ಅವತ್ತು ಭಾನುವಾರ. ಬೆಳಿಗ್ಗೆ ಎದ್ದವನಿಗೆ ಯಾಕೋ ನಂದಿಬೆಟ್ಟಕ್ಕೆ ಹೋಗಬೇಕೆನಿಸಿತು. ಕೆಲವೊಮ್ಮೆ ಮನಸು ಸಣ್ಣ ಮಕ್ಕಳ ಥರ ಹಾಗೇ ಹಟ ಹಿಡಿದುಬಿಡುತ್ತದೆ. ಅಲ್ಲಿ ನೋಡುವುದು ಏನೂ ಇಲ್ಲ ಅಂತ ಗೊತ್ತಿದ್ದರೂ ಅವಾಗೀವಾಗೊಮ್ಮೆ ಹೋಗಬೇಕೆನಿಸುತ್ತದೆ. ಅದಕ್ಕೆ ಕಾರಣ ಸಿಂಪಲ್. ಮನಸ್ಸು ರಿಲ್ಯಾಕ್ಸ್ ಆಗಲು ಬಯಸುತ್ತಿದೆ ಅಂತ. ಸರಿ, ಗೆಳೆಯ ಸದಾನಂದನಿಗೆ ಫೋನ್ ಮಾಡಿದರೆ ತಟ್ಟೆ ಇಡ್ಲಿ, ವಡೆ ತೆಗೆದು ಇಟ್ಟಿರ್ತೀನಿ ಬಾ ಅಂದ. ಭೇಸ್ ಆಯ್ತಲ್ಲ ಬಿಡು ಅಂದುಕೊಂಡವನೆ ಎಲ್ಲರನ್ನೂ ಗುಂಪು ಕಟ್ಟಿಕೊಂಡು ಹೊರಡುವಷ್ಟರಲ್ಲಿ ಬೆಳಿಗ್ಗೆ ಒಂಬತ್ತೂವರೆ. ಮಟ ಮಟ ಮಧ್ಯಾಹ್ನಕ್ಕೆಲ್ಲ ನಂದಿಯ ನೆತ್ತಿ ಮೇಲಿದ್ದೆವು.ನನಗೆ ಈ ನಂದಿ ಬೆಟ್ಟ ನೋಡಿದಾಗಲೆಲ್ಲ ಈ ಟೀಪು ಎಂಥ ಕಿಲಾಡಿ ಅನ್ನಿಸಿಬಿಡುತ್ತದೆ. ಇಷ್ಟು ಎತ್ತರದ ಪ್ಲೇಸ್ನಲ್ಲಿ ಪುಟ್ಟದೊಂದು ಅರಮನೆ ಕಟ್ಟಿಕೊಂಡು ಅವಾಗವಾಗ ಬಂದು ತಂಗಿದರೆ ಎಂಥ ಮನಸ್ಸಾದರೂ ಮುದಗೊಳ್ಳದೇ ಇರುತ್ತದೆಯೇ? ಸಮ್ಮರ್ನಲ್ಲಿ ಕೂಡ ಇಲ್ಲಿನ ಹವೆ ಕೂಲ್ ಕೂಲ್. ಹಾಗಾಗೆ ಶೋಕಿಲಾಲರಾದ ಬ್ರಿಟೀಷರಿಗೂ ಇದು ಅಚ್ಚುಮೆಚ್ಚಿನ ಸ್ಥಳವೇ. ಅದು ಬಿಟ್ಟರೇ ಟಿಪು ಡ್ರಾಪ್ನ ಕಲ್ಪನೆಯೇ ಭಯಾನಕ. ಈಗ ಅಲ್ಲಿ ಸೂಯಿಸೈಡ್ ಮಾಡ್ಕೊಳ್ಳೋರು ಜಾಸ್ತಿ ಆಗಿರೋದ್ರಿಂದ ಅದನ್ನು ಸೂಯಿಸೈಡ್ ಸ್ಪಾಟ್ ಅಂತ ಕರೀಬಹುದೇನೋ! ಯಾಕೆಂದ್ರೆ ನಾನು ಗಮನಿಸಿದ ಹಾಗೆ ಅಲ್ಲಿ ಬೀಳಬೇಕೆನ್ನುವವರಿಗೆ ಯಾವ ಅಡೆತಡೆಯೂ ಇಲ್ಲ. ಎಲ್ಲಿಂದ ಬಿದ್ದರೂ ಸಾಯಬಹುದು.