Monday, February 4, 2008

ಅವತ್ತು ನೀನು ನನ್ನ ಪಕ್ಕದಲ್ಲಿರಬೇಕಿತ್ತು ಅನಿಸುತ್ತಿದೆ

ಗೆಳತಿ ಭಾಗ್ಯ
ಸುಮಾರು ಇಪ್ಪತ್ತು ವರ್ಷಗಳ ನಂತರ ನಿನ್ನ ಹೆಸರಿಗೊಂದು ಪತ್ರ ಬರೆಯುತ್ತಿದ್ದೇನೆ. ಹೇಗಿದ್ದೀಯ ಅಂತ ಗೊತ್ತಿಲ್ಲ, ಎಲ್ಲಿರುವೆ ಅಂತ ಗೊತ್ತಿಲ್ಲ. ನಿನ್ನ ಕೆಂಪು ಬಣ್ಣದ ಲಂಗದ ಫ್ರಿಲ್ಲಿನ ಮೇಲೆ ನಾನು ಚೆಲ್ಲಿದ್ದ ತಿಳಿ ಸಾಂಬಾರಿನ ಘಮ ಇನ್ನೂ ಇದೆಯೋ ಗೊತ್ತಿಲ್ಲ. ಹಾಗಿದ್ದೂ ಈ ಪತ್ರ ಬರೆಯುತ್ತಿದ್ದೇನೆ. ಕೇವಲ ನಿನ್ನದೊಂದು ಹೆಸರಿಟ್ಟುಕೊಂಡು. ಒಪ್ಪಿಸಿಕೋ!
ನೆನಪಿದೆಯಾ... ನೀನು ನನ್ನ ಹನ್ನೆರಡನೇ ಹುಟ್ಟಿದ್ದಬ್ಬಕ್ಕೆ ಕೊಟ್ಟ ಗ್ರೀಟಿಂಗ್ ಕಾಡರ್್. ಅದಕ್ಕೆ ಪ್ರತಿಯಾಗಿ ನಾನು ನಿನಗೆ ಕೊಟ್ಟಿದ್ದು ಕೈ ತುಂಬ ಸಕ್ಕರೆ. ಆಗ ಸ್ವೀಟ್ ಅಂತ ನಮಗೆ ಗೊತ್ತಿದ್ದದ್ದು ಎರಡೇ ಕಣೆ. ಒಂದು ಸಕ್ಕರೆ ಇನ್ನೊಂದು ಬೆಲ್ಲ. ಸಾಮಾನ್ಯವಾಗಿ ಹುಟ್ಟಿದ್ದಬ್ಬಕ್ಕೆ, ಪಾಸಾಗಿದ್ದಕ್ಕೆಲ್ಲ ಸಕ್ಕರೆ ಹಂಚುತ್ತಿದ್ದದ್ದು ರೂಢಿ. ನಾನು ಕೊಟ್ಟ ಸಕ್ಕರೆಯನ್ನ ನೀನು ಯಾವ ಪರಿ ಮುಕ್ಕಿದೆ ಎಂದ್ರೆ ಪಕ್ಕದಲ್ಲಿದ್ದವರೆಲ್ಲ ಬಿದ್ದು ಬಿದ್ದು ನಕ್ಕಿದ್ರು. ನನಗೋ ಒಳಗೊಳಗೆ ಖುಷಿ. ಯಾಕೇಂದ್ರೆ ನನಗೆ ಗ್ರೀಟಿಂಗೂ ಅಂತ ಕೊಟ್ಟ ಹುಡುಗಿಯರಲ್ಲಿ ನೀನೆ ಮೊದಲನೆಯವಳು ಕಣೆ. ನನ್ನಾಣೆ ಅದು ಇಷ್ಟೂ ವರ್ಷಗಳ ತನಕ ನನ್ನ ಕಬ್ಬಿಣದ ಪೆಟ್ಟಿಗೆಯಲ್ಲೇ ಇತ್ತು. ಹೋದ ವರ್ಷ ಅಮ್ಮ ಟ್ರಂಕ್ ಕ್ಲೀನ್ ಮಾಡುತ್ತೇನೆ ಅಂತ ಹಟ ಹಿಡಿದು ಹೊರಟು ಅಲ್ಲಿದ್ದದ್ದನ್ನೆಲ್ಲ ಒಲೆಗೆ ಹಾಕಿದ್ದಳು.
ನಿಜ್ಜ ಹೇಳ್ಲ, ಅವತ್ತೆಲ್ಲ ನನಗೆ ಊಟ ಸೇರಲಿಲ್ಲ, ನಿದ್ರೆ ಹತ್ತಲಿಲ್ಲ.ಕೇವಲ ನಿನ್ನದೇ ನೆನಪು... ಮನದಲ್ಲಿ...
