Monday, January 21, 2008

ಅವನ "ಅವಳು" ಮಾತ್ರ ನನಗೆ ಇನ್ನೂ ಮಿಲಿಯನ್ ಡಾಲರ್ ಪ್ರಶ್ನೆಯೇ?

ಮೊನ್ನೆಯಷ್ಟೇ ಹಾಸನಕ್ಕೆ ಹೋಗಿದ್ದೆ.

ಅಲ್ಲಿನ ಬಸ್ ಸ್ಟಾಂಡಿನಲ್ಲಿ ರಾತ್ರಿ ಎರಡಕ್ಕೆ ಇಳಿದವನಿಗೆ ಯಾಕೋ ಕ್ಷಣ ಕೂರಬೇಕೆನಿಸಿತು. ಲಗ್ಗೇಜನ್ನು ಪಕ್ಕಕ್ಕೆ ಒಗೆದು ಅಲ್ಲೇ ಒಂದು ಕಲ್ಲು ಬೆಂಚಿನ ಮೇಲೆ ಕುಳಿತೆ. ಕ್ಷಣ ಕೂಡ ಆಗಿಲ್ಲ... ಎಲ್ಲಿ ಇಲ್ಲೇ ನಿದ್ರೆ ಮಾಡಿಬಿಡುತ್ತೇನೋ ಅನ್ನುವ ಭಯ ಕಾಡತೊಡಗಿತು. ಕಣ್ಣುಗಳಲ್ಲಿ ಜೋಂಪು ಬೇರೆ. ಸರಿಯಾಗಿ ನಿದ್ರೆ ಮಾಡಿಯೇ ಮೂರು ದಿನವಾಗಿತ್ತು. ಇನ್ನು ಕೂರುವುದು ಸರಿಯಿಲ್ಲ ಅಂತ ಎದ್ದು ಆಟೋ ಹಿಡಿಯೋಣ ಅಂತ ಹೊರಟೆ.

"ಅಷ್ಟರಲ್ಲಿ ಸಾರ್ ನಿಮ್ಮ ಲಗ್ಗೇಜ್ ತಗೊಳ್ಲಾ?" ಅಂತ ಯಾರೋ ಕೇಳಿದಂಗಾಯ್ತು. ತಿರುಗಿ ನೋಡಿದರೆ... ಇನ್ನೂ ಮೂವತ್ತರ ಆಸುಪಾಸಿನ ಯುವಕ. ಬಟ್ಟೆ ಎಲ್ಲಾ ಕೊಳಕಾಗಿದ್ದವು. "ಏನು ಬೇಡಪ್ಪ... ನಾನೇ ತೆಗೆದುಕೊಂಡು ಹೋಗ್ತೇನೆ!"ಅಂದೆ. ಆದರೆ ಅವನು ನನ್ನನ್ನು ಬಿಡುವ ಹಾಗೆ ಕಾಣಲಿಲ್ಲ. "ಸಾರ್ ಹಾಗನ್ನಬೇಡಿ. ನೀವು ಕೊಡುವ ಐದೋ ಹತ್ತೋ ರುಪಾಯಿಯಿಂದ ನನ್ನ ಹೊಟ್ಟೆ ಪಾಡು ತುಂಬಬೇಕು. ನಿಮ್ಮ ಕೈಯಲ್ಲಿ ಇದನ್ನು ಹೊರಲು ಆಗೊಲ್ಲ ಅಂತಲ್ಲ. ಆದ್ರೆ ನಾವೂ ಬದುಕಬೇಕಲ್ಲ. ತಗಳ್ತೀನ್ ಬಿಡಿ ಸಾರ್..." ಅಂದವನೆ ನನ್ನ ಮಾತಿಗೂ ಕಾಯದೆ ಲಗ್ಗೇಜನ್ನ ತೆಗೆದುಕೊಂಡು ಮುಂದೆ ಮುಂದೆ ನಡೆದ.