ನಮ್ಮಲ್ಲಿನ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಈ ಪ್ರವಾಸೋದ್ಯಮ ಅನ್ನೋ ಕಾನ್ಸೆಪ್ಟೇ ಸರಿಯಾಗಿ ಗೊತ್ತಿಲ್ಲ. ಯಾವ ಟೂರಿಸ್ಟ್ ಸ್ಥಳಕ್ಕೋದರೂ ಅಲ್ಲಿ ಒಂದಾದರೂ ಮೂಲಭೂತ ಸೌಲಭ್ಯ ಇದೆಯಾ? ಕಳ್ಳಕಾಕರು, ಸುಲಿಗೆಕೋರರು, ಗೈಡ್ ಮಾಡ್ತೀವಿ ಅಂತ ತಲೆತಿನ್ನೋರು ಸಿಗ್ತಾರೆಯೇ ಹೊರತು ಒಬ್ಬನೇ ಒಬ್ಬ ಒಳ್ಳೇ ಗೈಡ್ ಸಿಗೋಲ್ಲ. ಅಲ್ರಿ ಪಕ್ಕದ ಸ್ಟೇಟ್ ಕೇರಳದವರು ಅಷ್ಟು ಚೆನ್ನಾಗಿ ಪ್ರವಾಸೋದ್ಯಮವನ್ನ ಡೆವೆಲಪ್ ಮಾಡಿ ಹಣ ಬಾಚ್ಕೋತಾ ಇದ್ರೆ ನಮ್ಮವರು ಏನೂ ಗೆಣಸು ಕೆರೀತಾ ಇದಾರಾ ಇಲ್ಲ ಬೂಸಾ ತಿಂತಾ ಇದಾರಾ? ಎಷ್ಟು ಸ್ಮಾರಕಗಳಿಲ್ಲ, ಎಷ್ಟು ಕೋಟೆಗಳಿಲ್ಲ, ಎಷ್ಟು ಪುರಾತನ ದೇಗುಲಗಳಿಲ್ಲ ನಮ್ಮಲ್ಲಿ. ಎಲ್ಲಾ ಕುಸಿದುಬೀಳುತ್ತಿವೆ. ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ. ಹಿಂದಿನ ತಲೆಮಾರಿನವರು ಕಟ್ಟಿಕೊಟ್ಟ ಒಂದು ಕಲಾಕೃತಿಯನ್ನ ಉಳಿಸಿಕೊಳ್ಳಲಿಕ್ಕೆ ಆಗಲಿಲ್ಲ ಅಂದ ಮೇಲೆ ಸುಮ್ಮನೆ ಟೆಕ್ನಾಲಜಿ ಇಟ್ಟುಕೊಂಡು ನೆಕ್ಕೋದಕ್ಕೆ ಆಗುತ್ತಾ? ಪೀಸಾ ಗೋಪುರ ವಾಲುತ್ತಿದೆ ಅಂದಾಗ ಅದು ಬೀಳದೆ ಇರಲಿ ಅಂತ ಇರಬರೋ ತಲೆ ಎಲ್ಲಾ ಉಪಯೋಗಿಸಿ ಅದಕ್ಕೊಂದು ಸಲ್ಯೂಷನ್ ಕಂಡುಹಿಡಿದರಲ್ಲ ಅದು ಕೆಲಸ ಅಂದ್ರೆ. ನಮ್ಮವರಾಗಿದ್ರೆ ಅದು ಬೀಳುತ್ತಿದೆ ಅಂತ ತಾವೇ ಬೀಳಿಸಿ ಎಮ್ಮೆ ಕಟ್ಟಾಕೋದಕ್ಕೆ ಬಳಸಿಕೊಳ್ಳುತ್ತಿದ್ರು.