Sunday, February 1, 2009

ರೋಸ್ ಅರಳಿದ ಸಮಯ



ವಿಧಿ ಕೆಲವೊಮ್ಮೆ ಏನೆಲ್ಲಾ ಮಾಡಿಬಿಡುತ್ತದೆ ಗೊತ್ತಾ?
ತಾಯ ಗರ್ಭದಿಂದ ಈ ಸುಂದರ ಜಗತ್ತಿಗೆ ಬಂದು ಬಿಡುತ್ತೇವೇನೋ ನಿಜ. ಆದ್ರೆ ಅದನ್ನ ನೋಡೋದಕ್ಕೆ ಕಣ್ಣೇ ಇರುವುದಿಲ್ಲ. ನಡೆಯಲು ಕಾಲೇ ಇರುವುದಿಲ್ಲ. ಮಾತಾಡಿದರೆ ಶಬ್ದಗಳೇ ಇರುವುದಿಲ್ಲ. ಹುಟ್ಟಿದ್ದಾದರೂ ಯಾಕೋ ಅನ್ನುವ ಅನಾಥಪ್ರಜ್ಞೆಯೊಂದು ಬದುಕಿನುದ್ದಕ್ಕೂ ಬಾಚಿ ತಬ್ಬಿಕೊಂಡೇ ಇರುತ್ತದೆ. ಇಂಥ ಎಷ್ಟೋ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ನಮ್ಮ ನಡುವೆಯೇ ಬದುಕೆಂಬ ಬಂಡಿಗೆ ಹೆಗಲು ಕೊಟ್ಟು ಹೇಗೋ ದೂಕುತ್ತಿರುತ್ತಾರೆ. ಅವರ ಬದುಕಿನ ಸಂಕಷ್ಟ ದೊಡ್ಡದು. ಕೈ ಹಿಡಿಯುವವರಿರುವುದಿಲ್ಲ, ಸಾಂತ್ವನ ಹೇಳುವವರಿರುವುದಿಲ್ಲ. ಬೇಡಿಕೊಳ್ಳೋಣವೆಂದ್ರೆ ಆ ದೇವರು ಮೊದಲೇ ಕೈ ಬಿಟ್ಟಿರುತ್ತಾನೆ!
ಫ್ರೆಂಡ್ಸ್ ಕಳೆದ ವಾರವಷ್ಟೇ ನಿಕ್ ಅನ್ನೋ ಹುಡುಗನ ಕಥೆ ಓದಿದ್ರಿ. ಆತನಿಗೆ ಎರಡೂ ಕೈ ಇಲ್ಲ. ಕಾಲೂ ಇಲ್ಲ. ಆದರೂ ಏನಾದ್ರೂ ಮಾಡಬೇಕು ಅಂತ ಹೊರಟು ಸಾಧನೆಯನ್ನು ಬಿಡದೆ ಒಲಿಸಿಕೊಂಡವ.
ಇದೂ ಅಂಥದೇ ಸ್ಟೋರಿ. ಹೇಳಬೇಕೆಂದ್ರೆ ಇವಳಿಗೆ ಅರ್ಧ ದೇಹ ಮಾತ್ರ ಇದೆ. ಇನ್ನರ್ಧ ಇಲ್ಲ. ಇವಳ ಹೆಸರು ರೋಸ್ಮೇರಿ ಸಿಗ್ಗಿನ್ಸ್. ಕೊಲೊರಾಡೋದವಳು. ಜೆನೆಟಿಕ್ ಡಿಸಾರ್ಡರ್ನಿಂದುಂಟಾದ ತೊಂದರೆಯಿಂದ ಅವಳ ನಿರುಪಯೋಗಿ ಕಾಲನ್ನು ಚಿಕ್ಕಂದಿನಲ್ಲೆ ತೆಗೆಯಲಾಗಿತ್ತು. ಅಲ್ಲಿಂದ ಶುರುವಾಯಿತು ನೋಡಿ ಅವಳ ಬದುಕಿನ ಹೋರಾಟ. ಹೇಗೆ ನೀನು ಈ ನೋವನ್ನ ಮೆಟ್ಟಿ ನಿಂತೆ ಅಂದ್ರೆೆ ರೋಸ್ ಹೇಳುವುದಿಷ್ಟು. ದಿಸ್ ಈಸ್ ಮೈ ರಿಯಾಲಿಟಿ. ದಿಸ್ ಈಸ್ ಮೈ ನಾರ್ಮಲ್. ನಾನು ನಿಮ್ಮೆಲ್ಲರ ತರಾನೆ ಏನು ಬೇಕಾದ್ರೂ ಮಾಡಬಲ್ಲೆ.