ನನ್ನ ಮನದಲ್ಲಿ ಎಂಥವನೋ ಏನೋ ಅನ್ನುವ ಅಳುಕು ಬೇರೆ!ಇನ್ನು ಮಾತಾಡಿ ಪ್ರಯೋಜನವಿಲ್ಲ ಅನಿಸಿತು. ಜೊತೆಗೆ ಅವನು ಹೇಳಿದ ಮಾತೂ ಸತ್ಯವೆನಿಸಿತು.ನೂರು-ಸಾವಿರ ರುಪಾಯಿಗಳನ್ನ ಎಲ್ಲೋ ಒಮ್ಮೊಮ್ಮೆ ಅನವಶ್ಯಕವಾಗಿ ಕಳೆದುಬಿಡುತ್ತೇವೆ. ಇಲ್ಲಿ ನಿಮ್ಮ ಬ್ಯಾಗ್ ತೆಗೆದುಕೊಳ್ಳುತ್ತೇನೆ ಅನ್ನುವ ವ್ಯಕ್ತಿಗೆ ಹತ್ತು ರುಪಾಯಿ ಕೊಡಲು ಹಿಂದೆ ಮುಂದೆ ನೋಡುತ್ತೇವಲ್ಲ ಇದು ಸರಿಯಿಲ್ಲ ಅನಿಸಿತು.ಲಗ್ಗೇಜನ್ನ ರಸ್ತೆ ಪಕ್ಕ ಇಟ್ಟು ನಿಂತವನ ಕಣ್ಣಲ್ಲಿ ಎಂಥದೋ ನಿಭರ್ಾವುಕತೆಯಿತ್ತು."ಯಾವೂರು?" ಕೇಳಿದೆ."ಇದೇ ಊರು ಸಾರ್. ಹಾಸನವೇ!" "ಯಾಕೆ ಎಲ್ಲೂ ಕೆಲಸಕ್ಕೆ ಟ್ರೈ ಮಾಡಲಿಲ್ವಾ?""ನಮ್ಮಂತೋರಿಗೆ ಎಲ್ಲಿ ಕೆಲಸ ಕೊಡ್ತಾರೆ ಬಿಡಿ . ಅದೂ ಅಲ್ದೆ ನಾನು ಓದಲೂ ಇಲ್ಲ. ಅಪ್ಪ ಸಿಕ್ಕಾಬಟ್ಟೆ ಕುಡೀತಾನೆ. ಅಮ್ಮಾನು ಅಲ್ಲಿ ಇಲ್ಲಿ ಕೂಲಿ ಮಾಡ್ತಾಳೆ. ಹೊಟ್ಟೆ ಪಾಡು ಹೇಗೋ ನಡೀತಾ ಇದೆ. ಇವತ್ತು ಈ ಊರು ನಾಳೆ ಇನ್ಯಾವ ಊರೋ? ಆದ್ರೆ ಅವಳು ಮಾತ್ರ ಹಾಗೆ ಕೈ ಕೊಟ್ಟುಬಿಟ್ಟು ಹೋಗಬಾರದಿತ್ತು? ............ನೀವು ಬೆಂಗಳೂರವ್ರ...?" ನಾನು ಹೂಂ ಅನ್ನುವ ಮೊದಲೇ "ನನಗೂ ಬೆಂಗಳೂರಿಗೆ ಬರಬೇಕು ಅನ್ನೋ ಆಸೆ ಇದೆ, ಆದರೆ ಅಲ್ಲಿ ಬಂದು ಏನು ಮಾಡಲಿ ಅನ್ನೋದೇ ಗೊತ್ತಿಲ್ಲ. ಅದೂ ಅಲ್ದೆ ಅಲ್ಲಿ ನಮ್ಮಂತೋರಿಗೆಲ್ಲ ಜಾಗ ಇದೆಯಾ? ನೀವು ಏನು ಕೆಲ್ಸ ಮಾಡ್ತೀರಾ ? ಅಂದ.

"ನಾನು ಪತ್ರಕರ್ತ."

"ಒಳ್ಳೆ ಸಂಬಳ ಇರಬೇಕು ಅಲ್ವಾ ಬಾಸ್?" ಅಂದ.

ನಾನು ಸುಮ್ಮನೆ ನಕ್ಕೆ.

ಯಾಕೋ ಅವಳು ಅಂದನಲ್ಲ ಅದೇನೆಂದು ಕೇಳಬೇಕೆನಿಸಿತು. ಮನಸ್ಸು ಕೆಲವೊಮ್ಮೆ ಹೆಣ್ಣಿನ ಬಗ್ಗೆ ಇನ್ನಿಲ್ಲದ ಕುತೂಹಲ ಹುಟ್ಟಿಸಿಕೊಂಡು ಬಿಡುತ್ತೆ ಅಲ್ವ!

