Thursday, June 12, 2008

...ದಿ ನ್ಯೂಸ್


ಅವತ್ತಿನದು ಎಂದಿನಂತೆ ಮತ್ತೊಂದು ಬೆಳಗ್ಗೆ.

ಸಣ್ಣಗೆ ಮೈ ಹಿಂಡುತ್ತಿತ್ತು ಚಳಿ. ಸೋಮಾರಿ ಸೂರ್ಯ ಇನ್ನೂ ಎದ್ದಿರಲಿಲ್ಲವಾದ್ದರಿಂದ ನಿಯಾನ್ ದೀಪಗಳು ನಿಂತಲ್ಲೇ ತೂಗಡಿಸುತ್ತಿದ್ದವು. ಅದೇ ಸಮಯಕ್ಕೆ ಇಳಾಳನ್ನು ಹಿಂದೆ ಕೂರಿಸಿಕೊಂಡು ಪಲ್ಸರ್ನ ಕಿಬ್ಬೊಟ್ಟೆಗೆ ಒದ್ದ ಸಮಯ್. ಅದು ಬುಸುಗುಡುತ್ತಾ ಓಡತೊಡಗಿತು. ಹಾರಿಹೋಗುತ್ತಿದ್ದ ಪಲ್ಲು ಮೇಲೆ ಹುಸಿ ಮುನಿಸು ತೋರಿಸಿ ತನ್ನ ಮೃದು ಮಧುರ ಬಲಗೈಯ್ಯನ್ನ ಸಮಯ್ನ ಭುಜದ ಮೇಲಿಟ್ಟಳು ಇಳಾ. ಹುಡುಗ ಥ್ರಿಲ್ ಆಗಿ ಹೋದ. ಬೈಕ್ನ ಸ್ಪೀಡೋಮೀಟರ್ ಎಂಬತ್ತರ ಹತ್ತಿರ ಬಂದು ಜಕರ್್ ಹೊಡೆಯತೊಡಗಿತು.

ಅದು ಅವಳ ಆಸೆ. ತನ್ನ ಹುಡುಗ ಒಂದು ಬೈಕ್ ತೆಗೋಬೇಕು... ಅದರಲ್ಲ್ಲಿ ನಾನು ಹಿಂದೆ ಅವನನ್ನು ಗಟ್ಟಿಯಾಗಿ ಅಪ್ಪಿ ಕುಳಿತು ಊರೆಲ್ಲ ಸುತ್ತಬೇಕು. ಅದಕ್ಕಾಗಿ ಅಪ್ಪನ ಹತ್ತಿರ ಸುಳ್ಳು ಹೇಳಿ ಹಣ ಪಡೆದು ಡೌನ್ ಪೇಮೆಂಟ್ ಮಾಡಿ ಕಣ್ಣ ಕಪ್ಪಗಿನ ಪಲ್ಸರ್ ಕೊಡಿಸಿದ್ದಳು. ತನಗೆ ಅಪ್ಪ ಕೊಡುತ್ತಿದ್ದ ಪಾಕೆಟ್ ಮನಿಯಲ್ಲೇ ಉಳಿಸಿ ಅವನ ಇಎಮ್ಐ ತುಂಬುತ್ತಿದ್ದಳು. ಯಾಕೆ ಇದೆಲ್ಲ ಅಂದ್ರೆ ನನ್ನ ಕನಸಿನ ರಾಜಾ. ನೀನು ಬೈಕ್ ಮೇಲೆ ಕೂತ್ಕಂಡ್ರೆ ರಾಜನಂಗಿರ್ತೀಯ ಗೊತ್ತಾ? ನನಗೆ ನೀನು ಅಂದ್ರೆ ಅಷ್ಟಿಷ್ಟ ಅಂದ್ನಲ್ಲ, ಸುಮ್ನೆ ತಗೋ ಅಂದಿದ್ದಳು. ಸಮಯ್ ಕಣ್ಣುತುಂಬಿಕೊಂಡಿದ್ದ. ಬೈಕ್ ತೆಗೆದುಕೊಂಡ ಮೊದಲ ದಿನವೇ ಅದರ ಹೊಟ್ಟೆತುಂಬಾ ಪೆಟ್ರೊಲ್ ತುಂಬಿಸಿಕೊಂಡು ಇಬ್ಬರೂ ಇಡೀ ಬೆಂಗಳೂರನ್ನು ಸುತ್ತುಹಾಕಿದ್ದರು. ಶಾಪಿಂಗ್ ಮಾಡಿದ್ದರು. ಎಲ್ಲೆಲ್ಲೋ ನಿಲ್ಲಿಸಿ ಬೈಟೂ ಕಾಫಿ ಕುಡಿದಿದ್ದರು. ಕೊನೆಯಲ್ಲಿ ಗಾಡಿ ಚಂದಕ್ಕೆ ಓಡಿಸ್ತೀ ಕಣೋ. ಸ್ವಲ್ಪ ಸ್ಪೀಡ್ ಜಾಸ್ತಿ. ನಾನಿದೀನಲ್ಲ ಅದಕ್ಕಾ? ಅಂತ ಅವನ ಕೆನ್ನೆ ಗಿಂಡಿದ್ದಳು.. ಅದು ಇಳಾ ಪಾಲಿನ ಹ್ಯಾಪಿಯೆಸ್ಟ್ ಡೇ! ಇವನದೂ.

ಇವತ್ತೂ ಅದೇ ಖುಷಿಯಲ್ಲಿ ಪಲ್ಲು ಸರಿ ಮಾಡಿಕೊಂಡು ಕುಳಿತಳಲ್ಲ ಇಳಾ... ಅವಳ ಎದೆಯೊಳಗೇ ಎಂಥದೋ ಸಂತಸ ಜೀಕತೊಡಗಿತು. ನೀನು ಎಂಥ ಚಂದಕ್ಕಿದ್ದೀಯ ಗೊತ್ತಾ ಹುಡುಗ. ನಿನ್ನನ್ನ ಒಮ್ಮೆ ನೋಡಿದರೆ ಹಾಗೇ ಮತ್ತೊಮ್ಮೆ ಮಗದೊಮ್ಮೆ ನೋಡಬೇಕೆನಿಸುತ್ತದೆ. ಮಾತಾಡಬೇಕೆನಿಸುತ್ತದೆ. ಅಪ್ಪಿ ಮುದ್ದಾಡಬೇಕೆನಿಸುತ್ತದೆ. ಹಾಗೇ ಎದೆಗಾನಿಸಿಕೊಂಡು ಸುಮ್ಮನೇ ಕೂರಬೇಕೆನಿಸುತ್ತದೆ. ನಿಜ್ಜ ಹೇಳ್ಲ, ನೀನು ಏನಾದರೂ ಹೀರೋ ಆಗಿದ್ದರೆ ಎಲ್ಲಾ ಹುಡುಗಿಯರ ಎದೆಯಲ್ಲಿ ಕೇವಲ ನೀನೇ ಇದ್ದುಬಿಡುತ್ತಿದ್ದೇ ಕಣೋ! ಹಾಗಾಗಲಿಲ್ಲವಲ್ಲ, ಥ್ಯಾಂಕ್ ಗಾಡ್! ಅಂತ ಕಿವಿಯಲ್ಲಿ ಪಿಸುಗುಡಬೇಕೆನಿಸಿತು. ಆದರೆ ಎನಿಮಿ ಹೆಲ್ಮೆಟ್ ಅಡ್ಡ ಬಂತು.

ಅಷ್ಟರಲ್ಲಿ ಬೈಕ್ ಸಣ್ಣದೊಂದು ತಿರುವಿನಲ್ಲಿ ರೊಂಯ್ ಅಂತ ಸದ್ದುಮಾಡುತ್ತಾ ಇಳಿಜಾರಿನಲ್ಲಿ ಮುಂದೆ ಸಾಗಿತು. ಹಿಂದೆ ಕುಳಿತ ಇಳಾ 'ಆಹ್' ಅಂತ ಉದ್ಘರಿಸಿದಳೋ ಇಲ್ಲವೋ ಇನ್ನೇನು ಬಿದ್ದೇ ಹೋಗುತ್ತೇನೇನೋ ಅನ್ನೋ ಭಯದಿಂದ ಅವನ ಬೆನ್ನಿಗೆ ಆತುಕೊಂಡಳು.

ಮೆಲ್ಲಗೆ ಕಣೋ ಭಯವಾಗುತ್ತೇ?ಹೌದಾ. ಒಂದ್ ನಿಮಿಷ ಚಿನ್ನ. ಈ ಹೆಲ್ಮೆಟ್ ತೆಗೀ. ಯಾಕೋ ಗಾಡಿ ಓಡಿಸೋದಕ್ಕೇ ಆಗ್ತಾ ಇಲ್ಲ ಅಂದ ಮೆಲ್ಲಗೆ ತಿರುಗಿ. ಯಾಕೋ...? ಭಯವಾಗ್ತಾ ಇದೆ ಅಂದ್ಯಲ್ಲ ಚಿನ್ನ. ಹೇಗಿದ್ರೂ ನನಗೆ ಅದು ಇರಿಟೇಟ್ ಮಾಡ್ತಾ ಇದೆ. ನೀನೇ ಹಾಕ್ಕೋ. ಆದ್ರೇ ಬೇಗ ತೆಗೀ ಅಂದ.ಇಳಾ ಹೆಲ್ಮೆಟ್ ತೆಗೆದು ಅದರಲ್ಲಿ ತನ್ನ ತಲೆ ತೂರಿಸಿಕೊಂಡಳು.

ಆ ಗಳಿಗೆಗಿನ್ನೂ ಎರಡು ಸೆಕೆಂಡ್ ಆಗಿರಲಿಲ್ಲ ದೊಡ್ಡದೊಂದು ಸೌಂಡ್.
***
ಮಾರನೇ ದಿನ ಪೇಪರ್ನಲ್ಲಿ ಸಣ್ಣದೊಂದು ನ್ಯೂಸ್ ಹೀಗಿತ್ತು.ಬ್ರೇಕ್ ಫೇಲ್ಯೂರ್ ಆದದ್ದು ಗೊತ್ತಾದ ಕೂಡಲೇ ಹುಡುಗ ತನ್ನ ಹುಡುಗಿಯಾದರೂ ಬದುಕಿಕೊಳ್ಳಲೀ ಅನ್ನೋ ಆಸೆಯಿಂದ ತಾನು ಹಾಕಿದ್ದ ಹೆಲ್ಮೆಟ್ ಅವಳಿಗೆ ಕೊಟ್ಟಿದ್ದ.