ಸಾವು ಇಷ್ಟೊಂದು ಭರಿಸಲಾಗದ ದುಃಖ ತಂದಿಟ್ಟುಬಿಡುತ್ತದಾ?
ಸಾವಿನ ಮನೆಯಲ್ಲಿ ಕುಳಿತವನಿಗೆ ನಿಜಕ್ಕೂ ಹಾಗನ್ನಿಸಿಬಿಡ್ತು. ಮೊನ್ನೆಯಷ್ಟೇ ನನ್ನ ಮಾವನ ಸಾವಿಗೆ ಹೋಗಿ ಬರುವ ತನಕ ನನಗೂ ಸಾವು ಅಷ್ಟು ಕಾಡಿರಲಿಲ್ಲ. ಸಾವಿನ ಸೂತಕ ಎಬ್ಬಿಸುವ ಮೌನ, ಆರ್ತನಾದ, ಅಳು, ಯಾಕೋ ಮನಸ್ಸನ್ನು ಇನ್ನಿಲ್ಲದಂತೆ ಕಾಡಿಬಿಡ್ತು. ಇಡೀ ರಾತ್ರಿ ಜೀವವಿಲ್ಲದ ಒಂದು ದೇಹವನ್ನು ಎದುರಿಗಿಟ್ಟುಕೊಂಡು ಅವರ ಬದುಕನ್ನ ಮತ್ತೆ ಮತ್ತೆ ದುಃಖದ ಪರಿಧಿಗೆ ತಂದುಕೊಳ್ಳುವುದಿದೆಯಲ್ಲ ಅದು ನಿಜಕ್ಕೂ ಕಷ್ಟ. ಅಲ್ಲಿ ದುಃಖದ ಪಸೆ ಆರುವುದೇ ಇಲ್ಲ. ದುಃಖ ದುಃಖವನ್ನ ಇನ್ನಷ್ಟು, ಮತ್ತಷ್ಟು ಹೆಚ್ಚಿಸುವ ಪರಿಯನ್ನ ಸಾವಿನ ಮನೆಯಲ್ಲಿ ಮಾತ್ರ ನೋಡಲು ಸಾಧ್ಯವೇನೋ!. ಗೊತ್ತಿಲ್ಲದ ಹಾಗೇ ಎಂಥ ಕಲ್ಲು ಹೃದಯದವರನ್ನೂ ತನ್ನ ಒಳಕ್ಕೆ ಸೆಳೆದುಕೊಂಡು ಬಿಡುವ ತಾಕತ್ತು ಮಾತ್ರ ದುಃಖಕ್ಕಿದೆ.
ನಾನು ಚಿಕ್ಕವನಿದ್ದಾಗ ನನ್ನ ಪಕ್ಕದ ಮನೆಯಲ್ಲಿದ್ದ ಒಬ್ಬರು ತೀರಿಕೊಂಡಿದ್ದರು. ಬೆಳಿಗ್ಗೆ ನಗುನಗುತ್ತಾ ಮಾತಾಡಿಸಿಕೊಂಡು ಹೋಗಿದ್ದವನು ಸಂಜೆ ಶಾಲೆ ಮುಗಿಸಿ ಬರುವ ಹೊತ್ತಿಗೆ ವಿಷ ಕುಡಿದು ಹೆಣವಾಗಿದ್ದರು. ನನಗೆ ತುಂಬಾ ಆತ್ಮೀಯವಾಗಿದ್ದ ಅವರು ತೀರಿಕೊಂಡರು ಅಂದಾಗ ನನಗೆ ಅದನ್ನು ಭರಿಸಲಾಗಲಿಲ್ಲವೋ. ಭಯವೋ ಅಂತೂ ಯಾಕೋ ಅವರ ಹೆಣ ನೋಡಲೂ ನನ್ನ ಮನಸ್ಸು ಒಪ್ಪಲಿಲ್ಲ. ಎಲ್ಲಿ ಹೆಣ ನನ್ನ ಕಣ್ಣಿಗೆ ಕಂಡುಬಿಡುತ್ತೋ ಅಂತ ಗೋಡೆಯ ಪಕ್ಕದಲ್ಲೇ ತೆವಳಿಕೊಂಡು ಮನೆಗೆ ಹೋಗಿದ್ದೆ. ಅವರ ಬಂಧುಬಳಗದ ರೋದನ ನನ್ನಲ್ಲಿ ಸಾವಿನ ಭಗೆಗಿದ್ದ ಭಯವನ್ನು ಮತ್ತಷ್ಟು ಹೆಚ್ಚಿಸಿತ್ತೆ, ಗೊತ್ತಿಲ್ಲ. ಯಾಕೆಂದರೆ ಆ ವಯಸ್ಸು ನಿಜಕ್ಕೂ ಸಾವಿಗೆ ಹೆದರುವಂಥದೇ!
ತುಂಬಾ ಚಿಕ್ಕ ವಯಸ್ಸಿನಲ್ಲಾದರೆ ಸಾವು ಏನೇನೂ ಅನಿಸುವುದಿಲ್ಲ. ನಾನಿನ್ನೂ ಚಿಕ್ಕವನಿದ್ದಾಗಲೇ ನನ್ನ ಅಜ್ಜಿ ತೀರಿಕೊಂಡಿದ್ದರು. ಆಗ ನಾನು ನನ್ನ ಅವ್ವನ ಸೀರೆಯ ಚುಂಗು ಹಿಡಿದು ಹಸಿವು ಅಂತ ಗೋಳಾಡುತ್ತಿದ್ದದು ಇನ್ನೂ ನೆನಪು. ಆದರೆ ಬೆಳೆಯುತ್ತಾ ಹೋದಂತೆ ಸಾವು ಒಂದು ಅನೂಹ್ಯ ಭಯವನ್ನು ನಮಗೆ ಗೊತ್ತಿಲ್ಲದೇ ತುಂಬಿಬಿಡುವುದಂತೂ ನಿಜ.
ಮರಳಿ ಬರಲಾಗದ ಊರಿಗೆ ಹೋದವರು ಎಷ್ಟು ಕಾಲ ನಮ್ಮ ಮನೆ-ಮನಗಳಲ್ಲಿ ಉಳಿದಾರು? ನೋಡ ನೋಡುತ್ತಲೇ ಅವರದ್ದೊಂದು ಸಣ್ಣ ನೆನೆಪೂ ಇಲ್ಲದವರಂತೆ ನಾವು ನಮ್ಮ ಬದುಕಿನ ಜಂಝಡಗಳಲ್ಲಿ ಮುಳುಗಿ ಹೋಗುತ್ತೇವೆ. ದುಃಖ ಎದೆಯ ತಿದಿಗಳಲ್ಲಿ ಇಂಗಿಹೋಗುತ್ತದೆ.
ಆದ್ರೆ ಸಾವು?
ನಮಗೆ ಗೊತ್ತಿಲ್ಲದಂತೇ ಅದು ಇನ್ನಾರಿಗೋ ಗಾಳ ಹಾಕುತ್ತಿರುತ್ತದೆ.
1 comment:
Hi Ravi,
Nimma maathu nija, entha kallu manasiruvavaru mattu entha paristhithiyallu nanu hedarale ennuvavaru hedaruvudu saavige mathraveno.........3 varshakke thandeyannu kaledukonda nanu eega nanna odahuttidavana savannu kandu innu chetharisikollalarade hogiddene, magana savininda kuggi hogiruva nanna ammanannu hege samadhanapadisuvudo thiliyadagide, nimma ee lekhana nanage annana nenapu thanditu
Post a Comment