"ಅವಳೂ ಅಂದಲ್ಲ ಯಾರದು?" "ನನ್ನ ಹೆಂಡ್ತೀ? ಚೆನ್ನಾಗೆ ಇದ್ಲು ಬಾಸ್. ನನ್ನನ್ನ ಕಂಡರೆ ಅವಳಿಗೆ ಸಕ್ಕತ್ ಪ್ರೀತೀನೂ ಇತ್ತು. ಆದ್ರೆ ಒಂದಿನ ಹೇಳದೆ ಕೇಳದೆ ಯಾರದೋ ಜೊತೆ ಹೊರಟೋದ್ಲು ಸಾರ್. ಎಲ್ಲಿಗೋದ್ಲು, ಬದುಕಿದಾಳಾ ಸತ್ತಿದಾಳಾ ಅಂತಾನೂ ಗೊತ್ತಿಲ್ಲ"."ಓಹೋ" ಅಂದವನೆ "ಯಾಕೆ ನೀನು ಚೆನ್ನಾಗಿ ನೋಡಕೊಳ್ತಾ ಇರಲಿಲ್ವಾ?" ಅಂದೆ."ಸಾರ್ ಚಿನ್ನ ಚಿನ್ನ ನೋಡ್ಕೊಳೋ ಅಂಗೆ ನೋಡ್ಕತಾ ಇದ್ದೆ. ಎಷ್ಟೋ ಸಾರಿ ನಾನು ಅವಳಿಗೆಂದೇ ಹೆಚ್ಚು ಹೊತ್ತು ಕೆಲಸ ಮಾಡಿ ಅವಳಿಗೇನೇನು ಬೇಕೋ ಎಲ್ಲಾನು ತೆಗೊಂಡು ಹೋಗ್ತಿದ್ದೆ. ಆದ್ರೂ ಹೋಗಬಿಟ್ಲು. ಮನಸ್ಸು ಯಾಕೋ ಅವಳಿಲ್ದೆ....... ಪತರಗುಟ್ಟತಾ ಇದೆ..."

ಯಾಕೋ ಇನ್ನು ಹೆಚ್ಚಿಗೆ ಮಾತಾಡುವುದು ಬೇಡ ಅನಿಸಿತು.ಅವನ ಕೈಗೆ ಇಪ್ಪತ್ತು ರುಪಾಯಿ ಇಟ್ಟೆ."ಬಾಸ್ ಇಲ್ಲಿಂದಿಲ್ಗೆ ಇಷ್ಟೊಂದು ಯಾಕೆ. ಬೇಡ ತಗೊಳಿ. ಐದು ರುಪಾಯಿ ಕೊಡಿ ಸಾಕು" ಅಂತ ಹಿಂದಿರುಗಿಸಲು ಬಂದ. "ನಾನು ಪರವಾಗಿಲ್ಲ ಇಟ್ಕೋ" ಅಂದಿದ್ದಕ್ಕೆ"ಇವತ್ತು ನಿಮ್ಮ ಹೆಸರು ಹೇಳ್ಕಂಡು ಒಂದು ಬಿರಿಯಾನಿ ತಿಂದುಬಿಡ್ತೀನಿ ಬಿಡಿ" ಅಂತ ನಕ್ಕ.

ನಾನೂ ನಕ್ಕೆ. ಅಷ್ಟರಲ್ಲಿ ಆಟೋ ಬಂದಿದ್ದರಿಂದ ತಕ್ಷಣ ಆಟೋ ಹತ್ತಿ ಕುಳಿತೆ.

ಅವನು ಬಿರಿಯಾನಿ ತಿಂದನಾ... ಇಲ್ಲವಾ ಗೊತ್ತಿಲ್ಲ.

ಆದರೆ ಅವನ "ಅವಳು" ಮಾತ್ರ ನನಗೆ ಇನ್ನೂ ಮಿಲಿಯನ್ ಡಾಲರ್ ಪ್ರಶ್ನೆಯೇ?

No comments: