Saturday, July 26, 2008

ಮಾರ್ನಿಂಗ್ ದುನಿಯಾದಲ್ಲಿ ಸಿಕ್ಕ ಗೆಳೆಯನೂ ಮತ್ತವನ ಪ್ರೀತಿಯೂ


ಅವತ್ತು ಇಡೀ ರಾತ್ರಿ ಕಣ್ಣು ಮುಚ್ಚಿಲ್ಲ. ಸೀನಣ್ಣ ಸ್ವಲ್ಪ ಸಮಯ ಜೊತೆಲಿದ್ದು ಆಮೇಲೆ ಹಾಯ್ ಬೆಂಗಳೂರ್ ಪ್ರಿಂಟ್ ಇದ್ದದ್ದರಿಂದ ಅದರ ಉಸ್ತುವಾರಿಗೆ ಹೋದ. ಎದುರಿಗಿದ್ದ ಮೆಷೀನ್ ಸೆಕೆಂಡಿಗೆ ಮೂರು ಕಲರ್ ಷೀಟ್ ಉಗುಳುತಿತ್ತು. ಮಧ್ಯೆ ಮಧ್ಯೆ ಪ್ರಿಂಟರ್ಗೆ ನಂಗೊಂದು ಷೀಟ್ ಕೊಡಿ ಅಂತ ತೆಗೆದುಕೊಂಡು ಕಲರ್ ಸರಿಯಾಗಿದೆಯಾ ಅಂತ ನೋಡ ನೋಡುತ್ತಲೇ ಬೆಳಕು ಹರಿದಿತ್ತು. ಪ್ರಿಂಟರ್ ತಮಿಳುನಾಡಿನವನು. ಕನ್ನಡ ಮಾತಾಡಿದರೆ ಅದು ತಮಿಳೇ ಇದ್ದಂಗಿತ್ತು. ಸಾರ್ ಣೀವು ಹೋಗಿ ಮಳಗಿ. ನಣ್ಣ ಮೇಲೇ ಣಂಬಿಗೆ ಇಳ್ಳವಾ? ಅಂತ ಅವನು. ಇಲ್ಲಪ್ಪ ನನಗೆ ಅಭ್ಯಾಸ ಆಗಿಹೋಗಿದೆ. ಪರವಾಗಿಲ್ಲ ಇರ್ತೇನೆ ಅಂತ ಪಟ್ಟಾಗಿ ಅಲ್ಲೇ ಒಂದು ಚೇರ್ ಎಳೆದುಕೊಂಡು ಕುಳಿತುಬಿಟ್ಟೆ. ನನಗೆ ಹೀಗೆ ನಿದ್ರೆಗೆಡುವುದೆಲ್ಲ ಹೊಸದಲ್ಲ. ಮೈಸೂರಿನಲ್ಲಿದ್ದಾಗ ಒಂದು ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿದ್ದ ಎಲ್ಲರೂ ತಮಿಳರೇ. ಹಾಗಾಗಿ ತಮಿಳಿನ ಗಂಧ ನನಗೆ ಸ್ವಲ್ಪ ಗೊತ್ತು. ಅವರು ಕೆಟ್ಟಕೆಟ್ಟದಾಗಿ ಬೈದಾಡಿಕೊಳ್ಳುತ್ತಿದ್ರೆ (ಅಥವಾ ನಮಗೆ ಬೈದ್ರೆ) ನಾನು ಮೊದಮೊದಲು ಪೆಕರುಪೆಕರಾಗಿ ನೋಡುತ್ತಿದ್ದೆ. ಆಮೇಲೆ ಸ್ವಲ್ಪ ಹುಷಾರಾಗಿ ಆ ಬೈಗುಳದ ಅರ್ಥ ತಿಳಿದುಕೊಂಡೆ. ಆಗ ಗೊತ್ತಾಯ್ತು ಅವರು ಏನೆಲ್ಲ ಬೈದಾಡಿಕೊಳ್ಳುತ್ತಿದ್ದರೂ ಅಂತ. ಆಮೇಲಾಮೇಲೆ ನಾನೂ ಅವರನ್ನು ಅದೇ ಭಾಷೆಯಲ್ಲಿ ಬೈದಾಗ ಇವನಿಗೆ ತಮಿಳು ಕಲಿಸಿಕೊಟ್ಟಿದ್ದೇ ತಪ್ಪಾಯ್ತು ಅಂತ ಅವರು ಪೇಚಾಡಿಕೊಂಡಿದ್ದರು.ಇಂತಿಪ್ಪ ಪ್ರೆಸ್ನಲ್ಲಿ ನಾವು ಹೆಣ ಬಿದ್ದೋಗೋ ಹಂಗೆ ದುಡಿಯುತ್ತಿದ್ದೆವು. ನಿಜ ಹೇಳ್ತೀನಿ ಆ ಎರಡು ವರ್ಷದಲ್ಲಿ ನಾನು ದಿನಕ್ಕೆ ನಿದ್ರೆ ಅಂತ ಮಾಡುತ್ತಿದ್ದದ್ದು ಕೇವಲ ಮೂರೋ ನಾಲ್ಕೋ ಗಂಟೆ ಮಾತ್ರ. ರಾತ್ರಿ ಎಲ್ಲಾ ದುಡಿದು ಬೆಳಗಿನ ಮೂರೋ ನಾಲ್ಕೋ ಗಂಟೆಗೆ ಅವರು ಸೈಕಲ್ ಹತ್ತಿ ಹೊರಟುಬಿಡುತ್ತಿದ್ದರು. ನಾನು ಅಲ್ಲೇ ಡಬ್ಬಲ್ ಡೆಮಿ ಪೇಪರ್ ಒಂದನ್ನು ಹಾಸಿಕೊಂಡು ಅಂತದೇ ಇನ್ನೊಂದನ್ನು ಹೊದ್ದುಕೊಂಡು ಮಲಗಿಕೊಳ್ಳುತ್ತಿದ್ದೆ. ಬೆಳಿಗ್ಗೆ ಹೋದ್ರೆ ಮನೆ, ಇಲ್ಲ ಅಂದ್ರೆ ಡ್ಯೂಟಿ ಕಂಟಿನ್ಯೂ ಆಗ್ತಿತ್ತು. ಆ ರಾತ್ರಿಗಳಲ್ಲೆ ನಾನು ಗೆಳೆಯ ಗೆಳತಿಯರಿಗೆ ಒಬ್ಬಂಟಿಯಾಗಿ ಕುಳಿತು ಪತ್ರ ಬರೆಯುತ್ತಿದ್ದದ್ದು. ಆಗ ನನಗಿದ್ದ ಬರವಣಿಗೆ ಅಂದ್ರೆ ಅದೊಂದೇ. ಪುಟಗಟ್ಟಲೇ ಪತ್ರ ಬರೆಯುವುದು ಅಭ್ಯಾಸವಾಗಿ ಹೋಗಿತ್ತು. ಯಾವುದಾವುದೋ ವಿಷಯ... ಏನೇನೋ ಚಚರ್ೆ, ಜೊತೆಗೊಂದಿಷ್ಟು ಗೆರೆಗಳು. ನಾನು ಬರೆವ ಪ್ರತಿ ಲೆಟರ್ನಲ್ಲೂ ಚಿತ್ರ ಇದ್ದೇ ಇರುತ್ತಿತ್ತು. ಅವನ್ನೆಲ್ಲ ಈಗಲೂ ನೆನೆದು ಪುಳಕಗೊಳ್ಳುತ್ತೇನೆ.ನಾವಿದ್ದ ಪ್ರೆಸ್ನಿಂದ ಕೂಗಳತೆ ದೂರದಲ್ಲಿ ದಾಸ್ಪ್ರಕಾಶ್ ಪ್ಯಾರಡೈಸ್ನವರದೊಂದು ಬೇಕರಿ ಇತ್ತು. ಅಲ್ಲಿ ದಿಲ್ಪಸಂದ್ ನೆನಸಿಕೊಂಡ್ರೆ ಈಗಲೂ ಬಾಯಲ್ಲಿ ನೀರೂರುತ್ತೆ. ಅಷ್ಟು ಚೆನ್ನಾಗಿರುತ್ತಿತ್ತು. ಅದನ್ನ ತಂದು ಮೇಯ್ತಿದ್ವಿ. ಹೆಚ್ಚು ಕಡಿಮೆ ವಾರದಲ್ಲಿ ಮೂರ್ನಾಲ್ಕು ದಿನ ಇರ್ತಿತ್ತು. ಹಣದ್ದೇನು ಕೊರತೆ ಇರ್ತಿರಲಿಲ್ಲ. ಓಟಿ ಕೊಡ್ತಿದ್ರು. ತಿಂಡಿಗೂ ಕಾಸು ಕೊಡ್ತಿದ್ರಲ್ಲ! ಆಮೇಲೆ ರಾತ್ರಿಗೆ ಊಟಕ್ಕೆ ಅಂತ ಪರೋಟ ತಿಂತಿದ್ವಿ. ಅದೂ ಒಂಥರಾ ಮಜ್ಜಾ ಇರ್ತಿತ್ತು. ಪರೋಟ ತಂದು ಅದಕ್ಕೆ ಸಾಗು ಹಾಕ್ಕೊಂಡು ತಿನ್ನೋದು ಓಕೆ. ಆದ್ರೆ ಈ ತಮಿಳ್ನೋರು ನನಗೊಂದು ಹೊಸ ರುಚಿ ಹೇಳ್ಕೊಟ್ರು. ಪರೋಟಾನೆಲ್ಲ ಪೀಸ್ ಪೀಸ್ ಮಾಡಿ ಅದಕ್ಕೆ ಸಾಗು ಹಾಕಿ ಕಲಸಿ... ಜೊತೆಗೆ ಎರಡೋ ಮೂರೋ ಬಾಳೆ ಹಣ್ಣು ಹಾಕಿ ಕಲಸಿಕೊಳ್ಳೋದು. ಏನೋ ಒಂಥರ ರುಚಿ ಸಿಗ್ತಿತ್ತು. ಹಾಗೆ ಕಲಸಿಕೊಂಡು ಎರಡು ಪರೋಟ ತಿಂದುಬಿಟ್ರೆ ರಾತ್ರಿ ಇಡೀ ಹಸಿವು ಅನ್ನೋದು ಹತ್ತಿರಕ್ಕು ಸುಳಿಯುತ್ತಿರಲಿಲ್ಲ. ಆದ್ರ್ರೆ ಬೆಳಗಿನ ಜಾವ ಮೂರು ಗಂಟೆ ಆಗ್ತಾ ಇದ್ದ ಹಾಗೆ ಒಂದು ನಿದ್ರೆ ಬರ್ತಿತ್ತು ನೋಡಿ, ತಡೆಯೋದಕ್ಕೆ ಸಾಧ್ಯಾನೆ ಇಲ್ಲ ಅನ್ನೋ ನಿದ್ರೆ ಅದು. ಒಮ್ಮೆ ತೂಕಡಿಸುತ್ತಲೇ ಪೇಪರ್ ಎಲ್ಲಾ ಸ್ಟೋರ್ ಆಗುತ್ತಲ್ಲ ಟ್ರೇ ಅದರೊಳಕ್ಕೇ ಕೈ ಹಾಕ್ಕೊಂಡು ಮಲಗಿಬಿಟ್ಟಿದ್ದೆ. ಪುಣ್ಯಕ್ಕೆ ಅಲ್ಲಿರುವವರು ಎಚ್ಚರಿಸಿದ್ದರು.ಇಂಥ ಪ್ರೆಸ್ನಿಂದ ಒಂದಿನ ಒಂದು ಮಾತೂ ಆಡದೇ ಎದ್ದು ಬಂದಿದ್ದೆ. ಆಗ ನಾನು ಅನುಭವಿಸಿದ ಡಿಪ್ರೆಷನ್ ಇದೆಯಲ್ಲ ಅದರಿಂದ ಪಾರಾಗಲು ನನಗೊಂದು ದಾರಿ ಬೇಕಿತ್ತು. ನನ್ನ ಬದುಕು ಕಟ್ಟಿಕೊಳ್ಳಲು ಒಂದು ಕನಸು ಬೇಕಿತ್ತು. ಅಂಥದ್ದೊಂದು ಕನಸಿನ ಬೆನ್ನು ಹತ್ತಿ ಬಂದವನಿಗೆ ಬೆಂಗಳೂರು ಬೇಡ ಅನ್ನಲಿಲ್ಲ.ಬದುಕು ನಿಧಾನಕ್ಕೆ ಬದಲಾಗತೊಡಗಿತು.ಯಾಕೋ ಹೋದ ವಾರ ಫಸ್ಟ್ ಹಾಫ್ ಮುದ್ರಣಕ್ಕೆ ಅಂತ ಪ್ರೆಸ್ಗೆ ಹೋದಾಗ ಇದೆಲ್ಲ ನೆನಪಾಗತೊಡಗಿತು.ಹಾಗೆ ರಾತ್ರಿ ಎಲ್ಲ ನಿದ್ರೆ ಗೆಟ್ಟು ಬೆಳಿಗ್ಗೆ ಮನೆಗೆ ಹೋಗಿ ಸ್ನಾನ ಮಾಡಿಬರೋಣ ಅಂತ ಹೊರಟೆ. ಕಾರು ಪ್ರೆಸ್ಸಲ್ಲೇ ಬಿಟ್ಟು ಹೋಗಿದ್ದೆನಾದ್ದರಿಂದ ಇಸ್ಕಾನ್ ಹತ್ತಿರ ಬಂದ ಆಟೋ ಒಂದಕ್ಕೆ ಕೈ ಅಡ್ಡ ಹಾಕಿದೆ.ನನ್ನ ಏರಿಯಾಗೆ ಬರ್ತೀಯಾ ಅಂದೆ.ನಾನಿದ್ದ ಡ್ರೆಸ್ ನೋಡಿಯೋ ಏನೋ, ಏನ್ ಸಾರ್ ಇಲ್ಲಿಗಂಟ. ಜಾಗಿಂಗ್ ಬಂದುಬಿಟ್ರಾ ಅಂತ ಆತ್ಮಿಯವಾಗಿ ಕೇಳಿದ. ಇಲ್ಲ ಇಲ್ಲ. ಪ್ರೆಸ್ಗೆ ಬಂದಿದ್ದೆ. ಈಗ ಮನೆಗೆ ಹೋಗತಾ ಇದೀನಿ ಅಂದೆ.ಪ್ರೆಸ್ನವರ ಸಾರ್. ಯಾವ ಪ್ರೆಸ್ಸು? ಅಂದ.ಹಾಯ್ ಬೆಂಗಳೂರ್ ಅಂದೆ.ಸಾರ್ ನಿಮ್ಮೆಸರು ಅಂದ.ರವಿ ಅಜ್ಜೀಪುರ ಅಂದೆ.ನಾನು ನಿಮ್ಮ ಫ್ಯಾನ್ ಸಾರ್. ನೀವು ಓ ಮನಸೇನಲ್ಲಿ ಬರೀತೀರಲ್ವಾ. ಸೂಪೆರ್ಬ್ ಅಂದ. ನನಗೆ ಇನ್ ಬಾಕ್ಸ್ ಅಂದ್ರೆ ಪ್ರಾಣ ಅಂದ. ನಾನು ನನ್ನ ಹುಡುಗಿಗೇ ಈ ಮೆಸ್ಸೇಜ್ಗಳನ್ನೇ ಕಳಿಸೋದು ಸಾರ್. ಅವಳಿಗೆ ತುಂಬಾ ಇಷ್ಟ ಅಂದ.ಹಾಗೆ ಮಾತಾಡ್ತಾ ಮಾತಾಡ್ತ ಮನೆ ಬಂದಿದ್ದೇ ಗೊತ್ತಾಗಲಿಲ್ಲ. ಹಣ ಕೊಡಲು ಹೋದ್ರೆ ಸರ್ ನಿಮ್ಮತ್ರ ಹಣಾನ, ಬೇಡ ಸಾರ್ ಅಂತ ಹಿಂಜರಿಯತೊಡಗಿದ.ಬಲವಂತ ಮಾಡಿ ಹಣ ಕೊಟ್ಟೆ.ಓ ಮನಸೇ ತುಂಬಾ ಲೇಟ್ ಮಾಡಬೇಡಿ ಸಾರ್. ನಮ್ಮಂತೋರು ಕಾಯ್ತಾ ಇರ್ತೀವಿ. ಮನೇಲಿ ಅದಿದ್ರೆ ದಾರಿ ದೀಪ ಇದ್ದಂಗೆ ಅಂದವನ ಕಣ್ಣಲ್ಲಿದ್ದ ಪ್ರೀತಿಗೆ ಏನು ಹೇಳಲಿ. ಎಲ್ಲಿಯವರೋ, ಯಾರೊ? ವಿನಾಕಾರಣ ನಮ್ಮನ್ನು ಪ್ರೀತಿಸಿಬಿಡುತ್ತಾರೆ. ಒಮ್ಮೊಮ್ಮೆ ಅಂಥ ಪ್ರೀತಿಗೆ ನಾವು ಅರ್ಹರೇ ಅನ್ನುವ ಪ್ರಶ್ನೆಯೂ ಎದ್ದು ದಿಗಿಲಾಗುತ್ತದೆ. ಇವೆಲ್ಲದರ ನಡುವೆ ಒಂದು ಒಳ್ಳೆ ಕೆಲಸ ಮಾಡಿದಾಗ ಆಗುವ ಖುಷಿ ಇದೆಯಲ್ಲ ಅದಕ್ಕೆ ಪಾರವೇ ಇಲ್ಲ. ಈಗ ಫಸ್ಟ್ ಹಾಫ್ ಕೈಯಲ್ಲಿದೆ. ಅದನ್ನು ನೋಡುತ್ತಾ ಕೂರುವುದರ ಸಂಭ್ರಮವೇ ಬೇರೆ ಬಿಡಿ.

Friday, July 25, 2008

ಗೆಳೆಯನಿಗೆ ಬಿಟ್ಟ ಒಂದು ಮೆಸ್ಸೇಜು...

ಒಂದು ವಿನಂತಿಯ ಹೊರತು ನಾನು ನಿನ್ನನ್ನೇನೂ ಕೇಳುವುದಿಲ್ಲಅಂದ ಹುಡುಗ.
ಹುಡುಗಿ ನಕ್ಕಳು.
ನಂತರ ಮಳೆ ಬಂತು.
ಮಳೆ ಬಿಸಿಲು ಬಂತು.
ಮುಗಿಲು ಶುಭ್ರವಾಯ್ತು.
ನೆಲ ಮಾತ್ರ ರಕ್ತಸಿಕ್ತವಾಗಿತ್ತು.
ಇದು ನಾನು ಭಾನುವಾರ ಗೆಳೆಯ ನವಿಲುಗರಿ ಸೋಮುವಿಗೆ ಕಳಿಸಿದ್ದ ಮೆಸ್ಸೇಜ್. ಅವತ್ತು ಹಾಸನದಿಂದ ಹಿಂದಿರುಗುತ್ತಿದ್ದೆ. ಯಾಕೋ ಏನೋ ಸುಮ್ಮನೆ ಕೂರಲು ಆಗದೇ ಒದ್ದಾಡುತ್ತಿದ್ದೆ. ಕುಣಿಗಲ್ ತಲಪುವಷ್ಟರಲ್ಲಿ ಚೂರೇ ಚೂರು ಮಳೆ ಬಂದು ಹಿತವೆನಿಸಿತು. ಕಿಟಕಿಯಲ್ಲಿ ತಲೆ ತೂರಿಸಿ ಆಹಾ ಅನ್ನಲು ಹೋದೆ. ಡ್ರೈವರ್ ರೀ ಸ್ವಾಮಿ ತಲೆ ಒಳಕ್ಕಾಕಳ್ರೀ, ಇಲ್ಲ ಅಂದ್ರೆ ತಲೇನೇ ಇರಲ್ಲ ಅಂದ. ಸರಕ್ಕನೆ ತಲೆ ಒಳಕ್ಕೆಳೆದುಕೊಂಡು ಕುಳಿತೆ. ಹೇಳಬೇಕೆಂದ್ರೆ ನನಗೆ ಈ ಪ್ರಯಾಣ ಯಾವಾಗಲೂ ಬೋರೇ! ಒಂಥರ ಆಯಾಸ ತಂದುಬಿಡುತ್ತೆ. ತೀರಾ ಹಸಿರು ಉಕ್ಕುವ ಪ್ರದೇಶಕ್ಕೆ ಹೋಗಿ ಬಂದರೆ ಮಾತ್ರ ಮನಸ್ಸು ಸ್ವಲ್ಪ ಉಲ್ಲಾಸದಿಂದಿರುತ್ತೇನೋ! ಆದ್ರೆ ಸುಮ್ಮನೆ ಯಾರದೋ ಮನೆಗೆ ಹೋಗಿ ತಿಂದುಂಡು ಮಲಗಿ ಮತ್ತೆ ಎದ್ದು ಹೊರಡುವುದಿದೆಯಲ್ಲ ಅದು ನಿಜಕ್ಕೂ ಬೇಜಾರಿನ ಕೆಲಸ. ನಾನು ಮಾಡಿದ್ದೂ ಅದನ್ನೇ! ಹಾಗಾಗಿ ಮನಸ್ಸಿನಲ್ಲಿ ಲವಲವಿಕೆಯೇ ಇರಲಿಲ್ಲ.
ಆಗ ಹೊಳೆದಿದ್ದೇ ಈ ಸಾಲುಗಳು.ತಕ್ಷಣ ನವಿಲುಗರಿ ಸೋಮುವಿಗೆ ಕಳಿಸಿಬಿಟ್ಟೆ. ಅವರಿಗೆ ಅದೇನು ಹಿಡಿಸಿತೋ ಮೂರು ದಿನ ಆದಮೇಲೆ ಒಂದು ಮೆಸ್ಸೇಜ್ ಬಿಟ್ಟರು. ನನಗೆ ನಿಜಕ್ಕೂ ಇದು ಹುಚ್ಚು ಹಿಡಿಸಿಬಿಟ್ಟಿದೆ. ಕೊನೆ ಸಾಲು ಮಾತ್ರ ಜಪ್ಪಯ್ಯ ಅಂದರೂ ಅರ್ಥ ಆಗಲಿಲ್ಲ. ಅದರಲ್ಲಿ ಏನೋ ಇದೆ ಅನಿಸುತ್ತಿದೆ. ಅದೇನು ಅಂತ ಹೇಳು ಗುರುವೇ ಅಂತ. ನಾನು ಅದುವರೆಗೂ ಆ ಮೆಸ್ಸೇಜ್ ಕಳಿಸಿ ಮರೆತು ಸುಮ್ಮನಿದ್ದವ. ಆದ್ರೆ ಯಾವಾಗ ಈ ನವಿಲುಗರಿ ಮತ್ತೆ ಕಳಿಸಿದರೋ ಮತ್ತೆ ಮತ್ತೆ ಓದಿಕೊಂಡೆ. ಹೌದಲ್ಲ ಇದರಲ್ಲೇನೋ ಇದೆ ಅನಿಸಿಬಿಟ್ಟಿತು. ಏನದು?ನಾನು ಹೇಳುವುದಕ್ಕಿಂತ ಅದನ್ನು ನೀವು ಹೇಳಿದ್ರೇ ಚೆನ್ನ. ಏನನ್ನಿಸಿತು ಅಂತ ಒಂದು ಮೆಸ್ಸೇಜ್ ಬಿಡಿ.
ಮನಸ್ಸು ಖುಲ್ಲಂ ಖುಲ್ಲ ಖುಷಿಯಾಗುತ್ತದೆ.

Wednesday, July 23, 2008

ಫಸ್ಟ್ ಹಾಫ್ ನೋಡಬೇಕು ಅಂದಿದ್ರು ವ್ಯಾಸರು

ಆಗತಾನೆ ಬಂದಿದ್ದ "ಫಸ್ಟ್ ಹಾಫ್" ಪುಸ್ತಕವನ್ನ ಪತ್ರಕರ್ತ ಗೆಳೆಯ ಶ್ರೀಕಂಠ ಒಂದು ಎಕ್ಸೈಟ್ಮೆಂಟ್ನೊಂದಿಗೆ ತಿರುವಿ ಹಾಕುತ್ತಿದ್ದರು. ಆ ಪುಸ್ತಕದ ಬಗ್ಗೆ ನನಗಿಂತ ಅವರಿಗೇ ಹೆಚ್ಚು ಕುತೂಹಲವಿತ್ತು. ಹಾಗಾಗಿ ಪುಸ್ತಕದ ಮೊದಲ ಕಾಪಿ ಬಂತು ಅನ್ನುತ್ತಿದ್ದಂತೆ ನನಗೆ ತೋರಿಸಿಯೇ ನೀವು ಹೋಗಬೇಕು ಅಂತ ಹಟ ಹಿಡಿದಿದ್ದರು. ಇಡೀ ಪುಸ್ತಕ ನೋಡಿ ಆದ ಮೇಲೆ ಅವರು ಹೇಳಿದ್ದಿಷ್ಟು... ಈ ತರಹದ ಪುಸ್ತಕ ಇದುವರೆಗೂ ಬಂದಿಲ್ಲ. ನೀವು ಅದ್ಭುತವಾದ ಕೆಲಸ ಮಾಡಿದ್ದೀರಿ ಅಂತ. ಅವರ ಪ್ರೀತಿ ದೊಡ್ಡದು.
ಆದರೆ ವಿಪಯರ್ಾಸ ನೋಡಿ. ವ್ಯಾಸರು ರವಿ ಬೆಳಗೆರೆ ಬಗ್ಗೆ ಅತ್ಯಂತ ಪ್ರೀತಿಯಿಂದ ಬರೆದುಕೊಟ್ಟಿದ್ದ ಲೇಖನವನ್ನ ತಿರುವಿಹಾಕುತ್ತಿದ್ದಾಗಲೇ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಂತು. ಮಧ್ಯಾಹ್ನ 12.20ಕ್ಕಷ್ಟೇ ಫೋನ್ ಮಾಡಿ ವಿಠ್ಠಲ ಗಟ್ಟಿ ಉಳಿಯ ಅವರ ಜೊತೆ ನಗುನಗುತ್ತಾ ಮಾತಾಡಿದ್ದರು. ನಮ್ಮನ್ನೆಲ್ಲ ಯಥಾಪ್ರಕಾರ ವಿಚಾರಿಸಿದ್ದರು. ಓ ಮನಸೇ ಬೇಗ ಕೊಡಿ. ಯಾಕೆ ಲೇಟ್ ಮಾಡ್ತೀರಿ ಅಂದಿದ್ದರು. ನಾನು ಫಸ್ಟ್ ಹಾಫ್ ಪುಸ್ತಕದ ರಿಲೀಸಿಂಗ್ ಫಂಕ್ಷನ್ಗೆ ಬರ್ತೇನೆ ಅಂದಿದ್ದರಂತೆ. ಇನ್ನೆಲ್ಲಿ ಬರೋದು? ಯಾಕೋ ಗೊತ್ತಿಲ್ಲ ಹಿರಿಯರೆನಿಸಿಕೊಂಡಿದ್ದವರೆಲ್ಲ ಒಬ್ಬೊಬ್ಬರಾಗಿ ಹೇಳದೆ ಕೇಳದೆ ಹೊರಟುಹೋಗುತ್ತಿದ್ದಾರೆ. ನನ್ನ ಅತ್ಯಂತ ಪ್ರೀತಿಯ ರಾಮ್ದಾಸ್ ಹೋದಾಗಲಂತೂ ನನ್ನನ್ನೊಂದು ಶೂನ್ಯ ಆವರಿಸಿಕೊಂಡಿತ್ತು. ಮೊನ್ನೆ ಅವರ ಕೊನೆಯ ಫೋಟೋ ಆಕಸ್ಮಿಕವಾಗಿ ಸಿಕ್ಕಿತು. ಕಣ್ಣು ಒತ್ತರಿಸಿಕೊಂಡು ಬಂತು. ಒಮ್ಮೆ ಮೂಡುಬಿದಿರೆಯಲ್ಲಿ ಸಿಕ್ಕು ಇಷ್ಟು ಎತ್ತರ ಬೆಳೆದುಬಿಟ್ಟಿದ್ದೀರಾ? ಗುರುತೇ ಸಿಗುತ್ತಿಲ್ಲ ಅಂದಿದ್ದರು. ಆಮೇಲೆ ಅದೆಂಥದೋ ಮರದ ಕೆಳಗೆ ಗಂಟೆಗಟ್ಟಲೆ ಕುಳಿತು ಹರಟೆ ಹೊಡೆದಿದ್ದರು. ಹಾಗೆ ತೇಜಸ್ವಿ. ಈಗ ವ್ಯಾಸರು. ನಾವೆಲ್ಲ ಸಾಹಿತ್ಯಕ ತಬ್ಬಲಿಗಳಾಗುತ್ತಿದ್ದೀವೇನೋ ಅನಿಸಿಬಿಟ್ಟಿದೆ.ಗೆಳೆಯ ವಿಠ್ಠಲ ಗಟ್ಟಿ ಉಳಿಯ ಅವರಿಗೆ ವ್ಯಾಸರು ಫೋನ್ ಮಾಡಿದಾಗಲೆಲ್ಲ ರವಿ ಅಜ್ಜೀಪುರ ಅವರನ್ನು ಕೇಳಿದೆ ಅಂತ ಹೇಳಿ. ಅವರು ಚೆನ್ನಾಗಿ ಬರೆಯುತ್ತಾರೆ. ಅವರ ಶೈಲಿ ಚೆನ್ನಾಗಿದೆ ಅನ್ನುತ್ತಿದ್ದರಂತೆ. ಪ್ರತಿ ಮೆಸ್ಸೇಜ್ನಲ್ಲೂ ನಮ್ಮ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ರು. ಒಮ್ಮೆ ಹೋಗಿ ಅವರನ್ನು ನೋಡಿಕೊಂಡು ಬರೋಣ ಅಂತ ನಾನು ವಿಠ್ಠಲಗಟಿ ಉಳಿಯ ಮಾತಾಡಿಕೊಂಡಿದ್ದೆವು. ಅವರಿಗೆ ಫಸ್ಟ್ ಹಾಫ್ ಪುಸ್ತಕ ನೋಡಬೇಕೆಂಬ ಆಸೆ ತೀವ್ರವಾಗಿತ್ತು. ಆದ್ರೆ ಅದನ್ನು ನೋಡುವ ಮೋದಲೇ ಹೊರಟುಬಿಟ್ಟರಲ್ಲ ಅನ್ನುವ ವ್ಯಥೆ ಇನ್ನಿಲ್ಲದೇ ಕಾಡುತ್ತಿದೆ.
ಅವರ ಪ್ರೀತಿ ಅಜರಾಮರ. ಅವರು ಬರೆದ ಕಥೆಗಳೂ

Monday, July 21, 2008

ಫಸ್ಟ್ ಹಾಫ್ ಅನ್ನೋ ಬೆಳಗೆರೆ ಬದುಕಿನ ಬೆರಗು




ಫಸ್ಟ್ ಹಾಫ್.


ಫಸ್ಟ್ ಹಾಫ್ಇದೇನು ಹೆಸರೇ ಡಿಫರೆಂಟ್ ಆಗಿದೆ ಅಂದುಕೊಂಡ್ರಾ! ಹೆಸರು ಮಾತ್ರವಲ್ಲ ಬುಕ್ಕೂ ಡಿಫರೆಂಟಾಗೆ ಇದೆ.ನಾಲ್ಕುನೂರಕ್ಕೂ ಹೆಚ್ಚಿನ ಫೊಟೋಗಳು.... ಎಪ್ಪತ್ತಕ್ಕೂ ಹೆಚ್ಚಿನ ಆಪ್ತ ಬರಹಗಳು... ಸೊಗಸಾದ ವಿನ್ಯಾಸ... ಬೊಗಸೆಯಲ್ಲಿ ಬಿದ್ದೊಡನೆಯೇ ಬೆರಗುಗೊಳಿಸುವಂತಹ ಮುದ್ದುಮುದ್ದಾದ ಪುಸ್ತಕ ಇದು. ನಿಜ್ಜ ಇದು ರವಿ ಬೆಳಗೆರೆ ಅಭಿನಂದನಾ ಗ್ರಂಥ. ಅವರನ್ನು ಕಣ್ಣಲ್ಲಿ ತುಂಬಿಕೊಂಡವರು... ಮನದಲ್ಲಿ ಬಚ್ಚಿಟ್ಟುಕೊಂಡವರು ...ಹೇಗಿದ್ದ ಹೇಗಾದ ಅಂತ ಬೆರಗುಗೊಂಡವರು... ಬಹಳ ಕಷ್ಟಪಟ್ಟಾಂನ್ರಿ. ಅಂವ ಇನ್ನೂ ಚೆನ್ನಾಗಿರಬೇಕು ಅಂತ ಮನ ಬಿಚ್ಚಿ ಹರಸಿದವರು... ಕೈ ಹಿಡಿದು ನಡೆಸಿದವರು...ಗೆಳೆಯರು-ಗೆಳತಿಯರು... ಅವರ ನೆರಳಲ್ಲೇ ಬದುಕು ಕಂಡುಕೊಂಡವರು... ಎಲ್ಲರ ಮನದ ಮಾತು ಇಲ್ಲಿದೆ.


ಪ್ರತಿ ಪುಟವೂ ನವನವೀನ ಅಂತಾರಲ್ಲ ಹಾಗೇ.


ನಿಜ್ಜ ಹೇಳ್ತೀನಿ ಇಂಥ ಚಂದಕ್ಕೆ ಕನ್ನಡದಲ್ಲಿ ಈ ಮೊದಲು ಪುಸ್ತಕ ಬಂದಿದೆಯಾ?ಗೊತ್ತಿಲ್ಲ.ಆದ್ರೆ ಫಸ್ಟ್ ಹಾಫ್ ನ ಫಸ್ಟ್ ಕಾಪಿ ಬಂತಲ್ಲ ಅದನ್ನ ಕೈಯಲ್ಲಿಡಿದುಕೊಂಡು ಅದೆಷ್ಟು ಹೊತ್ತು ನೋಡುತ್ತಾ ಕುಳಿತೆನೋ..ನೋಡಿದಷ್ಟೂ ಬೆರಗು ತಣಿಯಲಿಲ್ಲ...


ಆ ಬೆರಗು ಇನ್ನೇನು ಕೆಲವೇ ದಿನಗಳಲ್ಲಿ ನಿಮಗೂ ಸಿಗಲಿದೆ...

Saturday, July 5, 2008

Tuesday, July 1, 2008

ಹೇಗೆ ಸಾಯಲಿ ಮತ್ತೆ?

ಹೇಗೆ ಸಾಯಲಿ ಮತ್ತೆ?
ನಿನಗಾಗಿ

ಆ ತಿರುವಿನಲ್ಲಿ ಕಾದೂ ಕಾದೂ
ಸತ್ತಿದ್ದು
ಕುಡಿ ನೋಟಕ್ಕಾಗಿ ಸತ್ತಿದ್ದು
ಪಿಸು ಮಾತಿಗಾಗಿ ಸತ್ತಿದ್ದು
ತಿರುಗಿ ನೋಡಬಾರದಾಂತ ಸತ್ತಿದ್ದು
ಸಿಗುತ್ತಾಳೋ ಇಲ್ಲವೋ ಅಂತ ಚಡಪಡಿಸಿ
ಸತ್ತಿದ್ದು
ರಾತ್ರಿ ನಕ್ಷತ್ರ ಎಣಿಸಿ ಸತ್ತಿದ್ದು
ಸತ್ತ ಸಂಜೆಗಳಲ್ಲಿ ಮತ್ತೆ ಸತ್ತಿದ್ದು
ನಿನ್ನ ನೆನಪುಗಳಿಗೆ ನೇಣುಹಾಕಿಕೊಂಡಿದ್ದು

ಹೇಳು
ಹೇಗೆ ಸಾಯಲೀ ಮತ್ತೆ?

ನೀನು ಸಿಕ್ಕಿದ ಮೇಲೂ
ಸಾಯುವುದು ನಿಲ್ಲಲಿಲ್ಲ

ಮಾತಲ್ಲಿ ಕೊಂದೆ
ಮೌನದಲ್ಲಿ ಕೊಂದೆ
ಕಣ್ಣಲ್ಲಿ ಕೊಂದೆ
ಬೆರಳ ತುದಿಯಲ್ಲಿ ಕೊಂದೆ
ಅನುಮಾನದಿ ಕೊಂದೆ
ಬಿಗುಮಾನದಿ ಕೊಂದೆ
ಕೊಂದೆ

ಎದೆಯ ಒಳಗಿನಭಾವ ಎಳೆದೆಳೆದು ಕೊಂದೆ
ಕನಸುಗಳನ್ನೆಲ್ಲ ಬರಸೆಳೆದು ಕೊಂದೆ
ನೀಲಾಕಾಶದ ತಳದಲಿ ನಿಂದವನ
ನಿಂದಿಸಿ ಕೊಂದೆ

ಹೇಳು
ಹೇಗೆ ಸಾಯಲಿ ಮತ್ತೆ?

ನಿನ್ನದೊಂದು ಕಣ್ಣ ಕುಡಿ
ನನ್ನ ಎದೆಯ ಕಡಲಲಿ ಜೀಕುವ ತನಕ
ನಾನು ಸತ್ತವನಲ್ಲ

ಪ್ರೀತಿಸುವುದೆಂದ್ರೆ
ಸಾಯುವುದಾ?
ಸಾಯಿಸುವುದಾ?

Friday, June 13, 2008

ಫಿಫ್ಟಿ ಫಿಫ್ಟಿ


ಯಾಕೋ ಗೊತ್ತಿಲ್ಲ ಮೊದಲ ನೋಟಕ್ಕೇ ಕೆಲವು ಹುಡುಗೀರು ಇಷ್ಟವಾಗಿ ಬಿಡುತ್ತಾರಲ್ಲ ಹಾಗೆ ಈ ಮರ ಕೂಡ ನನಗೆ ಇಷ್ಟ ಆಯ್ತು. ನನಗೆ ಅರ್ಥವಾಗಿದ್ದಕ್ಕೆ ಫಿಫ್ಟಿ ಫಿಫ್ಟಿ ಅಂತ ಹೆಸರಿಟ್ಟೆ. ನಿಮಗೆ ಏನನ್ನಿಸುತ್ತದೋ ಬಲ್ಲವರಾರು. ಮೂರ್ತವೂ ಆಗಬಹುದು ಅದೇ ಅಮೂರ್ತವೂ ಆಗಬಹುದು. ಅಥವಾ ಎದೆಯ ಭಾವಕ್ಕೇ ಸಿಗದೇ ಹೋಗಬಹುದು. ಹೇಗೋ ಹಾಗೇ!
ನಿಮಗೆ ಬಿಟ್ಟಿದ್ದೇನೆ.

ಪಾಳುಬಾವಿ ಬಳಿಯ ಕಾಲುದಾರಿಯಲ್ಲಿನ ಒಂದು ನೆನಪು


ನನಗಿನ್ನೂ ಅದು ನೆನಪಿದೆ.

ನಾವು ಸ್ಕೂಲಿಗೆ ಹೋಗುವಾಗ ಬರುವಾಗ ನಡುವೆ ಒಂದು ಬಾವಿ ಸಿಗುತ್ತಿತ್ತು. ಅದನ್ನೇನು ಯಾರೂ ಉಪಯೋಗಿಸ್ತಿರಲಿಲ್ಲ. ಪಾಳು ಬಾವಿ ಅಂತಾರಲ್ಲ ಆ ಥರದ್ದು. ಅದನ್ನ ದೆವ್ವದ ಬಾವಿ ಅಂತಾಲೂ ಕರೀತಿದ್ರು. ಅದರ ಎದೆ ಮೇಲೆ ಅಮಟೆ ಕಾಯಿ ಮರ... ನೇರಳೇ ಮರ... ಹೊಂಗೆ ಮರಗಳೆಲ್ಲ ಇದ್ವು. ಮೇನ್ ರೋಡ್ ಬಿಟ್ರೆ ಶಾಟರ್್ ಕಟ್ ಅಂತ ಬಹುತೇಕ ಮಂದಿ ಹೋಗುತ್ತಿದ್ದದು ಇದೇ ದಾರಿಯಲ್ಲಿ. ಹಾಗೇ ಹೋಗ್ತಾ ಬರ್ತಾ ಅಮಟೆ ಕಾಯಿ ಕಿತ್ಕೊಂಡು ಅದಕ್ಕೆ ಉಪ್ಪು ಕಾರ ಅದ್ಕಂಡು ತಿನ್ನೊ ಮಜಾ ಇದೆಯಲ್ಲ ಅದಕ್ಕೆ ಇವತ್ತಿನ ಯಾವ ತಿಂಡಿಯು ಸಮವಲ್ಲ ಬಿಡಿ. ಹುಣಸೇ ಹಣ್ಣಿಗೆ ಉಪ್ಪು ಕಾರ ಬೆರೆಸಿ ಅದನ್ನ ಉಂಡೆ ಮಾಡಿ ಕಡ್ಡಿಗೆ ಸಿಕ್ಕಿಸಿಕೊಂಡು ಚೂರು ಚೂರೇ ಚೂರು ಚೂರೇ ತಿಂತಾ ಇದ್ವಲ್ಲ ಅದ್ನ ಇವತ್ತಿನ ಯಾವ ಲಾಲಿಪಪ್ ತಿಂದ್ರೆ ಸಿಗುತ್ತೆ? ಉರುಳಿಯನ್ನ ಬೇಯಿಸಿ ಅದಕ್ಕೆ ಬೆಲ್ಲ ಏಲಕ್ಕಿ ಹಾಕಿ ಕುಟ್ಟಿ ಅವ್ವ ಮುದ್ದೆ ಗಾತ್ರ ಉಂಡೆ ಮಾಡಿ ಕೈ ತುಂಬಾ ಇಟ್ರೆ ಅದನ್ನ ತಿಂದಿದ್ದೇ ಗೊತ್ತಾಗ್ತಿರಲಿಲ್ಲ. ಹಸು ಕರು ಹಾಕಲಿ ಎಮ್ಮೆ ಕರು ಹಾಕಲಿ ಮೊದ ಮೊದಲು ಗಿಣ್ಣಿನ ಹಾಲಿರುತ್ತಲ್ಲ ಅದನ್ನ ಕಲ್ಲು ಇಟ್ಟು ಹಬೆಯಲ್ಲೇ ಬೇಯಿಸಿ ಒಳ್ಳೆ ಕೇಕ್ ಥರ ಮಾಡಿ ಕೊಡ್ತಿದ್ಲಲ್ಲ ಅವ್ವ. ಅದರ ರುಚೀನೆ ಬೇರೆ ಇತ್ತು! ಅವೆಲ್ಲ ನಮ್ಮ ತಲೆಮಾರಿಗೆ ಅಷ್ಟೇ ಗೊತ್ತೇನೋ. ಇವತ್ತಿನ ಮಕ್ಕಳಿಗೆ ಗಿಣ್ಣು ಅಂದ್ರೆ , ಉರುಳಿ ಕಾಳು ಅಂದ್ರೆ? ಹೂಂಹು ಅವರೆಲ್ಲ ಪಿಜ್ಜಾಗೆ ಮೊರೆ ಹೋದವರು... ಪೆಪ್ಸಿಗೆ ಮೊರೆ ಹೋದವರು... ಕುರ್ಕುರೆಗೆ ಮೊರೆ ಹೋದವರು. ಇರಲಿ.

ಈ ಬಾವಿ ಅಂತಂದನಲ್ಲ ಆ ವಿಷಯಕ್ಕೆ ಬರೋಣ. ಒಂದ್ಸಾರಿ ನಾನು ಅಕ್ಕ ಇಬ್ಬರೂ ಅದೇ ದಾರಿಯಲ್ಲಿ ಇಸ್ಕೂಲ್ ಮುಗಿಸಿಕೊಂಡು ಬರ್ತಾ ಇದ್ವಿ. ಬಾವಿ ಹತ್ರ ಬರೋದಕ್ಕೂ ಅದೇನೋ ಬಾವಿ ಒಳಕ್ಕೆ ದಡ್ ಅಂತ ಬೀಳುವುದಕ್ಕೂ ಸರಿ ಹೋಯ್ತು. ಅಕ್ಕ ಕಿಟಾರ್ ಅಂತ ಕಿರುಚಿದ್ಲು. ಅದರ ಹಿಂದೆಯೇ ನಾನೂ. ಇಬ್ಬರೂ ಅಲ್ಲಿ ಓಟಕಿತ್ತವರು ಮನೆಯ ಹೊಸ್ತಿಲ ತನಕ ನಿಲ್ಲಲಿಲ್ಲ. ಅವ್ವ ಗಾಬರಿಯಾಗಿ ಏನು ಅಂತ ಕೇಳಿದ್ರೆ ಹಿಂಗಿಂಗಾಯ್ತು ಅಂದ್ವಿ. ಅಪ್ಪ ಅವ್ವ ಆ ಕಡೆಯಿಂದ ಬರಬೇಡಿ. ಅಲ್ಲಿ ದೆವ್ವ ಇದೆಯಂತೆ ಅಂತ ನಾನು ಹೇಳಿರಲಿಲ್ವಾ? ಅಂತೆಲ್ಲ ಗದರಿಸಿದ ಮೇಲೆ ನಮಗೆ ಇನ್ನೂ ಭಯ ಹೆಚ್ಚಾಗಿ ಇಬ್ಬರೂ ಮೂರ್ನಾಲ್ಕು ದಿನ ಜ್ವರ ಬಂದು ಮಲಗಿದ್ವಿ. ಮಾರಮ್ಮನ ದೇವಸ್ತಾನಕ್ಕೆ ಕರ್ಕೊಂಡ್ ಹೋಗಿ ತಾಯ್ತಾ ಕಟ್ಟಿಸಿದ್ರು. ಕೆಂಪು ನೀರ್ ತೆಗದ್ರು... ಅದ್ಯಾವುದೋ ದೇವರ ದೂಳ್ತಾ ಹಚ್ಚಿದ್ರು...ತಡೆ ಹೊಡಿಸಿದ್ರು... ಕೊನೆಗೆ ಒಂದ್ ದಿನ ಜ್ವರ ಬಿಡ್ತು.ಆದ್ರೆ ಅಲ್ಲಿ ದೆವ್ವ ಆಗಿದ್ದು ಯಾರು? ಅನ್ನೋದು ಮಾತ್ರ ನಮಗೆ ಬಿಡದೇ ಕಾಡುತ್ತಿತ್ತು.ಆ ದೆವ್ವ ಬೇರೆ ಯಾರೂ ಅಲ್ಲ. ತುಂಬಾ ಹಿಂದೆ ನಮ್ಮೂರಲ್ಲಿ ಒಬ್ಬಳು ಹೆಣ್ಣುಮಗಳಿದ್ದಳು. ಇನ್ನೂ ಚಿಕ್ಕ ವಯಸ್ಸು ಆಕೀದು. ಮದುವೆ ಆಗಿ ಮೂರ್ನಾಲ್ಕು ವರ್ಷ ಆಗಿತ್ತಂತೆ. ಗಭರ್ಿಣಿ ಬೇರೆ. ಗಂಡ ದಿನ ಕುಡಿದು ಬಂದು ಗಲಾಟೆ ಮಾಡೋನಂತೆ. ಹೊಡೆಯೋನಂತೆ. ಗಂಡನ ಹೊಡೆತ ತಾಳಲಾರದೇ ಬೇಸತ್ತು ಆ ಬಾವಿಗೆ ಬಿದ್ದು ಸತ್ತೋದ್ಲಂತೆ. ಆ ಮೇಲೆ ಆಕೆ ಸೇಡಿನಿಂದ ಗಂಡನನ್ನೂ ಬಲಿ ತೆಗೆದುಕೊಂಡ್ಲಂತೆ. ಈಗಲೂ ಅಮಾಸೆ ಹುಣ್ಣಿಮೆಗೆ ಆ ಬಾವಿ ಹತ್ರ ಆಕೆ ಕೂತ್ಕಂಡು ಸರಿ ರಾತ್ರೀಲಿ ಅಳ್ತಾಳಂತೆ...ಇಷ್ಟೆಲ್ಲ ಹೇಳಿದಮೇಲೂ ಆ ಬಾವಿ ಕಡೆ ಹೋಗೋ ಗುಂಡಿಗೆ ಯಾರಿಗಿರುತ್ತೆ.ಆಮೇಲಿಂದ ಏನಿದ್ರೂ ನಮ್ದು ಮೇನ್ ರೋಡೇ.ಹೊಲದ ಮೇಲೆ ಹೋಗುವಾಗ ಬರುವಾಗ ತಿಂತಿದ್ದ ಹಾಲು ತುಂಬಿಕೊಂಡ ಕಾಚಕ್ಕೀ, ಮುಸುಕಿನ ಜೋಳ.. ಹಸಿ ಹಸೀ ಹೆಸರು ಕಾಳು... ಹತ್ತಿ ಹಣ್ಣು ಎಲ್ಲಾ ಆಗಾಗ್ಗೆ ನೆನಪಾಗುತ್ತೆ.

ಜೊತೆಗೆ ಈ ದೆವ್ವದ ಘಟನೆಯೂ.


Thursday, June 12, 2008

...ದಿ ನ್ಯೂಸ್


ಅವತ್ತಿನದು ಎಂದಿನಂತೆ ಮತ್ತೊಂದು ಬೆಳಗ್ಗೆ.

ಸಣ್ಣಗೆ ಮೈ ಹಿಂಡುತ್ತಿತ್ತು ಚಳಿ. ಸೋಮಾರಿ ಸೂರ್ಯ ಇನ್ನೂ ಎದ್ದಿರಲಿಲ್ಲವಾದ್ದರಿಂದ ನಿಯಾನ್ ದೀಪಗಳು ನಿಂತಲ್ಲೇ ತೂಗಡಿಸುತ್ತಿದ್ದವು. ಅದೇ ಸಮಯಕ್ಕೆ ಇಳಾಳನ್ನು ಹಿಂದೆ ಕೂರಿಸಿಕೊಂಡು ಪಲ್ಸರ್ನ ಕಿಬ್ಬೊಟ್ಟೆಗೆ ಒದ್ದ ಸಮಯ್. ಅದು ಬುಸುಗುಡುತ್ತಾ ಓಡತೊಡಗಿತು. ಹಾರಿಹೋಗುತ್ತಿದ್ದ ಪಲ್ಲು ಮೇಲೆ ಹುಸಿ ಮುನಿಸು ತೋರಿಸಿ ತನ್ನ ಮೃದು ಮಧುರ ಬಲಗೈಯ್ಯನ್ನ ಸಮಯ್ನ ಭುಜದ ಮೇಲಿಟ್ಟಳು ಇಳಾ. ಹುಡುಗ ಥ್ರಿಲ್ ಆಗಿ ಹೋದ. ಬೈಕ್ನ ಸ್ಪೀಡೋಮೀಟರ್ ಎಂಬತ್ತರ ಹತ್ತಿರ ಬಂದು ಜಕರ್್ ಹೊಡೆಯತೊಡಗಿತು.

ಅದು ಅವಳ ಆಸೆ. ತನ್ನ ಹುಡುಗ ಒಂದು ಬೈಕ್ ತೆಗೋಬೇಕು... ಅದರಲ್ಲ್ಲಿ ನಾನು ಹಿಂದೆ ಅವನನ್ನು ಗಟ್ಟಿಯಾಗಿ ಅಪ್ಪಿ ಕುಳಿತು ಊರೆಲ್ಲ ಸುತ್ತಬೇಕು. ಅದಕ್ಕಾಗಿ ಅಪ್ಪನ ಹತ್ತಿರ ಸುಳ್ಳು ಹೇಳಿ ಹಣ ಪಡೆದು ಡೌನ್ ಪೇಮೆಂಟ್ ಮಾಡಿ ಕಣ್ಣ ಕಪ್ಪಗಿನ ಪಲ್ಸರ್ ಕೊಡಿಸಿದ್ದಳು. ತನಗೆ ಅಪ್ಪ ಕೊಡುತ್ತಿದ್ದ ಪಾಕೆಟ್ ಮನಿಯಲ್ಲೇ ಉಳಿಸಿ ಅವನ ಇಎಮ್ಐ ತುಂಬುತ್ತಿದ್ದಳು. ಯಾಕೆ ಇದೆಲ್ಲ ಅಂದ್ರೆ ನನ್ನ ಕನಸಿನ ರಾಜಾ. ನೀನು ಬೈಕ್ ಮೇಲೆ ಕೂತ್ಕಂಡ್ರೆ ರಾಜನಂಗಿರ್ತೀಯ ಗೊತ್ತಾ? ನನಗೆ ನೀನು ಅಂದ್ರೆ ಅಷ್ಟಿಷ್ಟ ಅಂದ್ನಲ್ಲ, ಸುಮ್ನೆ ತಗೋ ಅಂದಿದ್ದಳು. ಸಮಯ್ ಕಣ್ಣುತುಂಬಿಕೊಂಡಿದ್ದ. ಬೈಕ್ ತೆಗೆದುಕೊಂಡ ಮೊದಲ ದಿನವೇ ಅದರ ಹೊಟ್ಟೆತುಂಬಾ ಪೆಟ್ರೊಲ್ ತುಂಬಿಸಿಕೊಂಡು ಇಬ್ಬರೂ ಇಡೀ ಬೆಂಗಳೂರನ್ನು ಸುತ್ತುಹಾಕಿದ್ದರು. ಶಾಪಿಂಗ್ ಮಾಡಿದ್ದರು. ಎಲ್ಲೆಲ್ಲೋ ನಿಲ್ಲಿಸಿ ಬೈಟೂ ಕಾಫಿ ಕುಡಿದಿದ್ದರು. ಕೊನೆಯಲ್ಲಿ ಗಾಡಿ ಚಂದಕ್ಕೆ ಓಡಿಸ್ತೀ ಕಣೋ. ಸ್ವಲ್ಪ ಸ್ಪೀಡ್ ಜಾಸ್ತಿ. ನಾನಿದೀನಲ್ಲ ಅದಕ್ಕಾ? ಅಂತ ಅವನ ಕೆನ್ನೆ ಗಿಂಡಿದ್ದಳು.. ಅದು ಇಳಾ ಪಾಲಿನ ಹ್ಯಾಪಿಯೆಸ್ಟ್ ಡೇ! ಇವನದೂ.

ಇವತ್ತೂ ಅದೇ ಖುಷಿಯಲ್ಲಿ ಪಲ್ಲು ಸರಿ ಮಾಡಿಕೊಂಡು ಕುಳಿತಳಲ್ಲ ಇಳಾ... ಅವಳ ಎದೆಯೊಳಗೇ ಎಂಥದೋ ಸಂತಸ ಜೀಕತೊಡಗಿತು. ನೀನು ಎಂಥ ಚಂದಕ್ಕಿದ್ದೀಯ ಗೊತ್ತಾ ಹುಡುಗ. ನಿನ್ನನ್ನ ಒಮ್ಮೆ ನೋಡಿದರೆ ಹಾಗೇ ಮತ್ತೊಮ್ಮೆ ಮಗದೊಮ್ಮೆ ನೋಡಬೇಕೆನಿಸುತ್ತದೆ. ಮಾತಾಡಬೇಕೆನಿಸುತ್ತದೆ. ಅಪ್ಪಿ ಮುದ್ದಾಡಬೇಕೆನಿಸುತ್ತದೆ. ಹಾಗೇ ಎದೆಗಾನಿಸಿಕೊಂಡು ಸುಮ್ಮನೇ ಕೂರಬೇಕೆನಿಸುತ್ತದೆ. ನಿಜ್ಜ ಹೇಳ್ಲ, ನೀನು ಏನಾದರೂ ಹೀರೋ ಆಗಿದ್ದರೆ ಎಲ್ಲಾ ಹುಡುಗಿಯರ ಎದೆಯಲ್ಲಿ ಕೇವಲ ನೀನೇ ಇದ್ದುಬಿಡುತ್ತಿದ್ದೇ ಕಣೋ! ಹಾಗಾಗಲಿಲ್ಲವಲ್ಲ, ಥ್ಯಾಂಕ್ ಗಾಡ್! ಅಂತ ಕಿವಿಯಲ್ಲಿ ಪಿಸುಗುಡಬೇಕೆನಿಸಿತು. ಆದರೆ ಎನಿಮಿ ಹೆಲ್ಮೆಟ್ ಅಡ್ಡ ಬಂತು.

ಅಷ್ಟರಲ್ಲಿ ಬೈಕ್ ಸಣ್ಣದೊಂದು ತಿರುವಿನಲ್ಲಿ ರೊಂಯ್ ಅಂತ ಸದ್ದುಮಾಡುತ್ತಾ ಇಳಿಜಾರಿನಲ್ಲಿ ಮುಂದೆ ಸಾಗಿತು. ಹಿಂದೆ ಕುಳಿತ ಇಳಾ 'ಆಹ್' ಅಂತ ಉದ್ಘರಿಸಿದಳೋ ಇಲ್ಲವೋ ಇನ್ನೇನು ಬಿದ್ದೇ ಹೋಗುತ್ತೇನೇನೋ ಅನ್ನೋ ಭಯದಿಂದ ಅವನ ಬೆನ್ನಿಗೆ ಆತುಕೊಂಡಳು.

ಮೆಲ್ಲಗೆ ಕಣೋ ಭಯವಾಗುತ್ತೇ?ಹೌದಾ. ಒಂದ್ ನಿಮಿಷ ಚಿನ್ನ. ಈ ಹೆಲ್ಮೆಟ್ ತೆಗೀ. ಯಾಕೋ ಗಾಡಿ ಓಡಿಸೋದಕ್ಕೇ ಆಗ್ತಾ ಇಲ್ಲ ಅಂದ ಮೆಲ್ಲಗೆ ತಿರುಗಿ. ಯಾಕೋ...? ಭಯವಾಗ್ತಾ ಇದೆ ಅಂದ್ಯಲ್ಲ ಚಿನ್ನ. ಹೇಗಿದ್ರೂ ನನಗೆ ಅದು ಇರಿಟೇಟ್ ಮಾಡ್ತಾ ಇದೆ. ನೀನೇ ಹಾಕ್ಕೋ. ಆದ್ರೇ ಬೇಗ ತೆಗೀ ಅಂದ.ಇಳಾ ಹೆಲ್ಮೆಟ್ ತೆಗೆದು ಅದರಲ್ಲಿ ತನ್ನ ತಲೆ ತೂರಿಸಿಕೊಂಡಳು.

ಆ ಗಳಿಗೆಗಿನ್ನೂ ಎರಡು ಸೆಕೆಂಡ್ ಆಗಿರಲಿಲ್ಲ ದೊಡ್ಡದೊಂದು ಸೌಂಡ್.
***
ಮಾರನೇ ದಿನ ಪೇಪರ್ನಲ್ಲಿ ಸಣ್ಣದೊಂದು ನ್ಯೂಸ್ ಹೀಗಿತ್ತು.ಬ್ರೇಕ್ ಫೇಲ್ಯೂರ್ ಆದದ್ದು ಗೊತ್ತಾದ ಕೂಡಲೇ ಹುಡುಗ ತನ್ನ ಹುಡುಗಿಯಾದರೂ ಬದುಕಿಕೊಳ್ಳಲೀ ಅನ್ನೋ ಆಸೆಯಿಂದ ತಾನು ಹಾಕಿದ್ದ ಹೆಲ್ಮೆಟ್ ಅವಳಿಗೆ ಕೊಟ್ಟಿದ್ದ.

Monday, May 5, 2008

ಸ್ಟವ್ ಕೊಟ್ಟ ಗೆಳೆಯನೊಬ್ಬನ ನೆನಪಿನಲ್ಲಿ...

ಈಗ್ಗೆ ಎಂಟುವರ್ಷದ ಹಿಂದೆ ಅನಿಸುತ್ತೆ. ನನಗಾಗ ಬೆಂಗಳೂರು ಹೊಚ್ಚ ಹೊಸದು. ಬಸ್ಸ್ಟಾಂಡಿನಲ್ಲಿ ಇಳಿದವನಿಗೆ ಬೆಂಗಳೂರಿನ ಗಲ್ಲಿಗಳು, ಮೇನ್ ರೋಡ್ಗಳು, ಕ್ರಾಸ್ಗಳು, ಹೆಸರೇ ಇಲ್ಲದ ರಸ್ತೆಗಳು ಒಂದು ಅನೂಹ್ಯ ಜಗತ್ತಿನ ಥರ ಕಾಣಿಸಿದ್ದವು. ಅವಳೊಬ್ಬಳು ಇಲ್ಲದಿದ್ದರೆ ನನಗೆ ಈ ಬೆಂಗಳೂರು ಪರಿಚಯವಾಗದೇ ಉಳಿದುಬಿಡುತ್ತಿತ್ತಾ? ಗೊತ್ತಿಲ್ಲ. ಪುಟ್ಟ ಮಗು ಕೈ ಹಿಡಿದು ನಡೆಯುವಂತೆ ನಾನು ಅವಳ ಕೈ ಹಿಡಿದು ನಡೆಯುತಿದ್ದರೆ ಅವಳು ಬೆಂಗಳೂರನ್ನು ಒಂದೊಂದಾಗಿ ತೋರಿಸುತ್ತಾ ಹೋಗುತ್ತಿದ್ದಳು. ನನ್ನ ಕಣ್ಣಲ್ಲಿ ಬೆರಗು, ಅವಳ ಕಣ್ಣಲ್ಲಿ ಸಾರ್ಥಕತೆ. ಬೆಂಗಳೂರಿನ ಬೀದಿಗಳನ್ನು ಸುತ್ತಿದ್ದೇ ಹಾಗೆ. ಸುತ್ತು ಹೊಡೆದು ಹೊಡೆದು ನಮ್ಮ ಕೊನೆಯ ನಿಲ್ದಾಣವಾಗುತ್ತಿದ್ದದ್ದು ಮಾತ್ರ ಕಲಾಕ್ಷೇತ್ರ. ಅಲ್ಲಿ ನಾನು ಅವಳು ಕುಳಿತು ನಾಟಕ ನೋಡುತ್ತಿದ್ದೆವು. ಪಾಪ್ ಕಾನರ್್ ತಿನ್ನುತ್ತಿದ್ದೆವು. ಕಡಲೆ ಕಾಯಿ ತಿನ್ನುತ್ತಿದ್ದೆವು. ನಮ್ಮ ಕೆಪಾಸಿಟಿ ಅಷ್ಟೆ ಆಗಿತ್ತು. ಒಮ್ಮೆಯೂ ಅವಳು ಐಸ್ಕ್ರೀಮ್ ಕೇಳಿದವಳಲ್ಲ. ಬಣ್ಣದ ಡ್ರೆಸ್ ಕೊಡಿಸೋ ಅಂತ ಹಟಕ್ಕೆ ಬಿದ್ದವಳಲ್ಲ. ಪಿಚ್ಚರ್ಗೋಗೋಣ ನಡೆಯೋ ಅಂತ ಕೈ ಹಿಡಿದು ಜಗ್ಗಿದವಳಲ್ಲ. ಅವಳು ಕೇಳಿದ್ದರೂ ನನಗೆ ಕೊಡಿಸುವ ತಾಕತ್ತಾದರೂ ಎಲ್ಲಿತ್ತು? ಅವಳೇ ಒಮ್ಮೆ ನಾನು ಊರಿಗೆ ಹೊರಟಾಗ ಐದು ರುಪಾಯಿನ ಕ್ಯಾಡ್ಬರೀಸ್ ಚಾಕ್ಲೆಟ್ ಕೊಡಿಸಿದ್ದಳು. ನಾನು ಅದನ್ನ ಪೆದ್ದುಪೆದ್ದಾಗಿ ಜತನದಿಂದ ಜೇಬಿನಲ್ಲೇ ಇಟ್ಟುಕೊಳ್ಳಲು ಹೋಗಿ ಮೈಸೂರು ತಲಪುವಷ್ಟರಲ್ಲಿ ಪಾಯಸದಂತಾಗಿತ್ತು.
ಇರಲಿ... ಆ ದಿನಗಳಲ್ಲಿ ನಾನು ಓಆರ್ಜಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ದಿನಕ್ಕೆ ತೊಂಬತ್ತು ರುಪಾಯಿ ಸಂಬಳ ಪ್ಲಸ್ ಇನ್ನೊಂದಿಷ್ಟು ಅದಕ್ಕೆ ಇದಕ್ಕೆ ಅಂತ ಸಿಗುತ್ತಿತ್ತು. ಯೂನಿಸೆಫ್ನವರ ಮಿಡ್ಡೇ ಮೀಲ್ ಬಗೆಗಿನ ಸವರ್ೆ ಅದು. ಗೆಳೆಯ ಶ್ರೀನಿವಾಸ್ನ ಗಿರಿನಗರದ ರೂಮಿನಲ್ಲೇ ಸ್ವಲ್ಪ ದಿನ ಉಳಿದುಕೊಂಡಿದ್ದೆ. ಹೊರಗೆ ಹೋದ್ರೆ ತಿಂಗಳುಗಟ್ಲೆ ಬರ್ತಿರಲಿಲ್ಲವಾದ್ದರಿಂದ ವಸತಿ ಸಮಸ್ಯೆ ಅಷ್ಟಿರಲಿಲ್ಲ. ಆದ್ರೂ ಇರಲಿ ಅಂತ ನಾನು ಗೆಳೆಯ ಹನೀಫ್ ಸೇರಿ ವಿಜಯನಗರದಲ್ಲೊಂದು ರೂಮ್ ಮಾಡಿದ್ವಿ. ಆ ರೂಮಿನ ಬಗ್ಗೆ ಬರೆದರೆ ಅದೇ ಒಂದು ಖಾಸ್ಬಾತ್ ಆದೀತು. ಅದನ್ನು ಮತ್ಯಾವಗಾದರು ಹೇಳ್ತೇನೆ.ಇಂಥ ಸಮಯದಲ್ಲಿ ನನ್ನಲ್ಲಿ ಕಾಸಿಗೆ ಬರ. ರೂಮ್ ಏನೋ ಕಷ್ಟ ಪಟ್ಟು ಮಾಡಿದ್ದೆ. ಆದ್ರೆ ಅಡುಗೆ? ಸ್ಟವ್ ಇಲ್ಲ. ಸೀಮೆ ಎಣ್ಣೆ ಇಲ್ಲ. ಹಾಸಿಕೊಳ್ಳಲು ನೆಟ್ಟಗೊಂದು ಚಾಪೆಯೂ ಇಲ್ಲ. ಹನೀಫ ರೂಮಿನಲ್ಲಿರುತ್ತಿದ್ದದ್ದೇ ಅಪರೂಪವಾದ್ದರಿಂದ ಅವನ ಚಾಪೆಯನ್ನೇ ನಾನು ಬಳಸಿಕೊಳ್ಳುತ್ತಿದ್ದೆ.ಆದ್ರೆ ಅಡುಗೆಗೆ ಏನು ಮಾಡುವುದು?ಒಮ್ಮೆ ಸವರ್ೆಗೆ ಟೀಮ್ ಸೆಲೆಕ್ಟ್ ಮಾಡುವ ಇಂಟರ್ ವ್ಯೂ ಇತ್ತು. ಎಲ್ಲೆಲ್ಲಿಂದಲೋ ಹುಡುಗ್ರು ಬಂದಿದ್ರು. ಅದರಲ್ಲೊಬ್ಬ ಹುಡುಗನ ಪರಿಚಯವಾಯಿತು. ಬೆಂಗಳೂರಿನವನೇ. ತುಂಬಾ ಆತ್ಮೀಯತೆಯಿಂದ ಮಾತಾಡಿಸಿದ. ಅದೂ ಇದು ಮಾತಾಡುತ್ತಾ ವಿಷಯ ಬದುಕಿನತ್ತ ಹೊರಳಿತು. ನನ್ನ ಪರಿಸ್ಥಿತಿ ಕೇಳಿ... ಅಯ್ಯೋ ಬನ್ನಿ ನಮ್ ಮನೆಗೆ ಅಂತ ಕರೆದೋಯ್ದ. ಅವನು ಕರೆದುಕೊಂಡು ಹೋದ ಏರಿಯಾ ಕೂಡ ನನಗೆ ನೆನಪಿಲ್ಲ. ಅವತ್ತು ಅವನ ಮನೆಯಲ್ಲಿ ಯಾರೂ ಇರಲಿಲ್ಲ. ಹೋದವನೆ ಅದೆಲ್ಲಿಟ್ಟಿದ್ದನೋ ಅಟ್ಟದ ಮೇಲಿದ್ದ ಒಂದು ಸ್ಟವ್ ತೆಗೆದು ಕೊಟ್ಟ. ಬತ್ತಿ ಸ್ಟವ್ ಅದು. ನಾನು ಸಂಕೋಚದಿಂದ ಬೇಡ ಅಂದೆ. ಇರಲಿ ತಗೊಳಿ ಅಂದ. ಬೇಡವೆಂದರೂ ಊಟ ಹಾಕಿದ. ನಾಳೆ ಸಿಕ್ತೇನೆ ಅಂತ ಬೀಳ್ಕೊಟ್ಟ.
ನಿಜ್ಜ ಹೇಳ್ಲ ಅದೇ ಸ್ಟವ್ನಿಂದಲೇ ನಾನು ಸುಮಾರು ದಿವಸ ಅನ್ನ ಬೇಯಿಸಿಕೊಂಡು ತಿಂದದ್ದು. ಟೊಮ್ಯಾಟೋ ಗೊಜ್ಜು ಮಾಡಿಕೊಂಡಿದ್ದು. ಬಿಸಿ ಬಿಸಿ ಆಮ್ಲೆಟ್ ಹಾಕಿಕೊಂಡಿದ್ದು. ಅವತ್ತು ಭೇಟಿಯಾದ ಆ ಗೆಳೆಯ ಮಾರನೆ ದಿನದಿಂದಲೇ ಕೆಲಸಕ್ಕೆ ಬರಲಿಲ್ಲ. ಸ್ಯಾಲರಿ ಸಾಲಲಿಲ್ಲವೋ ಮತ್ತಿನ್ನೇನೋ. ಅವತ್ತೇ ನಾವೆಲ್ಲ ಬಿಜಾಪುರಕ್ಕೆ ಹೊರಟು ಹೋದ್ವಿ. ಬರೋಬ್ಬರಿ ಒಂದೂವರೆ ತಿಂಗಳ ಸವರ್ೆ ಅದು. ಅವನ ಮುಖ ಮತ್ತೆ ನಾನು ನೋಡಲಿಲ್ಲ. ಆದ್ರೆ ಅವನು ಕೊಟ್ಟ ಆ ಸ್ಟವ್ ಮಾತ್ರ ನನ್ನಲ್ಲಿ ತುಂಬಾ ಕಾಲ ಉಳಿದಿತ್ತು.
ಬದುಕಿನ ಪಥದಲ್ಲಿ ಯಾರ್ಯಾರೋ ಎಲ್ಲೆಲ್ಲಿಂದಲೋ ಬಂದು ಸಹಾಯ ಮಾಡಿಬಿಡುತ್ತಾರೆ. ಅಂಥವರಿಂದಲೇ ಅಲ್ಲವೇ ಬದುಕು ಅವುಡುಗಚ್ಚಿ ಚಿಗಿತುಕೊಳ್ಳುತ್ತಾ ಹೋಗುವುದು. ಅವೆಲ್ಲ ಸಣ್ಣ ಸಣ್ಣ ಸಹಾಯಗಳಿರಬಹುದು. ಆದ್ರೆ ಇಡೀ ದಾರಿ ಸುಗಮವಾಗಿದ್ದು ಮಾತ್ರ ಅವರೆಲ್ಲರಿಂದಲೇ ಅನ್ನುವುದನ್ನ ಮರೆಯಬಾರದು.
ಯಾಕೋ ಇವತ್ತು ಬರೆಯುತ್ತಾ ಕುಳಿತವನಿಗೆ ಇದೆಲ್ಲ ನೆನಪಾಯಿತು.

Saturday, April 26, 2008

ಅಕ್ಕ ಹೇಳಿದ ಕುಡುಕನ ಪ್ರಸಂಗ...


ನನ್ನ ಭಾವನದೊಂದು ತೋಟ ಇದೆ ಊರಲ್ಲಿ. ಅವಾಗವಾಗ ಅಲ್ಲಿಗೆ ಹೋಗಿ ಬರೋದು ಅಭ್ಯಾಸ. ಹಾಗೆ ಹೋಗಲಿಲ್ಲ ಅಂದ್ರೆ ಭಾವ ಹುಷಾರು, ಒಂದಿನ ಹೋಗಿ ನೋಡಿದ್ರೆ ನಿಮ್ಮ ತೋಟಾನೆ ಇರೋಲ್ಲ ಅಂತ ನಾವು ರೇಗಿಸ್ತಿರ್ತೀವಿ. ಹಾಗಾಗಿ ರಜೆ ಸಿಕ್ಕಿದ್ರೆ ಸಾಕು ತೋಟ ಅಂತ ಭಾವ ಪರಾರಿ ಅಗಿಬಿಡ್ತಾರೆ.

ಈ ತೋಟ ನೋಡ್ಕೊಳೋಕೆ ಅಂತ ಅಲ್ಲೊಂದು ಸಂಸಾರ ಇಟ್ಟಿದಾರೆ. ಮಹಾನ್ ಕುಡುಕನಂತೆ ಆತ. ಆದ್ರೆ ಭಾವ ತೋಟಕ್ಕೆ ಹೋದಾಗ ಮಾತ್ರ ಆತ ಬಿಲ್ಕುಲ್ ಕುಡಿಯೋಲ್ಲವಂತೆ.

ಆದ್ರೆ ಅವತ್ತು ಆಗಿದ್ದೇ ಬೇರೆ. ಯಥಾ ಪ್ರಕಾರ ಇವರು ತೋಟಕ್ಕೆ ಹೋಗಿದ್ದಾರೆ. ಎಲ್ಲಾ ಸರಿ ಇದೆಯಾ ಅಂತ ನೋಡಿದಾರೆ. ಕೊನೆಗೆ ಒಂದು ಹೊಂಗೆ ಮರದ ಕೆಳಗೆ ಉಸ್ಸಪ್ಪ ಅಂತ ತೋಟದ ಮಾಲಿ ಜೊತೆ ಕುಳಿತಿದ್ದಾರೆ. ಅಷ್ಟರಲ್ಲಿ ಅದೇ ಊರಿನವನೊಬ್ಬ ಅಲ್ಲಿಗೆ ಬಂದಿದ್ದಾನೆ. ಅವನು ಬರುವ ರೀತಿ ನೋಡಿದರೆ ದೇವರು ಒಳಗಿದ್ದ ಅನಿಸುತ್ತಿತ್ತಂತೆ.ಬಂದವನು ದೊರೆ ಹತ್ತು ರುಪಾಯಿ ಕೊಡಿ ಅಂದವನೆ.ಭಾವ ಇಲ್ಲ ಹೋಗಿ ಅಂದಿದಾರೆ.ಅವನು ಬಿಟ್ಟಿಲ್ಲ. ಕೊನೆಗೆ ಹಾಳಾಗಿ ಹೋಗು ಅಂತ ಭಾವ ಹತ್ತು ರುಪಾಯಿ ಕೊಟ್ಟು ಅದನ್ನು ಮರೆತೂ ಬಿಟ್ಟಿದ್ದಾರೆ.

ಆದ್ರೆ ಹಾಗೆ ಈಸಿಕೊಂಡು ಹೋದವನು ಹಾಗೆ ಫುಲ್ ಟೈಟಾಗಿ ಬಂದು ಎದುರಿಗೆ ನಿಂತಾಗಲೇ ಇವರಿಗೆ ಗೊತ್ತಾಗಿದ್ದು ಇವನ ವರಸೆ ಬೇರೇನೆ ಇದೆ ಅಂತ.

ರೀ ಸ್ವಾಮಿ, ನನಗೆ ಕೇವಲ ಹತ್ತು ರುಪಾಯಿ ಕೊಡ್ತೀರಾ? ಎಷ್ಟು ಕೊಬ್ಬು ನಿನಗೆ? ಅಂದವನೆ.

ಭಾವ ಇದೊಳ್ಳೆ ಆಯ್ತಲ್ಲ, ದುಡ್ಡು ಕೊಟ್ಟುಬುಟ್ಟು ಉಗಿಸಿಕೊಂಡಂಗಾಯ್ತಲ್ಲ ಅಂದುಕೊಂಡು ಹೋಗಯ್ಯ ಅತ್ಲಾಗೆ ಅಂತ ಬಟ್ಟೆ ಕೊಡವಿಕೊಂಡು ಎದ್ದವರೆ.

ಮಾಲಿಯೂ ಹೋಯ್ತೀಯೋ ಇಲ್ಲ ಒದೆ ಬೇಕೋ ಅಂದವನೆ.

ಆದರೆ ಅವನು ಬಿಡಬೇಕಲ್ಲ.

ಎಲ್ಲಿಗ್ರಿ ಹೋಗ್ತೀರಾ? ನಂಗೆ ಹತ್ತು ರುಪಾಯಿ ಕೊಟ್ಟು ಅವಮಾನ ಮಾಡಿದೀರಾ? ನೀವು ಮಾತ್ರ ಸಾವಿರ ಗಟ್ಟಲೆ ಉಯ್ಕೊತೀರಾ? ನಮಗೆ ಮಾ.....ತ್ರ ....ಹ.....ತ್ತು ....ರು .......ಪಾಯೀನಾ? ಈಡಿಯಟ್....

ಇನ್ನೂ ಏನೇನೋ?

ಭಾವನಿಗೆ ಕೋಪ ಬಂದಿದೆ.

ಹೋಗ್ತೀಯ ಇಲ್ಲ ಒದೆ ಬೇಕಾ ಅಂದಿದಾರೆ.

ನೀನೇನು ಒದಿಯೋದು. ನಾನೆ ಒದೀತೀನಿ ತಗೋ ಅಂತ ಕಾಲೆತ್ತಿಕೊಂಡು ಬಂದವನು ಅಲ್ಲೇ ಮುಗ್ಗರಿಸಿ ಬಿದ್ದಿದ್ದಾನೆ.ಒಳ್ಳೆ ಕಥೆಯಾಯಿತಲ್ಲಪ್ಪ ಅಂತ ತೋಟದ ಕಾವಲುಗಾರ ಇವರು ಇಬ್ಬರೂ ಸೇರಿಕೊಂಡು ಎರಡು ತದುಕಿದ್ದಾರೆ.ಆಮೇಲೆ ಅಲ್ಲಿಂದ ಎದ್ದವನು ಸೀದಾ ಊರ ಕಡೆಗೆ ಮಾಯವಾಗಿದ್ದಾನೆ.

ಅವತ್ತಿಂದ ಭಾವ ಊರಿಗೋಗ್ತೀನಿ ಅಂದಾಗಲೆಲ್ಲ ಈ ಘಟನೆ ನೆನಪಾಗುತ್ತಂತೆ ಅಕ್ಕನ ಮನೆಯವರಿಗೆ.

ಹುಷಾರು ಅಪ್ಪ ಯಾರಿಗೂ ಕಾಸು ಕೊಡಬೇಡಿ. ಒದ್ದುಗಿದ್ದಾರು ಅಂತ ಮಗಳು ರೇಗಿಸ್ತಿರ್ತಾಳೆ.

ಇನ್ನೂ ಸ್ವಾರಸ್ಯ ಅಂದ್ರೆ ಇದೇ ವ್ಯಕ್ತಿ ಹಿಂದೊಮ್ಮೆ ಹೀಗೆ ಗಲಾಟೆ ಮಾಡಿದ್ದಾಗ ಅಲ್ಲೇ ಇದ್ದ ಬಾವಿಗೆ ಎತ್ತಿ ಹಾಕಿದ್ರಂತೆ.ಈ ಕುಡುಕನ ಪ್ರಸಂಗ ಹೇಳಿದ್ದು ನನ್ನ ಅಕ್ಕ. ಮೊನ್ನೆ ಮಂಡ್ಯಕ್ಕೆ ಹೋಗಿದ್ದಾಗ.

Monday, April 21, 2008

ಎಂಟು ವರ್ಷಗಳ ನಂತರ ಒಡಮೂಡಿದ ಈ ಕವಿತೆ ...


ನಾನು ಕವಿತೆ ಬರೆದೇ ಸುಮಾರು ವರ್ಷಗಳಾಗಿ ಹೋದವು. ಈ ನಡುವೆ ಬರೀಬೇಕೆಂದು ಯಾವತ್ತೂ ಅನಿಸಿಯೇ ಇರಲಿಲ್ಲ. ಅಥವಾ ನನ್ನ ಮನಸ್ಸು ಅದಕ್ಕೆ ಸಿದ್ಧವಿರಲಿಲ್ಲವೋ ಗೊತ್ತಿಲ್ಲ. ಒಂದು ಕಾಲಕ್ಕೆ ಎಲ್ಲೆಂದರಲ್ಲಿ ಕವಿತೆ ಬರೆದು ಗೆಳೆಯರನ್ನು ಬೆಚ್ಚಿ ಬೀಳಿಸಿದ್ದೆ. ಕಾಲೇಜಿನ ಕಾರಿಡಾರಿನಲ್ಲಿ ಕವಿ ಬಂದ್ರು ಅಂತಿದ್ರು. ಅದಕ್ಕೆ ತಕ್ಕುನಾಗಿ ಅವಾಗವಾಗ ಜುಬ್ಬ ಹಾಕಿಕೊಂಡು, ಗಡ್ಡ ಬಿಟ್ಕೊಂಡು ಹೋಗೋದೂ ಇತ್ತು. ಹೊಸ ಕವಿತೆ ಬರೆದು ಬರೆದು ಕಾಲೇಜಿನ ನೋಟೀಸ್ ಬೋಡರ್ಿಗೆ ಹಾಕೋದು ಆಗ ನನಗೆ ರೂಢಿ. ಇದನ್ನು ನೋಡಿ ಉತ್ತರ ಕನರ್ಾಟಕದ ಗೆಳೆಯ ಬಸವರಾಜ ನೀನೇನು ಕವಿತೆಯಲ್ಲೆ ಎಲ್ರನ್ನೂ ಕೊಲ್ಲೋಂಗ್ ಕಾಣಿಸ್ತೀಯಲ್ಲೋ ಮಾರಾಯ ಅಂತಿದ್ದ. ಹಂಗ ಬರೀತಿದ್ದೆ. ಇಡೀ ಕಾಲೇಜಿಗೆ ಕವಿತೆಯಲ್ಲಿ ಫಸ್ಟ್ ಪ್ರೈಜ್ ಹೊಡಕೊಂಡು ಬಂದಿದ್ದೆ. ಆಮೇಲೆ ಪೊಯಿಟ್ರಿ ಸೊಸೈಟಿ ಆಫ್ ಇಂಡಿಯಾದವರು ಮಾಡಿದ್ದ ಒಂದು ವಾರದ ಪೊಯಿಟ್ರಿ ವಕರ್್ಶಾಪ್ಗೆ ಹೋಗಿದ್ದೆ. ಅದೊಂದು ಮರೆಯಲಾಗದ ಅನುಭವ. ಇನ್ನೊಮ್ಮೆ ಯಾವತ್ತಾದರೂ ಬರೆದೇನು. ಅಲ್ಲಿಗೆ ಬಂದವರಲ್ಲಿ ತುಂಬಾ ಜನ ನನ್ನ ಥರಾನೆ ಪತ್ರಕರ್ತರಾಗಿದ್ದಾರೆ. ಹಾಗೆ ಶುರುವಾದ ಕವಿತೆ ಯಾಕೋ ಬೆಂಗಳೂರಿಗೆ ಬಂದ ಮೇಲೆ ಗೊತ್ತಿಲ್ಲದೇ ಕಳೆದುಹೋಯಿತು. ನಾನೂ ಹುಡುಕುವ ಉಸಾಬರಿ ತೆಗೆದುಕೊಳ್ಳಲಿಲ್ಲ.ಓ ಮನಸೇಯಲ್ಲಿ ಇನ್ಬಾಕ್ಸ್ ಅಂಕಣದಲ್ಲಿ ಒಂದಿಷ್ಟು ಸಣ್ಣ ಸಣ್ಣ ಕವಿತೆಗಳನ್ನು ಬರೆದದ್ದು ಬಿಟ್ಟರೆ ಮತ್ತೇನೂ ಬರೆದಿಲ್ಲ. ಅದು ಬಹಳ ಪಾಪ್ಯುಲರ್ ಆಗಿಹೋಯಿತು.

ಇವತ್ತು ಸುಮ್ಮನೆ ಕುಳಿತವನಿಗೆ ಅದ್ಯಾಕೋ ಹೀಗೆ ಬರೆಯಬೇಕೆನಿಸಿತು. ಬರೆದಿದ್ದೇನೆ.

ಸುಮ್ಮನೆ ಓದಿಕೊಳ್ಳಿ.ಎಂಟು ವರ್ಷಗಳ ನಂತರ ಒಡಮೂಡಿದ ಕವಿತೆ.


ನಾನು ಹಾಗೇ!


ನಾನು ಹಾಗೇ!

ನನ್ನ ಮನದ ಕಡಲಿಗೆ

ಟಾಚರ್್ ಬಿಟ್ಟು ನೋಡಿಕೊಂಡವನು

ಎದೆಯ ಪ್ರೀತಿಗೆ ಸೇತುವೆ ಕಟ್ಟಿ

ಯಾರಿಗಾಗೋ ಕಾದು ಕುಳಿತವನು


ನಾನು ಹಾಗೇ!

ಬಣ್ಣಕ್ಕೆ ಬಣ್ಣ ಹಚ್ಚಿ

ಅದರ ಬೆರಗ ನೋಡುವವನು

ಅನ್ಲಿಮಿಟ್ ಆಕಾಶಕ್ಕೆ

ಏಣಿ ಹಾಕಲು ಹೊರಟವನು


ನಾನು ಹಾಗೇ!

ಅವಳ ಪ್ರೀತಿಗೆ ಸೋತಹಾಗೆ

ಮೋಸಕ್ಕೂ ಸೋತವನು

ಖಾಲಿ ಹೃದಯವಿಟ್ಟುಕೊಂಡು

ಒಳಗೆ ಮಾತ್ರ

ಚಿಲಕವಿಟ್ಟುಕೊಂಡವನು


ನಾನು ಹಾಗೇ!

ನದಿ ತಿರುವಿನಂತೆ, ಓಘದಂತೆ

ಬೆಟ್ಟದಿಂದಿಳಿದು ಓಡುವ

ಪುಟ್ಟ ಜರಿಯಂತೆ

ಆಮೇಲೆ ಕಾಲ ಬುಡದಲ್ಲೇ

ಅದನ್ನೆಲ್ಲ ಹೀರಿಕೊಂಡು ಬೆಳೆದ

ಸಂಪಿಗೆ ಮರದಂತೆ


ನಾನು ಹಾಗೇ!

ಸುಖದ ಸಂಬಂಧಿ

ದುಃಖದ ಬಂಧಿ


ನಾನು ಹಾಗೇ!

ನನ್ನ ಹಾಗೇ

ಮೂರ್ತ, ಅಮೂರ್ತ


ನಾನು ಹೇಳಬೇಕೆಂದ್ರೆ,

ಹಾಗೇ!

ಥೇಟ್ ನನ್ನ ಹಾಗೇ!

Saturday, April 19, 2008

ಪ್ರೀತಿಗೊಂದು ಕಾರಣ ಕೊಡೋ?


ಅವರಿಬ್ಬರೂ ಪ್ರಾಣ ಹೋಗುವಷ್ಟು ಪ್ರೀತಿಸುತ್ತಿದ್ದರು. ನಿನಗೆ ನಾನು ನನಗೆ ನೀನು ಅನ್ನುತ್ತಾರಲ್ಲಾ ಹಾಗೆ. ಆದರೆ ಅದ್ಯಾಕೋ ಗೊತ್ತಿಲ್ಲ, ಒಂದಿನ ಹುಡುಗಿ ಮೀರಾಳಿಗೆ ತನ್ನ ಹುಡುಗ ಪ್ರೀತಂ ನನ್ನನ್ನು ಪ್ರೀತಿಸುತ್ತಿರುವುದಕ್ಕೆ ಕಾರಣ ತಿಳಿದುಕೊಳ್ಳಬೇಕೆನ್ನುವ ಹಪಾಹಪಿ ಕಾಡುತ್ತದೆ. ಎದುರಿಗೆ ಕುಳಿತವನ ಕೈ ಹಿಡಿದು ಕೇಳುತ್ತಾಳೆ.

ಹೇಳು ಪ್ರೀತಂ why do you like me? why do you love me?

ಪ್ರೀತಮ್ ಏಕ್ದಮ್ ಕಂಗಾಲು.

ಇಷ್ಟು ದಿನ ಇಲ್ಲದ ಈ ಅನುಮಾನ ಇವಳಿಗ್ಯಾಕಪ್ಪ ಈಗ ಬಂತು ಅಂದುಕೊಳ್ಳುತ್ತಾನೆ.

"ನಿನ್ನನ್ನು ಪ್ರೀತಿಸುತ್ತಿರುವುದಕ್ಕೆ, ಇಷ್ಟ ಆಗಿರೋದಕ್ಕೆ ಕಾರಣಗಳಿಲ್ಲ ಕಣೆ, But I really like u. ನಿನ್ನನ್ನು ನಾನು ಸತ್ತು ಹೋಗುವಷ್ಟು ಪ್ರೀತಿಸುತ್ತೇನೆ ಅಂತ ಹೇಗೆ ಹೇಳಲಿ...?

" " ನನ್ನನ್ನು ಪ್ರೀತಿಸುತ್ತಿರುವುದಕ್ಕೆ ನಿನಗೊಂದು ಕಾರಣ ಹೇಳಲು ಗೊತ್ತಿಲ್ಲ. ಅದು ಹ್ಯಾಗೆ ಹೇಳ್ತೀಯ... ನೀನಂದ್ರೆ ನನಗೆ ಇಷ್ಟ ಅಂತ? ಶುದ್ಧ ಬೊಗಳೆ ನಿಂದು ಹೋಗೋ " ಕಣ್ಣೀರಿಡುತ್ತಾಳೆ ಮೀರಾ." ನೀನು ನನಗೆ ಕಾರಣ ಹೇಳಲೇ ಬೇಕು ಕಣೋ. ಯಾಕೇಂದ್ರೆ ನನ್ನ ಗೆಳತಿಯರಿಗೆಲ್ಲ ಅವರ ಬಾಯ್ ಫ್ರೆಂಡ್ಸ್ ಕಾರಣ ಹೇಳಿದ್ದಾರೆ. ನೀನೂ ಹೇಳು? ಪ್ರೀತ್ಸೋದಕ್ಕೆ ಒಂದು ಕಾರಣ ಹೇಳೋ ತಾಕತ್ತು ನಿನಗಿಲ್ವಾ? " ಮೀರಾ ಒಂದೇ ಸಮನೆ ಕನವರಿಸುತ್ತಾಳೆ.

ಪ್ರೀತಮ್ ತಡವರಿಸುತ್ತಾನೆ.

ಏನು ಹೇಳಲಿ ಇವಳಿಗೆ? ಹೇಳಿದ್ದು ಇಷ್ಟ ಆಗದೇ ನನ್ನನ್ನು ತಿರಸ್ಕರಿಸಿಬಿಟ್ಟರೆ? ಓ ದೇವರೆ, ಇವಳಗೆ ಇಂಥ ಕಾರಣ ಹುಡುಕುವ ಹುಚ್ಚು ಯಾಕಾದರೂ ಬಂತಪ್ಪಾ?ಮೀರಾಳ ಕೈಹಿಡಿದು ಕೇಳುತ್ತಾನೆ.

"ಹೇಳಲೇಬೇಕಾ?

""ಹ್ಞೂಂ" ಅನ್ನುತ್ತಾಳೆ ಮೀರಾ.

ಪ್ರೀತಂ ಒಲ್ಲದ ಮನಸ್ಸಿನಿಂದ ಅವಳನ್ನೇ ಒಮ್ಮೆ ದಿಟ್ಟಿಸಿನೋಡಿ ಹೇಳುತ್ತಾನೆ.

" ನಿನ್ನನ್ನ ನಾನು ಯಾಕೆ ಪ್ರೀತಿಸ್ತೀನಿ ಅಂದ್ರೆ,U are beautiful!ನೀನ್ನ ವಾಯ್ಸ್ ತುಂಬಾ ಸ್ವೀಟಾಗಿದೆ.ನೀನು ತುಂಬಾ ಕೇರಿಂಗ್ ನೇಚರ್ ಇರೋ ಹುಡುಗಿ.ನಿನ್ನ ನಗು ಇದೆಯಲ್ಲ ಅದು ಈಗ ತಾನೆ ಅರಳಿದ ಹೂವಿನಷ್ಟು ಫ್ರೆಷ್ ಆಗಿದೆ.ಮಾತು, ಮಾತಾಡ್ತೀಯಲ್ಲ ಅದೊಂಥರ ಜೇನಿನಲ್ಲಿ ಅದ್ದಿ ಅದ್ದಿ ತೆಗೆದಂಗಿರುತ್ತೆ.ಇಷ್ಟು ಹೇಳಿದ್ದೇ ತಡ ಮೀರಾ ನೀಲಾಕಾಶದಲ್ಲಿ ನೆಗೆದು ಹಾರಿದಳು. ಅವಳ ಮನದಲ್ಲಿ ಒಟ್ಟಿಗೆ ನೂರು ಹೂ ಅರಳಿದ ಸಂಭ್ರಮ.

***

ಪ್ರೀತಿ ಹೀಗೇ ಮುಂದುವರೀತು. ಪ್ರೀತಂ ತನ್ನನ್ನು ಯಾಕೆ ಅಷ್ಟೊಂದು ಪ್ರೀತಿಸುತ್ತಿದ್ದಾನೆ ಅನ್ನುವುದಕ್ಕೆ ಮೀರಾಳಿಗೆ ರೀಸನ್ ಸಿಕ್ಕಿತ್ತಲ್ಲ, ಅದನ್ನೇ ತನ್ನೆಲ್ಲ ಗೆಳತಿಯರ ಹತ್ತಿರ ಹೇಳಿಕೊಂಡು ಓಡಾಡಿದಳು. ಪ್ರೀತಂ ಅಂದ್ರೆ ಮೀರಾಳಿಗೆ ಕೇವಲ ಪ್ರೀತಿ ಮಾತ್ರವಲ್ಲ... ಅವನೇ ಬದುಕು... ಅವನೇ ಉಸಿರು... ಅವನೇ ಅವಳ ನಾಡಿ ಮಿಡಿತ... ಅವನೇ ಅವಳ ಎಲ್ಲಾ!ಆದರೆ ವಿಧಿ ಬಿಡಬೇಕಲ್ಲ.ಎಂದಿನಂತೆ ಮೀರಾ ಅವತ್ತು ತನ್ನ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗಬೇಕಾದ್ರೆ, ಎದುರಿನಿಂದ ಬಂದ ಕಾರಿನವ ಹೊಡೆದುಕೊಂಡು ಹೋಗಿದ್ದ. ಮೀರಾಳದು ಅನ್ಕಾನ್ಷಿಯಸ್ ಲೆವೆಲ್. ಸುದ್ದಿ ಕೇಳಿ ಓಡೋಡಿ ಬಂದ ಪ್ರೀತಮ್ಗೆ ದಿಕ್ಕೇ ತೋಚದಂತಾಗುತ್ತದೆ. ಎಷ್ಟು ಚೆಂದಕ್ಕಿದ್ದ ಹುಡುಗಿಯನ್ನ ಹೀಗೆ ಮಾತೇ ಇಲ್ಲದಂಗೆ ಮಾಡಿಬಿಟ್ಟಲ್ಲ ದೇವರೆ. ನೀನು ಇಷ್ಟೊಂದು ಕ್ರೂರಿ ಅಂತ ನನಗೆ ಇದುವರೆಗೂ ಗೊತ್ತಿರಲಿಲ್ಲ... ಐ ಹೇಟ್ ಯು... ಐ ಹೇಟ್ ಯು ಹಲಬುತ್ತಾನೆ.ಮೀರಾ ತನ್ನ ಪ್ರೀತಿಗೆ ಕಾರಣ ಕೇಳಿದ್ದು ನೆನಪಾಗಿ ಪ್ರೀತಂ ಮನಸ್ಸು ಅಯ್ಯೋ ಅಂತ ರೋದಿಸುತ್ತದೆ.ತಕ್ಷಣ ಅಲ್ಲಿದ್ದ ಒಂದು ಪೇಪರ್ನಲ್ಲಿ ಏನನ್ನೋ ಬರೆದು ಅವಳ ಪಕ್ಕಕ್ಕಿಟ್ಟು ಹೋಗುತ್ತ್ತಾನೆ.ಮೀರಾಳಿಗೆ ಎಚ್ಚರ ಬಂದಾದ ಮೇಲೆ ಪಕ್ಕಕ್ಕೆ ತಿರುಗಿದರೆ ಅಲ್ಲೊಂದು ಪುಟ್ಟ ಲೆಟರು.ಕುತೂಹಲದಿಂದ ಹಿಡಿದೆತ್ತಿ ಓದುತ್ತಾಳೆ..... ಡಾಲರ್ಿಂಗ್ ಅವತ್ತು ಪ್ರೀತಿಗೆ ಕಾರಣ ಕೇಳಿದೆ ಅಲ್ವಾ!ಈಗ ನೋಡು ನಿನ್ನನ್ನು ಪ್ರೀತಿಸಲಿಕ್ಕೆ ಕಾರಣಗಳೇ ಇಲ್ಲ.ಯಾಕೆಂದರೆ,ನೀನಗೀಗ ಜೇನಿನಲ್ಲಿ ಅದ್ದಿ ತೆಗೆದಂಗೆ ಮಾತನಾಡಲು ಆಗುತ್ತಿಲ್ಲ. ಮುಖ ಒಣಗಿ ಹೋದ ಹೂವಿನಂತಿದೆ.ನಿನಗೆ ನನ್ನ ಬಗ್ಗೆ ಒಂದು ಪ್ರೀತಿ ಇತ್ತಲ್ಲ, ಕೇರ್ ಇತ್ತಲ್ಲ ಅದು ಈಗ ನಿನ್ನಿಂದ ಕೊಡಲು ಸಾಧ್ಯವೇ?ನಿನ್ನ ಆ ನಗು, ಎಲ್ಲಿ ಹೋಯ್ತೆ ಅದು?ನಿಜ್ಜ ಹೇಳ್ಲ, ಪ್ರೀತಿಗೆ ಯಾವತ್ತೂ ಕಾರಣ ಬೇಕಿಲ್ಲ!ಯಾಕೆಂದ್ರೆ ನಾನು ಈಗಲೂ ನಿನ್ನನ್ನು ಅಷ್ಟು ಪ್ರೀತಿಸುತ್ತೇನೆ.ಸ್ಟಿಲ್ ಐ ಲವ್ ಯುಮೊದಲಿಗೆ ಯಾರೋ ಎದೆಯಾಳದಲ್ಲಿ ಕುಳಿತು ಒಮ್ಮೆಲೇ ನೂರು ಡೈನಮೇಟ್ ಸಿಡಿಸಿದ ಹಾಗಾಯಿತು. ಮರುಕ್ಷಣ ನಿರಾಳ.

***

ಅವತ್ತು ಸಂಜೆ ಪ್ರೀತಮ್ ಬಂದ. ಮೀರಾ ಇನ್ನೂ ನಿದ್ರೆಯಲ್ಲಿದ್ದಳು. ಪಕ್ಕದಲ್ಲಿ ಕುಳಿತವನಗೆ ಕಾಣಿಸಿದ್ದು ಅವಳ ಕೈಯಲ್ಲಿ ತಾನು ಬರೆದಿಟ್ಟು ಹೋಗಿದ್ದ ಪತ್ರ. ಎದೆಗವಚಿಕೊಂಡು ಮಲಗಿದ್ದಳು.ಯಾಕೋ ಅವಳ ಪಕ್ಕದಲ್ಲಿ ಕುಳಿತ ಕ್ಷಣ ಕಣ್ಣು ಒದ್ದೆಯಾಗತೊಡಗಿತು. ಅವಳ ತಲೆ ಸವರಿದ. ಇವನ ಕಣ್ಣ ಕೊನೆಯಿಂದ ಇಳಿದ ಹನಿಯೊಂದು ಅವಳ ಕೆನ್ನೆ ಮೇಲೆ ಜಾರಿ ಬಿದ್ದು ಮೆಲ್ಲಗೆ ಕಣ್ಣು ತೆರೆದಳು.

"ಪ್ರಿತಂ......."

ಮೀರಾಳ ಕೈ ಪ್ರೀತಂನ ಕೈ ತಡಕಿತು.

ಪ್ರೀತಮ್ ಮೆಲ್ಲಗೆ ಅವಳ ಕೈ ಅದುಮಿದ.

ಎಲ್ಲಾ ಅರ್ಥವಾದವಳಂತೆ ಅವಳ ಮುಖದಲ್ಲೊಂದು ತೆಳು ಮಂದಹಾಸ.

***

ಈಗ ಹೇಳಿ ಪ್ರೀತಿಸಲು ಕಾರಣ ಬೇಕಾ?

Friday, April 18, 2008

ಒಂದು ಮಜಬೂತಾದ ಕತೆ ಹಿಡಿದುಕೊಂಡು ಕುಳಿತ ...

ಯಾಕೋ ಗೊತ್ತಿಲ್ಲ ಒಂದು ಫಿಲ್ಮ್ ತೆಗೀಬೇಕು ಅನ್ನೋ ಆಸೆ ಇತ್ತೀಚೆಗೆ ಬಲವಾಗಿ ಕಾಡತೊಡಗಿದೆ. ಅದ್ಭುತವಾದೊಂದು ಕಥೆ ರೆಡಿ ಮಾಡಿಟ್ಟುಕೊಂಡಿದ್ದೇನೆ. ಅದು ಎಂಥ ಕತೆ ಎಂದ್ರೆ ಅದನ್ನು ಗೆಳೆಯನಿಗೆ ಮೊನ್ನೆ ಕೂರಿಸಿಕೊಂಡು ಹೇಳುತ್ತಾ ಹೋದೆ. ಅದನ್ನು ನಾನು ಹೇಳಿ ಮುಗಿಸೋ ಅಷ್ಟರಲ್ಲಿ ಅವನು ತುಂಬಾ ಭಾವುಕನಾಗಿದ್ದ. ಆ ಕಥೆಯ ಹಂದರವೇ ಹಾಗಿದೆ. ಸಣ್ಣ ಸಣ್ಣ ಮನುಷ್ಯ ಸಂಬಂಧಗಳನ್ನು ಕಟ್ಟಿಕೊಡುವ ಪ್ರಯತ್ನ ಅದು.
ಕಮಷರ್ಿಯಲ್ ಆಗಿ ಎಲ್ಲ ವರ್ಗದವರಿಗೂ ಇಷ್ಟವಾಗುವ ಮಜಬೂತಾದ ಕತೆ ಅದು.ನನಗೆ ಟೆಕ್ನಿಕಲ್ ಸೈಡ್ ಗೊತ್ತಿಲ್ಲದಿರಬಹುದು. ಆದ್ರೆ ಒಂದು ಫಿಲ್ಮ್ ಹೇಗಿರಬೇಕು ಅನ್ನೋದನ್ನ ಅದ್ಭುತವಾಗಿ ವéಿಷುವಲೈಸ್ ಮಾಡೋ ಅಷ್ಟು ಕಲ್ಪನೆ ನನಗಿದೆ. ಒಮ್ಮೊಮ್ಮೆ ಈ ಎಲ್ಲ ಕೆಲಸ ಬಿಟ್ಟು ಫಿಲ್ಮ್ ದಾರಿ ಹಿಡಿದುಬಿಡೋಣವೇ ಅನ್ನಿಸುತ್ತೆ. ಹಾಗಂದುಕೊಂಡ ಮರುಕ್ಷಣವೇ ಹಾಗೆಲ್ಲ ಮಾಡಿಗೀಡಿಯೇ ಮಗನೇ ಅಂತ ಮನಸ್ಸು ಕೈ ಹಿಡಿದು ಜಗ್ಗುತ್ತೆ.ಹಾಗೆ ನೋಡಿದರೆ ಈ ಫಿಲ್ಮ್ ಹುಚ್ಚು ನನಗೆ ಹೊಸದೇನಲ್ಲ. ನನ್ನ ಕಾಲೇಜಿನ ದಿನಗಳಲ್ಲಿಯೇ ನನಗೆ ಅಂಥದ್ದೊಂದು ಹುಚ್ಚು ತೀವ್ರವಾಗಿತ್ತು. ಗೆಳೆಯರೆಲ್ಲ ಸೇರಿ ಸಾರ್ ಇವನು ಫಿಲ್ಮ್ ಡೈರೆಕ್ಡ್ ಮಾಡಬೇಕಂತೆ...ಇನ್ಸ್ಟಿಟ್ಯೂಟ್ಗೆ ಸೇರಿಸಿಕೊಳ್ಳಿ ಸಾರ್ ಅಂತ ನಂಜರಾಜೇ ಅರಸ್ಗೆ ದುಂಬಾಲು ಬೀಳುತ್ತಿದ್ದರು. ಅವರು ಆಗತಾನೆ ಮೈಸೂರು ಯೂನಿವಸರ್ಿಟಿಯಲ್ಲಿ ಆರಂಭವಾಗಿದ್ದ ಫಿಲ್ಮ್ ಇನ್ಸ್ಟಿಟ್ಯೂಟ್ನ ಛೀಫ್ ಆಗಿದ್ದರು. ಅದಕ್ಕೆ ಅವರು ಎಷ್ಟು ಎಕರೆ ಜಮೀನು ಇಟ್ಟಿದ್ದೀಯಯ್ಯ ...ಮಾರಿಬಿಟ್ಟು ಬಾ ನಿನ್ನನ್ನೇ ಹೀರೋ ಮಾಡ್ತೀನಿ... ಅಂತ ರೇಗಿಸ್ತಿದ್ದರು. ಒಮ್ಮೆ ಅವರು ಒಂದು ಫಿಲ್ಮ್ ಶುರು ಮಾಡಿದ್ದು ನೆನಪಿದೆ. ಹೆಸರು ಮರೆತುಹೋಗಿದೆ. ಕುಕ್ಕರಹಳ್ಳಿ ಕೆರೆಯ ಮೇಲೆ ಕುಳಿತಿದ್ದ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಆವರ ಫಿಲ್ಮ್ನ ಎಲ್ಲಾ ಹಾಡುಗಳನ್ನು ಕೇಳಿಸಿದ್ದರು. ಹಂಸಲೇಖ ಕಾಸ್ಟ್ಲೀ ಕಣಯ್ಯಾ ಅದಕ್ಕೆ ಬೇರೊಬ್ಬನ ಹತ್ತಿರ ಮಾಡಿಸಿದ್ದೀನಿ ಅಂದಿದ್ದರು. ನಿಜಕ್ಕೂ ಆ ಹಾಡುಗಳು ತುಂಬಾ ಚೆನ್ನಾಗಿದ್ದವು. ಅದಾದ ಮೇಲೆ ನಾನೂ ಬೆಂಗಳೂರಿನ ಸೆರಗು ಹಿಡಿದು ಬಂದುಬಿಟ್ಟೆ. ಅವರ ಆ ಫಿಲ್ಮ್ ಏನಾಯಿತೋ ಗೊತ್ತೇ ಆಗಲಿಲ್ಲ.ಬೆಂಗಳೂರಿಗೆ ಬಂದು ಪತ್ರಿಕೋದ್ಯಮದ ದಾರಿ ಹಿಡಿದ ಮೇಲೆ ಟೈಮ್ ಅನ್ನೋದು ಹುರಕ್ಕೊಂಡು ಮುಕ್ಕತೊಡಗಿತು. ಅದರ ಗುಂಗಿನಲ್ಲೇ ಮುಳುಗಿಹೋದೆ. ಈಗ ಮತ್ತೆ ಫಿಲ್ಮ್ರಂಗಕ್ಕಿಳಿಯುವ ಆಸೆ ಗರಿಕೆದರಿ ಕೂತಿದೆ.
ಆ ಕ್ಷಣ ಎಂದೋ ಯಾವತ್ತೋ . ಗೊತ್ತಿಲ್ಲ.

Thursday, April 17, 2008

...ಇದು ಕಸಮ್

ತುಂಬಾ ದಿವಸದಿಂದ ನೀವು ಬ್ಲಾಗ್ನಲ್ಲಿ ಏನೂ ಬರೆದಿಲ್ಲ.ಈ ಹುಚ್ಚಾಟಕ್ಕೇಕೆ ಬ್ಲಾಗ್ ಶುರು ಮಾಡಬೇಕಿತ್ತು ಅಂತ ಗೆಳೆಯರು ಕೊರಳ ಪಟ್ಟಿ ಹಿಡಿದುಕೊಂಡು ಕೇಳುತ್ತಿದ್ದಾರೆ. ಏನು ಉತ್ತರಿಸಲಿ?
ಅಷ್ಟೊಂದು ಕೆಲಸ ಹಚ್ಚಿಕೊಂಡುಬಿಟ್ಟಿದ್ದೇನೆ. ದಿನಕ್ಕೆ ಹದಿಮೂರು ಹದಿನಾಲ್ಕೋ ಗಂಟೆ ದುಡಿಯುವುದು ನನಗೆ ಮೊದಲಿನಿಂದಲೂ ಅಭ್ಯಾಸವಾಗಿ ಹೋಗಿದೆ. ಕೆಲಸಕ್ಕೆ ಅಂತ ನಾನು ಯಾವತ್ತೂ ಹಿಂಜರಿದವನಲ್ಲ... ಹೇಳಬೇಕೆಂದ್ರೆ ಕೆಲಸ ಇಲ್ಲದೆ ಸುಮ್ನೆ ಕೂರುವುದು ಅಂದ್ರೆ ನನಗೆ ಪರಮ ಬೋರಿನ ಕೆಲಸ. ಅದಕ್ಕಿಂತ ಬೇಜಾರಿನ ಸಂಗತಿ ಇನ್ನೊಂದಿಲ್ಲ. ಹಾಗಾಗಿ ಖಾಲಿ ಅನಸಿದಾಗಲೆಲ್ಲ ನಾನೇ ಏನಾದ್ರೂ ಕೆಲಸ ಸೃಷ್ಟಿಸಿಕೊಂಡುಬಿಡುತ್ತೇನೆ. ಅದರಿಂದ ಸಿಗುವ ಖುಷಿ ಇದೆಯಲ್ಲ ಅದು ಎಲ್ಲಕ್ಕಿಂತ ಮಿಗಿಲು.ಈ ನಡುವೆ ಒಂದು ಹೊಸ ವಿಷಯ ಅಂದ್ರೆ ಕಾರು ತಗೊಂಡಿದ್ದು. ತುಂಬಾ ದಿನದಿಂದ ಆ ಬಯಕೆ ಇತ್ತು. ತಗೊಳ್ಳುವುದಾದ್ರೆ ಅದು ಕಾರೇ ಅಂತ ನಾನು ಯಾವಾಗಲೋ ಡಿಸೈಡ್ ಮಾಡಿಬಿಟ್ಟಿದ್ದೆ. ಈಗ ಆ ಕನಸು ಕೈ ಗೂಡಿದೆ. ಒಂಥರ ಹ್ಯಾಪಿ. ಆದ್ರೆ ಬಡ್ಡೀ ಮಗಂದು ಡ್ರೈವಿಂಗು ಇದೆಯಲ್ಲ ಅದು ಮಾತ್ರ ಬೆಂಗಳೂರಿನಲ್ಲಿ ನರಕವೇ! ಸುಮ್ಮನೆ ಆರಾಮಾಗಿ ಫ್ರೆಂಡ್ ಕಾರಿನಲ್ಲಿ ಕುಳಿತು ಹರಟೆ ಕೊಚ್ಚುತ್ತಾ ಹೋಗುತ್ತಿದ್ದವನು ಗಾಡಿ ತಗೊಂಡು ರಸ್ತೆಗಿಳಿದ ಮೇಲೆ ಗೊತ್ತಾಗಿದ್ದು, ಅದರ ಕಷ್ಟ ಏನೂ ಅಂತ. ಮೊನ್ನೆ ರಿಂಗ್ ರೋಡಿನ ದಿಬ್ಬವೊಂದರಲ್ಲಿ ಗಾಡಿ ಇದ್ದಕ್ಕಿದ್ದಂತೆ ಆಫ್ ಆಗಿ ಹೋಯಿತು. ಎಂಥ ಫಜೀತಿ ಅಂದ್ರೆ ಹಿಂದೆ ಇದ್ದವರೆಲ್ಲ ಹಾರ್ನ್ ಊದಿದ್ದೇ ಊದಿದ್ದು. ಟ್ರಾಫಿಕ್ ಪೊಲೀಸ್ ಬಂದು ಕಲಿಯೋದಿದ್ದರೆ ಮೈದಾನಕ್ಕೋಗಿ ಕಲೀರ್ರಿ... ರಸ್ತೆಗ್ಯಾಕ್ ಬಂದು ಪ್ರಾಣ ಹಿಂಡ್ತೀರಿ ಅಂತ ಉಗಿದು ಹೋದ. ಅವತ್ತು ನಿಜಕ್ಕೂ ನಾನು ನರ್ವಸ್ ಆಗಿಬಿಟ್ಟಿದ್ದೆ.ಆದ್ರೆ ಈ ಫ್ರೆಂಡ್ಸ್ ಇದಾರಲ್ಲ ಇವರ ಕಿತಾಪತಿ ಒಂದೊಂದಲ್ಲ. ಕಾರ್ ತಗೋ ಅಂತಿದ್ದವರೇ ಈಗ ಬನ್ರೋ ಕೂರ್ರೀ ಅಂದ್ರೆ ನಾವು ಬರೊಲ್ಲಪ್ಪ ಅಂತ ಕೈ ಎತ್ತುತ್ತಿದ್ದಾರೆ. ಇರೋದೊಂದೇ ಜೀವ ಅದನ್ನೂ ನಿನ್ನ ಕೈಲಿ ಕೊಟ್ಟು ಕಳಕೊಳ್ಳೋಕೆ ನಮಗೇನು ಹುಚ್ಚಾ ಅನ್ನೋ ಥರಾನೆ ಎಲ್ಲರೂ ಮಾತಾಡ್ತಿದಾರೆ. ಇದೆಲ್ಲ ಎಷ್ಟು ದಿನ ಅಂತ ನಾನೂ ಸುಮ್ಮನಿದ್ದುಬಿಟ್ಟಿದ್ದೇನೆ.ಈ ನಡುವೆ ನನ್ನ ಮೊದಲ ಕಥಾ ಸಂಕಲನ ಸಿದ್ಧಗೊಳ್ಳುತ್ತಿದೆ. ತುಂಬಾ ಪಾಪ್ಯುಲರ್ ಆಗಿದ್ದ ಅಂಕಣ ಇನ್ಬಾಕ್ಸ್. ಅದನ್ನು ಕೂಡ ಪುಟ್ಟ ಪುಸ್ತಕ ಮಾಡಬೇಕೆಂದುಕೊಂಡಿದ್ದೇನೆ. ಏನೇ ಅದರೂ ಈ ವರ್ಷ ನನ್ನದೂ ಅಂತ ಒಂದಿಷ್ಟು ಪುಸ್ತಕ ಬರಲೇ ಬೇಕು ಅಂದುಕೊಂಡಿದ್ದೇನೆ.ಅದರ ಬಿಡುಗಡೆಗೆ ನೀವಿಲ್ಲದೇ ಹೋದ್ರೆ ಆದೀತೆ. ಖಂಡಿತಾ ಕರೀತೀನಿ ಬಿಡಿ. ಹಾಗೆ ನದಿಪ್ರೀತಿ ಇನ್ನು ಸಣ್ಣದಾಗಿಯಾದರು ಹರಿಯುತ್ತದೆ
... ಇದು ಕಸಮ್.

Tuesday, March 4, 2008

ಕವರ್ ಪೇಜಸ್ಸೂ...........................................




ಹಾಯ್ ಫ್ರೆಂಡ್ಸ್

ಇವು ಇತ್ತೀಚೆಗೆ ನಾನು ಮಾಡಿದ ಕವರ್ ಪೇಜೆಸ್ಸೂ. ಖಾಸ್ಬಾತ್ ಮತ್ತು ಚಲಂ ರವಿ ಬೆಳಗೆರೆಯವರಿಗೆ ಮಾಡಿಕೊಟ್ಟದ್ದು.

ಸಂಕುಲ ಮೂವರು ಪರಸರ ತಜ್ಞರ ಅಭಿನಂದನಾ ಗ್ರಂಥ.

ನನಗೇನೋ ಮೂರು ಇಷ್ಟ. ನಿಮಗೇ?

Sunday, February 24, 2008

ಲಾಲ್ ಬಾಗ್ ನಲ್ಲಿ ಸೆರೆ ಸಿಕ್ಕ surya






ತುಂಬಾ ಸಲ ಎಲ್ಲಿಗಾದ್ರೂ ಹೋಗಬೇಕೆಂದಾಗ ನಂಗೊಂದು ಪ್ರೀಪ್ಲಾನ್ ಅಂತಾನೆ ಇರೊಲ್ಲ. ಹೇಳ್ದೆ ಕೇಳ್ದೆ ಅವಾಗಿಂದವಾಗಲೇ ಹೊರಟುಬಿಡ್ತೀನಿ. ಮೊನ್ನೆ ಭಾನುವಾರ ಕೂಡ ಹಾಗೆ ಆಯ್ತು. ಪತ್ರಕರ್ತ ಗೆಳೆಯ ಗಾಣಧಾಳು ಶ್ರೀಕಂಠ ಬೆಳಿಗ್ಗೆ ನಾಲ್ಕೂವರೆ ಗಂಟೆಗೆ ಫೋನ್ ಮಾಡಿದ್ರು. ನಾನು ಏನಯ್ಯ ಇದು ಬೆಳಿಗ್ಗೆ ಬೆಳಿಗ್ಗೇನೆ ಅಂದ್ರೆ, ಬೇಗ ರೆಡಿಯಾಗಿ ಲಾಲ್ಬಾಗ್ಗೆ ಹೋಗೋಣ ಅಂತ ಖ್ಯಾತೆ ತೆಗೆದ್ರು. ನನಗೋ ಬಾಚಿ ತಬ್ಬಿಕೊಂಡ ನಿದ್ರೆ. ರೀ ಗಾಣಧಾಳು ಅವರೇ ಇಷ್ಟು ಬೇಗ ನಾನು ಬರೋಲ್ಲ. ನೀವು ಹೋಗಿಬನ್ನಿ ಅಂದ ನನ್ನ ಉತ್ತರಕ್ಕೂ ಕಾಯದೆ ಇನ್ನರ್ಧ ಗಂಟೇಲಿ ಬರ್ತೀನಿ ರೆಡಿಯಾಗಿರಿ. ನನಗೆ ನೋ ಸಬೂಬು ಅಂತ ಹೇಳಿ ಫೋನ್ ಕುಕ್ಕಿದ್ರು. ಹಾಗೆ ಕುಕ್ಕಿದ ಅರ್ಧ ಗಂಟೇಗೆ ನನ್ನ ಮನೇಲಿದ್ರು.ಬೀದಿಗಿಳಿದ್ರೆ ಬೆಂಗಳೂರಿನ ರಸ್ತೆಗಳ ತುಂಬಾ ಆಗಲೇ ಎರಡು, ಮೂರು, ನಾಲ್ಕು ಚಕ್ರಗಳು ಪೈಪೋಟಿಗಿಳಿದಿದ್ವು ಲಾಲ್ಬಾಗ್ನ ಹೊಸ್ತಿಲು ತುಳಿದಿಲ್ಲ ಆಗಲೇ ನಮಗೂ ಮೊದಲೇ ಪಕ್ಷಿಪ್ರಿಯ ಗೆಳೆಯ ನವೀನ್ ಮತ್ತು ಪತ್ರಕರ್ತ ಪ್ರಕಾಶ್ ಹೆಬ್ಬಾರ್ ಕೆಮೆರಾ, ಬೈನಾಕ್ಯುಲರ್ ಭುಜಕ್ಕೆ ತಗಲಿಸಿಕೊಂಡು ನಿಂತಿದ್ದಾರೆ.ವಾಟ್ ಅ ಸರ್ಪರೈಸ್ ಅಂತ ಅಂದುಕೊಂಡ್ವಿ.ಕೆಲವೊಮ್ಮೆ ಅನಿರೀಕ್ಷಿತವಾಗಿ ಹೀಗೆ ಗೆಳೆಯರು ಸಿಕ್ಕಾಗ ಎಂಥ ಖುಷಿ ಆಗುತ್ತೆ ಗೊತ್ತಾ!ಸುತ್ತಾಟ ಶುರುವಾಯಿತು. ರೀ ಗಾಣಧಾಳ ಇಲ್ಲಿ ವಾಕಿಂಗ್ ಮಾಡೋದಕ್ಕೆ ಬರ್ತಾರಲ್ಲ ಅವರಲ್ಲಿ ತುಂಬಾ ಜನ ಚೆನ್ನಾಗಿ ವಾಕಿಂಗ್ ಮಾಡ್ತಾರೆ ನಿಜ್ಜ. ಆಮೇಲೆ ಅಲ್ಲೇ ಪಕ್ಕದಲ್ಲಿರೋ ಎಂಟಿಆರ್ಗೋಗಿ ಚೆನ್ನಾಗಿ ತಿಂದು ಹೊಗ್ತಾರೆ ಕಣ್ರಿ. ಸಣ್ಣ ಆಗು ಅಂದ್ರೆ ಎಲ್ಲಿ ಆಗ್ತಾರೆ? ಅಂದೆ. ಅವರು ಹೌದೌದು ಅಂತ ತಲೆಯಾಡಿಸಿ ಅಲ್ಲೇನೋ ಕಾಣಿಸ್ತು ಅಂತ ಚಂಗನೆ ಜಿಗಿದು ಕೆರೆಯ ಪಕ್ಕದ ಬುಷ್ ಕಡೆ ಓಡಿದ್ರು.ಏನ್ರಿ ಅಂತ ನಾನೂ ಕುತೂಹಲದಿಂದ ಹೋದ್ರೆ, ಇಲ್ಲೊಂದು ಹಕ್ಕಿ ಹೋಯ್ತು ಕಣ್ರಿ ಅಂದ್ರು. ಕರ್ಮಕಾಂಡ... ನೀನ್ಯಾವತ್ತೂ ಹಕ್ಕೀನೆ ನೋಡಿಲ್ವಾ? ಅಂದುಕೊಂಡವನೆ ನಾನು ನನ್ನ ಸೋನಿ(ಕೆಮೆರಾ) ಇಬ್ಬರೂ ಅತ್ತ ಹೊರಟ್ವಿ.ಹಾಗೆ ಹೋಗ್ತಾ, ಕಣ್ಣಿಗೆ ಬಿದ್ದದ್ದನ್ನೆಲ್ಲ ಕ್ಲಿಕ್ಕಿಸುತ್ತಾ ಹೋದೆ. ಬೆಳಗಿನ ಬದುಕು ಎಂಥ ಫ್ರೆಷ್ ಆಗಿರುತ್ತಲ್ಲ ಅನಿಸ್ತು.ಜನ ವಿವಿಧ ಭಂಗಿಯಲ್ಲಿ ನಿಂತು ಕುಂತು ಓಡಿ ಕಸರತ್ತು ನಡೆಸ್ತಿದ್ರು. ಕೆಲವರು ಸುಮ್ಮನೆ ಗರಬಡಿದವರಂತೆ ಓಡ್ತಾ ಇದ್ರು. ಇನ್ನೂ ಕೆಲವರು ಇನ್ನಾತಕ್ಕೋ ಹುಡುಕ್ತಾ ಇದ್ರು. ಕಾಯ್ತಾ ಇದ್ರು. ಕೆಲವರಿಗೆ ಮನೇಲಿ ಎಂಥ ಕಾಟವೋ ಗೊತ್ತಿಲ್ಲ ಕಲ್ಲುಬೆಂಚಿನ ಮೇಲೆ ಕುಳಿತೆ ಗೊರಕೆ ಹೊಡೀತಿದ್ರು.ನಾನು ಮಾತ್ರ ಸೂರ್ಯ ಇನ್ನೂ ಯಾಕೆ ಹುಟ್ಟಿಲ್ಲ ಅಂತ ಚಡಪಡಿಸ್ತಾ ಇದ್ದೆ.ಅವನ ಮೊದಲ ಕಿರಣ ಭೂಮಿಗೆ ಬಿತ್ತೋ ಇಲ್ವೋ ಬಾಚಿ ಹಿಡಿದುಕೊಳ್ಳುವವನಂತೆ ಲಾಲ್ ಬಾಗ್ನ ದೊಡ್ಡ ಬಂಡೆಯ ಆ ಕಡೆ ಇರುವ ಈಚಲು ಮರದ ಕಡೆಗೆ ಓಡಿದೆ. ಗಾಣಧಾಳು ನೀವೇನ್ರಿ ಸೂರ್ಯನ್ನೇ ನೋಡಿಲ್ವಾ ಅಂತ ಗೊಣಗಿಕೊಂಡ್ರು.ಹುಟ್ಟಿದಾಗಿನಿಂದ ಸೂರ್ಯನ್ನ ನೋಡ್ತಾನೆ ಇದೀನಿ. ಆದ್ರೂ ನನಗೆ ಈ ಸೂರ್ಯ ಪ್ರತಿ ಸಲ ನೋಡಿದಾಗಲೂ ಹೊಸಬಾನೆ. ಹೊಸ ಥರಾನೆ.

ಈ ನಡುವೆ ಗೆಳೆಯ ನವೀನ್ ಮತ್ತು ಪ್ರಕಾಶ್ ಹೆಬ್ಬಾರ್ ಎಲ್ಲಿ ಕಳೆದು ಹೊದ್ರೋ ಗೊತ್ತಾಗಲೇ ಇಲ್ಲ.

ಅಲ್ಲಿ ಸಿಕ್ಕಿದ ಸೂರ್ಯನನ್ನ ಸೆರೆ ಹಿಡಿದು ತಂದು ನಿಮ್ಮ ಮುಂದೆ ಇಡುತ್ತಿದ್ದೇನೆ.

ಕಣ್ತುಂಬಿಕೊಳ್ಳಿ.

Friday, February 22, 2008

ಮೀರ್ವಾಲಾದ ಅಂಧಕಾರದಲ್ಲೊಂದು ಬೆಳಕಿನ ಕಿರಣ


Iam just the first drop of water in this village, but then the rains will come. And many drops of rains make a big river.
- Mukhtar Mai


ಮನುಷ್ಯ ಇಷ್ಟೊಂದು ಕ್ರೂರಿ ಆಗಿಬಿಟ್ನಾ?

ಹಾಗಂತ ತುಂಬಾ ಸಲ ಯೋಚಿಸಿದ್ದೇನೆ. ಇಲ್ಲ ಅನ್ನುವುದಕ್ಕೆ ಸಿಕ್ಕ ಪುರಾವೆಗಳಿಗಿಂತ ಹೌದು ಅನ್ನುವುದಕ್ಕೆ ಸಿಕ್ಕ ಪುರಾವೆಗಳೇ ಜಾಸ್ತಿ ಆನಿಸ್ತಿದೆ. ಅದರಲ್ಲೂ ಪಾಕಿಸ್ತಾನದಂತಹ ಒಂದು ಅರಾಜಕ ರಾಷ್ಟ್ರದಲ್ಲಿ ಜೀವಕ್ಕೆ ಬೆಲೆಯಾದರೂ ಎಲ್ಲಿದ್ದೀತು? ಅಲ್ಲಿ ಕೊಲೆಗೆ ಕಾರಣಗಳೇ ಬೇಕಿಲ್ಲ. ಪ್ರೀತಿ ಅನ್ನೋದು ಬಾಂಬಿನ ಒಳಸುಳಿಗಳಲ್ಲಿ, ಬಂದೂಕಿನ ಟ್ರಿಗ್ಗರ್ಗಳಲ್ಲಿ, ಕಟ್ಟಾ ಮುಲ್ಲಾಗಳ ಅಬ್ಬರದಲ್ಲಿ ಇನ್ನಿಲ್ಲದಂತೆ ಕಳೆದುಹೋಗಿದೆ. ಪಾಕಿಸ್ತಾನಕ್ಕೆ ಬುದ್ಧಿ ಬರುವುದಿಲ್ಲ!ಆದರೆ ಇಂತಹ ನಾಡಿನಲ್ಲಿರುವ ಹೆಣ್ಣುಮಕ್ಕಳ ಪಾಡಾದರೂ ಎಂಥದು?ಅದು ತಿಳೀಬೇಕಾದ್ರೆ ಮುಕ್ತಾರ್ ಮಾಯಿ ಅನ್ನೋ ಹೆಣ್ಣುಮಗಳ ಕಣ್ಣೀರಿನ ಕಥೆ ಕೇಳಲೇಬೇಕು.
ಆಕೆ ಮುಕ್ತಾರ್ ಮಾಯಿ

ಅದು ದಕ್ಷಿಣ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಒಂದು ಊರು. ಹೆಸರು ಮೀರ್ವಾಲಾ. ಅಲ್ಲಿನ ಕಡುಬಡತನದ ಕುಟುಂಬದವಳೇ ಈ ಮಾಯಿ. ಅವಳ ಮನೆಯಲ್ಲೇಕೆ ಇಡೀ ಊರಿನಲ್ಲೇ ಹಾಸಿ ಹೊದ್ದುಕೊಳ್ಳುವಷ್ಟು ಬಡತನವಿತ್ತು, ಹಸಿವಿತ್ತು, ಅರಾಜಕತೆಯಿತ್ತು, ಅನಕ್ಷರತೆಯೂ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿದ್ದದ್ದೆಂದರೆ ದಿನಕ್ಕೆ ಐದು ಸಲ ನಮಾಜ್ ಮಾಡುವ ಅಲ್ಲಿನ ಕಟ್ಟಾ ಮುಸ್ಲಿಂ ಸಂಪ್ರದಾಯವಾದಿಗಳ ಅಮಾನುಷ ಕಟ್ಟುಪಾಡುಗಳು. ನಿಜ ಹೇಳಬೇಕೆಂದರೆ, ಅಲ್ಲಿನ ಯಾವ ಹೆಣ್ಣೂ ಬುಕರ್ಾ ಧರಿಸದೆ ಹೊರಗೆ ಬರುವಂತಿರಲಿಲ್ಲ. ಗಂಡಸರ ಜೊತೆ ತಿರುಗಾಡುವಂತಿರಲಿಲ್ಲ. ಇಂಥ ನೆಲದಲ್ಲಿ ಜನ್ಮ ತಾಳಿದ ಮಾಯಿಗೆ ಇನ್ನೂ ಹದಿನೆಂಟು ತುಂಬುವ ಮೊದಲೇ ಮದುವೆ ಮಾಡಲಾಯ್ತು. ಪ್ರೀತಿ ಇಲ್ಲದೆ ಮೇಲೆ ಗಂಡನೊಟ್ಟಿಗಾದರೂ ಸರಿ ಬಾಳ್ವೆ ಮಾಡುವುದು ಹೇಗೆ? ಮದುವೆಯಾಗಿ ಒಂದು ವರ್ಷದೊಳಗೇ ಅದಕ್ಕೇ ತಲಾಕ್ ಸಿಕ್ತು. ಮಾಯಿಗೂ ಗಂಡನ ಜೊತೆ ಬದುಕು ಮಾಡುವುದು ಕಷ್ಟ ಎನಿಸಿತ್ತು. ಹೊರಬಂದಳು. ಆದ್ರೆ ಪಾಕಿಸ್ತಾನದ ಹಳ್ಳಿಗಾಡುಗಳಲ್ಲಿ ಡಿವೋಸರ್್ ಪ್ರಕರಣಗಳು ಕಡಿಮೆ. ಯಾಕೆಂದ್ರೆ, ಹಾಗೆ ಡಿವೋಸರ್್ ತೆಗೆದುಕೊಂಡು ಬಂದ ಹೆಣ್ಣುಮಕ್ಕಳನ್ನು ಹಳ್ಳಿಗಳಲ್ಲಿ ತೀರಾ ನಿಕೃಷ್ಟವಾಗಿ ಕಾಣಲಾಗುತ್ತದೆ. ಆದ್ರೆ ಮಾಯಿ ಅವಕ್ಕೆಲ್ಲ ಹೆದರಲಿಲ್ಲ. ಒಂದಿನ ಬಂದು ತನ್ನ ಮೀರ್ವಾಲಾದ ಮಣ್ಣಿನ ಜೋಪಡಿಯಲ್ಲಿ ಕುಳಿತುಬಿಟ್ಟಳು.ಹಾಗೆ ಕುಳಿತವಳ ಮನಸ್ಸಿಗೆ ಬಂದದ್ದು ಹೇಗಾದ್ರೂ ಮಾಡಿ ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಬೇಕಲ್ಲ ಅನ್ನುವುದು. ಎಂಬ್ರಾಯಿಡರಿ ಕಲಿತಳು, ಮಕ್ಕಳಿಗೆ ಕುರಾನ್ ಹೇಳಿಕೊಟ್ಟಳು, ಬದುಕು ಹೇಗೋ ಸಾಗುತ್ತಿತ್ತು. ಸಕಲ ನೋವಿನ ನಡುವೆಯೇ!

ಅದೊಂದು ಕರಾಳ ರಾತ್ರಿ

ಆದ್ರೆ ಅಲ್ಲಿನ ಜನ ಹಾಗೆಲ್ಲ ನಿರುಮ್ಮಳವಾಗಿ ಬದುಕಲು ಬಿಡುವುದಿಲ್ಲ. ಮೇಲ್ವರ್ಗ ಕೆಳವರ್ಗದ ನಡುವಿನ ಬೆಂಕಿ ನಮ್ಮಂತ ಅಭಿವೃದ್ಧಿಶೀಲ(?) ರಾಷ್ಟ್ರಗಳನ್ನು ಶಾಂತಿಯಿಂದ ಬದುಕಲು ಬಿಟ್ಟಿಲ್ಲ. ಬಿಡುವುದೂ ಇಲ್ಲವೇನೋ?ಮೀರ್ವಾಲಾ ಕೂಡ ಇದಕ್ಕೆ ಹೊರತಲ್ಲ. ಅಲ್ಲಿನ ಮೇಲ್ವರ್ಗದ ಮಾಸ್ತೋಯಿಸ್ಗಳು ಮಾಯಿಯ ತಮ್ಮ, ತಮ್ಮ ಜನಾಂಗದ ಹೆಣ್ಣುಮಕ್ಕಳೊಂದಿಗಿದ್ದ ಅನ್ನುವ ಒಂದೇ ಕಾರಣಕ್ಕೆ ಚೆನ್ನಾಗಿ ತಳಿಸಿದ್ದರು. ಅಲ್ಲದೆ ಅದಕ್ಕೆ ಕ್ಷಮೆ ಎಂಬಂತೆ ಮಾಯಿ ನಮ್ಮ ತೃಷೆ ತೀರಿಸಬೇಕು ಅನ್ನುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು. ಅಲ್ಲಿ ಮೇಲ್ವರ್ಗದವರದೇ ಕೊನೆಯ ಮಾತು, ಕೊನೆಯ ಅಸ್ತ್ರ. ಮಾಯಿ ಇದ್ಯಾವ ನ್ಯಾಯ ಎನ್ನುವಷ್ಟರಲ್ಲಿ ಅವಳ ತಂದೆ ಮತ್ತು ಚಿಕ್ಕಪ್ಪನನ್ನು ಹೊರಗಾಕಿ ಮಾಯಿಯ ಮೇಲೆ ಇಡೀ ರಾತ್ರಿ ಅತ್ಯಾಚಾರ ಎಸಗಿದ್ದರು. ಹೊರಗಡೆ ಆರ್ತನಾದ. ಒಳಗೂ ಮಾಯಿಯದು. ಆದರೆ ಮೇಲ್ವರ್ಗದವರ ಅಟ್ಟಹಾಸದ ನಡುವೆ ಅದು ಯಾರ ಕಿವಿಗೂ ಬೀಳಲೇ ಇಲ್ಲ. ಬಿದ್ದಿದ್ದರೂ ಯಾರೂ ಆ ಬಗ್ಗೆ ಸೊಲ್ಲೆತ್ತುವಂತಿರಲಿಲ್ಲ. ಪೊಲೀಸರಿಗೆ ದೂರು ಕೊಡುವ ಹಾಗಿರಲಿಲ್ಲ. ಯಾರೊಟ್ಟಿಗೂ ಹೇಳಿಕೊಳ್ಳುವಂತೆಯೂ ಇರಲಿಲ್ಲ. ಉಳಿದದ್ದು ಒಂದು ನಿಟ್ಟುಸಿರು ಮತ್ತು ಅಖಂಡ ನೋವು ಅಷ್ಟೆ. ಅದು ಅವರ ದಬ್ಬಾಳಿಕೆ, ಬಂದೂಕಿನ ಸುಳಿಯ ನಡುವೆ.

ನಾನು ಬದುಕಿರಬಾರದು!

ಇಷ್ಟಾದ ಮೇಲೆ ಮಾಯಿಗೆ ಬದುಕುವ ಆಸೆಯೇ ಇಲ್ಲದಾಗಿ ಹೋಯಿತು. "ಇನ್ನು ನಾನು ಬದುಕಿರುವುದರಲ್ಲಿ ಅರ್ಥ ಇಲ್ಲ. ಸಾಯುವುದೇ ಸರಿ" ಅಂತ ತೊಟ್ಟು ನೀರನ್ನೂ ಮುಟ್ಟದೆ ಸಾವಿಗಾಗಿ ಹಂಬಲಿಸಿದಳು. ಆದರೆ ಆ ಕಟ್ಟುಪಾಡುಗಳ ನಡುವೆಯೂ ಮಾಯಿಯ ಅಪ್ಪ ಅಮ್ಮ ಇವಳಲ್ಲಿ ಧೈರ್ಯ ತುಂಬಿದರು. ಆ ಕಡೆ ಮೇಲ್ವರ್ಗದ ಮಾಸ್ತೋಯಿಸ್ಗಳು ಮಾತ್ರ ಧಮಕಿ ಹಾಕುತ್ತಲೇ ಇದ್ದರು.ಆದರೆ ಇಂಥ ಕ್ರೌರ್ಯವೇ ತುಂಬಿಕೊಂಡ ನೆಲದಲ್ಲೂ ಎಲ್ಲೋ ಒಂದು ಕಡೆ ಸಣ್ಣದೊಂದು ಮಾನವೀಯತೆಯ ಅಂತರ್ಜಲವೂ ಇರುತ್ತದೆ. ಇಲ್ಲದಿದ್ದರೆ ಈ ಜಗತ್ತಿನಲ್ಲಿ ಬದುಕಿರಲು ಸಾಧ್ಯವಿತ್ತೆ? ಅಲ್ಲಿನ ಲೋಕಲ್ ಮುಲ್ಲಾ ಒಂದಿನ ಸಭೆಯಲ್ಲಿ ಮಾಯಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಮಾತಾಡಿದ. ಇದು ನಮ್ಮ ಊರಿಗೇ ಕಳಂಕ ಎಂದ. ಪೊಲೀಸರೇನು ಕತ್ತೆ ಕಾಯ್ತಾ ಇದಾರಾ ಅಂತ ತರಾಟೆಗೆ ತೆಗೆದುಕೊಂಡ. ಆದರೆ ಪೊಲೀಸರೇನು ಮಾಡಿಯಾರು? ಕಂಪ್ಲೆಂಟ್ ಕೊಟ್ಟರೆ ತಾನೆ ಅಪರಾಧಿಗಳನ್ನು ಬಂಧಿಸಲು ಸಾಧ್ಯ. ಕಂಪ್ಲೆಂಟ್ ಕೊಡಲು ಅಲ್ಲಿ ಧೈರ್ಯವಾದರೂ ಯಾರಿಗಿತ್ತು?ಆದರೆ ಇಂಥದ್ದೊಂದು ಸಣ್ಣ ಸಪ್ಪೋಟರ್್ ಮುಕ್ತರ್ ಮಾಯಿಗೆ ಸಾಕಿತ್ತು. ಅದಾಗಲೇ ಅವಳೊಂದು ನಿಧರ್ಾರಕ್ಕೆ ಬಂದಂತಿತ್ತು. ತನ್ನ ಮೇಲೆ ವಿನಾಕಾರಣ ಅತ್ಯಾಚಾರವೆಸಗಿದವರಿಗೆ ಸರಿಯಾದ ಶಿಕ್ಷೆಯಾಗಬೇಕೆನ್ನುವುದು ಅವಳ ಹಂಬಲವಾಗಿತ್ತು. ಮನೆಯವರು ಹೆದರಿ ಬೇಡ ಮಗಳೇ ಅಂದ್ರು. ಆದ್ರೆ ಮಾಯಿ ಬಿಡಲಿಲ್ಲ. ತನ್ನ ನೋವು, ಅಪಮಾನ ಎಲ್ಲವನ್ನೂ ನುಂಗಿಕೊಂಡೇ ಪೊಲೀಸ್ ಸ್ಟೇಷನ್ ಹತ್ತಿ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಬಿಚ್ಚಿಟ್ಟಳು. ತನಗೆ ನ್ಯಾಯ ಕೊಡಿಸಿ ಅಂತ ಅಂಗಲಾಚಿದಳು. ಸುದ್ದಿ ದೊಡ್ಡ ಸುದ್ದಿಯಾಯಿತು. ಮಹಿಳಾ ಸಂಘಟನೆಗಳು, ಮಾನವತಾವಾದಿಗಳು ಮಾಯಿಯ ಬೆಂಬಲಕ್ಕೆ ನಿಂತರು. ನೋಡ ನೋಡುತ್ತಲೇ ಮುಕ್ತರ್ ಮಾಯಿ ಎಲ್ಲಾ ನೊಂದವರ ದನಿಯಾಗಿಹೋದಳು. ಊರು ಎರಡು ಭಾಗವಾಗಿ ಹೋಯ್ತು. ನೀನು ಕಂಪ್ಲೆಂಟ್ ಕೊಟ್ಟಿದ್ದು ಮಹಾಪರಾಧ ಎನ್ನುವಂತೆ ಮಾತಾಡಿದರು ಅರ್ಧ ಊರಿನವರು. ನನ್ನ ಮೇಲೆ ನಡೆದ ದೌರ್ಜನ್ಯ ಮಹಾಪರಾಧವಲ್ಲವಾ? ಅಂತ ಕೇಳಿದ್ರೆ ಅವರಲ್ಲಿ ಉತ್ತರವಿರಲಿಲ್ಲ.ಕೊನೆಗೂ ಅತ್ಯಾಚಾರಿಗಳ ಬಂಧನವಾಯ್ತು. ಅವರಿಗೆ ಮರಣದಂಡನೆಯೂ ವಿಧಿಸ್ತು ಕೋಟರ್ು. ಆದ್ರೆ ಅವರು ಲಾಹೋರ್ ಹೈಕೋಟರ್ಿಗೆ ನಾವು ತಪ್ಪು ಮಾಡಿಲ್ಲ ಅಂತ ಮೊರೆ ಹೋದ್ರು. ಕೋಟರ್ಿಗೆ ಅದೇನನ್ನಿಸಿತೋ ಅವರನ್ನೆಲ್ಲ ಬಿಡುಗಡೆ ಮಾಡಿಬಿಡ್ತು. ಮಾಯಿ ಧೃತಿಗೆಡಲಿಲ್ಲ. ತನ್ನ ಬೆಂಬಲರೊಂದಿಗೆ ಮತ್ತೆ ಹೋರಾಟದ ಕಣ್ಕಿಕ್ಕ್ಕಿಳಿದಳು. ಎಚ್ಚೆತ್ತ ಕೋಟರ್ು ಮತ್ತೆ ಬಂಧನದ ಆಜ್ಞೆ ಹೊರಡಿಸಿತು.

ನೋವಿನಲ್ಲೂ ಅರಳಿದ ಕನಸು

ಈ ನಡುವೆ ಸಕರ್ಾರ ಮುಕ್ತಾರ್ ಮಾಯಿಗೆಂದು ಪರಿಹಾರವಾಗಿ ಐದು ಲಕ್ಷ ರುಗಳ ಚೆಕ್ ಕೊಡಲು ಬಂದಿತು. ಅದುವರೆಗೂ ಮಾಯಿ ಅಷ್ಟು ಹಣ ಕೇಳಿರಲೇ ಇಲ್ಲವೇನೋ! ಇನ್ನು ಚೆಕ್ ನೋಡುವುದೆಲ್ಲಿ ಬಂತು? ಆದ್ರೆ ಮಾಯಿಯ ನಿಧರ್ಾರ ಅಚಲವಾಗಿತ್ತು. ನನಗೆ ಈ ಹಣ ಬೇಡ. ಅದರ ಬದಲು ಅದೇ ಹಣವನ್ನ ತನ್ನ ಊರಿನ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಬಳಸುತ್ತೇನೆ. ನಾನೊಂದು ಸ್ಕೂಲ್ ಸ್ಥಾಪಿಸಬೇಕಿದೆ. ನನಗೆ ಸಹಕಾರ ಕೊಡಿ ಅಂದಳು. ಹಾಗೇ ಮಾಡಿದಳು ಕೂಡ. ಮೊದ ಮೊದಲು ಮಾಯಿ ಶಾಲೆ ಸ್ಥಾಪಿಸುತ್ತೇನೆ ಎಂದಾಗ ಊರಿನ ಜನ ನಗಾಡಿದ್ದರು, ಕುಹಕವಾಡಿದ್ದರು. ಆದರೆ ಮಾಯಿ ಸೋಲಲಿಲ್ಲ. ಊರಿನಲ್ಲೊಂದು ಶಾಲೆ ಸ್ಥಾಪಿಸಿದಳು. ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದವರನ್ನು ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತಂದಳು. ಈಗ ಮಾಯಿಯ ಶಾಲೆ ವಿಸ್ತಾರ ಪಡೆದುಕೊಳ್ಳುತ್ತಿದೆ. ಅವಳ ಬೆಂಬಲಕ್ಕೆ ಜಗತ್ತಿನ ಎಲ್ಲಾ ಮಾನವೀಯ ಕೈಗಳೂ ಕೈ ಜೊಡಿಸುತ್ತಿವೆ.ಮೀರ್ ವಾಲಾದ ಅಂಧಕಾರದಲ್ಲೊಂದು ಬೆಳಕಿನ ಕಿರಣ ಪ್ರಜ್ವಲಿಸುತ್ತಿದೆ. ಪಾಕಿಸ್ತ್ತಾನದ ನೊಂದ, ಬಸವಳಿದ, ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳು ಮುಕ್ತಾರ್ ಮಾಯಿಯ ಮಡಿಲಿಗೆ ಬಂದು ಬೀಳುತ್ತಿದ್ದಾರೆ. ಮಾಯಿಯೂ ಮಕ್ಕಳ ನಡುವೆ ಕುಳಿತು ಮಗುವಾಗಿ ಅಕ್ಷರ ಕಲಿಯುತ್ತಿದ್ದಾಳೆ. ಮಾಯಿಯ ಕೈ ಈಗ ಒಂಟಿಯಲ್ಲ. ಅವಳಿಗೆ ಸಾಥ್ ನೀಡಲು ಸಾವಿರ ಸಾವಿರ ಕೈಗಳಿವೆ. ಒಂದು ನಿಮರ್ಾನುಷ ನೆಲದಿಂದ, ರಕ್ತಸಿಕ್ತ ಕೈಗಳ ನಡುವಿನಿಂದ, ನಿಭರ್ಾವುಕ ಮನಸ್ಸುಗಳ ನಡುವಿನಿಂದ ಎದ್ದು ಹೋರಾಟದ ಹಾದಿ ಹಿಡಿದಳಲ್ಲ ಈ ಮುಕ್ತಾರ್ ಮಾಯಿ ....ಅವಳಿಗೊಂದು ಹ್ಯಾಟ್ಸಾಫ್ ಹೇಳಲೇಬೇಕು.ಅವಳ ಹೋರಾಟ ನಿರಂತರವಾಗಿರಲಿ.

***

ಯಾಕೋ ಇದಿಷ್ಟೂ ನಿಮ್ಮ ಜೊತೆ ಹಂಚಿಕೊಳ್ಳಬೇಕೆನಿಸಿತು.ಮುಕ್ತರ್ ಮಾಯಿಯಂಥ ಹೆಣ್ಣುಮಕ್ಕಳು ನಮ್ಮ ನಡುವೆಯೂ ಇದಾರೆ. ಈ ಸಮಾಜ ಕೊಡುವ ಅಪಮಾನವನ್ನ ಅವರು ಒಂದು ಸಣ್ಣ ಸದ್ದೂ ಇಲ್ಲದೇ ನುಂಗಿಕೊಂಡಿದ್ದಾರೆ. ಯಾಕೆಂದರೆ ,ಯಾವ ಸಮಾಜ ತಪ್ಪಿತಸ್ಥರನ್ನು ಶಿಕ್ಷಿಸಬೇಕಿತ್ತೋ ಅದೇ ಸಮಾಜ ಕೊಲೆಗಡುಕರನ್ನ, ಅತ್ಯಾಚಾರಿಗಳನ್ನ ರಕ್ಷಿಸುತ್ತಿದೆ. ನೊಂದವರ ನಿಟ್ಟುಸಿರು ಯಾರಿಗೂ ಗೊತ್ತಿಲ್ಲದಂತೆ ಕರಗಿಹೋಗುತ್ತಿದೆ. ಎಲ್ಲಿಯವರೆಗೂ ನಾವು ನ್ಯಾಯಕ್ಕಾಗಿ ಸೆಟೆದು ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ದೌರ್ಜನ್ಯ ಎಸಗುತ್ತಲೇ ಇರುತ್ತಾರೆ. ನಿಮ್ಮ ಕೈ ಗಟ್ಟಿಯಾಗಿರಲಿ... ಹಾಗೇ ಮನಸ್ಸೂ.ಮುಕ್ತ್ತಾರ್ ಮಾಯಿಯ ಹೋರಾಟದ ಹಾದಿ ನಿಮ್ಮವರೆಗೂ ವಿಸ್ತರಿಸಲಿ.