ಇಡೀ ಕ್ಲಾಸಿನಲ್ಲಿ ನಾನೇ ಎಲ್ಲರಿಗಿಂತ ಮೊದಲು ಅನ್ನುವುದು ನಿನಗೊಂದು ಹೆಮ್ಮೆಯಾಗಿತ್ತು ಅಲ್ವಾ. ನಿಜ ಹೇಳಬೇಕೆಂದ್ರೆ ನೀನು ನನಗಿಂತ ಜಾಣೆ. ಆದರೆ ನನಗೋಸ್ಕರ ಯಾವಾಗಲೂ ಎರಡು ಮಾಕ್ಸರ್್ ಕಡಿಮೇನೆ ತೆಗೀತಿದ್ದೆ. ನನಗೆ ಗೊತ್ತಿತ್ತು ನೀನು ನನ್ನನ್ನ ಎಷ್ಟು ಇಷ್ಟ ಪಡುತ್ತಿದ್ದೆ ಅಂತ. ಆದರೆ ನೀನು ಎಂದೂ ಹೇಳಿಕೊಂಡವಳಲ್ಲ. ನಿನ್ನ ಕಣ್ಣುಗಳು ಮಾತ್ರ ನನಗೆ ಎಲ್ಲವನ್ನೂ ಹೇಳುತ್ತಿದ್ದವು.
ಒಂದು ಸಾರಿ ಕೋಟೆ ಬಯಲಿನ ಬಾವಿ ಕಟ್ಟೆ ಹತ್ತಿರ ಮಗ್ಗಲಾಗಿದ್ದ ಉರುಟುರುಟು ಕಲ್ಲಿನ ಮೇಲೆ ನಾವಿಬ್ಬರು ಕುಳಿತು ಆಡಿದ ಮಾತು ನೆನಪಿದೆಯಾ? ರವಿ ನೀನಂದ್ರೆ ನನಗೆ ಅಷ್ಟಿಷ್ಟ ಅಂದಿದ್ದೆ. ನಾನೋ ಪೆಕರು ಪೆಕರಾಗಿ ದೇವರಾಣೆಗೂ ಅಂದಿದ್ದೆ. ಆಮೇಲೆ ಮಗ್ಗಲಾಗಿದ್ದ ಕಲ್ಲಿನ ಮೇಲಿರುವ ಬರಹಗಳನ್ನು ಓದಿದವರ ತಲೆ ನೂರು ಹೋಳಾಗುತ್ತದಂತೆ ಅಂತ ಇಬ್ಬರೂ ಟಾಪ್ ಸೀಕ್ರೆಟ್ ಥರ ಮಾತಾಡಿಕೊಂಡಿದ್ದೆವು. ತೆಗೆದು ನೋಡೋಣ ಅಂದದ್ದಕ್ಕೆ ಬೇಡಪ್ಪ ಅಂತ ಆತಂಕದಿಂದ ನನ್ನ ಕೈ ಹಿಡಿದುಕೊಂಡಿದ್ದೆ. ಅಲ್ಲ ಕಣೆ ಪೆದ್ದಿ ಅಷ್ಟು ದೊಡ್ಡ ಕಲ್ಲನ್ನು ನಾನು ಎತ್ತುವುದಿರಲಿ ಚೂರು ಸರಿಸುವುದಕ್ಕಾದರೂ ಆಗುತ್ತಿತ್ತೇನೆ?
ಇವತ್ಯಾಕೋ ನೀನು ನೆನಪಾದೆ.
ಇನ್ನು ಕೇವಲ ಹತ್ತು ದಿನಕ್ಕೆಲ್ಲ ಜಗತ್ತಿನ ಪ್ರೇಮಿಗಳಿಗೆಲ್ಲ ಹಬ್ಬ ಬರುತ್ತದೆ.
ಅವತ್ತು ನೀನು ನನ್ನ ಪಕ್ಕದಲ್ಲಿರಬೇಕಿತ್ತು ಅನಿಸುತ್ತಿದೆ ಕಣೆ.
ಎಲ್ಲಿರುವೆ ಹೇಳು?

1 comment:

Anonymous said...

ರವಿ ಅಜ್ಜೀಪುರ ಅವರೇ,
ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ. ಎಲ್ಲಾ ಬರಹಗಳನ್ನು ಓದಿದೆ. ಖುಶಿಯಾಯಿತು. ಚೆನ್ನಾಗಿವೆ. ಅದರಲ್ಲೂ "ಅವಳ’ ಬಗೆಗಿನ ಕಥೆ (ಸ್ವೆಟರ್ ಇತ್ಯಾದಿ) ಹಿಡಿಸಿತು. ನದಿ ಪ್ರೀತಿ ಹರಿಯುತ್ತಿರಲಿ ನಿರಂತರ.
ನಾವಡ (www.chendemaddale.wordpress.com)