ಒಂದು ವಿನಂತಿಯ ಹೊರತು ನಾನು ನಿನ್ನನ್ನೇನೂ ಕೇಳುವುದಿಲ್ಲಅಂದ ಹುಡುಗ.
ಹುಡುಗಿ ನಕ್ಕಳು.
ನಂತರ ಮಳೆ ಬಂತು.
ಮಳೆ ಬಿಸಿಲು ಬಂತು.
ಮುಗಿಲು ಶುಭ್ರವಾಯ್ತು.
ನೆಲ ಮಾತ್ರ ರಕ್ತಸಿಕ್ತವಾಗಿತ್ತು.
ಇದು ನಾನು ಭಾನುವಾರ ಗೆಳೆಯ ನವಿಲುಗರಿ ಸೋಮುವಿಗೆ ಕಳಿಸಿದ್ದ ಮೆಸ್ಸೇಜ್. ಅವತ್ತು ಹಾಸನದಿಂದ ಹಿಂದಿರುಗುತ್ತಿದ್ದೆ. ಯಾಕೋ ಏನೋ ಸುಮ್ಮನೆ ಕೂರಲು ಆಗದೇ ಒದ್ದಾಡುತ್ತಿದ್ದೆ. ಕುಣಿಗಲ್ ತಲಪುವಷ್ಟರಲ್ಲಿ ಚೂರೇ ಚೂರು ಮಳೆ ಬಂದು ಹಿತವೆನಿಸಿತು. ಕಿಟಕಿಯಲ್ಲಿ ತಲೆ ತೂರಿಸಿ ಆಹಾ ಅನ್ನಲು ಹೋದೆ. ಡ್ರೈವರ್ ರೀ ಸ್ವಾಮಿ ತಲೆ ಒಳಕ್ಕಾಕಳ್ರೀ, ಇಲ್ಲ ಅಂದ್ರೆ ತಲೇನೇ ಇರಲ್ಲ ಅಂದ. ಸರಕ್ಕನೆ ತಲೆ ಒಳಕ್ಕೆಳೆದುಕೊಂಡು ಕುಳಿತೆ. ಹೇಳಬೇಕೆಂದ್ರೆ ನನಗೆ ಈ ಪ್ರಯಾಣ ಯಾವಾಗಲೂ ಬೋರೇ! ಒಂಥರ ಆಯಾಸ ತಂದುಬಿಡುತ್ತೆ. ತೀರಾ ಹಸಿರು ಉಕ್ಕುವ ಪ್ರದೇಶಕ್ಕೆ ಹೋಗಿ ಬಂದರೆ ಮಾತ್ರ ಮನಸ್ಸು ಸ್ವಲ್ಪ ಉಲ್ಲಾಸದಿಂದಿರುತ್ತೇನೋ! ಆದ್ರೆ ಸುಮ್ಮನೆ ಯಾರದೋ ಮನೆಗೆ ಹೋಗಿ ತಿಂದುಂಡು ಮಲಗಿ ಮತ್ತೆ ಎದ್ದು ಹೊರಡುವುದಿದೆಯಲ್ಲ ಅದು ನಿಜಕ್ಕೂ ಬೇಜಾರಿನ ಕೆಲಸ. ನಾನು ಮಾಡಿದ್ದೂ ಅದನ್ನೇ! ಹಾಗಾಗಿ ಮನಸ್ಸಿನಲ್ಲಿ ಲವಲವಿಕೆಯೇ ಇರಲಿಲ್ಲ.
ಆಗ ಹೊಳೆದಿದ್ದೇ ಈ ಸಾಲುಗಳು.ತಕ್ಷಣ ನವಿಲುಗರಿ ಸೋಮುವಿಗೆ ಕಳಿಸಿಬಿಟ್ಟೆ. ಅವರಿಗೆ ಅದೇನು ಹಿಡಿಸಿತೋ ಮೂರು ದಿನ ಆದಮೇಲೆ ಒಂದು ಮೆಸ್ಸೇಜ್ ಬಿಟ್ಟರು. ನನಗೆ ನಿಜಕ್ಕೂ ಇದು ಹುಚ್ಚು ಹಿಡಿಸಿಬಿಟ್ಟಿದೆ. ಕೊನೆ ಸಾಲು ಮಾತ್ರ ಜಪ್ಪಯ್ಯ ಅಂದರೂ ಅರ್ಥ ಆಗಲಿಲ್ಲ. ಅದರಲ್ಲಿ ಏನೋ ಇದೆ ಅನಿಸುತ್ತಿದೆ. ಅದೇನು ಅಂತ ಹೇಳು ಗುರುವೇ ಅಂತ. ನಾನು ಅದುವರೆಗೂ ಆ ಮೆಸ್ಸೇಜ್ ಕಳಿಸಿ ಮರೆತು ಸುಮ್ಮನಿದ್ದವ. ಆದ್ರೆ ಯಾವಾಗ ಈ ನವಿಲುಗರಿ ಮತ್ತೆ ಕಳಿಸಿದರೋ ಮತ್ತೆ ಮತ್ತೆ ಓದಿಕೊಂಡೆ. ಹೌದಲ್ಲ ಇದರಲ್ಲೇನೋ ಇದೆ ಅನಿಸಿಬಿಟ್ಟಿತು. ಏನದು?ನಾನು ಹೇಳುವುದಕ್ಕಿಂತ ಅದನ್ನು ನೀವು ಹೇಳಿದ್ರೇ ಚೆನ್ನ. ಏನನ್ನಿಸಿತು ಅಂತ ಒಂದು ಮೆಸ್ಸೇಜ್ ಬಿಡಿ.
ಮನಸ್ಸು ಖುಲ್ಲಂ ಖುಲ್ಲ ಖುಷಿಯಾಗುತ್ತದೆ.