ಇಂತ ರೋಸ್ 1999ರಲ್ಲಿ ಡೇವಿಡ್ ಸಿಗ್ಗಿನ್ಸ್ನನ್ನ ಮದುವೆ ಅಗ್ತಾಳೆ. ಅದೂ ಕುತೂಹಲವೇ! ಡೇವ್ ಅವಳಿಗೆ ಪರಿಚಯವಾದದ್ದು ಫೋನ್ ಮುಖಾಂತರ. ತುಂಬಾ ದಿನ ಹಾಗೆ ಮಾತಾಡಿಕೊಂಡಿದ್ದ ರೋಸ್ ಒಂದಿನ ನಿನ್ನನ್ನ ನೋಡಬೇಕು ನನ್ನ ಆಫೀಸಿಗೆ ಬಾ ಅಂದುಬಿಡುತ್ತಾಳೆ. ಡೇವ್ ಹೋಗಿ ನೋಡಿದ್ರೆ ಅವನಿಗೆ ಅಂತ ಶಾಕ್ ಏನೂ ಆಗಲಿಲ್ಲ. ನನ್ನನ್ನ ಪರಿಪೂರ್ಣ ಮಹಿಳೆಯಂತೆ ನೋಡಿದ್ದು ಅವನು ಮಾತ್ರ ಅನ್ನುತ್ತಾಳೆ ರೋಸ್. ಇವಳು ಜಸ್ಡ್ ಎರಡೂವರೆ ಅಡಿ. ಆತ ಐದು ಅಡಿ ಹತ್ತು ಇಂಚು ಎತ್ತರ ಇದ್ದಾನೆ. ಪ್ರೀತಿ ಒಂದಿದ್ರೆ ಜೋಡಿ ಹೇಗಿದ್ದರೇನು ಅಲ್ವ! ಅಲ್ಲಿಗೆ ಅವಳ ಮಹತ್ತರ ಕನಸೊಂದು ನನಸಾಗಿತ್ತು.
ರೋಸ್ಳ ಬದುಕು ಅಷ್ಟು ಖುಷಿಯಾಗೇನೂ ಇರಲಿಲ್ಲ. ಈಗಲೂ. ಆದ್ರೆ ಅವಳು ಬಂದ ಕಷ್ಟಗಳನ್ನ ಎದುರಿಸಿದ ರೀತಿ ಇದೆಯಲ್ಲ ಗ್ರೇಟ್. ನೀವು ನಂಬಲಿಕ್ಕಿಲ್ಲ ಅವಳು ಗಭರ್ಿಣಿ ಅಂದಾಗ ಡಾಕ್ಟರೇ ಗಾಬರಿ ಬಿದ್ದಿದ್ದರು. ನೀನು ಅಥವಾ ಮಗು ಇಬ್ಬರಲ್ಲಿ ಒಬ್ಬರು ಮಾತ್ರ ಉಳಿಯೋದಕ್ಕೆ ಸಾಧ್ಯ. ಡಿಸೈಡ್ ಮಾಡು ಅಂದರಂತೆ. ಆದ್ರೆ ಇವಳು ನೋ ಪ್ರಾಬ್ಲೆಮ್ ಡಾಕ್ಟರ್. ನನಗೆ ಮಗು ಬೇಕು ಅಂದುಬಿಟ್ಟಳು. ಆಕೆ ಅದೆಂತಹ ನೋವು ತಿಂದಿರಬೇಕು. ಸಿಸೇರಿಯನ್ ಮಾಡಿ ಗಂಡು ಮಗು ಆಗಿದೆ ನೋಡು ಅಂತ ತೋರಿಸಿದರೆ ರೋಸ್ ಮೊದಲು ನೋಡಿದ್ದು ಮಗುವಿನ ಕೈಕಾಲುಗಳನ್ನ. ಎಲ್ಲಾ ಸರಿಯಾಗಿವೆ ಅನಿಸಿದ ಮೇಲೆ ಅವಳು ನಿಟ್ಟುಸಿರು ಬಿಟ್ಟಿದ್ದಂತೆ. ಸಂತೋಷ ಪಟ್ಟಿದ್ದಂತೆ. ಅವಳ ಬದುಕಿನಲ್ಲಿ ಅದು ಎಂದೂ ಮರೆಯಲಾಗದ ಕ್ಷಣ. ಆ ಮಗುವಿನ ಹೆಸರು ಲೂಕ್ ಸಿಗ್ಗಿನ್ಸ್. ಈಗ ಅವನು ಅಮ್ಮನಿಗಿಂತ ಎತ್ತರಕ್ಕೆ ಬೆಳೆದುಬಿಟ್ಟಿದ್ದಾನೆ.
ನಂಬಿ ರೋಸ್ ಎರಡನೇ ಬಾರಿ ಗರ್ಭವತಿಯಾದಳು. ಡಾಕ್ಟರು ಅಲ್ಲಮ್ಮ ಮೊದಲನೇ ಹೆರಿಗೇನೇ ಅಷ್ಟು ಕಷ್ಟ ಆಯ್ತು. ಮತ್ತೇಕೆ ರಿಸ್ಕ್ ತೆಗೋಳ್ತೀದೀಯ ಅಂದ್ರೆ, ನನಗೆ ಗೊತ್ತು ಡಾಕ್ಟರ್. ನಾನಿರುವ ಸ್ಥಿತಿಯಲ್ಲಿ ಬೇರೇ ಯಾರೇ ಇದ್ದರೂ ಆಕೆ ಗರ್ಭ ಧರಿಸಲು ಒಪ್ಪುತ್ತಿರಲಿಲ್ಲ. ಬಟ್ ನಾನು ಹಾಗಲ್ಲ. ಮೊದಲನೆಯದು ಮಿರಾಕಲ್ ಅಂದ್ರಿ. ಈಗ ಇನ್ನೊಂದು ಮಿರಕಲ್ ಜರುಗಲಿ ಬಿಡಿ ಅಂದಳಂತೆ. ಅದರ ಫಲ ಈಗ ರೋಸ್ಗೆ ಒಂದು ಮುದ್ದಾದ ಹೆಣ್ಣು ಮಗು ಇದೆ.
