Friday, June 13, 2008

ಪಾಳುಬಾವಿ ಬಳಿಯ ಕಾಲುದಾರಿಯಲ್ಲಿನ ಒಂದು ನೆನಪು


ನನಗಿನ್ನೂ ಅದು ನೆನಪಿದೆ.

ನಾವು ಸ್ಕೂಲಿಗೆ ಹೋಗುವಾಗ ಬರುವಾಗ ನಡುವೆ ಒಂದು ಬಾವಿ ಸಿಗುತ್ತಿತ್ತು. ಅದನ್ನೇನು ಯಾರೂ ಉಪಯೋಗಿಸ್ತಿರಲಿಲ್ಲ. ಪಾಳು ಬಾವಿ ಅಂತಾರಲ್ಲ ಆ ಥರದ್ದು. ಅದನ್ನ ದೆವ್ವದ ಬಾವಿ ಅಂತಾಲೂ ಕರೀತಿದ್ರು. ಅದರ ಎದೆ ಮೇಲೆ ಅಮಟೆ ಕಾಯಿ ಮರ... ನೇರಳೇ ಮರ... ಹೊಂಗೆ ಮರಗಳೆಲ್ಲ ಇದ್ವು. ಮೇನ್ ರೋಡ್ ಬಿಟ್ರೆ ಶಾಟರ್್ ಕಟ್ ಅಂತ ಬಹುತೇಕ ಮಂದಿ ಹೋಗುತ್ತಿದ್ದದು ಇದೇ ದಾರಿಯಲ್ಲಿ. ಹಾಗೇ ಹೋಗ್ತಾ ಬರ್ತಾ ಅಮಟೆ ಕಾಯಿ ಕಿತ್ಕೊಂಡು ಅದಕ್ಕೆ ಉಪ್ಪು ಕಾರ ಅದ್ಕಂಡು ತಿನ್ನೊ ಮಜಾ ಇದೆಯಲ್ಲ ಅದಕ್ಕೆ ಇವತ್ತಿನ ಯಾವ ತಿಂಡಿಯು ಸಮವಲ್ಲ ಬಿಡಿ. ಹುಣಸೇ ಹಣ್ಣಿಗೆ ಉಪ್ಪು ಕಾರ ಬೆರೆಸಿ ಅದನ್ನ ಉಂಡೆ ಮಾಡಿ ಕಡ್ಡಿಗೆ ಸಿಕ್ಕಿಸಿಕೊಂಡು ಚೂರು ಚೂರೇ ಚೂರು ಚೂರೇ ತಿಂತಾ ಇದ್ವಲ್ಲ ಅದ್ನ ಇವತ್ತಿನ ಯಾವ ಲಾಲಿಪಪ್ ತಿಂದ್ರೆ ಸಿಗುತ್ತೆ? ಉರುಳಿಯನ್ನ ಬೇಯಿಸಿ ಅದಕ್ಕೆ ಬೆಲ್ಲ ಏಲಕ್ಕಿ ಹಾಕಿ ಕುಟ್ಟಿ ಅವ್ವ ಮುದ್ದೆ ಗಾತ್ರ ಉಂಡೆ ಮಾಡಿ ಕೈ ತುಂಬಾ ಇಟ್ರೆ ಅದನ್ನ ತಿಂದಿದ್ದೇ ಗೊತ್ತಾಗ್ತಿರಲಿಲ್ಲ. ಹಸು ಕರು ಹಾಕಲಿ ಎಮ್ಮೆ ಕರು ಹಾಕಲಿ ಮೊದ ಮೊದಲು ಗಿಣ್ಣಿನ ಹಾಲಿರುತ್ತಲ್ಲ ಅದನ್ನ ಕಲ್ಲು ಇಟ್ಟು ಹಬೆಯಲ್ಲೇ ಬೇಯಿಸಿ ಒಳ್ಳೆ ಕೇಕ್ ಥರ ಮಾಡಿ ಕೊಡ್ತಿದ್ಲಲ್ಲ ಅವ್ವ. ಅದರ ರುಚೀನೆ ಬೇರೆ ಇತ್ತು! ಅವೆಲ್ಲ ನಮ್ಮ ತಲೆಮಾರಿಗೆ ಅಷ್ಟೇ ಗೊತ್ತೇನೋ. ಇವತ್ತಿನ ಮಕ್ಕಳಿಗೆ ಗಿಣ್ಣು ಅಂದ್ರೆ , ಉರುಳಿ ಕಾಳು ಅಂದ್ರೆ? ಹೂಂಹು ಅವರೆಲ್ಲ ಪಿಜ್ಜಾಗೆ ಮೊರೆ ಹೋದವರು... ಪೆಪ್ಸಿಗೆ ಮೊರೆ ಹೋದವರು... ಕುರ್ಕುರೆಗೆ ಮೊರೆ ಹೋದವರು. ಇರಲಿ.

