ಹೇಗೆ ಸಾಯಲಿ ಮತ್ತೆ?
ನಿನಗಾಗಿ
ಆ ತಿರುವಿನಲ್ಲಿ ಕಾದೂ ಕಾದೂ
ಸತ್ತಿದ್ದು
ಕುಡಿ ನೋಟಕ್ಕಾಗಿ ಸತ್ತಿದ್ದು
ಪಿಸು ಮಾತಿಗಾಗಿ ಸತ್ತಿದ್ದು
ತಿರುಗಿ ನೋಡಬಾರದಾಂತ ಸತ್ತಿದ್ದು
ಸಿಗುತ್ತಾಳೋ ಇಲ್ಲವೋ ಅಂತ ಚಡಪಡಿಸಿ
ಸತ್ತಿದ್ದು
ರಾತ್ರಿ ನಕ್ಷತ್ರ ಎಣಿಸಿ ಸತ್ತಿದ್ದು
ಸತ್ತ ಸಂಜೆಗಳಲ್ಲಿ ಮತ್ತೆ ಸತ್ತಿದ್ದು
ನಿನ್ನ ನೆನಪುಗಳಿಗೆ ನೇಣುಹಾಕಿಕೊಂಡಿದ್ದು
ಹೇಳು
ಹೇಗೆ ಸಾಯಲೀ ಮತ್ತೆ?
ನೀನು ಸಿಕ್ಕಿದ ಮೇಲೂ
ಸಾಯುವುದು ನಿಲ್ಲಲಿಲ್ಲ
ಮಾತಲ್ಲಿ ಕೊಂದೆ
ಮೌನದಲ್ಲಿ ಕೊಂದೆ
ಕಣ್ಣಲ್ಲಿ ಕೊಂದೆ
ಬೆರಳ ತುದಿಯಲ್ಲಿ ಕೊಂದೆ
ಅನುಮಾನದಿ ಕೊಂದೆ
ಬಿಗುಮಾನದಿ ಕೊಂದೆ
ಕೊಂದೆ
ಎದೆಯ ಒಳಗಿನಭಾವ ಎಳೆದೆಳೆದು ಕೊಂದೆ
ಕನಸುಗಳನ್ನೆಲ್ಲ ಬರಸೆಳೆದು ಕೊಂದೆ
ನೀಲಾಕಾಶದ ತಳದಲಿ ನಿಂದವನ
ನಿಂದಿಸಿ ಕೊಂದೆ
ಹೇಳು
ಹೇಗೆ ಸಾಯಲಿ ಮತ್ತೆ?
ನಿನ್ನದೊಂದು ಕಣ್ಣ ಕುಡಿ
ನನ್ನ ಎದೆಯ ಕಡಲಲಿ ಜೀಕುವ ತನಕ
ನಾನು ಸತ್ತವನಲ್ಲ
ಪ್ರೀತಿಸುವುದೆಂದ್ರೆ
ಸಾಯುವುದಾ?
ಸಾಯಿಸುವುದಾ?