಿಲ್ಲ.
ಇವತ್ತೂ ಅವನು ಏನಾದ್ರು ತರ್ಲೆ ಮಾಡ್ತಾನೆ ಅಂತಲೇ ಇಬ್ಬನಿಗೆ ಗೊತ್ತಿತ್ತು. ನಾನು ಗಿಂಡ್ತೀನಿ ಅಂತಲೂ ಗೊತ್ತಿದ್ದರಿಂದ ಒಳಗೊಳಗೇ ಖುಷಿ ಅನುಭವಿಸುತ್ತಾ ಹೊಳೆ ದಂಡೆಯ ಅಂಚಿನಲ್ಲಿ ಕುಳಿತು ಜುಳು ಜುಳು ಹರಿವ ನೀರಿನಲ್ಲಿ ಕಾಲು ಬಿಸಾಕಿ ಕುಳಿತಿದ್ದಳು.
ನದಿಗೆ ಯಾರ ಕಾಲಾದರೇನು? ಇವಳ ಹಾಲುಬಿಳುಪಿನ ಕಾಲಿಗೆ ಒತ್ತಿಕೊಂಡು ಹರಿಯತೊಡಗಿತು.
ಹಿಂದಿನಿಂದ ಮೆಲ್ಲಗೆ ಬಂದ ಆಕಾಶ್ ಇಬ್ಬನಿಯ ಕಣ್ಣು ಮುಚ್ಚಿದ.
"ಲೂಸ್ ಗೊತ್ತು ಬಿಡೋ" ಅಂದಳು.
ಅವನು ಬಿಡಲಿಲ್ಲ."ಬಿಡ್ತೀಯೋ ಇಲ್ವೋ.. . . ಲೂಸ್! ಅಂತ ಒಮ್ಮೆ ಕೈ ಜಾಡಿಸಿ ಮಾಡ್ತೀನಿ ಇರು ಎಂದು ತಿರುಗಿದಳು. ಅಷ್ಟೆ!ಆಕಾಶ್ ತಪ್ಪಿಸಿಕೊಳ್ಳುವ ಭರದಲ್ಲಿ ಹಿಂದಕ್ಕೆ ಜಿಗಿದ.
ಆದರೆ ಮುಂದಕ್ಕೆ ಮುಗ್ಗರಿಸಿ ಬಿದ್ದ.
ಬಿದ್ದವನನ್ನು ಹೊಳೆ ಬಗಲಲ್ಲಿ ಹಾಕಿಕೊಂಡು ಗೊತ್ತಿಲ್ಲದಂತೆ ಸುಮ್ಮನೆ ಹರಿಯತೊಡಗಿತು.
ಇಬ್ಬನಿ ನಿಂತಲ್ಲೇ ಕಂಪಿಸಿದಳು. ಮಾತು ಸತ್ತು ಕಣ್ಣ ತುಂಬ ಹುಚ್ಚುಕೋಡಿ ನೀರು.
"ಆಕಾಶ್... ನಾನೂ ಬರ್ತೀದೀನಿ..." ಕಿರುಚಿದಳು.
ಅಷ್ಟರಲ್ಲಿ, ಪಕ್ಕದಲ್ಲೇ ಲವ್ ಅಂಡ್ ಅಫೇರ್ಸ್ ಪುಸ್ತಕ ಓದುತ್ತ ಮಲಗಿದ್ದ ಗಂಡ ಯಾಕೋ ಬ್ಲಡೀ ಬಿಚ್ಚ್ ಅಂತ ಬೈದು ಪುಸ್ತಕ ಒಗೆದ.
No comments:
Post a Comment