ಈ ಬಾವಿ ಅಂತಂದನಲ್ಲ ಆ ವಿಷಯಕ್ಕೆ ಬರೋಣ. ಒಂದ್ಸಾರಿ ನಾನು ಅಕ್ಕ ಇಬ್ಬರೂ ಅದೇ ದಾರಿಯಲ್ಲಿ ಇಸ್ಕೂಲ್ ಮುಗಿಸಿಕೊಂಡು ಬರ್ತಾ ಇದ್ವಿ. ಬಾವಿ ಹತ್ರ ಬರೋದಕ್ಕೂ ಅದೇನೋ ಬಾವಿ ಒಳಕ್ಕೆ ದಡ್ ಅಂತ ಬೀಳುವುದಕ್ಕೂ ಸರಿ ಹೋಯ್ತು. ಅಕ್ಕ ಕಿಟಾರ್ ಅಂತ ಕಿರುಚಿದ್ಲು. ಅದರ ಹಿಂದೆಯೇ ನಾನೂ. ಇಬ್ಬರೂ ಅಲ್ಲಿ ಓಟಕಿತ್ತವರು ಮನೆಯ ಹೊಸ್ತಿಲ ತನಕ ನಿಲ್ಲಲಿಲ್ಲ. ಅವ್ವ ಗಾಬರಿಯಾಗಿ ಏನು ಅಂತ ಕೇಳಿದ್ರೆ ಹಿಂಗಿಂಗಾಯ್ತು ಅಂದ್ವಿ. ಅಪ್ಪ ಅವ್ವ ಆ ಕಡೆಯಿಂದ ಬರಬೇಡಿ. ಅಲ್ಲಿ ದೆವ್ವ ಇದೆಯಂತೆ ಅಂತ ನಾನು ಹೇಳಿರಲಿಲ್ವಾ? ಅಂತೆಲ್ಲ ಗದರಿಸಿದ ಮೇಲೆ ನಮಗೆ ಇನ್ನೂ ಭಯ ಹೆಚ್ಚಾಗಿ ಇಬ್ಬರೂ ಮೂರ್ನಾಲ್ಕು ದಿನ ಜ್ವರ ಬಂದು ಮಲಗಿದ್ವಿ. ಮಾರಮ್ಮನ ದೇವಸ್ತಾನಕ್ಕೆ ಕರ್ಕೊಂಡ್ ಹೋಗಿ ತಾಯ್ತಾ ಕಟ್ಟಿಸಿದ್ರು. ಕೆಂಪು ನೀರ್ ತೆಗದ್ರು... ಅದ್ಯಾವುದೋ ದೇವರ ದೂಳ್ತಾ ಹಚ್ಚಿದ್ರು...ತಡೆ ಹೊಡಿಸಿದ್ರು... ಕೊನೆಗೆ ಒಂದ್ ದಿನ ಜ್ವರ ಬಿಡ್ತು.ಆದ್ರೆ ಅಲ್ಲಿ ದೆವ್ವ ಆಗಿದ್ದು ಯಾರು? ಅನ್ನೋದು ಮಾತ್ರ ನಮಗೆ ಬಿಡದೇ ಕಾಡುತ್ತಿತ್ತು.ಆ ದೆವ್ವ ಬೇರೆ ಯಾರೂ ಅಲ್ಲ. ತುಂಬಾ ಹಿಂದೆ ನಮ್ಮೂರಲ್ಲಿ ಒಬ್ಬಳು ಹೆಣ್ಣುಮಗಳಿದ್ದಳು. ಇನ್ನೂ ಚಿಕ್ಕ ವಯಸ್ಸು ಆಕೀದು. ಮದುವೆ ಆಗಿ ಮೂರ್ನಾಲ್ಕು ವರ್ಷ ಆಗಿತ್ತಂತೆ. ಗಭರ್ಿಣಿ ಬೇರೆ. ಗಂಡ ದಿನ ಕುಡಿದು ಬಂದು ಗಲಾಟೆ ಮಾಡೋನಂತೆ. ಹೊಡೆಯೋನಂತೆ. ಗಂಡನ ಹೊಡೆತ ತಾಳಲಾರದೇ ಬೇಸತ್ತು ಆ ಬಾವಿಗೆ ಬಿದ್ದು ಸತ್ತೋದ್ಲಂತೆ. ಆ ಮೇಲೆ ಆಕೆ ಸೇಡಿನಿಂದ ಗಂಡನನ್ನೂ ಬಲಿ ತೆಗೆದುಕೊಂಡ್ಲಂತೆ. ಈಗಲೂ ಅಮಾಸೆ ಹುಣ್ಣಿಮೆಗೆ ಆ ಬಾವಿ ಹತ್ರ ಆಕೆ ಕೂತ್ಕಂಡು ಸರಿ ರಾತ್ರೀಲಿ ಅಳ್ತಾಳಂತೆ...ಇಷ್ಟೆಲ್ಲ ಹೇಳಿದಮೇಲೂ ಆ ಬಾವಿ ಕಡೆ ಹೋಗೋ ಗುಂಡಿಗೆ ಯಾರಿಗಿರುತ್ತೆ.ಆಮೇಲಿಂದ ಏನಿದ್ರೂ ನಮ್ದು ಮೇನ್ ರೋಡೇ.ಹೊಲದ ಮೇಲೆ ಹೋಗುವಾಗ ಬರುವಾಗ ತಿಂತಿದ್ದ ಹಾಲು ತುಂಬಿಕೊಂಡ ಕಾಚಕ್ಕೀ, ಮುಸುಕಿನ ಜೋಳ.. ಹಸಿ ಹಸೀ ಹೆಸರು ಕಾಳು... ಹತ್ತಿ ಹಣ್ಣು ಎಲ್ಲಾ ಆಗಾಗ್ಗೆ ನೆನಪಾಗುತ್ತೆ.

ಜೊತೆಗೆ ಈ ದೆವ್ವದ ಘಟನೆಯೂ.