ರೋಸ್ಳ ಆತ್ಮಸ್ಥೈರ್ಯ ಎಂಥವರನ್ನೂ ದಂಗುಬಡಿಸುತ್ತದೆ. ಅವಳು ಎಲ್ಲಾ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾಳೆ. ನಾನೂ ನಿಮ್ಮಂತೆಯೇ ನಾರ್ಮಲ್ ಆಗಿ ಎಲ್ಲಾ ಕೆಲಸ ಮಾಡುತ್ತೇನೆ. ಆದ್ರೆ ಚೂರು ಡಿಫರೆಂಟ್ ಆಗಿರುತ್ತೆ ಅಷ್ಟೆ ಅನ್ನೋದು ಅವಳ ಮಾತು. ಕಾರ್ ಓಡಿಸುತ್ತಾಳೆ. ಮಕ್ಕಳನ್ನ ತಿರುಗಾಟಕ್ಕೆ ಕರೆದೊಯ್ಯುತ್ತಾಳೆ. ಗಂಡನ ಜೊತೆ ಜಾಲಿ ರೈಡಿಂಗ್ ಹೋಗುತ್ತಾಳೆ. ಅವಳ ಬದುಕಲ್ಲಿ ಆಗಲ್ಲ ಅನ್ನುವುದು ಏನೂ ಇಲ್ಲ. ನನ್ನ ಗಂಡ ಡೇವ್ ಇದಾನಲ್ಲ. ಆತ ಚಿನ್ನದಂಥವ. ಆತನ ಸಪ್ಪೋಟರ್್ ಇಲ್ಲದಿದ್ರೆ ನಾನೆಲ್ಲಿರುತ್ತಿದ್ದೆ ಅನ್ನುವುದನ್ನು ಆಕೆ ಮರೆಯುವುದಿಲ್ಲ. ಗಂಡ ಮಾತ್ರವಲ್ಲ ಹೆತ್ತವರೂ ಇವಳನ್ನ ಬಗಲಿಗೆ ಹಾಕಿಕೊಂಡು ಸಾಕಿದರು. ನೀನು ಏನು ಬೇಕಾದ್ರೂ ಮಾಡು ಮಗಳೇ ಅಂದರು. ವಿಕಲಾಂಗರಿಗೆ ಒಂದು ಪುಟ್ಟ ಭರವಸೆ, ಒಂದು ಆತ್ಮಸ್ಥೈರ್ಯ, ಸಣ್ಣದೊಂದು ಹೋಪ್ ಅಪ್ಪ ಅಮ್ಮಂದಿರಲ್ಲದೇ ಬೇರೆ ಯಾರು ಕೊಡಲಿಕ್ಕೆ ಸಾಧ್ಯ, ಅಲ್ಲವೇ!
ಇದನ್ನೆಲ್ಲ ಯಾಕೆ ಬರೀತಿದೀನಿ ಅಂದ್ರೆ ನಮ್ಮ ನಡುವೆಯೂ ಅದೆಷ್ಟೋ ವಿಕಲಚೇತನ ಪ್ರತಿಭೆಗಳಿವೆ. ಅವರಿಗೆ ರೋಸ್ಳಂತವರು, ನಿಕ್ನಂಥವರು ಸ್ಫೂತರ್ಿಯಾಗಬೇಕು. ಸೋತು ಕೂರುವುದು ಮೈ ಮನಸ್ಸನ್ನ ಇನ್ನಷ್ಟು ಜಡ್ಡುಗಟ್ಟಿಸಿಬಿಡುತ್ತದೆ. ಆದ್ರೆ ಗೆಲುವಿನ ಹಾದಿ ಹಿಡಿದು ಎದ್ದು ನಿಲ್ಲುತ್ತಾರಲ್ಲ ಅಂಥವರಿಗೆ ಒಂದು ಸಣ್ಣ ಸುಖದ ಹಾದಿಯಾದರೂ ಗೋಚರಿಸದೇ ಇರುವುದಿಲ್ಲ.
ಪ್ರಯತ್ನ ಮಾಡಬೇಕಷ್ಟೆ.

1 comment:

Anonymous said...

Super post! Highly inspiring!!