ತುಂಬಾ ದಿವಸದಿಂದ ನೀವು ಬ್ಲಾಗ್ನಲ್ಲಿ ಏನೂ ಬರೆದಿಲ್ಲ.ಈ ಹುಚ್ಚಾಟಕ್ಕೇಕೆ ಬ್ಲಾಗ್ ಶುರು ಮಾಡಬೇಕಿತ್ತು ಅಂತ ಗೆಳೆಯರು ಕೊರಳ ಪಟ್ಟಿ ಹಿಡಿದುಕೊಂಡು ಕೇಳುತ್ತಿದ್ದಾರೆ. ಏನು ಉತ್ತರಿಸಲಿ?
ಅಷ್ಟೊಂದು ಕೆಲಸ ಹಚ್ಚಿಕೊಂಡುಬಿಟ್ಟಿದ್ದೇನೆ. ದಿನಕ್ಕೆ ಹದಿಮೂರು ಹದಿನಾಲ್ಕೋ ಗಂಟೆ ದುಡಿಯುವುದು ನನಗೆ ಮೊದಲಿನಿಂದಲೂ ಅಭ್ಯಾಸವಾಗಿ ಹೋಗಿದೆ. ಕೆಲಸಕ್ಕೆ ಅಂತ ನಾನು ಯಾವತ್ತೂ ಹಿಂಜರಿದವನಲ್ಲ... ಹೇಳಬೇಕೆಂದ್ರೆ ಕೆಲಸ ಇಲ್ಲದೆ ಸುಮ್ನೆ ಕೂರುವುದು ಅಂದ್ರೆ ನನಗೆ ಪರಮ ಬೋರಿನ ಕೆಲಸ. ಅದಕ್ಕಿಂತ ಬೇಜಾರಿನ ಸಂಗತಿ ಇನ್ನೊಂದಿಲ್ಲ. ಹಾಗಾಗಿ ಖಾಲಿ ಅನಸಿದಾಗಲೆಲ್ಲ ನಾನೇ ಏನಾದ್ರೂ ಕೆಲಸ ಸೃಷ್ಟಿಸಿಕೊಂಡುಬಿಡುತ್ತೇನೆ. ಅದರಿಂದ ಸಿಗುವ ಖುಷಿ ಇದೆಯಲ್ಲ ಅದು ಎಲ್ಲಕ್ಕಿಂತ ಮಿಗಿಲು.ಈ ನಡುವೆ ಒಂದು ಹೊಸ ವಿಷಯ ಅಂದ್ರೆ ಕಾರು ತಗೊಂಡಿದ್ದು. ತುಂಬಾ ದಿನದಿಂದ ಆ ಬಯಕೆ ಇತ್ತು. ತಗೊಳ್ಳುವುದಾದ್ರೆ ಅದು ಕಾರೇ ಅಂತ ನಾನು ಯಾವಾಗಲೋ ಡಿಸೈಡ್ ಮಾಡಿಬಿಟ್ಟಿದ್ದೆ. ಈಗ ಆ ಕನಸು ಕೈ ಗೂಡಿದೆ. ಒಂಥರ ಹ್ಯಾಪಿ. ಆದ್ರೆ ಬಡ್ಡೀ ಮಗಂದು ಡ್ರೈವಿಂಗು ಇದೆಯಲ್ಲ ಅದು ಮಾತ್ರ ಬೆಂಗಳೂರಿನಲ್ಲಿ ನರಕವೇ! ಸುಮ್ಮನೆ ಆರಾಮಾಗಿ ಫ್ರೆಂಡ್ ಕಾರಿನಲ್ಲಿ ಕುಳಿತು ಹರಟೆ ಕೊಚ್ಚುತ್ತಾ ಹೋಗುತ್ತಿದ್ದವನು ಗಾಡಿ ತಗೊಂಡು ರಸ್ತೆಗಿಳಿದ ಮೇಲೆ ಗೊತ್ತಾಗಿದ್ದು, ಅದರ ಕಷ್ಟ ಏನೂ ಅಂತ. ಮೊನ್ನೆ ರಿಂಗ್ ರೋಡಿನ ದಿಬ್ಬವೊಂದರಲ್ಲಿ ಗಾಡಿ ಇದ್ದಕ್ಕಿದ್ದಂತೆ ಆಫ್ ಆಗಿ ಹೋಯಿತು. ಎಂಥ ಫಜೀತಿ ಅಂದ್ರೆ ಹಿಂದೆ ಇದ್ದವರೆಲ್ಲ ಹಾರ್ನ್ ಊದಿದ್ದೇ ಊದಿದ್ದು. ಟ್ರಾಫಿಕ್ ಪೊಲೀಸ್ ಬಂದು ಕಲಿಯೋದಿದ್ದರೆ ಮೈದಾನಕ್ಕೋಗಿ ಕಲೀರ್ರಿ... ರಸ್ತೆಗ್ಯಾಕ್ ಬಂದು ಪ್ರಾಣ ಹಿಂಡ್ತೀರಿ ಅಂತ ಉಗಿದು ಹೋದ. ಅವತ್ತು ನಿಜಕ್ಕೂ ನಾನು ನರ್ವಸ್ ಆಗಿಬಿಟ್ಟಿದ್ದೆ.ಆದ್ರೆ ಈ ಫ್ರೆಂಡ್ಸ್ ಇದಾರಲ್ಲ ಇವರ ಕಿತಾಪತಿ ಒಂದೊಂದಲ್ಲ. ಕಾರ್ ತಗೋ ಅಂತಿದ್ದವರೇ ಈಗ ಬನ್ರೋ ಕೂರ್ರೀ ಅಂದ್ರೆ ನಾವು ಬರೊಲ್ಲಪ್ಪ ಅಂತ ಕೈ ಎತ್ತುತ್ತಿದ್ದಾರೆ. ಇರೋದೊಂದೇ ಜೀವ ಅದನ್ನೂ ನಿನ್ನ ಕೈಲಿ ಕೊಟ್ಟು ಕಳಕೊಳ್ಳೋಕೆ ನಮಗೇನು ಹುಚ್ಚಾ ಅನ್ನೋ ಥರಾನೆ ಎಲ್ಲರೂ ಮಾತಾಡ್ತಿದಾರೆ. ಇದೆಲ್ಲ ಎಷ್ಟು ದಿನ ಅಂತ ನಾನೂ ಸುಮ್ಮನಿದ್ದುಬಿಟ್ಟಿದ್ದೇನೆ.ಈ ನಡುವೆ ನನ್ನ ಮೊದಲ ಕಥಾ ಸಂಕಲನ ಸಿದ್ಧಗೊಳ್ಳುತ್ತಿದೆ. ತುಂಬಾ ಪಾಪ್ಯುಲರ್ ಆಗಿದ್ದ ಅಂಕಣ ಇನ್ಬಾಕ್ಸ್. ಅದನ್ನು ಕೂಡ ಪುಟ್ಟ ಪುಸ್ತಕ ಮಾಡಬೇಕೆಂದುಕೊಂಡಿದ್ದೇನೆ. ಏನೇ ಅದರೂ ಈ ವರ್ಷ ನನ್ನದೂ ಅಂತ ಒಂದಿಷ್ಟು ಪುಸ್ತಕ ಬರಲೇ ಬೇಕು ಅಂದುಕೊಂಡಿದ್ದೇನೆ.ಅದರ ಬಿಡುಗಡೆಗೆ ನೀವಿಲ್ಲದೇ ಹೋದ್ರೆ ಆದೀತೆ. ಖಂಡಿತಾ ಕರೀತೀನಿ ಬಿಡಿ. ಹಾಗೆ ನದಿಪ್ರೀತಿ ಇನ್ನು ಸಣ್ಣದಾಗಿಯಾದರು ಹರಿಯುತ್ತದೆ
... ಇದು ಕಸಮ್.
No comments:
Post a Comment