ಪ್ರವಾಸೋದ್ಯಮ ಅಂದ್ರೆ ಸುಮ್ಮನೆ ಜನಾನ ಬನ್ನಿ ಅನ್ನೋದಲ್ಲ. ಒಂದು ಸ್ಥಳದಲ್ಲಿರುವ ಆಕರ್ಷಣೆಯನ್ನ ಮತ್ತಷ್ಟು ಆಕರ್ಷಣೀಯವಾಗಿ ಮಾಡಬೇಕಾಗುತ್ತದೆ. ಅದು ಬಿಟ್ಟು ಬನ್ನಿ ಬನ್ನಿ ಅಂದ್ರೆ ಯಾರು ಬಂದಾರು? ಈ ಜಗತ್ತಿನಲ್ಲಿ ಮಾಡೋದಕ್ಕೆ ಕೆಲಸ ಇಲ್ಲ ಅಂತ ಯಾರೂ ಎಲ್ಲಿಗೂ ಬರೋಲ್ಲ ಅನ್ನುವುದು ಸಂಬಂಧಪಟ್ಟವರಿಗೆ ಗೊತ್ತಿದ್ದರೆ ಚೆನ್ನಯಾಕೋ ಇದನ್ನೆಲ್ಲ ಹೇಳಬೇಕೆನಿಸಿತು. ಬಹಳ ದುಃಖದ ಸಂಗತಿ ಅಂದ್ರೆ ನಮ್ಮನ್ನು ಯಾವ್ಯಾವೋ ಪುಂಡ ಪೋಕರಿಗಳೆಲ್ಲ ಆಳುವವರಾಗಿಬಿಟ್ಟಿದ್ದು. ಅವರಿಗೆ ಹಣ ಮಾಡುವುದಕ್ಕಷ್ಟೇ ಗೊತ್ತು. ನಾವು ಕೊಟ್ಟ ಹಣದಲ್ಲಿ ಅವನು ಲಕ್ಷುರಿ ಜೀವನ ಮಾಡುತ್ತಾನೆ. ಕಾಲೇಜ್ ಕಟ್ಟಿಸುತ್ತಾನೆ. ಇಂಡಸ್ಟ್ರೀ ಓಪನ್ ಮಾಡುತ್ತಾನೆ. ಹೊಟೇಲ್ ಕಟ್ಟಿ ಕನಸಿಗೆ ಬಣ್ಣ ಹಚ್ಚುತ್ತಾನೆ. ಇದೆಲ್ಲ ಏನು ಅವನ ಅಪ್ಪನ ಮನೆಯಿಂದ ತಂದ ದುಡ್ಡಾ? ನಮ್ಮ ಹೊಟ್ಟೆ ಮೇಲೆ ಹೊಡೆದು ಅವನು ಮಜಬೂತಾಗಿ ಬೆಳೆದಿರುತ್ತಾನೆ. ಅದೇ ಒಬ್ಬ ಬಡವ ನನಗೆ ಸಣ್ಣದೊಂದು ಸೂರಿಲ್ಲ ಸ್ವಾಮಿ ಅಂದ್ರೆ ಅವನನ್ನು ಕ್ಯಾರೇ ಎನ್ನುವವರಿಲ್ಲ. ಆದ್ರೆ ಅದೇ ಒಬ್ಬ ಪುಢಾರಿ ಎಕರೆಗಟ್ಟಲೇ ಭೂಮಿ ಲೂಟಿ ಹೊಡೆದು ಬಂಗಲೇ ಮೇಲೆ ಬಂಗಲೇ ಕಟ್ಟಿಸಿಕೊಳ್ಳುತ್ತಾನೆೆ. ಹೊಟ್ಟೆ ಹುರಿಯಲ್ವಾ? ಇದ್ಯಾವ ನ್ಯಾಯ ಸ್ವಾಮಿ? ನನ್ನನ್ನ ಕೇಳಿದ್ರೆ ಎಲ್ಲೀ ತನಕ ಜನ ದಂಗೆ ಏಳಲ್ವೋ ಅಲ್ಲೀ ತನಕ ಈ ರಾಜಕಾರಣಿಗಳು ಹೀಗೇನೇ ನಮ್ಮನ್ನು ಸುಲಿಗೆ ಮಾಡ್ತಾನೆ ಇರ್ತಾರೆ. ಯಾಕೋ ಇದನ್ನೆಲ್ಲ ಯೋಚಿಸುತ್ತಾ ಕೂತರೆ ಮೈಯೆಲ್ಲ ಉರಿದುಹೋಗುತ್ತೆ. ಬಟ್ ಅಂಥ ಕಾಲವೂ ಒಂದಿನ ಬಂದೇ ಬರುತ್ತೆ ಅನ್ನುವ ಆಶಾವಾದಿ ನಾನು.