Saturday, April 26, 2008

ಅಕ್ಕ ಹೇಳಿದ ಕುಡುಕನ ಪ್ರಸಂಗ...


ನನ್ನ ಭಾವನದೊಂದು ತೋಟ ಇದೆ ಊರಲ್ಲಿ. ಅವಾಗವಾಗ ಅಲ್ಲಿಗೆ ಹೋಗಿ ಬರೋದು ಅಭ್ಯಾಸ. ಹಾಗೆ ಹೋಗಲಿಲ್ಲ ಅಂದ್ರೆ ಭಾವ ಹುಷಾರು, ಒಂದಿನ ಹೋಗಿ ನೋಡಿದ್ರೆ ನಿಮ್ಮ ತೋಟಾನೆ ಇರೋಲ್ಲ ಅಂತ ನಾವು ರೇಗಿಸ್ತಿರ್ತೀವಿ. ಹಾಗಾಗಿ ರಜೆ ಸಿಕ್ಕಿದ್ರೆ ಸಾಕು ತೋಟ ಅಂತ ಭಾವ ಪರಾರಿ ಅಗಿಬಿಡ್ತಾರೆ.

ಈ ತೋಟ ನೋಡ್ಕೊಳೋಕೆ ಅಂತ ಅಲ್ಲೊಂದು ಸಂಸಾರ ಇಟ್ಟಿದಾರೆ. ಮಹಾನ್ ಕುಡುಕನಂತೆ ಆತ. ಆದ್ರೆ ಭಾವ ತೋಟಕ್ಕೆ ಹೋದಾಗ ಮಾತ್ರ ಆತ ಬಿಲ್ಕುಲ್ ಕುಡಿಯೋಲ್ಲವಂತೆ.

ಆದ್ರೆ ಅವತ್ತು ಆಗಿದ್ದೇ ಬೇರೆ. ಯಥಾ ಪ್ರಕಾರ ಇವರು ತೋಟಕ್ಕೆ ಹೋಗಿದ್ದಾರೆ. ಎಲ್ಲಾ ಸರಿ ಇದೆಯಾ ಅಂತ ನೋಡಿದಾರೆ. ಕೊನೆಗೆ ಒಂದು ಹೊಂಗೆ ಮರದ ಕೆಳಗೆ ಉಸ್ಸಪ್ಪ ಅಂತ ತೋಟದ ಮಾಲಿ ಜೊತೆ ಕುಳಿತಿದ್ದಾರೆ. ಅಷ್ಟರಲ್ಲಿ ಅದೇ ಊರಿನವನೊಬ್ಬ ಅಲ್ಲಿಗೆ ಬಂದಿದ್ದಾನೆ. ಅವನು ಬರುವ ರೀತಿ ನೋಡಿದರೆ ದೇವರು ಒಳಗಿದ್ದ ಅನಿಸುತ್ತಿತ್ತಂತೆ.ಬಂದವನು ದೊರೆ ಹತ್ತು ರುಪಾಯಿ ಕೊಡಿ ಅಂದವನೆ.ಭಾವ ಇಲ್ಲ ಹೋಗಿ ಅಂದಿದಾರೆ.ಅವನು ಬಿಟ್ಟಿಲ್ಲ. ಕೊನೆಗೆ ಹಾಳಾಗಿ ಹೋಗು ಅಂತ ಭಾವ ಹತ್ತು ರುಪಾಯಿ ಕೊಟ್ಟು ಅದನ್ನು ಮರೆತೂ ಬಿಟ್ಟಿದ್ದಾರೆ.

ಆದ್ರೆ ಹಾಗೆ ಈಸಿಕೊಂಡು ಹೋದವನು ಹಾಗೆ ಫುಲ್ ಟೈಟಾಗಿ ಬಂದು ಎದುರಿಗೆ ನಿಂತಾಗಲೇ ಇವರಿಗೆ ಗೊತ್ತಾಗಿದ್ದು ಇವನ ವರಸೆ ಬೇರೇನೆ ಇದೆ ಅಂತ.

ರೀ ಸ್ವಾಮಿ, ನನಗೆ ಕೇವಲ ಹತ್ತು ರುಪಾಯಿ ಕೊಡ್ತೀರಾ? ಎಷ್ಟು ಕೊಬ್ಬು ನಿನಗೆ? ಅಂದವನೆ.

ಭಾವ ಇದೊಳ್ಳೆ ಆಯ್ತಲ್ಲ, ದುಡ್ಡು ಕೊಟ್ಟುಬುಟ್ಟು ಉಗಿಸಿಕೊಂಡಂಗಾಯ್ತಲ್ಲ ಅಂದುಕೊಂಡು ಹೋಗಯ್ಯ ಅತ್ಲಾಗೆ ಅಂತ ಬಟ್ಟೆ ಕೊಡವಿಕೊಂಡು ಎದ್ದವರೆ.

ಮಾಲಿಯೂ ಹೋಯ್ತೀಯೋ ಇಲ್ಲ ಒದೆ ಬೇಕೋ ಅಂದವನೆ.

ಆದರೆ ಅವನು ಬಿಡಬೇಕಲ್ಲ.

ಎಲ್ಲಿಗ್ರಿ ಹೋಗ್ತೀರಾ? ನಂಗೆ ಹತ್ತು ರುಪಾಯಿ ಕೊಟ್ಟು ಅವಮಾನ ಮಾಡಿದೀರಾ? ನೀವು ಮಾತ್ರ ಸಾವಿರ ಗಟ್ಟಲೆ ಉಯ್ಕೊತೀರಾ? ನಮಗೆ ಮಾ.....ತ್ರ ....ಹ.....ತ್ತು ....ರು .......ಪಾಯೀನಾ? ಈಡಿಯಟ್....

ಇನ್ನೂ ಏನೇನೋ?

ಭಾವನಿಗೆ ಕೋಪ ಬಂದಿದೆ.

ಹೋಗ್ತೀಯ ಇಲ್ಲ ಒದೆ ಬೇಕಾ ಅಂದಿದಾರೆ.

ನೀನೇನು ಒದಿಯೋದು. ನಾನೆ ಒದೀತೀನಿ ತಗೋ ಅಂತ ಕಾಲೆತ್ತಿಕೊಂಡು ಬಂದವನು ಅಲ್ಲೇ ಮುಗ್ಗರಿಸಿ ಬಿದ್ದಿದ್ದಾನೆ.ಒಳ್ಳೆ ಕಥೆಯಾಯಿತಲ್ಲಪ್ಪ ಅಂತ ತೋಟದ ಕಾವಲುಗಾರ ಇವರು ಇಬ್ಬರೂ ಸೇರಿಕೊಂಡು ಎರಡು ತದುಕಿದ್ದಾರೆ.ಆಮೇಲೆ ಅಲ್ಲಿಂದ ಎದ್ದವನು ಸೀದಾ ಊರ ಕಡೆಗೆ ಮಾಯವಾಗಿದ್ದಾನೆ.

ಅವತ್ತಿಂದ ಭಾವ ಊರಿಗೋಗ್ತೀನಿ ಅಂದಾಗಲೆಲ್ಲ ಈ ಘಟನೆ ನೆನಪಾಗುತ್ತಂತೆ ಅಕ್ಕನ ಮನೆಯವರಿಗೆ.

ಹುಷಾರು ಅಪ್ಪ ಯಾರಿಗೂ ಕಾಸು ಕೊಡಬೇಡಿ. ಒದ್ದುಗಿದ್ದಾರು ಅಂತ ಮಗಳು ರೇಗಿಸ್ತಿರ್ತಾಳೆ.

ಇನ್ನೂ ಸ್ವಾರಸ್ಯ ಅಂದ್ರೆ ಇದೇ ವ್ಯಕ್ತಿ ಹಿಂದೊಮ್ಮೆ ಹೀಗೆ ಗಲಾಟೆ ಮಾಡಿದ್ದಾಗ ಅಲ್ಲೇ ಇದ್ದ ಬಾವಿಗೆ ಎತ್ತಿ ಹಾಕಿದ್ರಂತೆ.ಈ ಕುಡುಕನ ಪ್ರಸಂಗ ಹೇಳಿದ್ದು ನನ್ನ ಅಕ್ಕ. ಮೊನ್ನೆ ಮಂಡ್ಯಕ್ಕೆ ಹೋಗಿದ್ದಾಗ.

1 comment:

Anonymous said...

Halli Kuduka "idiot" andna???

Yako kathe annista ide!!!

"apatrarige dana madidre heege aagodu" :)

bhashe