ನೋಡೋಣ.ಓಕೆ ಒಂದು ಇನ್ಸಿಡೆಂಟ್ ಹೇಳ್ತೀನಿ. ಮಜಾ ಅಂದ್ರೆ, ಶಿವಾನಂದ್ ತೆಗೆದುಕೊಂಡು ಬಂದಿದ್ದ ಎರಡುಮೂರು ಸೇರು ಕಡಲೆ ಕಾಯಿಯನ್ನು ನಿಂತ ನಿಲುವಿನಲ್ಲೆ ಕೋತಿಯೊಂದು ಎಗರಿಸಿಕೊಂಡು ಹೋಗಿದ್ದು. ಹೋಗ್ಲಿ ಬಿಡು ಅಂದುಕೊಳ್ಳುತ್ತಿರುವಾಗಲೇ ಶಿವಾನಂದನ ಎಡಗೈಲಿದ್ದ ಚಿಪ್ಸ್ ಪ್ಯಾಕೆಟ್ಟನ್ನ ಇನ್ನೊಂದು ಕೋತಿ ಎಗರಿಸಿತ್ತು. ಅದಾಗಿ ಮಧ್ಯಾಹ್ನ ಊಟ ಎಲ್ಲಾ ಮುಗಿದು ತಂದಿದ್ದ ಬಾಳೆ ಹಣ್ಣನ್ನ ತಿನ್ನೋಣ ಅಂತ ಕಾರಿಂದ ಇನ್ನೇನು ತೆಗೆಯಬೇಕು ಅದೆಲ್ಲಿತ್ತೋ ಗಡವ ರಪ್ಪಂತ ಕಿತ್ತುಕೊಂಡು ಹೋಯ್ತು. ಶಿವಾನಂದ್ಗಂತೂ ಸಿಟ್ಟೇ ಸಿಟ್ಟು. ಆದ್ರೆ ನೋ ಯೂಸ್. ಇಂಥದೇ ಒಂದು ಘಟನೇ ನೆನಪಾಯ್ತು. ಒಂದ್ ಸಾರಿ ಮುತ್ತತ್ತಿಗೋಗಿ ಬರ್ತಾ ಇದ್ವಿ. ಸದಾನಂದ್ ಮುಂದೆ ಕೂತಿದ್ರು. ದಾರಿ ಮಧ್ಯದಲ್ಲಿ ಕಾರು ನಿಲ್ಲಿಸಿ ಕಡಲೇ ಕಾಯಿ ತಿಂತಾ ಕೂತಿದ್ವಿ. ನಾನು ಶಿವಾನಂದ್ ಹಿಂದೆ. ಡ್ರೈವರ್ ಸೀಟಿನಲ್ಲಿದ್ದವನು ಬಸವರಾಜ್. ಅದೆಲ್ಲಿತ್ತೋ ಒಂದು ಮಂಗ ಚಂಗನೆ ಹಾರಿ ಕಾರಿನೊಳಕ್ಕೆ ಬಂದು ಸದಾನಂದನ ತೊಡೆ ಮೇಲೆ ಆಸೀನವಾಯಿತು. ಕೊಟ್ಟ ಕಡಲೆ ಕಾಯನ್ನು ತಿನ್ನುತ್ತಾ ಇನ್ನಷ್ಟು ಕೊಡು ಅಂತ ಮಕ್ಕಳು ಪೀಡಿಸ್ತಾವಲ್ಲ ಹಾಗೆ ಅಲ್ಲೇ ಕುಳಿತಿತು. ಹೋಗೆಂದ್ರೂ ಹೋಗ್ತಿಲ್ಲ. ಒಳ್ಳೇ ಕತೆಯಾಯ್ತಲ್ಲ ಅಂತ, ನಾವೇ ಕಾರಿನಿಂದ ಇಳಿಯೋಣ. ಅದೂ ಆಗ ಇಳೀಬಹುದು ಅಂತತ ಎಲ್ಲಾ ಇಳಿದರೂ ಉಹೂಂ ಅದು ಡ್ರೈವರ್ ಸೀಟಿಗೆ ಹಾರಿ ಕುಳಿತಿತು. ಕೊನೆಗೆ ಬಸವರಾಜ್ ಒಂದು ಕೋಲು ತೆಗೊಂಡು ಹೋಗ್ತೀಯೋ ಇಲ್ವೋ ಅಂತ ಅಬ್ಬರಿಸಿದ. ಹೋಗೋ ಲೇಯ್ ನಿನ್ನಂತವನನ್ನ ಎಷ್ಟು ಜನ ನೋಡಿಲ್ಲ ಅನ್ನುವಂತೆ ಒಮ್ಮೆ ಕೆಕ್ಕರಿಸಿ ನೋಡಿ ಅಲ್ಲೇ ಕುಳಿತಿತು. ಏನು ಮಾಡಿದರೂ ಹೋಗ್ತಿಲ್ಲ. ಕೊನೆಗೆ ನಾನು ನನ್ನ ಜೇಬಿನಲ್ಲಿದ್ದ ಕಡಲೆ ಕಾಯಿಯನ್ನೆಲ್ಲ ತೆಗೆದು ಜೋರಾಗಿ ಮೇಲಕ್ಕೆಸೆದೆ. ಅದೇನನ್ನಿಸಿತೋ ಚಂಗಂತ ಬಂದು ಕುಳಿತು ಒಂದೊಂದನ್ನೆ ಆರಿಸಿಕೊಂಡು ತಿನ್ನತೊಡಗಿತು.ನಾವು ಪರಾರಿ.ಯಾಕೋ ಎಲ್ಲಿಗೆ ಹೋದರೂ ಇದೊಂದು ಘಟನೆ ಗಕ್ಕನೆ ನೆನಪಾಗುತ್ತದೆ.
3 comments:
ಬರಹಗಳು ಚೆನ್ನಾಗಿವೆ. ಇತ್ತೀಚೆಗೆ ನಿಮ್ಮ ಬ್ಲಾಗ್ನಲ್ಲಿ ವೈವಿಧ್ಯತೆ ಕಾಣಿಸುತ್ತಿವೆ. good luck. ಹೀಗೇ ಮುಂದುವರಿಸಿ.... ನಮ್ಮಂತಹ ಓದುಗರಿಗೆ ರಸದೌತಣ
ಬರಹಗಳು ಚೆನ್ನಾಗಿವೆ. ಇತ್ತೀಚೆಗೆ ನಿಮ್ಮ ಬ್ಲಾಗ್ನಲ್ಲಿ ವೈವಿಧ್ಯತೆ ಕಾಣಿಸುತ್ತಿವೆ. good luck. ಹೀಗೇ ಮುಂದುವರಿಸಿ.... ನಮ್ಮಂತಹ ಓದುಗರಿಗೆ ರಸದೌತಣ
ಸರ್..
ನಮಸ್ಕಾರ..
ತುಂಬಾ ಚೆನ್ನಾಗಿದೆ ಬರಹ.ಪ್ರವಾಸೋದ್ಯಮದ ಕುರಿತು ಮಾತಾಡಿದಾಗ ಮೊನ್ನೆ ಮೊನ್ನೆ ನೋಡಿ ಬಂದ ಹಂಪಿಯ ನೆನಪಾಯಿತು. ಏನ್ ಮಾಡಕ್ಕಾಗುತ್ತೆ ಅಲ್ವಾ? ಈಗಿನ ಸರ್ಕಾರ ಅಂತೂ ಸಿಕ್ಕ ಸಿಕ್ಕ ದೇವಸ್ಥಾನ ಕ್ಕೆಲ್ಲ ಎಸಿ ಹಾಕಕ್ಕೆ ಹೋಗಿದೆ..ಅದ್ಕಾಗುವ ಕರೆಂಟು ಎಷ್ಟು? ಅದ್ರ ಬಿಲ್ ಎಷ್ಟು? ಅದನ್ನೇ ಬಡವರಿಗೆ ನೀಡಿದ್ರೆ ...?!! ಇದನ್ನು ಯಾರು ಯೋಚನೆ ಮಾಡ್ತಾರೆ ಸರ್..
keep it up!
-ಚಿತ್ರಾ ಕರ್ಕೇರಾ
Post a Comment